ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಗಳ ಅವ್ಯವಸ್ಥೆ ನಿರ್ಲಕ್ಷ್ಯ ಸಲ್ಲದು

Last Updated 25 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ನವಜಾತ ಶಿಶುಗಳನ್ನು ಮತ್ತು ಸಣ್ಣ ಮಕ್ಕಳನ್ನು ಎಷ್ಟೇ ಜೋಪಾನವಾಗಿ ಆರೈಕೆ ಮಾಡಿದರೂ ಸಾಲದು. ಏಕೆಂದರೆ ಅವುಗಳ ದೇಹದಲ್ಲಿ ರೋಗ ನಿರೋಧಕ  ಶಕ್ತಿ ತುಂಬ ಕಡಿಮೆ ಇರುತ್ತದೆ. ಇದು ಅಕ್ಷರ ಜ್ಞಾನವೇ ಇಲ್ಲದ ತಾಯಂದಿರು, ಅಜ್ಜಿಯಂದಿರಿಗೂ ಗೊತ್ತು.

ಆದ್ದರಿಂದಲೇ ಎಷ್ಟೇ ಕಷ್ಟವಾದರೂ ಮಕ್ಕಳನ್ನು  ಒಂದಿಷ್ಟು ಕಾಲ ಯಾವುದೇ ಸೋಂಕು ತಗುಲದಂತೆ ನೋಡಿಕೊಳ್ಳಲಾಗುತ್ತದೆ.  ಆದರೆ ಇಂತಹ ತಿಳಿವಳಿಕೆ, ಕಾಳಜಿ ನಮ್ಮ ಅನೇಕ ಸರ್ಕಾರಿ ಆಸ್ಪತ್ರೆಗಳನ್ನು ನಡೆಸುವವರಿಗೆ ಇಲ್ಲವೇನೋ ಎಂಬ ಅನುಮಾನ ಮೂಡುವಂತಾಗಿದೆ. ಅದಕ್ಕೆಲ್ಲ ಕಾರಣ ಮೈಸೂರಿನ ಸರ್ಕಾರಿ ನಿರ್ವಹಣೆಯ ಚೆಲುವಾಂಬ ಮಕ್ಕಳ ಆಸ್ಪತ್ರೆಯಲ್ಲಿನ ಸ್ಥಿತಿಗತಿ.

ಅದನ್ನು  ಕೇಳಿದರೇ ಭಯ ಆಗುತ್ತದೆ. ಅಲ್ಲಿ ಅತ್ಯಂತ ಹೆಚ್ಚಿನ ಶುಚಿತ್ವ ಕಾಪಾಡಬೇಕಾದ, ಸೋಂಕು ತಗುಲದಂತೆ ನೋಡಿಕೊಳ್ಳಬೇಕಾದ ತುರ್ತು ನಿಗಾ ಘಟಕದಲ್ಲಿಯೇ (ಐಸಿಯು) ಒಂದೇ ಹಾಸಿಗೆ ಮೇಲೆ 2–3 ಮಕ್ಕಳನ್ನು  ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. ಐಸಿಯುದಲ್ಲಿಯೇ ಹೀಗಿರುವಾಗ ಸಾಮಾನ್ಯ ವಾರ್ಡ್‌ಗಳಲ್ಲಿನ ಪರಿಸ್ಥಿತಿಯಂತೂ ಇನ್ನೂ ಭಯಾನಕ. ಹಾಸಿಗೆಗಳ ಕೊರತೆಯಿಂದಾಗಿ ನೆಲದಲ್ಲಿ ಚಾಪೆ ಹಾಕಿ ಮಕ್ಕಳ ಆರೈಕೆ ಮಾಡಲಾಗುತ್ತಿದೆ.  ಇದರಿಂದ ಅನೇಕ ಮಕ್ಕಳಿಗೆ ಸೋಂಕು ತಗುಲಿದೆ.

ಕಾಯಿಲೆ ವಾಸಿಯಾಗುವ ಬದಲು ಉಲ್ಬಣಿಸಿದೆ. ಒಂದು ಕಾಯಿಲೆ ಜತೆ ಇನ್ನೊಂದು ಕಾಯಿಲೆ ಅಂಟಿಕೊಂಡಿದೆ. ಕೆಮ್ಮಿನಿಂದ ಬಳಲುತ್ತಿದ್ದ ಮಗುವೊಂದು ಈ ಆಸ್ಪತ್ರೆಗೆ ಸೇರಿದ ನಂತರ ಜ್ವರದಿಂದಲೂ ಬಳಲುವಂತಾದ ಪ್ರಸಂಗವೊಂದು ನಡೆದಿದೆ. ಆ ಮಗುವನ್ನು ಜ್ವರದಿಂದ ನರಳುತ್ತಿದ್ದ ಮಗುವಿನ ಹಾಸಿಗೆಯಲ್ಲಿ ಮಲಗಿಸಿದ್ದೇ ಈ ಅವಾಂತರಕ್ಕೆ ಕಾರಣ. ಇದು ನಿರ್ಲರ್ಕ್ಷ್ಯದ ಪರಮಾವಧಿ. ತೀರಾ ಅಕ್ಷಮ್ಯ. ಆಸ್ಪತ್ರೆಗೆ ಸೇರುತ್ತಿರುವ ಬಹುತೇಕ ಮಕ್ಕಳು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವವರು. ಇದು ಹರಡಲು ಹೆಚ್ಚು ಸಮಯವೇನೂ ಬೇಕಿಲ್ಲ.

ಇಂತಹ ಸನ್ನಿವೇಶದಲ್ಲಿ  ಆಸ್ಪತ್ರೆಯಲ್ಲಿ ತುರ್ತಾಗಿ ಒಂದಿಷ್ಟು ಹಾಸಿಗೆಗಳ ವ್ಯವಸ್ಥೆ ಮಾಡಲು, ಶುಚಿತ್ವ ಕಾಪಾಡಲು ಸಂಬಂಧಪಟ್ಟವರು   ಆಸಕ್ತಿ ತೋರಬೇಕಾಗಿತ್ತು. ಆದರೆ ಅಲ್ಲಿ ಅಂತಹ ಯಾವುದೇ ಧಾವಂತದ ವಾತಾವರಣ ಕಾಣಿಸುತ್ತಿಲ್ಲ. ‘ಎಷ್ಟಿದ್ದರೂ ಸರ್ಕಾರಿ ಆಸ್ಪತ್ರೆಗಳಿಗೆ ಬರುವವರಲ್ಲಿ ಹೆಚ್ಚಿನವರು ಬಡವರು’ ಎಂಬ ತಾತ್ಸಾರದ ಧೋರಣೆ  ಕಣ್ಣಿಗೆ ರಾಚುತ್ತಿದೆ.

ಕೈತುಂಬ ಹಣ ಇದ್ದಿದ್ದರೆ ಬಡವರು ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಿದ್ದರು. ಅವರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಬೇಕು. ಮಕ್ಕಳನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುವುದರ ಉದ್ದೇಶ ‘ಕಾಯಿಲೆ ಕಡಿಮೆಯಾಗಲಿ ಎಂದೇ ಹೊರತು  ಕಾಯಿಲೆ ಹೆಚ್ಚಾಗಲಿ, ಹೊಸ ಹೊಸ ಕಾಯಿಲೆ ಅಂಟಿಕೊ ಳ್ಳಲಿ ಎಂದಲ್ಲ’. ಅಲ್ಲದೆ ಮಕ್ಕಳಿಗೆ ಬರುವ ಕಾಯಿಲೆಗಳೂ ಹೆಚ್ಚು, ಚಿಕಿತ್ಸೆಯ ವೆಚ್ಚವೂ ಹೆಚ್ಚು. ಬಡವರಿಗಂತೂ ಇದು ದೊಡ್ಡ ಹೊರೆ. ಅವರು ಅನಿವಾರ್ಯವಾಗಿ ಸರ್ಕಾರಿ ಆಸ್ಪತ್ರೆಗಳನ್ನೇ ಆಶ್ರಯಿಸಬೇಕಾಗಿದೆ.

ಇರುವ ಬೆರಳೆಣಿಕೆಯಷ್ಟು ಆಸ್ಪತ್ರೆಗಳಲ್ಲಿ ಕೂಡ ಕಾಯಿಲೆ ವಾಸಿಯಾಗುವ ಬದಲು ಹೆಚ್ಚಾಗುವ ವಾತಾವರಣ ಇದ್ದರೆ ಅಸಹಾಯಕ ಪೋಷಕರು ಎಲ್ಲಿ ಹೋಗಬೇಕು? ಇಂತಹ ವಿಷಯಗಳನ್ನು ಆರೋಗ್ಯ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳಬೇಕು. ‘ಸುತ್ತಲಿನ 4–5 ಜಿಲ್ಲೆಗಳಿಂದ ಕಾಯಿಲೆ ಪೀಡಿತ ಮಕ್ಕಳನ್ನು ವೈದ್ಯರು ಚೆಲುವಾಂಬ ಆಸ್ಪತ್ರೆಗೆ ಕಳಿಸುತ್ತಿದ್ದಾರೆ.

ಆ ಮಕ್ಕಳನ್ನು  ವಾಪಸ್‌ ಕಳಿಸಲು ಹೇಗೆ ಸಾಧ್ಯ? ಆದರೆ  ಇಲ್ಲಿ ಹಾಸಿಗೆಗಳ ಕೊರತೆ ಇದೆ’ ಎಂಬುದು ಆಸ್ಪತ್ರೆ ಮುಖ್ಯಸ್ಥರ ಅಳಲು. ಇದನ್ನು ತಕ್ಷಣವೇ ಮೇಲಧಿಕಾರಿಗಳ ಗಮನಕ್ಕೆ ತಂದು ತಾತ್ಕಾಲಿಕ ವ್ಯವಸ್ಥೆ  ಮಾಡುವ ಜವಾಬ್ದಾರಿ ಅವರ ಮೇಲಿದೆ.  ಇಂತಹ ವಿಷಯದಲ್ಲಿ ವಿಳಂಬ ಸಲ್ಲದು. ಮಂಜೂರಾತಿ, ಪೂರ್ವಾನುಮತಿ ಎಂದೆಲ್ಲ ನಿಯಮಗಳನ್ನು ಉಲ್ಲೇಖಿಸಿ ಕಾಲಹರಣ ಮಾಡುವ ಎಂದಿನ ಚಾಳಿಯಿಂದ  ಆರೋಗ್ಯ ಇಲಾಖೆಯ ಉನ್ನತಾಧಿಕಾರಿಗಳು  ಕೂಡ ಹೊರ ಬರಬೇಕು. 

ಇದು ಮಕ್ಕಳ ಆರೋಗ್ಯದ ಪ್ರಶ್ನೆ. ಈ ವಿಷಯದಲ್ಲಿ ಯಾವುದೇ ರಾಜಿ ಇರಕೂಡದು. ಶಿಶುಮರಣ, ತಾಯಿ ಮಗು ಆರೋಗ್ಯ ರಕ್ಷಣೆ, ಮಕ್ಕಳ ಯೋಗಕ್ಷೇಮದ ವಿಷಯದಲ್ಲಿ ಈಗಲೇ ನಮ್ಮ ರಾಜ್ಯ ಹಿಂದೆ ಬಿದ್ದಿದೆ.   ಹೀಗಿರುವಾಗ, ಪ್ರತಿಷ್ಠಿತ ಆಸ್ಪತ್ರೆಯಲ್ಲೇ ಇಷ್ಟೊಂದು ದಯನೀಯ ಸ್ಥಿತಿ ಇದೆ ಎನ್ನುವುದು ರಾಜ್ಯಕ್ಕೆ ಗೌರವ ತರುವ ಸಂಗತಿಯಲ್ಲ. ದೇಶದ ಆರ್ಥಿಕ ಅಭಿವೃದ್ಧಿಗೂ ಜನರ ಆರೋಗ್ಯವೇ ಬೆನ್ನೆಲುಬು ಎಂಬುದನ್ನು ನಾವು ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT