ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆ.13ರಂದು ವೈದ್ಯ ಕಾಲೇಜು ಲೋಕಾರ್ಪಣೆ

Last Updated 27 ಆಗಸ್ಟ್ 2016, 10:21 IST
ಅಕ್ಷರ ಗಾತ್ರ

ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ. 13ರಂದು ಜಿಲ್ಲೆಗೆ ಆಗಮಿಸಲಿದ್ದು,  ಸರ್ಕಾರಿ ವೈದ್ಯಕೀಯ ಕಾಲೇಜನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಜತೆಗೆ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ಜಿಲ್ಲಾ ಕೇಂದ್ರಕ್ಕೆ ಸಮೀಪದ ಯಡಬೆಟ್ಟ ಬಳಿ ₹ 118.56 ಕೋಟಿ ವೆಚ್ಚದಡಿ 42 ಎಕರೆ ಪ್ರದೇಶದಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸಲಾಗಿದೆ. 500 ಆಸನಗಳುಳ್ಳ ಸಭಾಂಗಣ, 332 ಸುಸಜ್ಜಿತ ಕೊಠಡಿ ಒಳಗೊಂಡ ಕಾಲೇಜು, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಹಾಸ್ಟೆಲ್‌, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ವಸತಿಗೃಹ ನಿರ್ಮಿಸಲಾಗಿದೆ.

150 ವಿದ್ಯಾರ್ಥಿಗಳಿಗೆ ಪ್ರವೇಶಾತಿ ಇದೆ. ಈಗಾಗಲೇ, 112 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ನೀಟ್‌ ಮೂಲಕ ಉಳಿದ ಅಭ್ಯರ್ಥಿಗಳ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿದೆ.

‘ಜಿಲ್ಲೆಯ ಜನರ ಬಹುದಿನದ ಕನಸು ಈಡೇರುತ್ತಿದೆ. ಮೊದಲ ಹಂತದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೂ ವೈದ್ಯಕೀಯ ಕಾಲೇಜಿಗೆ ಹೊಂದಿಕೊಂಡಂತೆ 10 ಎಕರೆ ಸ್ಥಳ ಮೀಸಲಿಡಲಾಗಿದೆ. ಇದಕ್ಕಾಗಿ ₹ 80 ಕೋಟಿ ಅನುದಾನ ನಿಗದಿಪಡಿಸಲಾಗಿದೆ’ ಎಂದು ಸಹಕಾರ ಮತ್ತು ಸಕ್ಕರೆ ಸಚಿವ ಎಚ್‌.ಎಸ್. ಮಹದೇವಪ್ರಸಾದ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವೈದ್ಯಕೀಯ ಕಾಲೇಜಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ₹ 2.52 ಕೋಟಿ ಅನುದಾನ ಬಿಡುಗಡೆಯಾಗಿದೆ. ಕಾಮಗಾರಿಯೂ ಪ್ರಗತಿಯಲ್ಲಿದೆ. ಜತೆಗೆ, ಕಾಲೇಜಿಗೆ ಅಗತ್ಯವಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನೂ ನೇಮಿಸಲಾಗಿದೆ ಎಂದರು.

ಕೆರೆಗಳಿಗೆ ನೀರು: ಚಾಮರಾಜನಗರ ತಾಲ್ಲೂಕಿನ 21, ಯಳಂದೂರು 1 ಮತ್ತು ನಂಜನಗೂಡು    ತಾಲ್ಲೂಕಿನ 2 ಕೆರೆಗಳಿಗೆ  ನದಿಮೂಲದಿಂದ ನೀರು ತುಂಬಿಸುವ   ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಮಹದೇವಪ್ರಸಾದ್‌ ತಿಳಿಸಿದರು.

ಇದಕ್ಕಾಗಿ ₹ 223 ಕೋಟಿ ನಿಗದಿಪಡಿಸಲಾಗಿದೆ. ಶೀಘ್ರವೇ, ಉಳಿದ ಪ್ರಕ್ರಿಯೆ ಪೂರ್ಣಗೊಳಿಸಿ ಟೆಂಡರ್‌ ಕರೆಯಲಾಗುವುದು. ಈ ಯೋಜನೆಯಡಿ ಕೆಂಪನಪುರ ಕೆರೆ ಸೇರ್ಪಡೆಯಾಗಿಲ್ಲ. ಈ ಕೆರೆಗೂ ಯೋಜನೆಯಡಿ ನೀರು ತುಂಬಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಶಾಸಕ ಸಿ. ಪುಟ್ಟರಂಗಶೆಟ್ಟಿ, ನಗರಸಭೆ ಅಧ್ಯಕ್ಷೆ ಎಸ್.ಎನ್. ರೇಣುಕಾ, ಉಪಾಧ್ಯಕ್ಷ ಆರ್‌.ಎಂ. ರಾಜಪ್ಪ, ಜಿಲ್ಲಾಧಿಕಾರಿ ಬಿ. ರಾಮು, ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ, ವೈದ್ಯಕೀಯ ಕಾಲೇಜಿನ ಡೀನ್‌ ಡಾ.ಟಿ.ಎನ್‌. ಚಂದ್ರಶೇಖರ್‌ ಹಾಜರಿದ್ದರು.

ರಸ್ತೆ ವಿಸ್ತರಣೆಯೇ ಮುಖ್ಯ ಗುರಿ
ಚಾಮರಾಜನಗರ: ‘ಡಿವಿಯೇಷನ್‌ ರಸ್ತೆ ಮತ್ತು ಬಿ. ರಾಚಯ್ಯ ಜೋಡಿರಸ್ತೆ ವಿಸ್ತರಿಸುವುದೇ ನಮ್ಮ ಮುಖ್ಯ ಗುರಿಯಾಗಿದೆ. ಈ ಸಂಬಂಧ ಎದುರಾಗುವ ಅಪಸ್ವರಗಳಿಗೆ ಕಿವಿಗೊಡುವುದಿಲ್ಲ’ ಎಂದು ಸಚಿವ ಮಹದೇವಪ್ರಸಾದ್‌ ಸ್ಪಷ್ಟಪಡಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ₹ 50 ಕೋಟಿ ಅನುದಾನ ಮೀಸಲಿಟ್ಟಿದ್ದಾರೆ. ಈ ಅನುದಾನದಡಿ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನ, ಡಾ.ಬಿ.ಆರ್‌. ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣ, ದೊಡ್ಡಅರಸನಕೊಳದ ಅಭಿವೃದ್ಧಿ, ಪಟ್ಟಣ ಠಾಣೆ ಬಳಿ ಮಾರುಕಟ್ಟೆ ಸಂಕೀರ್ಣ, ವೀರಭದ್ರೇಶ್ವರ ಸ್ವಾಮಿ ದೇವ  ಸ್ಥಾನದ ಬಳಿ ಮಾರುಕಟ್ಟೆ    ಸಂಕೀರ್ಣ ನಿರ್ಮಿಸಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT