ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೌಕಟ್ಟಿನಿಂದಾಚೆ ಯೋಚಿಸಿ

ವಿಶ್ವವಿದ್ಯಾಲಯಗಳ ವಿಲೀನ
Last Updated 27 ಆಗಸ್ಟ್ 2016, 5:33 IST
ಅಕ್ಷರ ಗಾತ್ರ

ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಹಾಗೂ ಬಾದಾಮಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕರ್ನಾಟಕ ಲಲಿತಕಲೆಗಳ ವಿಶ್ವವಿದ್ಯಾಲಯಗಳನ್ನು ವಿಲೀನಗೊಳಿಸುವ ಇಂಗಿತವನ್ನು ಉನ್ನತ ಶಿಕ್ಷಣ ಸಚಿವರು ವ್ಯಕ್ತಪಡಿಸಿದ್ದಾರೆ.

ಈ ವಿಚಾರವು ಪ್ರಾಯೋಜಿತ ಯೋಜನೆಯ ಪರ ಅಥವಾ ವಿರೋಧವಾದ ನಿಲುವನ್ನು ಸರಳವಾಗಿ ವ್ಯಕ್ತಪಡಿಸುವುದಕ್ಕಿಂತ ಹೆಚ್ಚು ಸಂಕೀರ್ಣವಾದುದು. ಆದುದರಿಂದ ಮುಂದಿನ ಚರ್ಚೆಯನ್ನು ಮೂರು ವಿಭಿನ್ನ ನೆಲೆಗಳಲ್ಲಿ ಬೆಳೆಸಲು ಪ್ರಯತ್ನಿಸುತ್ತೇನೆ.

ಮೊದಲಿಗೆ ವ್ಯಾವಹಾರಿಕ ನೆಲೆಯಲ್ಲಿ ವಿಲೀನಪರವಾದ ವಾದವೊಂದು ಮೂಡಿಬಂದರೆ, ಎರಡನೆಯ ಬೌದ್ಧಿಕ ನೆಲೆಯಲ್ಲಿ ವಿಷಯ ನಿರ್ದಿಷ್ಟ ವಿಶ್ವವಿದ್ಯಾಲಯಗಳನ್ನು ಸಮರ್ಥಿಸಿಕೊಳ್ಳುವುದೇ ಕಷ್ಟ ಎನ್ನುವ ನಿಲುವಿದೆ. ಮೂರನೆಯ ಆಯಾಮದಲ್ಲಿ ಭಾರತದ ಸಾಂಪ್ರದಾಯಿಕ ಜ್ಞಾನಪರಂಪರೆಗಳಾದ ಸಂಗೀತ, ಲಲಿತಕಲೆಗಳು, ಸಂಸ್ಕೃತ ಮೊದಲಾದವುಗಳ ಕಲಿಕೆಯನ್ನು ಆಧುನಿಕ ವಿಶ್ವವಿದ್ಯಾಲಯ ವ್ಯವಸ್ಥೆಯೊಳಗೆ ನಡೆಸುವ ಸಂದರ್ಭದಲ್ಲಿ ಹುಟ್ಟುವ ಸವಾಲುಗಳು ಮತ್ತು ವಿರೋಧಾಭಾಸಗಳ ಸಂಕ್ಷಿಪ್ತ ಚರ್ಚೆಯಿದೆ.

ವ್ಯಾವಹಾರಿಕವಾಗಿ ಪ್ರ್ಯಾಗ್ಮಾಟಿಕ್ ನೆಲೆಯಲ್ಲಿ ವಿಲೀನದ ಪ್ರಶ್ನೆಯನ್ನು  ಚರ್ಚಿಸೋಣ. ಸಚಿವರು ಹೇಳಿರುವಂತೆ ಎರಡು ಕಡೆಗಳಲ್ಲಿ ಎರಡು ಪ್ರತ್ಯೇಕ ವಿಶ್ವವಿದ್ಯಾಲಯಗಳ ಆಡಳಿತ ವರ್ಗ, ಸೌಕರ್ಯ ಇತ್ಯಾದಿಗಳನ್ನು ಸೃಷ್ಟಿಸುವುದು, ಅವುಗಳ ನಿರ್ವಹಣೆಗೆ ಸಂಪನ್ಮೂಲ ಕಲೆ ಹಾಕುವುದು ಸುಲಭದ ವಿಚಾರವಲ್ಲ. ಈಗ ನಾವು ಚರ್ಚಿಸುತ್ತಿರುವ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯವು 2009ರಿಂದಲೇ ಮೈಸೂರಿನ ಲಕ್ಷ್ಮಿಪುರಂನ ಹಳೆಯ ಸರ್ಕಾರಿ ಶಾಲೆಯೊಂದರ ಆವರಣದಿಂದ ಕಾರ್ಯ ನಿರ್ವಹಿಸುತ್ತಿದೆ.

ಅದರ ಇತಿಹಾಸದುದ್ದಕ್ಕೂ ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳ ನಡುವಿನ ಅಂತಃಕಲಹದಿಂದಲೇ ಹೆಚ್ಚಿನ ಸುದ್ದಿ ಮಾಡಿರುವ ಇದು ಇದುವರೆಗೂ ಕ್ಯಾಂಪಸ್ ಕಟ್ಟಿಕೊಳ್ಳುವಲ್ಲಿ, ಸರಿಯಾದ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುವಲ್ಲಿ, ಕಾಯಂ ಬೋಧಕ ವರ್ಗ ನೇಮಿಸಿಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ.

ಲಲಿತಕಲೆಗಳ ವಿಶ್ವವಿದ್ಯಾಲಯದ ಸ್ಥಾಪನೆಗೆ ಸಂಬಂಧಿಸಿದಂತೆ ಅದರ ವಿಶೇಷ ಅಧಿಕಾರಿಗಳು 2013ರ ನವೆಂಬರ್ ತಿಂಗಳಿನಲ್ಲೇ ವರದಿಯೊಂದನ್ನು ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಪ್ರಗತಿಯಾಗಿಲ್ಲ.

2009ರಲ್ಲಿ ಪ್ರಾರಂಭವಾದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, 2010ರಲ್ಲಿ ಸ್ಥಾಪನೆಯಾದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, 2011ರಲ್ಲಿ ಸ್ಥಾಪಿತವಾದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯಗಳು ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಕಟ್ಟಿಕೊಳ್ಳಲು ಹೆಣಗುತ್ತಿವೆ. ಈ ಎಲ್ಲ ವಿಶ್ವವಿದ್ಯಾಲಯಗಳ ಪೈಕಿ ಕಾನೂನು ಮತ್ತು ಜಾನಪದ ವಿಶ್ವವಿದ್ಯಾಲಯಗಳೆ ಸ್ವಲ್ಪ ವಾಸಿ. ಸ್ವಂತದ ಆವರಣದಲ್ಲಿ ಕೆಲವು ಮೂಲಭೂತ ಸೌಕರ್ಯಗಳನ್ನಾದರೂ ಸೃಷ್ಟಿಸಿಕೊಂಡಿವೆ.

ವಿಷಯಕ್ಕೊಂದು ವಿಶ್ವವಿದ್ಯಾಲಯ ಕಟ್ಟುವ ಭರಾಟೆಯಲ್ಲಿರುವಾಗಲೇ ಕರ್ನಾಟಕದಲ್ಲಿ ರಾಜ್ಯ ವಿಶ್ವವಿದ್ಯಾಲಯಗಳನ್ನು ಮತ್ತು ಎಲ್ಲ ಜಿಲ್ಲೆಗಳಲ್ಲಿ ಸ್ನಾತಕೋತ್ತರ ಕೇಂದ್ರಗಳನ್ನು ಸ್ಥಾಪಿಸುವುದೂ ಮುಂದುವರೆದಿದೆ. ಕಳೆದ ದಶಕದಲ್ಲಿಯೆ ದಾವಣಗೆರೆ (2009), ಬೆಳಗಾವಿ (2010) ಮತ್ತು ಬಳ್ಳಾರಿಗಳಲ್ಲಿ (2010)  ಮೂರು ರಾಜ್ಯ ವಿಶ್ವವಿದ್ಯಾಲಯಗಳು ಅಸ್ತಿತ್ವಕ್ಕೆ ಬಂದಿದೆ.

ಇವುಗಳಲ್ಲದೆ ರಾಯಚೂರಿನಲ್ಲಿ ಕೃಷಿ ವಿಶ್ವವಿದ್ಯಾಲಯ (2009), ಬಾಗಲಕೋಟೆಯಲ್ಲಿ ತೋಟಗಾರಿಕಾ ವಿಶ್ವವಿದ್ಯಾಲಯ (2010) ಮತ್ತು ಶಿವಮೊಗ್ಗದಲ್ಲಿ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಗಳು (2013) ಪ್ರಾರಂಭವಾಗಿವೆ. ಈ ವರ್ಷದಿಂದ ಬೆಂಗಳೂರು ವಿಶ್ವವಿದ್ಯಾಲಯವನ್ನು ಮೂರು ಭಾಗ ಮಾಡುವ ಪ್ರಕ್ರಿಯೆಯೂ ಪ್ರಾರಂಭವಾಗಿದೆ. ಹೀಗೆ ಒಂದು ದಶಕದಲ್ಲಿ ಚಾಲನೆ ದೊರಕಿರುವ 13 ಹೊಸ ವಿಶ್ವವಿದ್ಯಾಲಯಗಳನ್ನು ಕಟ್ಟಲು ನಮ್ಮ ಬಳಿ ಸಂಪನ್ಮೂಲಗಳಿವೆಯೇ ಎಂಬ ಪ್ರಶ್ನೆ ನಮ್ಮ ಮುಂದಿದೆ.

ಈಗಿರುವ ಹಳೆಯ ವಿಶ್ವವಿದ್ಯಾಲಯಗಳಲ್ಲಿಯೇ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಭೌತಿಕ ಸೌಕರ್ಯಗಳ ಕೊರತೆಯನ್ನು ಹೇಗಾದರೂ ನಾವು ಸರಿ ಹೊಂದಿಸಿಕೊಳ್ಳಬಹುದು. ಆದರೆ ಎಲ್ಲ ವಿಶ್ವವಿದ್ಯಾಲಯಗಳಲ್ಲಿಯೂ ಅಗತ್ಯವಿರುವುದಕ್ಕಿಂತ, ಮಂಜೂರಾಗಿರುವುದಕ್ಕಿಂತ ಈಗಿರುವ ಬೋಧಕ ಸಿಬ್ಬಂದಿಯ ಸಂಖ್ಯೆ ಗಣನೀಯವಾಗಿ ಕಡಿಮೆಯಿದೆ.

ನಿಯಮಿತವಾಗಿ ಎರಡು-ಮೂರು ವರ್ಷಗಳಿಗೊಮ್ಮೆ ನೇಮಕಾತಿ ನಡೆಸುವ ಪರಿಪಾಠ ಎಲ್ಲಿಯೂ ಇಲ್ಲ. ನೇಮಕಾತಿಗೆ ಸರ್ಕಾರದಿಂದ ಒಪ್ಪಿಗೆ ಪಡೆಯುವುದು ಕಷ್ಟವೆಂದೊ, ಪೂರ್ಣಾವಧಿ ಅಧ್ಯಾಪಕರನೇಮಕ ಮಾಡಿಕೊಂಡರೆ ಸರ್ಕಾರದಿಂದ ಬರುವ ಅನುದಾನವೆಲ್ಲ ಸಂಬಳಕ್ಕೆ ಸಾಕಾಗುವುದಿಲ್ಲವೆಂದೊ ಅಗತ್ಯ ಸಂಖ್ಯೆಯಲ್ಲಿ ಯಾವ ವಿಶ್ವವಿದ್ಯಾಲಯದಲ್ಲಿಯೂ ನೇಮಕಾತಿ ನಡೆಯುತ್ತಿಲ್ಲ.  ಪರಿಸ್ಥಿತಿ ಹೀಗಿರುವಾಗ ವ್ಯಾವಹಾರಿಕವಾಗಿ ನೋಡುವುದಾದರೆ, ಪರಸ್ಪರ ವಿಷಯ ಸಂಬಂಧ ಹೊಂದಿರುವ ಎರಡು ವಿಶ್ವವಿದ್ಯಾಲಯಗಳನ್ನು ವಿಲೀನಗೊಳಿಸುವುದು ಉಚಿತವೇನೊ ಎನಿಸುತ್ತದೆ.

ಇನ್ನು ಎರಡನೆಯ ಆಯಾಮ ಬೌದ್ಧಿಕ ನೆಲೆಗೆ ಸಂಬಂಧಿಸಿದ್ದು. ಅಂದರೆ ವಿಷಯ ನಿರ್ದಿಷ್ಟ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಇರುವ ಶೈಕ್ಷಣಿಕ ಮತ್ತು ಸಂಶೋಧನಾ ಸಮರ್ಥನೆಗಳೇನು ಎಂಬ ಬೌದ್ಧಿಕ ನೆಲೆಯ ಪ್ರಶ್ನೆಯನ್ನು ಕೇಳಿಕೊಳ್ಳೋಣ. ಯಾವುದೇ ಒಂದು ವಿಷಯಕ್ಕೆ ಮೀಸಲಾಗಿರುವ ವಿಶ್ವವಿದ್ಯಾಲಯವಿದ್ದರೆ ಆ ವಿಷಯದಲ್ಲಿ ಹೆಚ್ಚಿನ ಜ್ಞಾನ ಮತ್ತು ಪರಿಣತಿ ಹುಟ್ಟುತ್ತದೆ ಎನ್ನುವ ಸಾಮಾನ್ಯ ತಿಳಿವಳಿಕೆಯ ಸಮರ್ಥನೆ ನೀಡಬಹುದು.

ಒಂದು ವಿಭಾಗ ಅಥವಾ ಉನ್ನತ ಮಟ್ಟದ ಸಂಶೋಧನಾ ಸಂಸ್ಥೆಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಬಹುದಾದ ವಿಷಯಗಳು, ಜ್ಞಾನಶಿಸ್ತುಗಳು ವಿಶ್ವವಿದ್ಯಾಲಯಗಳ ವ್ಯಾಪ್ತಿ ಪಡೆದಾಗ ಹೆಚ್ಚಿನದೇನನ್ನೋ ಸಾಧಿಸುತ್ತವೆ ಎಂಬುದು ಇದುವರೆಗಿನ ಅನುಭವದಲ್ಲಿ ಸಿದ್ಧವಾಗಿಲ್ಲ.

ಬದಲಿಗೆ ವಿಷಯ ನಿರ್ದಿಷ್ಟ ವಿಶ್ವವಿದ್ಯಾಲಯಗಳ ಮೂಲಕ ಸಂಕುಚಿತತೆ ಮತ್ತು ಪ್ರತ್ಯೇಕತೆಯ ಮನೋಭಾವ ಹುಟ್ಟುವ ಅಪಾಯವಿರುವುದನ್ನು ನಾವೀಗಾಗಲೆ ಕಂಡಿದ್ದೇವೆ. ಅಂದರೆ ಜಾನಪದ ಅಥವಾ ಸಂಸ್ಕೃತಗಳ ಅಧ್ಯಯನ ಇವುಗಳನ್ನೇ ಕೇಂದ್ರವಾಗಿರಿಸಿಕೊಂಡ ವಿಶ್ವವಿದ್ಯಾಲಯಗಳಾದ ನಂತರ ಹೊಸ ಬೌದ್ಧಿಕ ಪ್ರೇರಣೆಗಳನ್ನು ಪಡೆದುಕೊಳ್ಳುತ್ತದೆ ಎನ್ನುವುದರ ಬಗ್ಗೆ ನನಗೆ ಅನುಮಾನಗಳಿವೆ.

ಈ ವಿಷಯಗಳ ವಿದ್ವಾಂಸರು ಒಂದು ಸಾಂಪ್ರದಾಯಿಕ ವಿಶ್ವವಿದ್ಯಾಲಯದ ವ್ಯಾಪ್ತಿಯೊಳಗೆ ಇತರೆ ಸಾಮಾಜಿಕ, ಮಾನವಿಕ ವಿಜ್ಞಾನಗಳ ವಿದ್ವಾಂಸರ ಜೊತೆಗೂಡಿ ವಿದ್ಯಾರ್ಥಿಗಳಿಗೆ, ಸಮಾಜಕ್ಕೆ ನೀಡಬಹುದಾದುದು ಹೆಚ್ಚಿನದು ಇದೆ ಎನ್ನಿಸುತ್ತದೆ.

ನನ್ನ ಅನುಭವವನ್ನೇ ಹಂಚಿಕೊಳ್ಳುವುದಾದರೆ: ಸಂಸ್ಕೃತ, ತೆಲುಗು, ತಮಿಳು, ಜಾನಪದ, ತತ್ವಶಾಸ್ತ್ರಗಳ ಪರಿಣತರೊಡನೆ ಕೆಲಸ ಮಾಡುವ, ಪ್ರತಿದಿನವೂ ಒಡನಾಡುವ ಅವಕಾಶ ನನಗೆ ದೊರೆತರೆ, ನನ್ನ ಮಧ್ಯಕಾಲೀನ ದಕ್ಷಿಣ ಭಾರತದ ಸಾಮಾಜಿಕ ಇತಿಹಾಸದ ಸಂಶೋಧನೆಗೆ ಹೆಚ್ಚು ಪುಷ್ಟಿ ದೊರೆತಂತೆ ಆಗುತ್ತದೆ. ವಿಪರ್ಯಾಸವೆಂದರೆ ಇಂತಹ ಸಹಯೋಗದ ಸಂಶೋಧನೆಯ ಸಾಧ್ಯತೆಗಳನ್ನು ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಕೈಗೂಡಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ, ಬದಲಿಗೆ ಪಶ್ಚಿಮದ ಸಂಶೋಧನಾ ವಿಶ್ವವಿದ್ಯಾಲಯಗಳಿಗೆ ಹೋಗಬೇಕಾಗಿದೆ. 

ನನ್ನ ದೃಷ್ಟಿಯಲ್ಲಿ ಎಲ್ಲ ವಿಶ್ವವಿದ್ಯಾಲಯಗಳಲ್ಲಿಯೂ ಜಾನಪದ, ಕಾನೂನು, ಸಂಸ್ಕೃತ, ಸಂಗೀತ ಮತ್ತು ಪ್ರದರ್ಶನ ಕಲೆಗಳು, ಲಲಿತಕಲೆಗಳು ಇವೆಲ್ಲವುಗಳ ಅಧ್ಯಯನ ಮತ್ತು ಬೋಧನೆಗೆ ಅವಕಾಶವಿರಬೇಕು. ವಿಶ್ವವಿದ್ಯಾಲಯವೊಂದರಿಂದ ಸಾಮಾನ್ಯವಾದ ಸ್ನಾತಕ ಪದವಿ ಪಡೆಯುವ ಯಾವುದೇ ವಿದ್ಯಾರ್ಥಿಯಾದರೂ ನಮ್ಮ ನಾಗರಿಕತೆಯ ಎಲ್ಲ ಆಯಾಮಗಳ ಹಾಗೂ ನಾವಿರುವ ಪ್ರಪಂಚದ ಬಗೆಗಿನ ಸ್ಥೂಲ ಜ್ಞಾನವನ್ನು ಹೊಂದಿರಬೇಕು.

ಆಧುನಿಕ ವಿಶ್ವವಿದ್ಯಾಲಯಗಳ ಪರಿಕಲ್ಪನೆಯ ಕೇಂದ್ರದಲ್ಲಿರುವ ಈ ಗ್ರಹಿಕೆಯನ್ನು ಉದಾರವಾದಿ ಕಲೆಗಳ (ಲಿಬರಲ್ ಆರ್ಟ್ಸ್) ಶಿಕ್ಷಣ ಎಂದು ಕರೆಯುತ್ತಾರೆ. ಅಂದರೆ ಭೌತಶಾಸ್ತ್ರವನ್ನಾಗಲಿ, ಕಂಪ್ಯೂಟರ್ ವಿಜ್ಞಾನವನ್ನಾಗಲಿ, ರಾಜಕೀಯ ಶಾಸ್ತ್ರವನ್ನಾಗಲಿ ತನ್ನ ಮುಖ್ಯ ವಿಷಯವಾಗಿ ಕಲಿಯುತ್ತಿರುವ ವಿದ್ಯಾರ್ಥಿಯೂ ವಿಶ್ವವಿದ್ಯಾಲಯದಲ್ಲಿ ತಾನು ಪಡೆಯುವ ಶಿಕ್ಷಣದ ಶೇ 50ರಷ್ಟನ್ನು ಕಲೆಗಳು, ಭಾಷೆ-ಸಾಹಿತ್ಯ, ವಿಜ್ಞಾನ-ತತ್ವಶಾಸ್ತ್ರ ಹೀಗೆ ಇತರ ವಿಷಯಗಳನ್ನೂ ಕಲಿಯುತ್ತಾನೆ. ಹೆಚ್ಚಿನ ಆಸಕ್ತಿಯಿದ್ದವರು ಆಯಾ ವಿಷಯದಲ್ಲಿ ನಂತರದಲ್ಲಿ ಹೆಚ್ಚಿನ ಜ್ಞಾನ ಪಡೆಯಲು ಉನ್ನತ ಅಧ್ಯಯನ ಕೈಗೊಳ್ಳಬಹುದು.

ಇಲ್ಲಿ ನನ್ನ ವಾದ, ವಿಷಯ ನಿರ್ದಿಷ್ಟ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದರ ವಿರುದ್ಧವೇ ಇದೆ. ಈ ವಾದಕ್ಕೆ ಕನ್ನಡ ವಿಶ್ವವಿದ್ಯಾಲಯವೊಂದನ್ನು ರಾಜಕೀಯ ಮತ್ತು ಸಾಂಸ್ಕೃತಿಕ ಕಾರಣಗಳಿಂದ ಹೊರತಾಗಿಸಬಹುದು. ಕನ್ನಡಕ್ಕೆ ಒಂದು ಬೌದ್ಧಿಕತೆಯನ್ನು ಕಟ್ಟುವ, ಅದನ್ನು ಪೋಷಿಸುವ ಕೆಲಸವನ್ನು ರಾಜ್ಯದ ಇತರ ಎಲ್ಲ ವಿಶ್ವವಿದ್ಯಾಲಯಗಳೂ ಮಾಡಿದರೂ, ಅದಕ್ಕಾಗಿಯೆ ವಿಶೇಷವಾಗಿ ಒಂದು ವಿಶ್ವವಿದ್ಯಾಲಯ ರೂಪಿಸಿಕೊಳ್ಳುವುದು ಸಮರ್ಥನೀಯ.

ಈ ವಿಶ್ವವಿದ್ಯಾಲಯವು ಇಡೀ ರಾಜ್ಯದ ವ್ಯಾಪ್ತಿಯನ್ನು ಹೊಂದಿದ್ದು, ಕನ್ನಡ ನಾಡಿನ ಎಲ್ಲವನ್ನೂ, ಎಲ್ಲರನ್ನೂ ಒಳಗೊಳ್ಳುವ ಚೈತನ್ಯ, ಮಹತ್ವಾಕಾಂಕ್ಷೆಯನ್ನು ಹೊಂದಿರಬೇಕು. ಆದರೆ ಜಾನಪದ, ಲಲಿತಕಲೆಗಳು, ಸಂಗೀತ ಮತ್ತು ಪ್ರದರ್ಶನ ಕಲೆಗಳು, ಸಂಸ್ಕೃತ ಇವುಗಳಿಗೆಲ್ಲ ಆ ರೀತಿಯ ಅಧಿಕೃತತೆ ನೀಡಬೇಕಾದ ಅಗತ್ಯವಾಗಲಿ, ಅನಿವಾರ್ಯವಾಗಲಿ ಇಲ್ಲ. ಈ ಸ್ವತಂತ್ರ ವಿಶ್ವವಿದ್ಯಾಲಯಗಳಿಗೆ ವ್ಯಯವಾಗುವ ಸಂಪನ್ಮೂಲಗಳನ್ನು ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳೊಳಗೆ ಈ ವಿಷಯಗಳನ್ನು ಅಧ್ಯಯನ ಮಾಡಲು ವಿನಿಯೋಗಿಸಬಹುದಿತ್ತು. ಆ ಮೂಲಕ ಅಂತರ್‌ಶಿಸ್ತೀಯ, ಸಹಯೋಗದ ಸಂಶೋಧನೆಗಳಿಗೆ ಉತ್ತೇಜನ ನೀಡಬಹುದಾಗಿತ್ತು.

ನಾನು ಇಲ್ಲಿ ಚರ್ಚಿಸಬಯಸುವ ಮೂರನೆಯ ಅಂಶವಿದು: ಇಂದು ಸ್ವತಂತ್ರ ವಿಶ್ವವಿದ್ಯಾಲಯಗಳಾಗಿರುವ ಜಾನಪದ, ಲಲಿತಕಲೆಗಳು, ಸಂಗೀತ ಮತ್ತು ಪ್ರದರ್ಶನಕಲೆಗಳು, ಸಂಸ್ಕೃತ ಇವೆಲ್ಲವೂ ಭಾರತೀಯ ಸಾಂಪ್ರದಾಯಿಕ ಜ್ಞಾನಪರಂಪರೆಗೆ ಸೇರಿದವು ಮತ್ತು ತಮ್ಮದೇ ಆದ ಶೈಕ್ಷಣಿಕ ಹಾಗೂ ಜ್ಞಾನಪ್ರಸರಣದ ಮಾದರಿಯನ್ನು ಹೊಂದಿದ್ದವು.

ಅಂದರೆ ಸಂಸ್ಕೃತ, ಸಂಗೀತ ಅಥವಾ ಶಿಲ್ಪಕಲೆ ಕಲಿಯುವ ಸಾಂಪ್ರದಾಯಿಕ ಮಾದರಿಗಳು ಕುಟುಂಬ, ಕುಲ ಇಲ್ಲವೆ ಗುರುಪರಂಪರೆಗಳೊಳಗೆ ಇದ್ದವುಗಳು. ಇಲ್ಲಿನ ಕಲಿಕೆಯ ಮಾದರಿಗಳು ವಿಶ್ವವಿದ್ಯಾಲಯಗಳು ಕಾರ್ಯ ನಿರ್ವಹಿಸುವ ಮಾದರಿಗೆ ವ್ಯತಿರಿಕ್ತವಾದವು. ಯಾರನ್ನು ವಿದ್ಯಾರ್ಥಿಯಾಗಿ ತೆಗೆದುಕೊಳ್ಳಬೇಕು, ಶಿಕ್ಷಣ ಹೇಗೆ, ಯಾವಾಗ, ಯಾವ ಗತಿಯಲ್ಲಿ ಸಾಗಬೇಕು ಇತ್ಯಾದಿ ಪ್ರಶ್ನೆಗಳಿಗೆ ಈ ಎರಡೂ ಮಾದರಿಗಳಲ್ಲಿ ವಿಭಿನ್ನ ಉತ್ತರಗಳು ದೊರಕುತ್ತವೆ.

ಗುರುಕುಲವೊಂದರಲ್ಲಿ ಗುರು ಈ ಎಲ್ಲ ಪ್ರಶ್ನೆಗಳಿಗೆ ತಾವೇ ಉತ್ತರಿಸುತ್ತಾರೆ, ಅದನ್ನು ಯಾರ ಬಳಿಯೂ ಸಮರ್ಥಿಸಬೇಕಿಲ್ಲ. ಆದರೆ ವಿಶ್ವವಿದ್ಯಾಲಯ ವ್ಯವಸ್ಥೆಯೊಳಗೆ ಅಂಥ ಅಧಿಕಾರ ಯಾರಿಗೂ ಇರುವುದಿಲ್ಲ. 

ಗಂಗೂಬಾಯಿ ಹಾನಗಲ್‌ರ ಹೆಸರನ್ನೇ ಹೊಂದಿರುವ ಸಂಗೀತ ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳು ಸ್ವತಃ ಗಂಗೂಬಾಯಿಯವರೆ ಸಂಗೀತ ಹೇಳಿಕೊಡುತ್ತಿದ್ದ ಮಾದರಿಗಳನ್ನು ಅನುಸರಿಸುತ್ತಿಲ್ಲ, ಅನುಸರಿಸುವುದೂ ಸಾಧ್ಯವಿಲ್ಲ. ಗುರುಕುಲ ಮಾದರಿಯಲ್ಲಿ ಪಾಠಪ್ರವಚನಗಳು ನಡೆಯುತ್ತವೆ ಎಂದು ಹೆಸರಿಗೆ ಹೇಳಿಕೊಳ್ಳುತ್ತೇವೆ ಅಷ್ಟೆ.

ಸಂಗೀತ ವಿಶ್ವವಿದ್ಯಾಲಯದಲ್ಲಿ ಅಗತ್ಯವಿರುವಷ್ಟು ಸಂಖ್ಯೆಯಲ್ಲಿ ಕಾಯಂ ಬೋಧಕ ವರ್ಗದ ನೇಮಕ ಮಾಡಿಕೊಂಡ ನಂತರವೂ ಅಲ್ಲಿ ಹತ್ತರಿಂದ ಐದರವರೆಗೆ ಮಾತ್ರ ಪಾಠಪ್ರವಚನಗಳು ನಡೆಯುತ್ತವೆ. ಬೆಳಿಗ್ಗೆ ನಾಲ್ಕರಿಂದ ಅಭ್ಯಾಸ ಮಾಡಿಸುವ ಗುರುವಾಗಲಿ, ಅಭ್ಯಾಸ ಮಾಡುವ ವಿದ್ಯಾರ್ಥಿಯಾಗಲಿ ಅಲ್ಲಿ ಇರುವುದಿಲ್ಲ.

ಈ ಅಂಶ ಸಂಗೀತ ಮತ್ತು ಸಂಸ್ಕೃತವನ್ನು ವಿಶ್ವವಿದ್ಯಾಲಯಗಳೊಳಗೆ ಕಳೆದ ನೂರು ವರ್ಷಗಳಲ್ಲಿ ಕಲಿಸುವ ಸಂದರ್ಭದಲ್ಲಿ ಸ್ಪಷ್ಟವಾಗಿದೆ. ಹಾಗಾಗಿಯೆ ಸಂಸ್ಕೃತದ ವಿಭಾಗಗಳು ಇದುವರೆಗೆ ಒಬ್ಬ ದೊಡ್ಡ ವಿದ್ವಾಂಸನನ್ನಾಗಲಿ, ಲಲಿತಕಲೆಗಳ ಕಾಲೇಜುಗಳು ಒಬ್ಬ ದೊಡ್ಡ ಸಂಗೀತಗಾರನನ್ನಾಗಲಿ ಇಲ್ಲವೆ ನೃತ್ಯಪಟುವನ್ನಾಗಲಿ ಹುಟ್ಟುಹಾಕಿಲ್ಲ. ನಮ್ಮ ಕಾಲದ ದೊಡ್ಡ ವಿದ್ವಾಂಸರು ಮತ್ತು ಕಲಾವಿದರು ಸಾಂಪ್ರದಾಯಿಕ ಕಲಿಕಾಕ್ರಮದ ಮೂಲಕವೇ ತರಬೇತಿ ಪಡೆದಿದ್ದಾರೆ. ಇದು ನಿಜವಾದರೆ ಈ ಸಾಂಪ್ರದಾಯಿಕ ಜ್ಞಾನಗಳನ್ನು ವಿಶ್ವವಿದ್ಯಾಲಯಗಳ ಚೌಕಟ್ಟಿನೊಳಗೆ ಹಾಕುವುದಾದರೂ ಏಕೆ?

ಈ ಪ್ರಶ್ನೆಯನ್ನು ನಾನಿಲ್ಲಿ ನಿರ್ದಿಷ್ಟ ಕಾರಣದಿಂದ ಎತ್ತುತ್ತಿದ್ದೇನೆ. ನಮ್ಮಲ್ಲಿ ಕೆಲವು ಸಮಯದಿಂದ ಸಾಂಪ್ರದಾಯಿಕ ಗುರುಕುಲ ಪದ್ಧತಿಯನ್ನು ನಮ್ಮ ಶಿಕ್ಷಣ ಪದ್ಧತಿಯೊಳಗೆ ಅಳವಡಿಸಿ, ಅದನ್ನು ಮೆಕಾಲೆಯ ಪ್ರಭಾವದಿಂದ ಹೊರತರಬೇಕೆನ್ನುವ ಮಾತು ಕೇಳಿಬರುತ್ತಿದೆ. ಆದರೆ ಇದರ ಅನುಷ್ಠಾನ ಹೇಗೆ ಎನ್ನುವುದನ್ನು ಯಾರೂ ಸಾಧಿಸಿ ತೋರಿಸುತ್ತಿಲ್ಲ. ಅಂದರೆ ಆಧುನಿಕ ವಿಶ್ವವಿದ್ಯಾಲಯಗಳ ಮಾದರಿಗೂ ಗುರುಕುಲಗಳ ಮಾದರಿಗೂ ಗಣನೀಯ ವ್ಯತ್ಯಾಸಗಳಿವೆ ಎನ್ನುವುದು ಸುಸ್ಪಷ್ಟ.

ಯಾವುದೇ ಪ್ರಶ್ನೆ ಎತ್ತದೆ ಗುರುವಿನ ತೀರ್ಮಾನಗಳನ್ನು ಗುರುಕುಲ ಮಾದರಿ ಒಪ್ಪುತ್ತದೆ. ಇದಕ್ಕೆ ವಿರುದ್ಧವಾಗಿ ವಿಶ್ವವಿದ್ಯಾಲಯಗಳು ಅಧ್ಯಾಪಕರು ಕೈಗೊಳ್ಳುವ ಬೋಧನೆ- ಮೌಲ್ಯಮಾಪನ ಪ್ರಕ್ರಿಯೆಗಳ ಮೇಲೆ ಸಂದೇಹವನ್ನು ಉಳಿಸಿಕೊಂಡೇ ಮೇಲುಸ್ತುವಾರಿಗೆ ಕ್ರಮ ತೆಗೆದುಕೊಳ್ಳುತ್ತದೆ, ತನ್ನ ಕಾರ್ಯಚಟುವಟಿಕೆಗಳಲ್ಲಿ ಪಾರದರ್ಶಕತೆ  ತರಲು ಪ್ರಯತ್ನಿಸುತ್ತದೆ. ಈ ಎರಡು ಮಾದರಿಗಳ ಮೌಲ್ಯಗಳು, ಕೆಲಸ ಮಾಡುವ ವೈಖರಿಗಳೆಲ್ಲವೂ ವಿಭಿನ್ನ. ಆದರೆ ಇವುಗಳಲ್ಲಿನ ಯಾವ ಆಯಾಮ ಉಳಿಸಿಕೊಳ್ಳಬೇಕು ಎನ್ನುವುದನ್ನು ಯಾರೂ ಸ್ಪಷ್ಟಪಡಿಸುತ್ತಿಲ್ಲ.    

ಅಂದರೆ ವಿಶ್ವವಿದ್ಯಾಲಯ ಮಾದರಿಯನ್ನೇ ಮರುಚಿಂತಿಸಲು ಈ ಸಾಂಪ್ರದಾಯಿಕ ಜ್ಞಾನಗಳ ಬೋಧನೆ ಸಂದರ್ಭದಲ್ಲಿ ಸಾಧ್ಯವಿತ್ತು. ಅಂತಹ ಮಹತ್ವಾಕಾಂಕ್ಷೆ, ದೂರದೃಷ್ಟಿಯನ್ನು ಇದುವರೆಗೆ ಯಾರೂ ತೋರಿಸಿಲ್ಲ.

ಬದಲಿಗೆ ಈ ಎಲ್ಲ ವಿಷಯ ನಿರ್ದಿಷ್ಟ ವಿಶ್ವವಿದ್ಯಾಲಯಗಳು ತಮ್ಮದೇ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ಸಂಸ್ಥೆಗಳಾದ ಅಕಾಡೆಮಿಗಳಿಗಿಂತ ಹೆಚ್ಚಿನ ಸಾಧನೆ ಮಾಡುವ ಭರವಸೆ ಮೂಡಿಸಿಲ್ಲ. ಹೀಗಿದ್ದಾಗ ಇವುಗಳ ಸ್ವತಂತ್ರ ಇರುವಿಕೆಯನ್ನು ಸಮರ್ಥಿಸಿಕೊಳ್ಳುವುದಾದರೂ ಹೇಗೆ? ತಮಗೆ ಅಗತ್ಯ ಸಂಪನ್ಮೂಲಗಳನ್ನಾಗಲಿ, ಸ್ವಾಯತ್ತತೆಯನ್ನಾಗಲಿ ನೀಡಿಲ್ಲ ಎಂದು ಇವುಗಳ ಅಧಿಕಾರವರ್ಗ ವಾದಿಸಬಹುದು. ಆದರೆ ಇವುಗಳನ್ನು ವಿಶ್ವವಿದ್ಯಾಲಯಗಳಾಗಿ ರೂಪಿಸುವ ಸಂದರ್ಭದಲ್ಲಿಯೇ ಭೌತಶಾಸ್ತ್ರ ಅಥವಾ ಇತಿಹಾಸ ಕಲಿಸಲು ಕಟ್ಟಿಕೊಂಡಿರುವ ಮಾದರಿಗಳನ್ನೇ ಸಂಗೀತ ಇಲ್ಲವೆ ಸಂಸ್ಕೃತ ಕಲಿಸಲೂ ಬಳಸುತ್ತಿದ್ದಾರೆ. ಈ ಆಪಾದನೆಯಿಂದಂತೂ ನಮ್ಮಲ್ಲಿ ಈಗಿರುವ ವಿಷಯ ನಿರ್ದಿಷ್ಟ ವಿಶ್ವವಿದ್ಯಾಲಯಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT