ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜೆರ್ಸಿ: 9ನೇ ಅಕ್ಕ ಸಮ್ಮೇಳನಕ್ಕೆ ಚಾಲನೆ

Last Updated 2 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಮೆರಿಕದ ನ್ಯೂಜೆರ್ಸಿಯ ಅಟ್ಲಾಂಟಿಕ್‌ ಸಿಟಿಯಲ್ಲಿ ಮೂರು ದಿನಗಳ 9 ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಶುಕ್ರವಾರ ಸಂಜೆ ಚಾಲನೆ ಸಿಕ್ಕಿತು.
ವೈಭವೋಪೇತ ಸಮ್ಮೇಳನದ ಮೊದಲ ದಿನವಾದ ಶುಕ್ರವಾರ ಅಮೆರಿಕ ಕಾಲಮಾನ ಮಧ್ಯಾಹ್ನ  3 ಗಂಟೆಗೆ ಪ್ರತಿನಿಧಿಗಳ ನೋಂದಣಿ ಕಾರ್ಯ ಆರಂಭಗೊಂಡಿತು.

ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಹೆಸರು ನೋಂದಾಯಿಸುವ ಸಾಧ್ಯತೆ ಇದೆ ಎಂದು  ಸಮ್ಮೇಳನದ ಮಾಧ್ಯಮ ಸಂಚಾಲಕ ಸತ್ಯಪ್ರಸಾದ್‌ ಟಿ.ಎಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಆತ್ಮೀಯ ನಗು, ಶುಭಾಶಯ ವಿನಿಮಯಗಳ ಮೂಲಕ ಪರಸ್ಪರ ಕಲೆತು ಮಿನಿ  ಕರ್ನಾಟಕವನ್ನು ಸೃಷ್ಟಿಸಿದರು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರೇಮಲೋಕ– ಮಾಯಾಲೋಕ: ಸುಮಾರು ಐದು ಎಕರೆಯಷ್ಟು ವಿಶಾಲ ಪ್ರದೇಶದಲ್ಲಿ ಸಭಾಂಗಣವಿದ್ದು,  ಸಾವಿರಾರು ಜನ ಕುಳಿತು ವೀಕ್ಷಿಸಬಹುದಾದ 3 ದೊಡ್ಡ ವೇದಿಕೆಗಳಿವೆ. ಸಭಾಂಗಣಗಳಿಗೆ ‘ಪ್ರೇಮಲೋಕ’ ಮತ್ತು ‘ಮಾಯಾಲೋಕ ’ಎಂದು ಹೆಸರಿಡಲಾಗಿದೆ.

ಅಲ್ಲದೆ, ಒಂದು ಪಂಕ್ತಿಯಲ್ಲಿ 2 ಸಾವಿರ ಜನ ಕುಳಿತು ಊಟ ಮಾಡಬಹುದಾದ ಭೋಜನ ಶಾಲೆ ಇದ್ದು, ಭಾರತೀಯ ಮೂಲದ ಅಮೆರಿಕದ ಪ್ರಸಿದ್ಧ ಬಾಣಸಿಗ ಸತೀಶ್‌ ಮತ್ತು 45 ಜನರ ತಂಡ ಭೋಜನ ವ್ಯವಸ್ಥೆ ನೋಡಿಕೊಂಡಿದೆ ಎಂದುಸತ್ಯಪ್ರಸಾದ್‌ ತಿಳಿಸಿದರು.

ಅಂಬಿನೈಟ್‌: ಈ ಬಾರಿ ಸಮ್ಮೇಳನದಲ್ಲಿ  ಕಲೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿರುವುದರಿಂದ ಪ್ರತಿ ನಿತ್ಯವೂ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ. ಅದರಲ್ಲೂ ಕೊನೆಯ ದಿನ ನಡೆಯುವ ಅಂಬಿ ನೈಟ್‌ ಗಮನ ಸೆಳೆಯುವ ಕಾರ್ಯಕ್ರಮವಾಗಲಿದೆ. ಚಿತ್ರನಟ ಅಂಬರೀಷ್‌, ಸುಮಲತಾ, ರವಿಚಂದ್ರನ್‌, ಪುನೀತ್‌ ರಾಜ್‌ಕುಮಾರ್‌, ಶಿವರಾಜ್‌ಕುಮಾರ್‌, ಯಶ್‌,  ಗಣೇಶ್‌, ಜಗ್ಗೇಶ್‌, ಸಾಧು ಕೋಕಿಲ್‌ ಮುಂತಾದವರು ಭಾಗವಹಿಸುತ್ತಿದ್ದಾರೆ.

ಈ ಬಾರಿಯ ಸಮ್ಮೇಳನದಲ್ಲಿ 20 ಕ್ಕೂ ಹೆಚ್ಚು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.  ಅಕ್ಕ ಅಡುಗೆ ಮನೆ, ಸೋಲೊ ಮತ್ತು ಡ್ಯುಯೆಟ್‌ ಹಾಡುವ ಸ್ಪರ್ಧೆ ಇತ್ಯಾದಿ ನಡೆಯಲಿವೆ. ಸಮ್ಮೇಳನದ ಯಶಸ್ಸಿಗೆ 250 ಕ್ಕೂ ಹೆಚ್ಚು ಕಾರ್ಯಕರ್ತರು ಹಗಲಿರುಳೆನ್ನದೆ ಶ್ರಮಿಸುತ್ತಿದ್ದಾರೆ ಎಂದು ಸತ್ಯಪ್ರಸಾದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT