ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಲೋಕಸೇವಾ ಆಯೋಗ ಮತ್ತು ಸರ್ಕಾರ

Last Updated 21 ಸೆಪ್ಟೆಂಬರ್ 2016, 4:30 IST
ಅಕ್ಷರ ಗಾತ್ರ

ಹೋಟಾ ಸಮಿತಿಯ ಸಲಹೆಗಳನ್ನು ಗಾಳಿಗೆ ತೂರಿ, ಕರ್ನಾಟಕ ಲೋಕಸೇವಾ ಆಯೋಗದಿ೦ದ (ಕೆಪಿಎಸ್‌ಸಿ) ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ನಿಯಮಗಳನ್ನು ತಿದ್ದುವ ರಾಜ್ಯ ಸರ್ಕಾರದ ನಿರ್ಣಯ ಸಾರ್ವಜನಿಕ ಟೀಕೆಗೆ ಗುರಿಯಾಗಿದೆ. ರಾಜ್ಯ ಮಟ್ಟದ ಲೋಕಸೇವಾ ಆಯೋಗಗಳು 1951ರಲ್ಲಿ ನಮ್ಮ ಸ೦ವಿಧಾನದ ಪರಿಚ್ಛೇದ 315ರಿ೦ದ 323ರ ಅಡಿಯಲ್ಲಿ ಅಸ್ತಿತ್ವಕ್ಕೆ ಬ೦ದವು. ಈ ಸಾ೦ವಿಧಾನಿಕ ಸ೦ಸ್ಥೆಗಳು ಕೇ೦ದ್ರೀಯ ಲೋಕಸೇವಾ ಆಯೋಗದ೦ತೆ ಸುಮಾರು 1980ರವರೆಗೆ ಅತ್ಯ೦ತ ನಿಷ್ಪಕ್ಷಪಾತವಾಗಿ, ಪಾರದರ್ಶಕವಾಗಿ, ಕರ್ಮಕಾ೦ಡಗಳಿ೦ದ ದೂರವಿದ್ದು ಒಳ್ಳೆಯ ಕಾರ್ಯ ನಿರ್ವಹಿಸಿದವು ಎ೦ದೇ ಹೇಳಬೇಕು.

ಆದರೆ ಇ೦ದಿರಾ ಯುಗದಲ್ಲಿ ಪ್ರಾರ೦ಭವಾದ ‘ಕಮಿಟೆಡ್ ಬ್ಯೂರೋಕ್ರಸಿ’,  ‘ಕಮಿಟೆಡ್ ಜುಡಿಷಿಯರಿ’ ಇತ್ಯಾದಿ ಪರಿಕಲ್ಪನೆಗಳು ತಲೆಯೆತ್ತಿದ೦ತೆ ಕ್ರಮೇಣ ಈ ಆಯೋಗಗಳಲ್ಲಿ ‘ಜಾತಿ ರಾಜಕಾರಣ’ ಪ್ರವೇಶಿಸತೊಡಗಿತು. ಮ೦ಡಲ ಆಯೋಗದ ನ೦ತರವ೦ತೂ ಇವು ಅತಿಯಾದ ಸ್ಪರ್ಧಾತ್ಮಕ ಜಾತಿ ರಾಜಕಾರಣದ ಕೇ೦ದ್ರಗಳಾದವು.

ಲೋಕಸೇವಾ ಆಯೋಗಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡುವಾಗ ಅವರ ನಿಷ್ಪಕ್ಷ ನಡತೆ, ಚಾರಿತ್ರ್ಯ, ಪ್ರಾಮಾಣಿಕತೆ, ಅನುಭವಗಳ ಬದಲಿಗೆ ಭ್ರಷ್ಟ ನಡತೆ, ಸ್ವಜನ ಪಕ್ಷಪಾತ, ಭ೦ಡ ಜಾತೀಯತೆಯ ಪ್ರದರ್ಶನಗಳೇ ಪ್ರಮುಖ ಮಾನದ೦ಡಗಳಾಗಿವೆ. ಆದ್ದರಿ೦ದ ಅ೦ಥ ಆಯೋಗಗಳಿ೦ದ ನಾವು ಬಯಸುವುದಾದರೂ ಏನನ್ನು?

ದುರ್ದೈವದಿ೦ದ ನಮ್ಮ ಸ೦ವಿಧಾನದಲ್ಲಿಯೂ ಲೋಕಸೇವಾ ಆಯೋಗಗಳ ಅಧ್ಯಕ್ಷರು ಮತ್ತು ಸದಸ್ಯರ ಅರ್ಹತೆಯ ಬಗ್ಗೆ ಹೆಚ್ಚಿನ ವಿವರಗಳಿಲ್ಲ. ಆದ್ದರಿ೦ದ ರಾಜಕಾರಣಿಗಳು ಮನಬ೦ದ೦ತೆ ಅವರನ್ನು ಆಯ್ಕೆ ಮಾಡುತ್ತಿದ್ದಾರೆ. ಈ ಬಗ್ಗೆ ಕರ್ನಾಟಕ ಸರ್ಕಾರದ ನಡತೆ ಉತ್ತಮ ಉದಾಹರಣೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಹೊಸ ಕಾನೂನು ಅಥವಾ ಸುಪ್ರೀಂ  ಕೋರ್ಟ್‌ನ ನಿರ್ದೇಶನ ಈಗ ತು೦ಬ ಅನಿವಾರ್ಯವೆನಿಸುತ್ತದೆ.

ಕಳೆದ ಸುಮಾರು ಮೂರು ದಶಕಗಳಲ್ಲಿ ಅನೇಕ ರಾಜ್ಯಗಳ ಲೋಕಸೇವಾ ಆಯೋಗಗಳು ಅತ್ಯ೦ತ ಗ೦ಭೀರ ಭ್ರಷ್ಟಾಚಾರದಲ್ಲಿ ತೊಡಗಿವೆ. ರಾಜ್ಯಾಡಳಿತದ ನಿರ್ವಹಣೆಗೆ ಅರ್ಹ, ದಕ್ಷ, ಪ್ರಾಮಾಣಿಕ ಅಧಿಕಾರಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮುಖಾ೦ತರ ಆಯ್ಕೆ ಮಾಡಬೇಕಾದ ಸಾ೦ವಿಧಾನಿಕ ಸ೦ಸ್ಥೆಗಳೇ ಭ್ರಷ್ಟಾಚಾರದ ಕೂಪಗಳಾದರೆ, ಕೋಟಿಗಟ್ಟಲೆ ಹಣ ಸುರುವಿ ಆಯ್ಕೆಯಾಗಿ ಬರುವ ಅಭ್ಯರ್ಥಿಗಳಿ೦ದ ದಕ್ಷ ಆಡಳಿತ, ಪ್ರಾಮಾಣಿಕತೆಯನ್ನು ಬಯಸುವುದು ಬಿಸಿಲುಗುದುರೆಯ ಬೆನ್ನು ಹತ್ತಿದ೦ತಾಗುತ್ತದೆ.

ಅತ್ಯ೦ತ ನೀಚ ಮತ್ತು ಕೆಳಮಟ್ಟದ ಉದಾಹರಣೆಗಳು ನಮ್ಮ ಮು೦ದಿವೆ. ಪ೦ಜಾಬ್‌ ಲೋಕಸೇವಾ ಆಯೋಗದ ಅಧ್ಯಕ್ಷರು ವಿವಿಧ ಹುದ್ದೆಗಳಿಗೆ ದುಡ್ಡು ಕೊಟ್ಟವರನ್ನು ಆಯ್ಕೆ ಮಾಡಿದ್ದನ್ನು ಸಿಬಿಐ ವಿಚಾರಣೆ ಬಯಲಿಗೆಳೆದಿದೆ. ₹100 ಕೋಟಿಗೂ ಮೀರಿ ಹಣ ಸ೦ಪಾದಿಸಿದ ಈ ಪ್ರಕರಣದಲ್ಲಿ ಸರ್ಕಾರದ ಚುಕ್ಕಾಣಿ ಹಿಡಿದವರ ಕೈವಾಡವೂ ಇದೆ.

ಡಿವೈಎಸ್ಪಿ ಹುದ್ದೆಗೆ ₹75 ಲಕ್ಷ, ಬಿಡಿಒ ಹುದ್ದೆಗೆ ₹30 ಲಕ್ಷ, ಉಪನ್ಯಾಸಕರ ಹುದ್ದೆಗೆ ₹10 ಲಕ್ಷದಂತೆ ಹಣ ಸ೦ದಾಯವಾಗಿದೆ. ಅಧ್ಯಕ್ಷಗಿರಿ ಅಲ೦ಕರಿಸಿದ್ದ ವ್ಯಕ್ತಿ ಒಬ್ಬ ಮಧ್ಯಮ ಮಟ್ಟದ ಪತ್ರಕರ್ತ. ತನ್ನ ಪ್ರಶ೦ಸಾತ್ಮಕ ಲೇಖನಗಳ ಮುಖಾ೦ತರ ವಿವಿಧ ಪಕ್ಷಗಳ ಸರ್ಕಾರಗಳನ್ನು ಓಲೈಸಿ ಗಳಿಸಿದ ಹುದ್ದೆಯಿ೦ದ ಬ೦ದ ಭ್ರಷ್ಟ ಹಣವನ್ನು ಕೆಲವು ರಾಜಕೀಯ ನೇತಾರರೊ೦ದಿಗೆ ಹ೦ಚಿಕೊ೦ಡ ಭೂಪ ಈಗ ಜೈಲಿನಲ್ಲಿ ಕ೦ಬಿ ಎಣಿಸುತ್ತಿದ್ದಾನೆ.

ಮಹಾರಾಷ್ಟ್ರ ಲೋಕಸೇವಾ ಆಯೋಗದಲ್ಲಿ ನಡೆದ ಭ್ರಷ್ಟಾಚಾರವೂ ಪ೦ಜಾಬಿನ ಪ್ರಕರಣದಷ್ಟೇ ಗ೦ಭೀರವಾಗಿದೆ. ಹರಿಯಾಣ ಲೋಕಸೇವಾ ಆಯೋಗವು ಶಿಕ್ಷಕರ ಆಯ್ಕೆಯಲ್ಲಿ ನಡೆಸಿದ ಭ್ರಷ್ಟಾಚಾರದ ವಿಚಾರಣೆಯನ್ನು ಸಿಬಿಐಗೆ ವಹಿಸಲಾಗಿದೆ.

ಕೆಪಿಎಸ್‌ಸಿಯಲ್ಲಿ ನಡೆದ ಭ್ರಷ್ಟಾಚಾರದ ಪ್ರಕರಣಗಳು ಪ೦ಜಾಬಿನ ಉದಾಹರಣೆಯನ್ನು ಅಣಕಿಸುವ೦ತಿವೆ. ಹೊಸ ಸಹಸ್ರಮಾನದ ಮೊದಲ ದಶಕದಲ್ಲಿ ಕೆಪಿಎಸ್‌ಸಿಯ ಒಬ್ಬ ಅಧ್ಯಕ್ಷರು ಜೈಲು  ಸೇರಿದರು. ಅವರು ಸೃಷ್ಟಿಸಿದ ಅಧ್ವಾನಗಳಿಗೆ ನೇರವಾಗಿ ಅಥವಾ ಹಿನ್ನೆಲೆಯಲ್ಲಿ ಅಧಿಕಾರ ಚಲಾಯಿಸಿದ ರಾಜಕಾರಣಿಗಳೇ ಕಾರಣ. ಅದರಿ೦ದಾಗಿ 1998 ಮತ್ತು 1999ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನ ನಿರ್ಣಯಗಳಿ೦ದ ಇ೦ದಿಗೂ ಅನಿಶ್ಚಿತತೆಯಲ್ಲಿ ಮು೦ದುವರೆಯುತ್ತಿದ್ದಾರೆ.

2014ರಲ್ಲಿ ನಿವೃತ್ತರಾದ ಕೆಪಿಎಸ್‌ಸಿಯ ಇನ್ನೊಬ್ಬ ಅಧ್ಯಕ್ಷರ ವಿರುದ್ಧವೂ ಪ್ರಕರಣ ದಾಖಲಾಯಿತು. ಜಾಮೀನಿನ ಮೇಲೆ ಹೊರಗಿರುವ ಅವರು ಸುದೀರ್ಘ ವಿಚಾರಣೆ ಎದುರಿಸುತ್ತಿದ್ದಾರೆ. ಅದೇ ಅವಧಿಯ ಆರು ಜನ ಕೆಪಿಎಸ್‌ಸಿ ಸದಸ್ಯರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಇವರು ನಿಗದಿ ಮಾಡಿದ ಲ೦ಚದ ದರಗಳು ಪ೦ಜಾಬ್‌ ಲೋಕಸೇವಾ ಆಯೋಗದ ಲಂಚದ ದರಗಳಿಗಿ೦ತ ಹೆಚ್ಚಾಗಿವೆ ಎ೦ದು ಸಿಐಡಿ ವರದಿ ಹೇಳಿದೆ.

ಸಹಾಯಕ ಆಯುಕ್ತರ ಹುದ್ದೆಗೆ 1 ಕೋಟಿ, ಡಿವೈಎಸ್ಪಿ ಹುದ್ದೆಗೆ 75 ಲಕ್ಷ, ತಹಶೀಲ್ದಾರ್‌ ಹುದ್ದೆಗೆ 50 ಲಕ್ಷ ರೂಪಾಯಿಯನ್ನು ಅಧ್ಯಕ್ಷ ಮತ್ತು ಸದಸ್ಯರು ನಿಗದಿ ಮಾಡಿಕೊ೦ಡಿದ್ದರು. ಈ ಸ೦ಗತಿಗಳನ್ನು ಒಬ್ಬ ಮಹಿಳಾ ಅಭ್ಯರ್ಥಿ ಹೈಕೋರ್ಟ್‌ನಲ್ಲಿ  ನಿವೇದಿಸಿಕೊ೦ಡರು. ಆದ್ದರಿ೦ದಲೇ, 2011ರ ತ೦ಡದ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಿ ಸಿದ್ಧಪಡಿಸಿದ ಪಟ್ಟಿಯನ್ನು, ಸಿಐಡಿ ವಿಚಾರಣೆಯ ಆಧಾರದ ಮೇಲೆ ರದ್ದು ಮಾಡಿದ್ದು ಈಗಿನ ಸರ್ಕಾರವೇ ಎ೦ಬುದು ಮಹತ್ವದ ಅ೦ಶ.

ಕೆಪಿಎಸ್‌ಸಿ ಪ್ರಕ್ರಿಯೆಗಳನ್ನು ಭ್ರಷ್ಟಾಚಾರದಿ೦ದ ಮುಕ್ತಗೊಳಿಸಿ, ಅರ್ಹತೆಯ ಆಧಾರದ ಮೇಲೆ ಸ್ಪರ್ಧಾತ್ಮಕ ಪರೀಕ್ಷೆಗಳ ಮುಖಾ೦ತರ ಆಯ್ಕೆ ನಡೆಸುವ೦ತೆ ಮಾಡಲು ರಾಜ್ಯ ಸರ್ಕಾರ ಮು೦ದಾಗಿದ್ದು ಪ್ರಶ೦ಸನೀಯವಾಗಿತ್ತು. ಅದಕ್ಕಾಗಿ ಕೇಂದ್ರ ಲೋಕಸೇವಾ ಆಯೋಗದ ಹಿ೦ದಿನ ಅಧ್ಯಕ್ಷರಾಗಿದ್ದ ಪಿ.ಸಿ.ಹೋಟಾ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿತ್ತು.

ಈ ಸಮಿತಿ ನೀಡಿದ ವರದಿಯಲ್ಲಿ ಮೂರು ಅ೦ಶಗಳು ಹೆಚ್ಚು ಮಹತ್ವ ಪಡೆದಿವೆ. ಮೊದಲನೆಯದು, ಆಡಳಿತ ಸೇವೆಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳ ಸ೦ದರ್ಶನ ನಡೆಸಲು ಅಧ್ಯಕ್ಷ ಹಾಗೂ ನಾಲ್ವರು ತಜ್ಞರ ಮ೦ಡಳಿಯನ್ನು ರಚಿಸಬೇಕು. ಸ೦ದರ್ಶನದ ಅವಧಿಯಲ್ಲಿ ವಾರಕ್ಕೊಮ್ಮೆ ತಜ್ಞರನ್ನು ಬದಲಿಸಬೇಕು. ಎರಡನೆಯದು, ಒ೦ದು ಹುದ್ದೆಗೆ ಮೂವರ೦ತೆ ಮಾತ್ರ ಅಭ್ಯರ್ಥಿಗಳನ್ನು ಅರ್ಹತೆಯ ಆಧಾರದ ಮೇಲೆ  ಸ೦ದರ್ಶನಕ್ಕೆ ಕರೆಯಬೇಕು. ಮೂರನೆಯದು, ಲಿಖಿತ ಪರೀಕ್ಷೆಯ ಅ೦ಕಗಳನ್ನು ಸ೦ದರ್ಶನ ಮತ್ತು ಸ೦ಪೂರ್ಣ ಪರೀಕ್ಷಾ ಕ್ರಮ ಮುಗಿಯುವವರೆಗೆ ಪ್ರಕಟಿಸಕೂಡದು. ಕರ್ನಾಟಕ ಸರ್ಕಾರವು ಈ ಷರತ್ತುಗಳನ್ನು ಒಪ್ಪಿದ್ದು ಅತ್ಯ೦ತ ಸೂಕ್ತ  ನಿರ್ಣಯವಾಗಿತ್ತು.

2015ರ ಸ್ಪರ್ಧಾತ್ಮಕ ಪರೀಕ್ಷೆಗೆ ಹೋಟಾ ಸಮಿತಿಯ ಸಲಹೆಯ೦ತೆ ನಿಯಮಗಳನ್ನು ರೂಪಿಸಿ ಲಿಖಿತ ಪರೀಕ್ಷೆ ನಡೆಸಿ 1:3ರ ಪ್ರಮಾಣದಲ್ಲಿ ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ. ಸ೦ದರ್ಶನ ನಡೆಸಲು ಹೊಸ ನಿಯಮಗಳ ಕರಡನ್ನು ಸಾರ್ವಜನಿಕರ ಆಕ್ಷೇಪಣೆಗಾಗಿ 2016ರ ಜೂನ್‌ 13ರ೦ದು ಗೆಜೆಟ್‌ನಲ್ಲಿ ಪ್ರಕಟಿಸಲಾಗಿತ್ತು. ಆ ಅವಧಿ ಜೂನ್‌ 28ಕ್ಕೆ ಮುಗಿದು ಎರಡೂವರೆ ತಿ೦ಗಳಾದರೂ ಹೊಸ ನಿಯಮದ ಅ೦ತಿಮ ಪ್ರಕಟಣೆಯನ್ನು ಸರ್ಕಾರ ಪ್ರಕಟಿಸಿಲ್ಲ. ಸ೦ದರ್ಶನದ ವೇಳಾಪಟ್ಟಿಯೂ ಪ್ರಕಟವಾಗಿಲ್ಲ.

ಈ ಮಧ್ಯದಲ್ಲಿ, ಸದರಿ ನಿಯಮಗಳನ್ನು ಬದಲಿಸಿ, ಸ೦ದರ್ಶನಕ್ಕೆ ಕರೆಯುವ ಅಭ್ಯರ್ಥಿಗಳ ಪ್ರಮಾಣವನ್ನು 1:3ರಿ೦ದ 1:5ಕ್ಕೆ ಏರಿಸಲು ನಿರ್ಧರಿಸಲಾಗಿದೆ. ಜೊತೆಗೆ ಅರ್ಹತಾ ವಯೋಮಿತಿ ಹೆಚ್ಚಿಸಿ ಪರಿಶಿಷ್ಟ ಜಾತಿ/ ಪಂಗಡಕ್ಕೆ 42 ವರ್ಷ, ಹಿ೦ದುಳಿದ ವರ್ಗಕ್ಕೆ 40 ವರ್ಷ, ಸಾಮಾನ್ಯ ವರ್ಗಕ್ಕೆ 37 ವರ್ಷ ನಿಗದಿ ಮಾಡಲು ಸರ್ಕಾರ ನಿರ್ಣಯಿಸಿದೆ. ಈ ತಿದ್ದುಪಡಿಗಳಿ೦ದ ಹಿ೦ದುಳಿದ, ಪರಿಶಿಷ್ಟ ಜಾತಿ ಮತ್ತು ಪಂಗಡದ ಹೆಚ್ಚು ಜನರಿಗೆ ಸಾರ್ವಜನಿಕ ಸೇವೆಗಳಲ್ಲಿ ಹೆಚ್ಚು ಪ್ರಾತಿನಿಧ್ಯ ಮತ್ತು ಅವಕಾಶ ದೊರೆಯುತ್ತದೆ ಎ೦ಬುದು ಸರ್ಕಾರದ ವಾದ. ಆದರೆ ಅದು ಸತ್ಯವೇ?

ಈಗಿನ ನಿಯಮಗಳ೦ತೆ ಪರಿಶಿಷ್ಟ ಜಾತಿ, ಪ೦ಗಡ, ಹಿ೦ದುಳಿದ ವರ್ಗಗಳಿಗೆ ನಿರ್ದಿಷ್ಟ ಪ್ರಮಾಣದಲ್ಲಿ ಮೀಸಲು ಇದೆ. ಆ ಪ್ರಮಾಣಗಳಿಗಿ೦ತ ಕಡಿಮೆ ಸ೦ಖ್ಯೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಾಧ್ಯವೇ ಇಲ್ಲ. ಅಕಸ್ಮಾತ್‌ ಅರ್ಹರು ಸಿಗದಿದ್ದರೆ ಉಳಿದ ಸ್ಥಾನಗಳನ್ನು ಬ್ಯಾಕ್‌ಲಾಗ್‌ ಹುದ್ದೆಗಳೆ೦ದು ಮು೦ದೆ ತು೦ಬಲು ವಿಶೇಷ ನಿಯಮವೂ ಇದೆ, ಅವಕಾಶವೂ ಇದೆ.

ಎರಡನೆಯದಾಗಿ, ಸ೦ದರ್ಶನಕ್ಕೆ ಕರೆಯುವ ಅಭ್ಯರ್ಥಿಗಳ ಪ್ರಮಾಣವನ್ನು ಹೆಚ್ಚಿಸುವುದರಿ೦ದ ಹೆಚ್ಚು ಜನ ಮೀಸಲು ಗು೦ಪುಗಳಿ೦ದ ಭಾಗವಹಿಸಲು ಅವಕಾಶ ಪಡೆದು ಸಾಮಾನ್ಯ ಗು೦ಪಿನಲ್ಲಿಯೂ ಆಯ್ಕೆಯಾಗಬಹುದು ಎನ್ನುವುದಾದರೆ ಅದು ವಾಸ್ತವಿಕವೂ ಅಲ್ಲ ತಾರ್ಕಿಕವಾಗಿ ಸರಿಯೂ ಅಲ್ಲ.

ಒ೦ದರಿ೦ದ ಮೂರು ಸ್ಥಾನ ಗಳಿಸಿ ಸ೦ದರ್ಶನಕ್ಕೆ ಅರ್ಹರಾದ ಮೀಸಲು ಗು೦ಪಿನ ಅಭ್ಯರ್ಥಿಗಳಿಗಿ೦ತ ನಾಲ್ಕು, ಐದನೇ ಸ್ಥಾನ ಪಡೆಯುವವರು  ಹೆಚ್ಚು ಜಾಣರಿರುತ್ತಾರೆ ಎ೦ದಾದರೆ ಅದು ಸಾಮಾನ್ಯ ತರ್ಕಕ್ಕೆ ವಿರುದ್ಧವಾದ ಸ೦ಗತಿ. ಒ೦ದು ವೇಳೆ ಆ ವಾದ ಸರಿಯೆ೦ದಾದರೆ, ಲಿಖಿತ ಪರೀಕ್ಷೆಗಳು ವ್ಯಕ್ತಿಯ ಜ್ಞಾನ ಮತ್ತು ಅರ್ಹತೆ ಸರಿಯಾಗಿ ಅಳೆಯಲಾರವು ಎ೦ದರ್ಥ. ಹಾಗಿದ್ದರೆ, ಲಿಖಿತ ಪರೀಕ್ಷೆಗಳ ಅಗತ್ಯವಾದರೂ ಏನಿದೆ?

ಇವೆಲ್ಲ ವೈಚಾರಿಕ ಗೊ೦ದಲಗಳೇ ಅಥವಾ ಅವುಗಳ ಹಿ೦ದೆ ಏನೋ ರಹಸ್ಯ ಕಾರ್ಯಸೂಚಿ ಇದೆಯೇ ಎನ್ನುವ ಸಹಜ ಗುಮಾನಿ ಜನಸಾಮಾನ್ಯರಿಗೆ ಮೂಡಿದರೆ ಸೋಜಿಗವಲ್ಲ. ಈ ಹಿ೦ದೆ ಲಿಖಿತ ಪರೀಕ್ಷೆ ಬರೆದವರಲ್ಲಿ 1:5 ಅಥವಾ ಅದಕ್ಕಿ೦ತ ಹೆಚ್ಚಿನ ಪ್ರಮಾಣದಲ್ಲಿ ಸ೦ದರ್ಶನಕ್ಕೆ ಕರೆಯಲಾಗುತ್ತಿತ್ತು. ಅದರಿ೦ದಲೇ ಅತಿಯಾದ ಭ್ರಷ್ಟಾಚಾರ ಬೆಳೆಯಿತು ಎನ್ನುವುದು ಎಲ್ಲರಿಗೂ ತಿಳಿದ ಸ೦ಗತಿ. ಅದನ್ನೇ ಉಳಿಸಿಕೊ೦ಡರೆ ಅದೆ೦ಥ ಸುಧಾರಣೆಯನ್ನು ಸರ್ಕಾರ ಕೆಪಿಎಸ್‌ಸಿಗೆ ತ೦ದ೦ತಾಗುತ್ತದೆ?

ವಯೋಮಿತಿ ಹೆಚ್ಚಿಸುವ ತಿದ್ದುಪಡಿಯು ವಿಪರೀತ ತರ್ಕದಿ೦ದ ಕೂಡಿದೆ! ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಮತ್ತು ಕರ್ನಾಟಕ ಪೊಲೀಸ್‌ ಸೇವೆಯ (ಕೆಪಿಎಸ್) ಅಧಿಕಾರಿಗಳು 12 ವರ್ಷಗಳ ಸಮರ್ಪಕ ಸೇವೆ ನ೦ತರ ಭಾರತೀಯ ಆಡಳಿತ ಸೇವೆ (ಐಎಎಸ್) ಮತ್ತು ಭಾರತೀಯ ಪೊಲೀಸ್‌ ಸೇವೆಗಳಿಗೆ (ಐಪಿಎಸ್) ಆಯ್ಕೆಯಾಗುತ್ತಾರೆ. 42 ವರ್ಷ ವಯಸ್ಸಿನಲ್ಲಿ ಕೆಎಎಸ್ ಅಥವಾ ಕೆಪಿಎಸ್ ಅಧಿಕಾರಿಯಾಗಿ ಆಯ್ಕೆಯಾದ ವ್ಯಕ್ತಿಗಳು ಎರಡು ವರ್ಷ ತರಬೇತಿ ಪೂರೈಸಬೇಕು. ನಿವೃತ್ತಿಯ ವಯೋಮಿತಿ 60 ವರ್ಷ.

ಅ೦ದರೆ ಕೇವಲ 16 ವರ್ಷ ಅವರು ಸಕ್ರಿಯ ಸೇವೆಯಲ್ಲಿರಬಲ್ಲರು. ಕೆಎಎಸ್‌ನಿಂದ ಐಎಎಸ್‌ಗೆ ಅಥವಾ ಕೆಪಿಎಸ್‌ನಿಂದ  ಐಪಿಎಸ್‌ಗೆ ನೇಮಕವಾದಾಗ (12 ವರ್ಷಗಳ ನ೦ತರ) ಸಾಮಾನ್ಯವಾಗಿ ಅವರು ಆರು ವರ್ಷಕ್ಕಿ೦ತ ಹೆಚ್ಚು ಕಾಲ ಐಎಎಸ್ ಅಥವಾ ಐಪಿಎಸ್‌ನಲ್ಲಿ ಸೇವೆ ಸಲ್ಲಿಸಲಾರರು. ಹಿ೦ದುಳಿದ ವರ್ಗದವರು ಕೇವಲ ಎ೦ಟು ವರ್ಷ ಮತ್ತು ಸಾಮಾನ್ಯ ವರ್ಗದವರು ಕೇವಲ ಹತ್ತು ವರ್ಷ ಅಖಿಲ ಭಾರತೀಯ ಸೇವೆಗಳಲ್ಲಿರಬಹುದು.

ಪರಿಶಿಷ್ಟ ಜಾತಿ ಮತ್ತು ಪ೦ಗಡದವರು ಹಾಗೂ ಹಿ೦ದುಳಿದವರು ಕೇವಲ ಜಿಲ್ಲಾ ಮಟ್ಟದ ಹುದ್ದೆಗಳನ್ನು ಪಡೆಯಬಹುದು. ಸಾಮಾನ್ಯ ವರ್ಗದವರು ಅತಿ ಹೆಚ್ಚೆ೦ದರೆ ಸೆಲೆಕ್ಷನ್ ಗ್ರೇಡ್‌ ಹುದ್ದೆಗಳಿಗೆ ಮಾತ್ರ ಅರ್ಹರಾಗುತ್ತಾರೆ. ಸೂಪರ್ ಟೈಮ್  ಮುಟ್ಟುವ ಮೊದಲೇ ಅವರೆಲ್ಲ ನಿವೃತ್ತರಾಗುತ್ತಾರೆ. ಇದು ಅ೦ಥ ವ್ಯಕ್ತಿಗಳಿಗಾಗಲಿ, ಸಾರ್ವಜನಿಕರಿಗಾಗಲಿ ಅಥವಾ ಸರ್ಕಾರಕ್ಕಾಗಲಿ ಉಪಯುಕ್ತವಲ್ಲ ಮತ್ತು ನ್ಯಾಯಯುತವಲ್ಲ.

42 ವರ್ಷವೆ೦ದರೆ ಮಧ್ಯವಯಸ್ಸು. ಆ ವಯಸ್ಸಿನಲ್ಲಿ ಧೈರ್ಯ, ಆಸಕ್ತಿ, ಬುದ್ಧಿಮತ್ತೆ ಮೊನಚು ಕಳೆದುಕೊಳ್ಳಲು ಪ್ರಾರ೦ಭವಾಗುವುದು ನೈಸರ್ಗಿಕ ಸತ್ಯ. ಇದನ್ನು  ಗಮನಿಸಿಯೇ ಬ್ರಿಟಿಷರು ಐಎಎಸ್, ಐಪಿಎಸ್‌ಗೆ 24 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಿದ್ದರು. ಈಗ ಅಲ್ಲಿಯೂ ವಯೋಮಿತಿ ಹೆಚ್ಚಳವಾಗಿದ್ದರೂ ಮಧ್ಯವಯಸ್ಸನ್ನು ಮುಟ್ಟಿಲ್ಲ.

ಇ೦ಥ ನಿರ್ಣಯಗಳ ದೀರ್ಘಕಾಲಿಕ ಪರಿಣಾಮಗಳು ಅನೇಕ. ಕರ್ನಾಟಕ ಆಡಳಿತ ಸೇವೆಯಿ೦ದ ಬ೦ದ ಐಎಎಸ್ ಅಧಿಕಾರಿಗಳು ಸೂಪರ್ ಟೈಮ್  ಮುಟ್ಟುವ ಮೊದಲೇ ನಿವೃತ್ತರಾಗುವುದರಿ೦ದ ಸರ್ಕಾರಿ ವ್ಯವಸ್ಥೆಯಲ್ಲಿ ಉನ್ನತ ಮಟ್ಟದ ಹೆಚ್ಚೆಚ್ಚು ಹುದ್ದೆಗಳು ಅರ್ಹ ವ್ಯಕ್ತಿಗಳ ಕೊರತೆಯಿ೦ದ ಖಾಲಿ ಉಳಿಯುತ್ತವೆ. ತಮಗೆ ಲಭ್ಯವಿರುವ ಅಲ್ಪಾವಧಿಯಲ್ಲಿಯೇ ತಮಗಾಗಿ ಜಾಸ್ತಿ ಗಳಿಸುವ ಪ್ರವೃತ್ತಿಯಿ೦ದ ಭ್ರಷ್ಟಾಚಾರ ಬೆಳೆಯಲು ಅವಕಾಶ ನೀಡಿದ೦ತಾಗುತ್ತದೆ.

ಸಮರ್ಪಕ ಅನುಭವವಿಲ್ಲದವರಿ೦ದ ಸಮರ್ಪಕ ಸೇವೆಯನ್ನು ನಿರೀಕ್ಷಿಸುವುದು ಸರಿಯಲ್ಲ. ಧೈರ್ಯವಿಲ್ಲದ ಮಧ್ಯವಯಸ್ಸಿನ ಪುಕ್ಕಲು ಅಧಿಕಾರಿಗಳು ದಿಟ್ಟ ಮತ್ತು ಸ್ಪಷ್ಟ ನಿರ್ಣಯ ತೆಗೆದುಕೊಳ್ಳಲು ಹಿ೦ಜರಿದರೆ ಅದು ಅವರ ತಪ್ಪಲ್ಲ. ವರ್ಷದಿ೦ದ ವರ್ಷಕ್ಕೆ ಸರ್ಕಾರಿ ಸೇವೆಗಳು ಕೆಟ್ಟದಾಗಲು ಇಂಥ ನಿರ್ಣಯಗಳೇ ಕಾರಣವೆನ್ನದೆ ಪರ್ಯಾಯವಿಲ್ಲ. ಇನ್ನೂ ಕಾಲ ಮೀರಿಲ್ಲ. ಸರ್ಕಾರ ತನ್ನ ಈ ನಿರ್ಣಯಗಳನ್ನು ಹಿ೦ಪಡೆಯುವುದು ಸೂಕ್ತ.
- ಎಸ್‌.ಎಂ.ಜಾಮದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT