ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಚಾರಿ’ಗೆ ಜೊತೆಯಾದ ಬಸಂತಿ

Last Updated 8 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಮಂಡಿಯವರೆಗೆ ಇಳಿಬಿದ್ದ ಎಣ್ಣೆಗೂದಲು, ತಲೆ ತುಂಬಾ ಹೂವು ಮುಡಿದು ಆಧುನಿಕತೆಯ ಸೋಂಕು ತಗುಲದ ಮುಗ್ಧೆಯಂತೆ ಕಾಲೇಜಿಗೆ ಬರುತ್ತಿದ್ದ ಈ ಯುವತಿಯನ್ನು ಸ್ನೇಹಿತರ ಬಳಗ ಕರೆಯುತ್ತಿದ್ದದ್ದು ‘ಬಸಂತಿ’ ಎಂದು. ಫ್ಯಾಷನ್‌ ಮಾಯೆಯೊಳಗೆ ಸಾಗುತ್ತಿರುವ ಸುತ್ತಲಿನ ಜಗತ್ತಿಗೆ ಅಪವಾದ ಎಂಬಂತೆ ಇದ್ದಾಕೆ. ಸ್ಟೈಲ್‌ ಎಂದರೇನು ಎಂಬುದೇ ತಿಳಿದಿರದಿದ್ದ ಈಕೆಯನ್ನು ಬದಲಿಸಿದ್ದು ಮಾಡೆಲಿಂಗ್‌ ಲೋಕ.

ಈ ಬೆಡಗಿ ಮೊದಲು ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕಿದ್ದು ಕೂಡ ಸ್ವಾರಸ್ಯಕರ ಘಟನೆ. ಸ್ನೇಹಿತರ ತಂಡದೊಂದಿಗೆ ಹೊರಗೆ ಹೋಗಿದ್ದಾಗ ಫ್ಯಾಷನ್‌ ಕಾರ್ಯಕ್ರಮವೊಂದು ನಡೆಯುತ್ತಿತ್ತು. ಅಲ್ಲಿ ಸ್ನೇಹಿತರೆಲ್ಲರೂ ‘ನೀನೂ ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕುತ್ತೀಯಾ?’ ಎಂದು ತಮಾಷೆಗೆ ರೇಗಿಸಿದರು.

ಯಾರಾದರೂ ಚಾಲೆಂಜ್‌ ಒಡ್ಡಿದರೆ ಗೆಲ್ಲುವವರೆಗೂ ಬಿಡದೆ ಹೋರಾಡುವ ಜಾಯಮಾನದ ಈಕೆ ಸವಾಲನ್ನು ಸ್ವೀಕರಿಸಿದರು. ಆದರೆ ವೇದಿಕೆಯ ಮೇಲೆ ಹೋಗಲು ಭಯ. ರ್‍ಯಾಂಪ್‌ ಮೇಲೆ ಹೆಜ್ಜೆಹಾಕುತ್ತಿದ್ದ ರೂಪದರ್ಶಿಯರೆಲ್ಲರೂ ಮರಳಿ ಪರದೆ ಸರಿಸುವ ಹೊತ್ತಾಯಿತು. ಆ ಹೊತ್ತಿಗೆ ಹಿಂದಿನಿಂದ ಈಕೆಯನ್ನು ಯಾರೋ ವೇದಿಕೆಗೆ ತಳ್ಳಿದರು.

ಹಠಾತ್ತಾಗಿ ವೇದಿಕೆ ಮೇಲೆ ನಿಂತಾಗ ಸುತ್ತಲೂ ನೆರೆದಿದ್ದ ಜನರನ್ನು ನೋಡಿ ಒಂದು ಕ್ಷಣ ದಿಗಿಲು. ಹೇಗೋ ಸಾವರಿಸಿಕೊಂಡು ಮಾರ್ಜಾಲ ನಡಿಗೆಯನ್ನು ಹಾಕಿ ಬಂದರು. ಮರುದಿನ ಪತ್ರಿಕೆಗಳಲ್ಲಿ ಆಕೆಯದೇ ಫೋಟೊಗಳು. ಬಳಿಕ ಮಾಡೆಲಿಂಗ್‌ ಸ್ಪರ್ಧೆಗಳಿಗೆ ಕಾಲೇಜಿನ ಕಾಯಂ ಪ್ರತಿನಿಧಿಯಾಗಿ ಬದಲಾದದ್ದು ಆಕೆಗೆ ಈಗಲೂ ಅಚ್ಚರಿ ಮೂಡಿಸುತ್ತದೆ. ಸ್ನೇಹಿತೆಯರೂ ಸಿಕ್ಕಾಗ ‘ಬಸಂತಿ ನೀನೇನಾ ಇದು’ ಎಂದು ಕೇಳುವುದಿದೆ. ಮೇಕಪ್‌ ಇಲ್ಲದ ಬಣ್ಣದ ಹಂಗಿನಿಂದ ದೂರವಿದ್ದ ‘ಬಸಂತಿ’ ಈಗ ಕನ್ನಡ ಚಿತ್ರದ ನಾಯಕಿ. ಪರಭಾಷೆಯ ಸಿನಿಮಾರಂಗದವರೂ ಕಥೆಗಳನ್ನು ಹಿಡಿದು ಕದ ತಟ್ಟುತ್ತಿದ್ದಾರೆ.

ಅಮೃತ್‌ ಎಂಬ ಯುವ ನಿರ್ದೇಶಕರ ‘ರಿಕ್ತ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಅಡಿಯಿಡುತ್ತಿರುವವರು ಅದ್ವಿಕಾ. ಹಾರರ್‌, ಥ್ರಿಲ್ಲರ್‌ ಜತೆಗೆ ಹಾಸ್ಯವನ್ನು ಬೆರೆಸಿದ ಸಿನಿಮಾ ಇದು. ಅದ್ವಿಕಾ ಇಲ್ಲಿ ‘ಸಂಚಾರಿ’ ವಿಜಯ್‌ ಅವರಿಗೆ ಜೋಡಿ. ಮೊದಲ ಸಿನಿಮಾದ ಕಥೆ ಮತ್ತು ಪಾತ್ರ ಕುತೂಹಲಕಾರಿಯಾಗಿದೆ. ಹೀಗಾಗಿ ಅದರ ಕುರಿತು ಮಾತನಾಡುವುದಿಲ್ಲ. ಚಿತ್ರಮಂದಿರಲ್ಲೇ ನೋಡಿ ಎಂದು ನಸುನಗುತ್ತಾರೆ ಅದ್ವಿಕಾ.

ಆದರೆ, ಚಿತ್ರತಂಡದ ಕುರಿತು ಅವರು ಹೆಚ್ಚು ಮಾತನಾಡುತ್ತಾರೆ. ಹೆಚ್ಚು ವೃತ್ತಿಪರ, ಕುಟುಂಬದಂತೆ ನೋಡಿಕೊಳ್ಳುವ ಮತ್ತು ಕಠಿಣ ಪರಿಶ್ರಮದ ಚಿತ್ರತಂಡ ತನಗೆ ದೊರೆತಿರುವುದು ಅದೃಷ್ಟ ಎಂದು ಅವರು ಹೇಳಿಕೊಳ್ಳುತ್ತಾರೆ. ಊಟ ನಿದ್ರೆ ಬಿಟ್ಟು ಮಾಡಿದ ಕೆಲಸ ಅವರಿಗೆ ತೃಪ್ತಿ ನೀಡಿದೆ.

‘ಮೊದಲ ಚಿತ್ರದಲ್ಲೇ ರಾಷ್ಟ್ರಪ್ರಶಸ್ತಿ ವಿಜೇತ ವಿಜಯ್ ಜತೆಗೆ ನಟಿಸುವ ಅವಕಾಶ ಅಪೂರ್ವವಾದದ್ದು. ಅವರು ನೀಡುವ ಅಭಿನಯಕ್ಕೆ ಪೂರಕವಾಗಿ ನನ್ನಿಂದ ಶೇಕಡ ಒಂದರಷ್ಟಾದರೂ ಅಭಿನಯ ನೀಡಲು ಸಾಧ್ಯವಾಗುತ್ತದೆಯೇ ಎಂಬ ಅನುಮಾನ ಕಾಡುತ್ತಿತ್ತು. ಏಕೆಂದರೆ ಅವರ ಸಹನಟಿಯಾಗಿ ಪಾತ್ರಕ್ಕೆ ನ್ಯಾಯ ನೀಡಬೇಕಿತ್ತು. ಚಿತ್ರೀಕರಣ ಮುಗಿದ ಬಳಿಕ ನನಗೆ ಸಮಾಧಾನ ಆಗುತ್ತಿರಲಿಲ್ಲ. ನಾನಿನ್ನೂ ಕಲಿಯುತ್ತಿರುವ ಹುಡುಗಿ’ ಎಂದು ಅವರು ಹೇಳುತ್ತಾರೆ.

ಅದ್ವಿಕಾ ಅವರದು ಇದು ಮೊದಲ ಸಿನಿಮಾ ಆದರೂ, ಮೊದಲು ಬಣ್ಣ ಹಚ್ಚಿದ್ದು ತೆಲುಗಿನ ಧಾರಾವಾಹಿಗೆ. ಕಾಲೇಜಿನಿಂದ ಮನೆಗೆ ಹೋಗುತ್ತಿದ್ದಾಗ ಆಕಸ್ಮಿಕವಾಗಿ ನೋಡಿದವರೊಬ್ಬರು ತೆಲುಗಿನಲ್ಲಿ ಪ್ರಾಜೆಕ್ಟ್‌ ಇದೆ ನಟಿಸುತ್ತೀರಾ ಎಂದು ಆಹ್ವಾನವಿತ್ತರು. ಒಂದು ಕೈ ನೋಡೋಣ ಎಂದು ಆಡಿಷನ್‌ ನೀಡಲು ಹೋದ ಅವರು ಎದುರಿಸಿದ್ದು, ಬಾಂಬೆ, ಹೈದರಾಬಾದ್‌ ಮುಂತಾದ ಕಡೆಗಳ 99 ಯುವತಿಯರ ಪೈಪೋಟಿಯನ್ನು. ಎಲ್ಲರನ್ನೂ ಮೀರಿಸಿ ಅದ್ವಿಕಾ ‘ಮೇಘಮಾಲ’ ಎಂಬ ಧಾರಾವಾಹಿಯ ಮುಖ್ಯ ಪಾತ್ರಕ್ಕೆ ಆಯ್ಕೆಯಾದರು. ಆ ಧಾರಾವಾಹಿಯಲ್ಲಿನ ಅಭಿನಯಕ್ಕೆ ಎರಡು ಪ್ರಶಸ್ತಿಗಳನ್ನೂ ಪಡೆದರು. ಅದರ ಬೆನ್ನಲ್ಲೇ ಸಾಕಷ್ಟು ಸಿನಿಮಾ ಆಫರ್‌ಗಳು ಬಂದವು. ‘ರಿಕ್ತ’ ಚಿತ್ರದ ಆಡಿಷನ್‌ನಲ್ಲಿ ಉತ್ತೀರ್ಣರಾದವರು ಕಥೆ ಕೇಳುವ ಮೊದಲು ಹಾಡುಗಳನ್ನು ಆಲಿಸಿಯೇ ಸಿನಿಮಾವನ್ನು ಒಪ್ಪಿಕೊಂಡರು. ಸಿನಿಮಾ ಚೆನ್ನಾಗಿದೆ ಎಂಬ ಅನಿಸಿಕೆ ಹಾಡುಗಳನ್ನು ಕೇಳುವಾಗಲೇ ಮೂಡಿತ್ತು ಎನ್ನುತ್ತಾರೆ ಅವರು.

ಅದ್ವಿಕಾ ಅವರು ಹಿರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಸಂಬಂಧಿ. ಆದರೆ ಅವರ ಕುಟುಂಬದ ನಂಟು ಬೆಸೆದಿರಲಿಲ್ಲ. ಮನೆಯಲ್ಲಿ ಸಿನಿಮಾದ ವಾತಾವರಣವೂ ಇರಲಿಲ್ಲ. ಕುಟುಂಬದ ಎಲ್ಲರೂ ಡಾಕ್ಟರ್‌, ಎಂಜಿನಿಯರ್ ಹೀಗೆ ಬೇರೆ ಬೇರೆ ವೃತ್ತಿಗಳಲ್ಲಿ ಇರುವವರು. ಬಿಸಿಎ ಓದುತ್ತಿದ್ದ ಮಗಳೂ ಇಂಥದ್ದೇ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಾಳೆ ಎಂದೇ ಪೋಷಕರು ಭಾವಿಸಿದ್ದರು. ಅದ್ವಿಕಾ ಅವರಿಗೂ ಈ ಕ್ಷೇತ್ರದ ಆಯ್ಕೆ ಅನಿರೀಕ್ಷಿತವಾಗಿತ್ತು. ಈಗ ಮನೆಯಲ್ಲಿ ಅವರ ಆಯ್ಕೆಗೆ ಪ್ರೋತ್ಸಾಹ ಸಿಗುತ್ತಿದೆ.

10 ಭಾಷೆಯ ನಂಟು
ಯಾವುದಾದರೂ ಹೊಸ ಭಾಷೆ, ಸಂಸ್ಕೃತಿ, ಆಚರಣೆಗಳೆಂದರೆ ಅವುಗಳನ್ನು ಬೇಗನೆ ಕಲಿತುಕೊಳ್ಳಬೇಕು ಎಂಬ ಆಸಕ್ತಿ ಅದ್ವಿಕಾ ಅವರದು. ಅವರು ಚೈನೀಸ್‌ ಸೇರಿದಂತೆ 10 ಭಾಷೆಗಳನ್ನು ಬಲ್ಲವರು. ಅದರಲ್ಲಿ ನಾಲ್ಕೈದು ಭಾಷೆಗಳನ್ನು ನಿರರ್ಗಳವಾಗಿ ಮಾತಾಡಬಲ್ಲದು. ತೆಲುಗಿನ ಧಾರಾವಾಹಿಗೆ ಆಯ್ಕೆಯಾದ ಒಂದೇ ತಿಂಗಳಲ್ಲಿ ತೆಲುಗನ್ನು ಸುಲಲಿತವಾಗಿ ಮಾತನಾಡುವುದನ್ನು ಕಲಿತದ್ದರು. ಈಗಲೂ ಯಾವ ಭಾಷೆ ಬೇಕೆಂದರೂ ಕಲಿಯಲು ಇಷ್ಟ. ಜಪಾನಿ ಸಿನಿಮಾ ಬಂದರೂ ಕಲಿತು ಮಾಡುತ್ತೇನೆ ಎಂದು ಉತ್ಸಾಹದಿಂದ ಹೇಳುತ್ತಾರೆ.

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿಯೂ ಅದ್ವಿಕಾ ಜೂನಿಯರ್ ಪದವಿ ಗಳಿಸಿದ್ದಾರೆ. ಹಾಡುಗಾರಿಕೆ ಅವರ ಇಷ್ಟದ ಸಂಗತಿಗಳಲ್ಲಿ ಒಂದು. ಸಿನಿಮಾಕ್ಕೆ ಭಾಷೆಯ ಅಡ್ಡಿಯಿಲ್ಲ. ಒಳ್ಳೆಯ ಕಥೆ ಸಿಕ್ಕಾಗಿ ಯಾವ ಭಾಷೆಯಲ್ಲಾದರೂ ನಟಿಸಬಲ್ಲೆ. ಆದರೆ ಕನ್ನಡಕ್ಕೆ ಆದ್ಯತೆ ಇದ್ದೇ ಇರುತ್ತದೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT