ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21ರಿಂದ ಯುವ ಸಂಭ್ರಮ; ನೃತ್ಯರೂಪಕವಾಗಿ ‘ಜಲಸಂರಕ್ಷಣೆ’

ಆಯ್ಕೆಯಾದ ತಂಡಗಳಿಗೆ ‘ಯುವ ದಸರಾ’ದಲ್ಲಿ ಅವಕಾಶ
Last Updated 3 ಸೆಪ್ಟೆಂಬರ್ 2016, 9:35 IST
ಅಕ್ಷರ ಗಾತ್ರ

ಮೈಸೂರು: ಯುವ ದಸರಾ ಸಮಿತಿ ವತಿಯಿಂದ ಇಲ್ಲಿನ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಸೆ. 21ರಿಂದ 26ರವರೆಗೆ ಯುವ ಸಂಭ್ರಮ ನಡೆಯಲಿದ್ದು, ಜಲಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ.

ಅಲ್ಲದೆ, ಅಂಬೇಡ್ಕರ್‌ ಅವರ 125ನೇ ಜಯಂತಿ ಅಂಗವಾಗಿ ಅವರ ವಿಚಾರ ಧಾರೆಗಳು, ಅರಸು ವಿಚಾರಧಾರೆಗಳು, ಮಹಿಳಾ ಸಬಲೀಕರಣ, ಸಾಮಾಜಿಕ ಪಿಡುಗುಗಳ ನಿವಾರಣೆ, ರೈತರ ಸಂಕಷ್ಟಗಳು ಮತ್ತು ಪರಿಹಾರ, ಮೂಢನಂಬಿಕೆಗಳ ನಿವಾರಣೆ, ಸ್ವಚ್ಛತೆ ಹಾಗೂ ಆರೋಗ್ಯ ಕುರಿತು 8ರಿಂದ 12 ನಿಮಿಷಗಳೊಳಗೆ ನೃತ್ಯರೂಪಕವನ್ನು ಕಾಲೇಜುಗಳು ಪ್ರಸ್ತುತಪಡಿಸಬೇಕು.

ಇದರಿಂದ ಅಂಬೇಡ್ಕರ್‌ ಹಾಗೂ ಅರಸು ಅವರ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡುತ್ತದೆ. ಅಲ್ಲದೆ, ರೈತರ ಸಮಸ್ಯೆಗಳೊಂದಿಗೆ, ಸಾಮಾಜಿಕ ಪಿಡುಗುಗಳ ಕುರಿತು ಅರಿಯಲಿ ಎನ್ನುವ ಉದ್ದೇಶ ಯುವ ದಸರಾ ಸಮಿತಿಗಿದೆ.

ಮೈಸೂರು, ಚಾಮರಾಜನಗರ, ಹಾಸನ, ಕೊಡಗು ಹಾಗೂ ಮಂಡ್ಯ ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯದ ಒಂದೆರಡು ಕಾಲೇಜು ತಂಡಗಳು ‘ಯುವ ಸಂಭ್ರಮ’ದಲ್ಲಿ ಭಾಗವಹಿಸುತ್ತವೆ.

ದಿನವೊಂದಕ್ಕೆ 15ರಿಂದ 20 ತಂಡಗಳು ‘ಯುವ ಸಂಭ್ರಮದ’ದಲ್ಲಿ ಪ್ರದರ್ಶನ ನೀಡಲಿದ್ದು, ಒಟ್ಟು 100ರಿಂದ 120 ತಂಡಗಳ ಪ್ರತಿಭಾ ಪ್ರದರ್ಶನ ಇರುತ್ತದೆ. ಆದರೆ, ಇದು ಸ್ಪರ್ಧೆಯಲ್ಲ. ಉತ್ತಮ ಪ್ರದರ್ಶನ ನೀಡಿದ ತಂಡಗಳನ್ನು ಯುವ ದಸರಾಕ್ಕೆ ಆಯ್ದುಕೊಳ್ಳಲಾಗುತ್ತದೆ. ಅ. 3ರಿಂದ 9ರವರೆಗೆ ನಗರದ ಮಹಾರಾಜ ಕಾಲೇಜಿನ ಮೈದಾನದಲ್ಲಿ ನಡೆಯಲಿರುವ ‘ಯುವ ದಸರಾ’ದಲ್ಲಿ ಆರಂಭದ ಒಂದು ಗಂಟೆಯವರೆಗೆ ನೃತ್ಯರೂಪಕಕ್ಕೆ ಅವಕಾಶ ನೀಡಲಾಗುತ್ತದೆ.

ಯುವ ಸಂಭ್ರಮದಲ್ಲಿ ಭಾಗವಹಿಸುವ ಪ್ರತಿ ತಂಡಗಳಿಗೆ ಗೌರವ ಸಂಭಾವನೆ ನೀಡಲಾಗುತ್ತದೆ. ನೃತ್ಯ ಸಂಯೋಜಕರಿಗೆ 5 ಸಾವಿರ ಗೌರವಧನ, ಪ್ರಯಾಣಭತ್ಯೆ, ಉಡುಪುಗಳಿಗೆಂದು ಪ್ರತಿ ಕಲಾವಿದರಿಗೆ ₹ 200, 5 ದಿನಗಳವರೆಗೆ ತಾಲೀಮು ನಡೆಸಿದ್ದಕ್ಕೆ ಪ್ರತಿ ಕಲಾವಿದರಿಗೆ ₹ 100 ತರಬೇತಿ ಭತ್ಯೆಯನ್ನು ಪ್ರದರ್ಶನ ನೀಡಿದ ನಂತರ ಪಾವತಿಸಲಾಗುತ್ತದೆ. ಜತೆಗೆ, ಪ್ರಮಾಣಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT