ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧೂ ನದಿ ಜಲ ಒಪ್ಪಂದ ಮುರಿದು ಬೀಳುವುದೇ?

ಭಯೋತ್ಪಾದನೆಗೆ ಪಾಕ್ ಪ್ರಚೋದನೆ: ನೀರಿನ ಹಂಚಿಕೆಯ ಕರಾರು ಮರುಪರಿಶೀಲನೆಗೆ ಚಿಂತನೆ
Last Updated 25 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಪ್ರಪಂಚದಲ್ಲೇ ಅತ್ಯಂತ ಉದಾರ ಮನೋಭಾವದಿಂದ ಕೈಗೊಂಡಿರುವ ಯಶಸ್ವಿ ಒಪ್ಪಂದ ಎಂದು ಪ್ರಶಂಸೆಗೆ ಒಳಗಾಗಿರುವ ಸಿಂಧೂ ನದಿ ನೀರು ಹಂಚಿಕೆ ಮೇಲೆಯೂ ಈಗ ಕರಿ ನೆರಳು ಬಿದ್ದಿದೆ.

ಭಾರತ ಮತ್ತು ಪಾಕಿಸ್ತಾನದಲ್ಲಿ ಹರಿಯುವ ಸಿಂಧೂ ನದಿ ಧರ್ಮ, ಜಾತಿ, ಗಡಿ ಭೇದವಿಲ್ಲದೆ ಭೂಮಿಯನ್ನು ಹಸಿರುಗೊಳಿಸಿದೆ. ಉಭಯ ದೇಶಗಳ ವಿವಾದ 56 ವರ್ಷಗಳ ಹಿಂದಿನ ಈ ಒಪ್ಪಂದಕ್ಕೆ ತಟ್ಟಿಲ್ಲ. ಭಿನ್ನಾಭಿಪ್ರಾಯಗಳ ನಡುವೆಯೂ ಸಹಕಾರ ಮತ್ತು ಸಾಮರಸ್ಯ ಸಾಧಿಸಿರುವುದಕ್ಕೆ ಈ ಒಪ್ಪಂದ ಸಾಕ್ಷಿಯಾಗಿದೆ.

ಜವಾಹರಲಾಲ್‌ ನೆಹರೂ ಅವರು ಸಹಿ ಹಾಕಿದ್ದೇ ದೊಡ್ಡ ತಪ್ಪು ಎಂದು ಟೀಕೆಗಳು ವ್ಯಕ್ತವಾದರೂ ಒಪ್ಪಂದದ ಮೇಲೆ ಇದುವರೆಗೆ ಯಾವುದೇ ರೀತಿ ಪರಿಣಾಮ ಬೀರಿಲ್ಲ. 1965 ಮತ್ತು 1971ರಲ್ಲಿ ನಡೆದ ಯುದ್ಧದ ಸಂದರ್ಭದಲ್ಲೂ ಸಿಂಧೂ ಜಲ ಆಯೋಗದ ಸಭೆಗಳು ಸಹ ನಡೆದಿದ್ದವು.

ಆದರೆ, ಉಗ್ರರಿಗೆ ಆಶ್ರಯ ಮತ್ತು ಪ್ರಚೋದನೆ ನೀಡುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಆ ದೇಶದ ಜತೆಗಿನ ಎಲ್ಲ ಒಪ್ಪಂದಗಳನ್ನು ಸಹ ಪರಿಶೀಲನೆ ಮಾಡಬೇಕು  ಎಂದು ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ. ಇದರ ಭಾಗವಾಗಿಯೇ ಸಿಂಧೂ ನದಿ ಒಪ್ಪಂದವೂ ಚರ್ಚೆಗೆ ಗ್ರಾಸವಾಗಿದೆ.

ಭಾರತಕ್ಕೆ ಕೇವಲ ಶೇಕಡ 20ರಷ್ಟು ನೀರು ಮಾತ್ರ ದೊರೆಯುವುದ ರಿಂದ ಈ ಒಪ್ಪಂದ ಅಸಮತೋಲನದಿಂದ ಕೂಡಿದೆ. ಹೀಗಾಗಿ ಈ ಒಪ್ಪಂದವನ್ನು ರದ್ದುಪಡಿಸಬೇಕು ಎನ್ನುವ ಒತ್ತಾಯ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಜತೆಗೆ ಈ ನದಿ ನೀರಿನ ಬಳಕೆಯ ಮೇಲಿನ ಹಕ್ಕನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗದಿರುವ ಕಾರಣ ಈ ಒಪ್ಪಂದವನ್ನು ಮರುಪರಿಶೀಲಿಸಬೇಕು ಎಂದು ಹಲವು ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಸಹ ಒತ್ತಾಯಿಸುತ್ತ ಬಂದಿದೆ. ಪಾಕಿಸ್ತಾನ ಹೆಚ್ಚಿನ ಪಾಲನ್ನು ಹೊಂದಿದ್ದರೂ ಹಲವು ಬಾರಿ ನದಿ ನೀರಿನ ಹಂಚಿಕೆ ವಿಷಯದಲ್ಲಿ ತಗಾದೆ ತೆಗೆದಿದೆ.

ಇದೇ ವರ್ಷದ ಜುಲೈನಲ್ಲಿ, ಜೇಲಂ ಮತ್ತು ಚೇನಬ್‌ ನದಿ ಪಾತ್ರದಲ್ಲಿ ಭಾರತ ಜಲವಿದ್ಯುತ್‌ ಯೋಜನೆ ಕೈಗೊಳ್ಳುವುದನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಲು ಅಂತರರಾಷ್ಟ್ರಿಯ ಮಧ್ಯಸ್ಥಿಕೆದಾರರನ್ನು ಕೋರಲಾಗುವುದು ಎಂದು ಪಾಕಿಸ್ತಾನ ತಿಳಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಭಾರತ, ಒಪ್ಪಂದದಲ್ಲಿ ಸೂಚಿಸಿರುವಂತೆ ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡದೆ ನೇರವಾಗಿ ತೃತೀಯ ಸಂಸ್ಥೆಯನ್ನು ಪಾಕಿಸ್ತಾನ ಸಂಪರ್ಕಿಸಬಾರದು ಎಂದು ಹೇಳಿತ್ತು. ಆಗ ತಕ್ಷಣ ಪಾಕಿಸ್ತಾನದ ತಂಡ ಭಾರತಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿತು.

ಕಾಶ್ಮೀರದಲ್ಲಿ ಹರಿಯುವ ಕಿಶೆನ್‌ಗಂಗಾ ನದಿಯಲ್ಲಿ 330 ಮೆಗಾವಾಟ್‌ ಜಲವಿದ್ಯುತ್‌ ಯೋಜನೆಯನ್ನು ಭಾರತ ಕೈಗೊಳ್ಳುವುದನ್ನು ವಿರೋಧಿಸಿ ಪಾಕಿಸ್ತಾನದ 2010ರಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯದ ಮಧ್ಯಸ್ಥಿಕೆ ಕೋರಿತ್ತು. ಈ ಯೋಜನೆಯಿಂದ ಪಾಕಿಸ್ತಾನದ ಜೇಲಂ ನದಿಗೆ ಕಿಶೆನ್‌ಗಂಗಾದಿಂದ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾಗಲಿದೆ ಎಂದು ಪಾಕಿಸ್ತಾನ ವಾದ ಮಂಡಿಸಿತ್ತು.

2011ರಲ್ಲಿ ಈ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಭಾರತಕ್ಕೆ ಆದೇಶಿಸಲಾಯಿತು. ಬಳಿಕ ಕೆಲವು ಕಠಿಣ ನಿರ್ಬಂಧಗಳನ್ನು ವಿಧಿಸಿ ಯೋಜನೆಯನ್ನು ಪುನರ್‌ ಆರಂಭಿಸುವಂತೆ ಸೂಚಿಸಲಾಯಿತು.

ಒಂದು ವೇಳೆ ಭಾರತ ಇದೀಗ ಒಪ್ಪಂದವನ್ನು ಮುರಿದರೆ ಅಂತರರಾಷ್ಟ್ರೀಯ ಪ್ರತಿಕೂಲ ಪರಿಣಾಮಗಳ ಬಗ್ಗೆಯೂ ವಿಶ್ಲೇಷಣೆ ನಡೆಯುತ್ತಿದೆ. ಕೆಲವು ರಾಷ್ಟ್ರಗಳು ಭಾರತದ ನಿಲುವನ್ನು ಖಂಡಿಸಬಹುದು. ಭಾರತದ ಜತೆ ನೀರಿನ ಹಂಚಿಕೆ ಹೊಂದಿರುವ ಬಾಂಗ್ಲಾದೇಶಕ್ಕೂ ಅಸಮಾಧಾನವಾಗಬಹುದು ಎನ್ನುವ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಪಾಕಿಸ್ತಾನದ ನಿಯಂತ್ರಣದಲ್ಲಿರುವ ನದಿಗಳು ಅಲ್ಲಿ ಹುಟ್ಟುವುದಿಲ್ಲ. ಎಲ್ಲವೂ ಭಾರತದ ಮೂಲಕ ಪ್ರವೇಶಿಸುತ್ತವೆ. ಹೀಗಾಗಿ ಭೌಗೋಳಿಕ ಸನ್ನಿವೇಶ ಹಾಗೂ ಒಪ್ಪಂದದ ಇತಿಹಾಸವನ್ನು ಅವಲೋಕಿಸಿದರೆ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಲ್ಬಣಗೊಂಡರೂ ಭಾರತ ನೀರು ಸ್ಥಗಿತಗೊಳಿಸುವ ಬೆದರಿಕೆ ಹಾಕಬಹುದೇ ಹೊರತು ಒಪ್ಪಂದ ರದ್ದುಪಡಿಸುವ ಸಾಧ್ಯತೆಗಳು ಕಡಿಮೆ. ಈ ವಿಷಯದಲ್ಲಿ ಭಾರತ ಮತ್ತೊಮ್ಮೆ ತನ್ನ ಔದಾರ್ಯ ತೋರಿಸಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ.

ಜತೆಗೆ ಇನ್ನೊಂದು ಆಯ್ಕೆಯೂ ಇದೆ. ಪಾಕಿಸ್ತಾನಕ್ಕೆ ಹಂಚಿಕೆಯಾಗಿರುವ ಪಶ್ಚಿಮದ ಉಪನದಿಗಳ ನೀರು ಪಡೆಯಲು ಸಂಗ್ರಹ ವ್ಯವಸ್ಥೆ ಮಾಡಿಕೊಳ್ಳಬಹುದು. ಒಪ್ಪಂದದ ಅನ್ವಯ 36 ಲಕ್ಷ ಎಕರೆ ವರೆಗೆ ನೀರನ್ನು ಬಳಸಿಕೊಳ್ಳಲು ಅವಕಾಶವಿದೆ. ಇದರಿಂದ ಪಾಕಿಸ್ತಾನಕ್ಕೆ ಬಲವಾದ ಸಂದೇಶವೂ ರವಾನೆಯಾದಂತಾಗುತ್ತದೆ. ಈ ಮೂಲಕ ಪರೋಕ್ಷವಾಗಿ ‘ಜಲ ಯುದ್ಧ’ ಸಾರಬಹುದು ಎಂದು ತಜ್ಞರು ಹೇಳುತ್ತಾರೆ.

ಜಲ ಒಪ್ಪಂದದ ಹಿನ್ನೋಟ
* ಭಾರತ ಮತ್ತು ಪಾಕಿಸ್ತಾನ 1960ರ ಸೆಪ್ಟೆಂಬರ್‌ 19ರಂದು ಕರಾಚಿಯಲ್ಲಿ ಸಿಂಧೂ ನದಿ ಜಲ ಒಪ್ಪಂದಕ್ಕೆ ಸಹಿ ಹಾಕಿದವು. ಆದರೆ, ಈ ಒಪ್ಪಂದ  1960ರ ಏಪ್ರಿಲ್‌ 1ರಿಂದ ಪೂರ್ವಾನ್ವಯವಾಗಿ ಜಾರಿಗೆ ಬಂತು.
* ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರೂ ಮತ್ತು ಪಾಕಿಸ್ತಾನದ ಅಧ್ಯಕ್ಷ ಅಯೂಬ್‌ಖಾನ್‌ ಅವರಿಂದ ಒಪ್ಪಂದಕ್ಕೆ ಸಹಿ
* ಒಪ್ಪಂದದ ಅನ್ವಯ ಪೂರ್ವದಲ್ಲಿ ಹರಿಯುವ ಬಿಯಾಸ್‌, ರಾವಿ, ಸಟ್ಲೇಜ್ ಭಾರತಕ್ಕೆ ಹಂಚಿಕೆ ಮಾಡಲಾಯಿತು. ಈ ನದಿಗಳು ಪಂಜಾಬ್‌ನಿಂದ ಹರಿಯುತ್ತವೆ. ಪಶ್ಚಿಮದಲ್ಲಿರುವ ಸಿಂಧೂ, ಚೇನಬ್‌, ಜೇಲಂ ಪಾಕಿಸ್ತಾನಕ್ಕೆ ಎಂದು ನಿರ್ಧರಿಸಲಾಯಿತು. ಈ ನದಿಗಳು ಜಮ್ಮು ಮತ್ತು ಕಾಶ್ಮೀರದಿಂದ ಹರಿಯುತ್ತವೆ.
* ಸುಮಾರು 5 ಕೋಟಿ ಜನರ ಅನುಕೂಲಕ್ಕಾಗಿ ಒಪ್ಪಂದ
* ಪಶ್ಚಿಮದ ನದಿಗಳ ನೀರಿನ ಬಳಕೆಗೆ ಕೆಲವು ವಿನಾಯಿತಿಗಳನ್ನು ಭಾರತಕ್ಕೆ ನೀಡಲಾಗಿದೆ. ಭಾರತ, ಪಶ್ಚಿಮ ನದಿಗಳ ನೀರಿಗಾಗಿ ಸಂಗ್ರಹ ವ್ಯವಸ್ಥೆ ಮಾಡಿಕೊಳ್ಳಬಹುದಾಗಿದೆ. ಆದರೆ, ಇದುವರೆಗೆ ಅಂತಹ ಸಂಗ್ರಹ ವ್ಯವಸ್ಥೆಯಾಗಿಲ್ಲ
* 7 ಲಕ್ಷ ಎಕರೆ ಕೃಷಿ ಪ್ರದೇಶಕ್ಕೆ ನದಿ ನೀರನ್ನು ಬಳಸಿಕೊಳ್ಳಲು ಭಾರತಕ್ಕೆ ಅವಕಾಶ

ಒಪ್ಪಂದ ಜಾರಿ ಬಂದದ್ದು ಹೇಗೆ?
ಸಿಂಧೂ ನದಿಯ ಮೂಲಗಳು ಭಾರತದಲ್ಲಿರುವುದರಿಂದ ಯುದ್ಧ ನಡೆದ ಸಂದರ್ಭದಲ್ಲಿ ನೀರು ಸ್ಥಗಿತಗೊಳಿಸುವ ಸಾಧ್ಯತೆಗಳಿವೆ. ಇದರಿಂದ ಪಾಕಿಸ್ತಾನ ಬರಗಾಲಕ್ಕೆ ತುತ್ತಾಗುವ ಸಾಧ್ಯತೆ ಇದೆ ಎನ್ನುವ ಆತಂಕವನ್ನು ಪಾಕಿಸ್ತಾನ ವ್ಯಕ್ತಪಡಿಸಿತು. ಈ ಅಂಶವನ್ನು ಮುಂದಿಟ್ಟುಕೊಂಡು ಪಾಕಿಸ್ತಾನ ಸಿಂಧೂ ನದಿ ನೀರಿನ ಹಂಚಿಕೆಯ ವಿವಾದವನ್ನು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾಪಿಸಿ, ವಿಶ್ವಬ್ಯಾಂಕ್‌ಗೆ ಮೊರೆ ಹೋಯಿತು.  ವಿಶ್ವಬ್ಯಾಂಕ್‌ ಮಧ್ಯಪ್ರವೇಶಿಸಿದ ಬಳಿಕ ಸಿಂಧೂ ನದಿ ಜಲ ಒಪ್ಪಂದ ಜಾರಿಯಾಯಿತು. ಇದರ ಅನ್ವಯ ಒಟ್ಟಾರೆ 5,900 ಟಿಎಂಸಿ ಅಡಿ ನೀರು ಪಾಕಿಸ್ತಾನಕ್ಕೆ ಲಭ್ಯವಾಗುತ್ತದೆ.

*
ಯಾವುದೇ ರೀತಿಯ ಒಪ್ಪಂದಗಳು ಪರಸ್ಪರ ವಿಶ್ವಾಸ ಮತ್ತು ಸಹಕಾರದ ಮೇಲೆ ಅವಲಂಬಿತವಾಗಿವೆ. ಆದರೆ, ಒಪ್ಪಂದ ಏಕಪಕ್ಷೀಯವಾಗಿರಬಾರದು.
–ವಿಕಾಸ್ ಸ್ವರೂಪ್,
ವಿದೇಶಾಂಗ ಸಚಿವಾಲಯದ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT