ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸನ ಸೃಷ್ಟಿಸಿದ ನ್ಯಾಯಮಂಡಳಿ ಎಲ್ಲಕ್ಕೂ ಮಿಗಿಲೇ?

ವಿಶ್ಲೇಷಣೆ
Last Updated 23 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಕಾವೇರಿ ನದಿ ನೀರಿನ ಹಕ್ಕಿಗಾಗಿ ಕರ್ನಾಟಕದ ಹೋರಾಟ: ಮುಂದಿನ ದಾರಿ ಏನು?

**
ಮೈಸೂರು ರಾಜ್ಯದಿಂದ ತಮಿಳುನಾಡಿಗೆ ಶತಮಾನಗಳ ಕಾಲ ನೀರು ಹರಿದುಹೋಗಿದೆ. ನೀರನ್ನು ತಡೆಹಿಡಿಯಲು ಮೈಸೂರು ರಾಜ್ಯ ಮುಂದಾಗಿದ್ದು 19ನೇ ಶತಮಾನದಲ್ಲಿ. ಮೈಸೂರು ರಾಜ್ಯ ಅಣೆಕಟ್ಟು ನಿರ್ಮಿಸಿ ತಡೆಹಿಡಿದಿರುವ ಕಾವೇರಿಯ ಹರಿವನ್ನು ಮತ್ತೆ ಮುಕ್ತಗೊಳಿಸಲು ತಮಿಳುನಾಡು ಪ್ರಯತ್ನ ನಡೆಸಿದೆ.

ತಮಿಳುನಾಡಿನ ಒಂದು ಕೈಯಲ್ಲಿ ನ್ಯಾಯಮಂಡಳಿಯ ಆದೇಶ, ಇನ್ನೊಂದು ಕೈಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಆಯುಧಗಳಂತೆ ಇವೆ. ತೊಂದರೆಗೆ ಸಿಲುಕಿರುವ ನಾವು ಸಾಂವಿಧಾನಿಕ ಪರಿಹಾರಕ್ಕೆ ಹುಡುಕಾಟ ನಡೆಸಿದ್ದೇವೆ. ನಮ್ಮದು ಕತ್ತಲೆಯಲ್ಲಿನ ಹುಡುಕಾಟ ಎಂದು ಹಲವರು ಹೇಳಬಹುದು. ಆದರೆ ಅದು ಸತ್ಯವಲ್ಲ.

ನ್ಯಾಯ ಪಡೆಯಲು ನಾವು ಹಲವು ಅಡೆತಡೆಗಳನ್ನು ದಾಟಿ ಬರಬೇಕಿದೆ. ಸಂವಿಧಾನದ 262ನೇ ವಿಧಿಯ ಕಾಠಿಣ್ಯವನ್ನು ನಾವು ಮೀರಿ ನಿಲ್ಲಬೇಕು. ಅಲ್ಲದೆ, ಅಂತರ್‌ರಾಜ್ಯ ನದಿ ನೀರು ವಿವಾದ ಕಾಯ್ದೆ - 1956ರ ಸೆಕ್ಷನ್ 11 ಮತ್ತು 6(2)ಗಳು ಒಡ್ಡುವ ಸವಾಲುಗಳನ್ನು ನಿವಾರಿಸಿಕೊಳ್ಳಬೇಕು. ತಾನು ಸೃಷ್ಟಿಸಿದ್ದನ್ನು ನಿಯಂತ್ರಿಸುವುದು ಹೇಗೆ ಎಂಬುದು ಕಾನೂನಿಗೆ ಗೊತ್ತಿದೆ. ನಮಗೆ ಆಗಿರುವ ಅನ್ಯಾಯಕ್ಕೆ ಪರಿಹಾರ ಕಾನೂನಿನಲ್ಲೇ ಇದೆ.

ವಾಸ್ತವ ಸ್ಥಿತಿಯನ್ನು ಸಂಪೂರ್ಣವಾಗಿ ಕಡೆಗಣಿಸಿ, ತಮಿಳುನಾಡಿಗೆ ಹೆಚ್ಚಿನ ಪ್ರಮಾಣದ ನೀರು ಬಿಡಿ ಎಂದು ಕಾವೇರಿ ನ್ಯಾಯಮಂಡಳಿ 2007ರಲ್ಲಿ ನೀಡಿದ ಆದೇಶ ಸಮಸ್ಯೆಗೆ ಕಾರಣ. ತಮಿಳುನಾಡು ರಾಜ್ಯವು 1915ರಿಂದ ಕಾನೂನು ಉಲ್ಲಂಘಿಸುತ್ತಲೇ ಬಂದಿದ್ದರೂ, ಅದನ್ನು ನ್ಯಾಯಮಂಡಳಿ ಆದೇಶದಲ್ಲೇ ಉಲ್ಲೇಖಿಸಲಾಗಿದ್ದರೂ ನಮಗೆ ಇಂತಹ ಪರಿಸ್ಥಿತಿ ಎದುರಾಗಿದೆ.

ಕಾವೇರಿ ನದಿ ರೂಪುಗೊಳ್ಳುವಲ್ಲಿ ಕರ್ನಾಟಕದ ಕೊಡುಗೆ ಬಹುದೊಡ್ಡದಾಗಿದ್ದರೂ, ನೀರಿನಲ್ಲಿ ರಾಜ್ಯಕ್ಕೆ ಸಿಕ್ಕಿರುವ ಪಾಲು ಕಡಿಮೆ. ಈ ಸ್ಥಿತಿಯಿಂದ ಪಾರಾಗುವುದು ಹೇಗೆ ಎಂಬುದು ನಾಡಿನ ಬಗ್ಗೆ ಕಳಕಳಿ ಇರುವ ಎಲ್ಲರ ಮನಸ್ಸಿನಲ್ಲೂ ಇರುವ ವಿಚಾರ.

ನ್ಯಾಯಮಂಡಳಿ ನೀಡಿದ ಆದೇಶದಿಂದ ಲಾಭ ಪಡೆದಿದ್ದ ತಮಿಳುನಾಡು ರಾಜ್ಯ ಅಷ್ಟಕ್ಕೇ ಸುಮ್ಮನಾಗಲಿಲ್ಲ. ನದಿ ಪಾತ್ರದ ಮೇಲ್ಭಾಗದಲ್ಲಿರುವ ರಾಜ್ಯದ ಅನಿವಾರ್ಯ ಏನೇ ಇರಲಿ, ಕಾವೇರಿಯ ಅಷ್ಟೂ ನೀರು ತನಗೇ ಬೇಕು ಎನ್ನುವಂತಿದೆ ಆ ರಾಜ್ಯದ ಧೋರಣೆ.

ನಮ್ಮ ಸಂವಿಧಾನದ ಕೆಲವು ಅಂಶಗಳನ್ನು ಸರ್ಕಾರ ಹೇಗೆ ಹಾಳು ಮಾಡಿತು ಎಂಬುದನ್ನು ಒಮ್ಮೆ ನೋಡೋಣ. ನ್ಯಾಯಾಂಗ, ಕಾರ್ಯಾಂಗ ಹಾಗೂ ಶಾಸಕಾಂಗ ಕೈಗೊಳ್ಳುವ ಯಾವುದೇ ತೀರ್ಮಾನವನ್ನು ಪರಿಶೀಲಿಸುವ ಅಧಿಕಾರವನ್ನು ಸಂವಿಧಾನ ದೇಶದ ಅತ್ಯುನ್ನತ ನ್ಯಾಯಾಲಯಕ್ಕೆ (ಸುಪ್ರೀಂ ಕೋರ್ಟ್‌) ನೀಡಿದೆ.

1957ರ ಅಂತರ್‌ರಾಜ್ಯ ನದಿ ನೀರು ವಿವಾದ ಕಾಯ್ದೆಗೆ 2002ರಲ್ಲಿ ಕೇಂದ್ರ ಸರ್ಕಾರ ಕೆಲವು ಬದಲಾವಣೆಗಳನ್ನು ತಂದಿತು. ಇವು ತಪ್ಪು ತಿದ್ದುಪಡಿಗಳು. ಇವು ನ್ಯಾಯ ಮಂಡಳಿಯೊಂದನ್ನು ನ್ಯಾಯಾಂಗದ ಅತ್ಯುನ್ನತ ಸಂಸ್ಥೆ ಯೊಂದಕ್ಕೆ ಪರ್ಯಾಯ ಎಂಬಂತೆ ಚಿತ್ರಿಸಿತು.

ನ್ಯಾಯಮಂಡಳಿ ನೀಡುವ ತೀರ್ಮಾನ ಸುಪ್ರೀಂ ಕೋರ್ಟ್ ಆದೇಶಕ್ಕೆ ಸಮ ಎನ್ನುವ ಮೂಲಕ, ನದಿ ನೀರಿನ ಹಂಚಿಕೆ ವಿವಾದದಲ್ಲಿ ನ್ಯಾಯಮಂಡಳಿ ನೀಡುವ ತೀರ್ಮಾನ ಸುಪ್ರೀಂ ಕೋರ್ಟಿನ ವ್ಯಾಪ್ತಿಗೂ ನಿಲುಕದಂತೆ ಮಾಡಲಾಯಿತು.

ಸಂವಿಧಾನದ ಪ್ರಕಾರ ರಾಷ್ಟ್ರಪತಿಯವರು ಕಾರ್ಯಾಂಗದ ಮುಖ್ಯಸ್ಥರು. ರಾಷ್ಟ್ರಪತಿಗೆ ಸರಿಸಮಾನ ವಾದ ಇನ್ನೊಂದು ಹುದ್ದೆ ಇಲ್ಲ. ಯಾವುದೋ ಒಂದು ಹುದ್ದೆ ರಾಷ್ಟ್ರಪತಿ ಹುದ್ದೆಗೆ ಸಮ ಎನ್ನುವ ಧೈರ್ಯ ಯಾವ ಸರ್ಕಾರಕ್ಕೂ ಇಲ್ಲ. ಅಂಥದ್ದೊಂದು ಪರ್ಯಾಯ ಹುದ್ದೆಯ ಸೃಷ್ಟಿಗೆ ಅವಕಾಶ ಕಲ್ಪಿಸಿದರೆ, ಸರ್ಕಾರಗಳು ಇನ್ನೊಂದು ಹುದ್ದೆ ಸೃಷ್ಟಿಗೆ ಹಿಂಜರಿಯಲಾರವು.

ಶಾಸನಗಳನ್ನು ರೂಪಿಸುವ ವಿಚಾರದಲ್ಲಿ ಸಂಸತ್ತಿಗೆ ಪರ್ಯಾಯವಾದ ಸಂಸ್ಥೆಯೊಂದು ಇರಲು ಸಾಧ್ಯವಿಲ್ಲ. ನ್ಯಾಯದಾನದ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ಗೆ ಪರ್ಯಾಯವಾದ ಇನ್ನೊಂದು ಸಂಸ್ಥೆ ಸೃಷ್ಟಿಗೆ ಅವಕಾಶ ಇಲ್ಲ. ಕಾನೂನು ರೂಪಿಸಿ, ಸುಪ್ರೀಂ ಕೋರ್ಟ್‌ನ ಅಧಿಕಾರವನ್ನು ಕಡಿಮೆ ಮಾಡಲಾಗದು.

ನ್ಯಾಯಿಕ, ಅರೆ ನ್ಯಾಯಿಕ ಸಂಸ್ಥೆಗಳು ನೀಡುವ ಆದೇಶವನ್ನು ಪರಿಶೀಲನೆಗೆ ಒಳಪಡಿಸುವ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಇದೆ. ಒಂದು ನ್ಯಾಯಮಂಡಳಿಯು ಎಷ್ಟೇ ಉನ್ನತ ಸ್ಥಾನದಲ್ಲಿ ಇದ್ದರೂ, ಅದು ನೀಡುವ ಆದೇಶವನ್ನು ಸುಪ್ರೀಂ ಕೋರ್ಟ್‌ ತೀರ್ಪಿಗೆ ಸರಿಸಮವಾಗಿ ಕಾಣಲಾಗದು. ಸುಪ್ರೀಂ ಕೋರ್ಟ್‌ ಎಂಬುದು ಸಂವಿಧಾನದ ಸೃಷ್ಟಿ. ನ್ಯಾಯಮಂಡಳಿಯು ಶಾಸನವೊಂದರ ಸೃಷ್ಟಿ. ನ್ಯಾಯಮಂಡಳಿಯು ಯಾವತ್ತೂ ಅಧೀನದಲ್ಲಿ ಇರುವಂಥದ್ದು.

ಸಂವಿಧಾನದ 262ನೇ ವಿಧಿಯನ್ನು ಪರಿಶೀಲಿಸೋಣ. ಬೇರೆ ಬೇರೆ ರಾಜ್ಯಗಳ ನಡುವಿನ ನದಿ ನೀರಿನ ಹಂಚಿಕೆ ವಿವಾದಗಳಲ್ಲಿ ಕೋರ್ಟ್‌ಗಳ ಮಧ್ಯಪ್ರವೇಶವನ್ನು ಈ ವಿಧಿ ನಿರ್ಬಂಧಿಸುತ್ತದೆ. ಈ ವಿಧಿಯಲ್ಲಿರುವ ಅಂಶಗಳನ್ನು ಆಧರಿಸಿಯೇ, ಅಂತರ್ ರಾಜ್ಯ ನದಿ ನೀರು ವಿವಾದ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ನದಿ ನೀರಿನ ಹಂಚಿಕೆಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಮೊದಲು ವಿಚಾರಣೆಗೆ ಕೈಗೆತ್ತಿಕೊಳ್ಳುವ ಅಧಿಕಾರ ಇರುವುದು ನ್ಯಾಯಮಂಡಳಿಗೆ.

ನ್ಯಾಯಮಂಡಳಿಯೊಂದು ನೀಡುವ ಆದೇಶವನ್ನು ಸಂವಿಧಾನದ 226 ಹಾಗೂ 227ನೇ ವಿಧಿಗಳ ಅನ್ವಯ, ನ್ಯಾಯಾಲಯದಲ್ಲಿ (ಹೈಕೋರ್ಟ್‌) ಪ್ರಶ್ನಿಸಲು ಅವಕಾಶ ಇದೆ. ಆದರೆ ನದಿ ನೀರು ಹಂಚಿಕೆಗೆ ಸಂಬಂಧಿಸಿದ ನ್ಯಾಯಮಂಡಳಿ ನೀಡುವ ಆದೇಶವನ್ನು ಹೈಕೋರ್ಟ್‌ಗಳಲ್ಲಿ ಈ ವಿಧಿಗಳನ್ನು ಬಳಸಿ ಪ್ರಶ್ನಿಸಲು ಆಗದು. ಏಕೆಂದರೆ, ನದಿ ನೀರಿನ ಹಂಚಿಕೆಯು ಆ ಹೈಕೋರ್ಟ್‌ನ ವ್ಯಾಪ್ತಿಗೆ ಬಾರದೆ ಇರುವ ಸಾಧ್ಯತೆ ಇರುತ್ತದೆ.

ಆದರೆ ಸಂವಿಧಾನದ 136ನೇ ವಿಧಿಯ ಅಡಿ ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಅಥವಾ 131ನೇ ವಿಧಿಯ ಅಡಿ ಅರ್ಜಿ ಸಲ್ಲಿಸಿ, ನ್ಯಾಯಮಂಡಳಿ ಆದೇಶವನ್ನು ಪ್ರಶ್ನಿಸಲು ಅವಕಾಶ ಇದೆ.

ನದಿ ನೀರು ಹಂಚಿಕೆ ವ್ಯಾಜ್ಯವನ್ನು ಕೋರ್ಟ್‌ಗಳು ವಿಚಾರಣೆಗೆ ಅಂಗೀಕರಿಸುವಂತಿಲ್ಲ ಎಂದು 262ನೇ ವಿಧಿ ಹೇಳುವುದು, ನ್ಯಾಯಾಲಯಗಳ ‘ವ್ಯಾಪ್ತಿ’ಯನ್ನು ಪರಿಗಣಿಸಿಯೇ ವಿನಾ, ಅವುಗಳ ವ್ಯಾಜ್ಯ ನಿರ್ವಚನಾ ಅಧಿಕಾರವನ್ನು ಗಮನಿಸಿ ಅಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.

ದುರದೃಷ್ಟದ ಸಂಗತಿ ಎಂದರೆ, ಕೇಂದ್ರ ಸರ್ಕಾರವು 2002ರಲ್ಲಿ, ಅಂತರ್‌ರಾಜ್ಯ ನದಿ ನೀರು ವಿವಾದ ಕಾಯ್ದೆಗೆ ತಿದ್ದುಪಡಿಯೊಂದನ್ನು ತಂದು ಸಂವಿಧಾನದ ಸ್ವರೂಪಕ್ಕೆ ಧಕ್ಕೆ ತಂದಿತು. ಕಾಯ್ದೆಗೆ ಸೆಕ್ಷನ್ 6(2)ಅನ್ನು ಸೇರಿಸುವ ಮೂಲಕ ತಂದಿರುವ ಈ ತಿದ್ದುಪಡಿಯಿಂದಾಗಿ, ನದಿ ನೀರಿಗೆ ಸಂಬಂಧಿಸಿದ ನ್ಯಾಯಮಂಡಳಿ ನೀಡುವ ಆದೇಶವು ಸುಪ್ರೀಂ ಕೋರ್ಟ್‌ ಆದೇಶಕ್ಕೆ ಸಮ ಎಂದು ಹೇಳಲಾಯಿತು.

ನ್ಯಾಯಾಂಗದಿಂದ ನಡೆಯುವ ಪುನರ್ ವಿಮರ್ಶೆಯು ನಮ್ಮ ಸಂವಿಧಾನದಲ್ಲಿರುವ ವಿಶಿಷ್ಟವಾದ ಅಧಿಕಾರ. ಆದರೆ ಸೆಕ್ಷನ್ 6(2) ಮೂಲಕ ಈ ಅಧಿಕಾರವನ್ನು ಕಿತ್ತುಕೊಳ್ಳಲಾಯಿತು.

ಕಾಯ್ದೆಗೆ ಇಂಥದ್ದೊಂದು ತಿದ್ದುಪಡಿ ತರುವ ಸಂದರ್ಭದಲ್ಲಿ, ತಮಿಳುನಾಡಿನ ಡಿಎಂಕೆ ಪಕ್ಷವು ಕೇಂದ್ರ ಸರ್ಕಾರದಲ್ಲಿ ಪಾಲುದಾರ ಆಗಿತ್ತು ಎಂಬುದನ್ನು ಗಮನಿಸಬೇಕು. ಈ ತಿದ್ದುಪಡಿ ಕನ್ನಡಿಗರ ಪಾಲಿಗೆ ದೊಡ್ಡ ಆಘಾತವನ್ನೇ ತಂದಿತು.

ನ್ಯಾಯಮಂಡಳಿ ಆದೇಶ ತಮ್ಮ ಪರವಾಗಿಯೇ ಬರುತ್ತದೆ ಎಂದು ತಮಿಳುನಾಡಿನ ರಾಜಕೀಯ ನಾಯಕರು ನಿರೀಕ್ಷಿಸಿದ್ದಿರಬೇಕು. ಆ ನಿರೀಕ್ಷೆಯ ಆಧಾರದಲ್ಲೇ, ಕೇಂದ್ರದ ಮೇಲೆ ಒತ್ತಡ ತಂದು ಇಂಥದ್ದೊಂದು ತಿದ್ದುಪಡಿ ತರಿಸಿರಬೇಕು.

ಅಂತರ್‌ರಾಜ್ಯ ನದಿ ನೀರು ವಿವಾದ ಕಾಯ್ದೆಯಲ್ಲಿ ನದಿ ಪಾತ್ರದ ರಾಜ್ಯಗಳ ಹಕ್ಕುಗಳು, ಕರ್ತವ್ಯಗಳ ಬಗ್ಗೆ ವ್ಯಾಖ್ಯಾನ ಇಲ್ಲ. ನೀರಿನ ಹಂಚಿಕೆ ಹೇಗಿರಬೇಕು ಎಂಬ ಬಗ್ಗೆ ಸಂಸತ್ತು ಕಾನೂನಿನ ಚೌಕಟ್ಟನ್ನು ರೂಪಿಸಿಲ್ಲ.

ಸಂವಿಧಾನಕ್ಕೆ ಅನುಗುಣವಾಗಿ, ನದಿ ಪಾತ್ರದ ರಾಜ್ಯಗಳ ಹಕ್ಕುಗಳು ಹಾಗೂ ಕರ್ತವ್ಯಗಳು ಏನಿರಬೇಕು ಎಂಬ ಬಗ್ಗೆ ಚೌಕಟ್ಟು ಸಿದ್ಧಪಡಿಸುವ ಅಧಿಕಾರ ಇರುವುದು ಸಂಸತ್ತಿಗೆ ಮಾತ್ರ. ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಬೇರೆ ಬೇರೆ ರಾಜ್ಯಗಳ ನಡುವೆ ಆಗಾಗ ವಿವಾದ ಸೃಷ್ಟಿಯಾಗುತ್ತಲೇ ಇದ್ದರೂ, ಸಂಸತ್ತಿನಲ್ಲಿ ಕಾನೂನಿನ ಚೌಕಟ್ಟು ರೂಪಿಸುವ ನಿಟ್ಟಿನಲ್ಲಿ ಪ್ರಯತ್ನ ಆಗಿಲ್ಲ.

ಆದರೆ, ನ್ಯಾಯಾಂಗದ ಪುನರ್ ಪರಿಶೀಲನೆಯ ಅಧಿಕಾರ ವನ್ನು ಮೊಟಕುಗೊಳಿಸುವ ಪರೋಕ್ಷ ಪ್ರಯತ್ನ ನಡೆದಿದೆ. ಪುನರ್ ಪರಿಶೀಲನೆಗೆ ಇರುವ ಅಧಿಕಾರದ ಬಗ್ಗೆ ಸುಪ್ರೀಂ ಕೋರ್ಟ್‌ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಚರ್ಚಿಸಿದೆ.

ಇಂದಿರಾ ಗಾಂಧಿ ಮತ್ತು ರಾಜ್ ನಾರಾಯಣ್ ನಡುವಿನ ಪ್ರಕರಣದಲ್ಲಿ ಕೂಡ, ನ್ಯಾಯಾಂಗದ ಪುನರ್ ಪರಿಶೀಲನೆ ಅಧಿಕಾರವನ್ನು ಕುಂದಿಸುವುದರ ಬಗ್ಗೆ ಚರ್ಚೆ ಆಗಿದೆ. ನ್ಯಾಯಾಂಗದ ಪುನರ್ ಪರಿಶೀಲನಾ ಅಧಿಕಾರವು ಸಂವಿಧಾನದಲ್ಲಿಯೇ ಇದೆ. ಇದನ್ನು ಸಂಸತ್ತು ಕಿತ್ತುಕೊಳ್ಳಲು ಆಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ನ್ಯಾಯಮಂಡಳಿಗಳ ರಚನೆಯನ್ನು ಆರ್.ಕೆ. ಜೈನ್  ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌, ‘ನ್ಯಾಯ ಮಂಡಳಿಗಳು ಶಾಸನಗಳ ಸೃಷ್ಟಿ. ಅವು ಹೈಕೋರ್ಟ್‌ಗಳಿಗೆ ಸಮಾನ ಸ್ಥಾನ ಅಪೇಕ್ಷಿಸುವಂತಿಲ್ಲ’ ಎಂದು ಹೇಳಿದೆ.

1997ರಲ್ಲಿ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ನೀಡಿದ ತೀರ್ಪೊಂದು ಹೀಗೆ ಹೇಳುತ್ತದೆ: ‘ಕೇಶವಾನಂದ ಭಾರತಿ ಹಾಗೂ ಬೇರೆ ಕೆಲವು ಪ್ರಕರಣಗಳಲ್ಲಿ ಹೇಳಿರುವಂತೆ ಪುನರ್ ಪರಿಶೀಲನೆಯ ಅಧಿಕಾರವು ಸಂವಿಧಾನದ ಮೂಲ ಸ್ವರೂಪಗಳಲ್ಲಿ ಒಂದು. ದೇಶದ ಅತ್ಯುನ್ನತ ನ್ಯಾಯಾಲಯಕ್ಕೆ, ಪುನರ್ ಪರಿಶೀಲನೆಯ ಅಧಿಕಾರ ಇಲ್ಲ ಎನ್ನುವುದು ಸಂವಿಧಾನವನ್ನು ಅಣಕಿಸುವುದಕ್ಕೆ ಸಮ.’

ನ್ಯಾಯಮಂಡಳಿಯೊಂದು ನೀಡುವ ಆದೇಶವೇ ಅಂತಿಮ, ಅದು ನೀಡಿದ ಆದೇಶವನ್ನು ದೇಶದ ಅತ್ಯುನ್ನತ ನ್ಯಾಯಾಲಯ ಪುನರ್ ಪರಿಶೀಲನೆಗೆ ಒಳಪಡಿಸುವಂತಿಲ್ಲ ಎಂದು ಹೇಳುವ ಮುನ್ನ ತೀರಾ ಎಚ್ಚರಿಕೆ ವಹಿಸಬೇಕು.

ನ್ಯಾಯಮಂಡಳಿಯಲ್ಲಿ ಅರ್ಜಿದಾರ, ಪ್ರತಿವಾದಿಗಳ ಕಡೆಯಿಂದ ಅಥವಾ ನ್ಯಾಯಮಂಡಳಿಯ ನೇತೃತ್ವ ವಹಿಸಿದ ವ್ಯಕ್ತಿಯಿಂದಲೇ ತಪ್ಪುಗಳು ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ಉನ್ನತ ನ್ಯಾಯಾಂಗಕ್ಕೆ ಪುನರ್ ಪರಿಶೀಲನೆಯ ಅಧಿಕಾರ ಇಲ್ಲ ಎಂದು ಕಾಯ್ದೆಯಲ್ಲಿ ಹೇಳಿದ ಮಾತ್ರಕ್ಕೆ, ಸಂವಿಧಾನವೇ ಹೇಳಿರುವ ಈ ಅಧಿಕಾರ ಮೊಟಕಾಗುವುದಿಲ್ಲ.

ಆರ್.ಕೆ. ಜೈನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿರುವಂತೆ, ಸಂವಿಧಾನ ಸೃಷ್ಟಿ ಅಲ್ಲದ ನ್ಯಾಯಮಂಡಳಿಗಳು ಹೈಕೋರ್ಟ್‌ಗಳಿಗೆ ಅಥವಾ ಸುಪ್ರೀಂ ಕೋರ್ಟ್‌ಗೆ ಸಮಾನವಾಗಿರುವ ಸ್ಥಾನವನ್ನು ಪಡೆಯಲು ಆಗದು. ಹೈಕೋರ್ಟ್‌ಗಳಿಗೆ ಎಂದಿಗೂ ಸರಿಸಾಟಿ ಅಲ್ಲದ ನ್ಯಾಯಮಂಡಳಿಗಳಿಗೆ, ನ್ಯಾಯಾಂಗಕ್ಕೆ ಇರುವಂಥ ಸ್ವಾತಂತ್ರ್ಯ ಸಿಗದಂತೆ ನೋಡಿಕೊಳ್ಳಬೇಕು. ನ್ಯಾಯಮಂಡಳಿ ಎಂಬುದು ಅರೆ ನ್ಯಾಯಿಕ ವ್ಯವಸ್ಥೆ ಮಾತ್ರ.

ಅದು ನ್ಯಾಯದಾನ ಪ್ರಕ್ರಿಯೆಯ ಅಂತಿಮ ಹಂತವಾಗಿ ಪರಿವರ್ತನೆ ಆಗಬಾರದು. ಕಾನೂನುಗಳಿಂದಾಗಿ ಬಿಕ್ಕಟ್ಟು ಸೃಷ್ಟಿ ಆಗಬಾರದು. ಎರಡು ರಾಜ್ಯಗಳ ನಡುವೆ ನೀರಿನ ಹಂಚಿಕೆ ಹೇಗಿರಬೇಕು ಎಂಬುದನ್ನು ಸ್ಪಷ್ಟಪಡಿಸುವ ಕಾನೂನು ಇಲ್ಲ. ನೀರಿನ ಹಂಚಿಕೆಯಂತಹ ಗಂಭೀರ ವಿಚಾರಗಳಲ್ಲಿ ನ್ಯಾಯ ನೀಡಲು ಸೂಕ್ತ ವ್ಯವಸ್ಥೆ ಬೇಕು. ಅದು ನದಿ ಪಾತ್ರದ ರಾಜ್ಯಗಳ ಹಕ್ಕುಗಳು ಹಾಗೂ ಕರ್ತವ್ಯಗಳು ಏನು ಎಂಬುದನ್ನು ಹೇಳಬೇಕು.

ಸಂವಿಧಾನದಲ್ಲಿ ಹೇಳಿರುವ ಅಂಶಗಳನ್ನು ಮುಕ್ತ ಮನಸ್ಸಿನಿಂದ ವ್ಯಾಖ್ಯಾನಿಸಬೇಕು. ನಾಡಿನ ಅತ್ಯುನ್ನತ ನ್ಯಾಯಾಲಯ ಹೊಂದಿರುವ ಪುನರ್ ಪರಿಶೀಲನೆಯ ಅಧಿಕಾರವನ್ನು ಅದರಿಂದ ಕಿತ್ತುಕೊಂಡರೆ, ನಿರಂಕುಶ ಪ್ರಭುತ್ವಕ್ಕೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ.

ನ್ಯಾಯಾಂಗಕ್ಕೆ ಇರುವ ಪುನರ್ ಪರಿಶೀಲನೆಯ ಅಧಿಕಾರ ಎಂದರೆ ಏನು ಎಂಬುದನ್ನು ಸಂವಿಧಾನದ ಯಾವುದೇ ವಿಧಿಯಲ್ಲಿ ವಿವರಿಸದೆ ಇದ್ದರೂ, ಅದು ಏನೆಂಬುದು 226, 227, 32, 132 ಹಾಗೂ 142ನೇ ವಿಧಿಗಳಲ್ಲಿ ಕಣ್ಣಿಗೆ ಕಾಣುವಂತಿದೆ. ಪುನರ್ ಪರಿಶೀಲನೆಯ ಅಧಿಕಾರವನ್ನು ಕಿತ್ತುಕೊಳ್ಳುವ ಕಾನೂನನ್ನು ಸರಿಪಡಿಸಲು ಸುಪ್ರೀಂ ಕೋರ್ಟ್‌ ಮುಂದಾಗಬೇಕು. ಇಲ್ಲವಾದರೆ ಸತ್ಯವನ್ನೇ ಅಣಕಿಸಿದಂತೆ ಆಗುತ್ತದೆ.

ಅಂದಹಾಗೆ, ನದಿ ನೀರಿನ ವ್ಯಾಜ್ಯದಲ್ಲಿ ನ್ಯಾಯಾಂಗಕ್ಕೆ ಪುನರ್ ಪರಿಶೀಲನೆಯ ಅಧಿಕಾರ ಇಲ್ಲ ಎಂದಾದರೆ, ಅದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಧ್ಯಂತರ ಆದೇಶ ನೀಡುವ ಅಧಿಕಾರವೂ ಇರುವುದಿಲ್ಲ.

ಮಧ್ಯಂತರ ಆದೇಶ ನೀಡುವ ಅಧಿಕಾರ ಇದೆ ಎಂದಾದರೆ, ಕಾವೇರಿ ನ್ಯಾಯಮಂಡಳಿ ನೀಡಿದ ಆದೇಶದ ವಿಮರ್ಶೆಯನ್ನೂ ಸುಪ್ರೀಂ ಕೋರ್ಟ್‌ ನಡೆಸಬೇಕಾಗುತ್ತದೆ.

2002ರಲ್ಲಿ ಅಂತರ್‌ ರಾಜ್ಯ ನದಿ ನೀರು ವಿವಾದ ಕಾಯ್ದೆಗೆ ತಂದ ತಿದ್ದುಪಡಿಯ ಸಾಂವಿಧಾನಿಕ ಮಾನ್ಯತೆಯನ್ನೂ ಕೋರ್ಟ್‌ನಲ್ಲಿ ಪ್ರಶ್ನಿಸಬಹುದು. ಈ ತಿದ್ದುಪಡಿಯು 136ನೇ ವಿಧಿಗೆ ವಿರುದ್ಧ ಎಂಬ ಆಧಾರದಲ್ಲಿ, ತಿದ್ದುಪಡಿ ಅಸಿಂಧು ಎಂದು ಸುಪ್ರೀಂ ಕೋರ್ಟ್‌ ಹೇಳುವ ಸಾಧ್ಯತೆಯೂ ಇದೆ.
–ಎಂ. ನಾರಾಯಣ ಭಟ್‌ (ಲೇಖಕ ಹೈಕೋರ್ಟ್‌ ವಕೀಲ­)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT