ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡಿಯಲ್ಲಿ ಜ್ವರ; ಗಿರಿಜನರಲ್ಲಿ ಆತಂಕ

Last Updated 26 ಸೆಪ್ಟೆಂಬರ್ 2016, 9:49 IST
ಅಕ್ಷರ ಗಾತ್ರ

ಹಂಪಾಪುರ: ಎಚ್.ಡಿ.ಕೋಟೆ ತಾಲ್ಲೂಕಿನ ಮೊತ್ತಕೆರೆ ಹಾಡಿಯಲ್ಲಿ 20ಕ್ಕೂ ಹೆಚ್ಚು ಆದಿವಾಸಿಗಳು ಏಕಕಾಲಕ್ಕೆ ಅನಾರೋಗ್ಯದಿಂದ ಬಳಲುತ್ತಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ತಾಲ್ಲೂಕು ಕೇಂದ್ರದಿಂದ 6 ಕಿ.ಮೀ. ದೂರದಲ್ಲಿರುವ ಈ ಹಾಡಿಯಲ್ಲಿ 36 ಜೇನುಕುರುಬ ಆದಿವಾಸಿ ಕುಟುಂಬಗಳು ವಾಸಿಸುತ್ತಿವೆ.  8 ಕುಟುಂಬದವರಲ್ಲಿ ಜ್ವರ, ನೆಗಡಿ ಮತ್ತು ಕೆಮ್ಮು ಕಾಣಿಸಿ ಕೊಂಡಿದೆ. ತಾಲ್ಲೂಕು ಆರೋಗ್ಯಾಧಿ ಕಾರಿಗಳ ನೇತೃತ್ವದ ತಂಡ ಸೆ. 22ರಂದು ಹಾಡಿಗೆ ಭೇಟಿ ನೀಡಿ ಚಿಕಿತ್ಸೆ ನೀಡಿದೆ.

‘10 ದಿನಗಳಿಂದ  ಆರೋಗ್ಯದಲ್ಲಿ ಏರುಪೇರಾಗಿದೆ, ಮೊನ್ನೆ ವೈದ್ಯರು ಬಂದು ಮಾತ್ರೆ ನೀಡಿದ್ದಾರೆ’ ಎಂದು ಹಾಡಿಯ ಚಿಕ್ಕಯ್ಯ ತಿಳಿಸಿದರು.
ಭಾನುವಾರ ಮತ್ತೆ ಕೆಲವರಲ್ಲಿ ಜ್ವರ ಕಾಣಿಸಿಕೊಂಡಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ಧಾವಿಸಿ ಚಿಕಿತ್ಸೆ ನೀಡಬೇಕು ಎಂದು ಹಾಡಿಯ ಜನರು ಒತ್ತಾಯಿಸಿದ್ದಾರೆ.
ಹಾಡಿಯಲ್ಲಿ ಅನೈರ್ಮಲ್ಯ: ಹಾಡಿಯಲ್ಲಿ ನೀರು ಸರಬರಾಜು ಮಾಡುವ ಮಿನಿ ಟ್ಯಾಂಕ್‌ನಲ್ಲಿ ಹಲ್ಲಿ ಮತ್ತು ಇನ್ನಿತರ ಕ್ರಿಮಿಕೀಟಗಳು ಸತ್ತಿವೆ. ಅದೇ ನೀರನ್ನು ಆದಿವಾಸಿಗಳು ಬಳಸುತ್ತಿರುವ ಕಾರಣ ಹಾಗೂ ಸ್ವಚ್ಛತೆ ಕೊರತೆಯಿಂದ ಜ್ವರ ಕಾಣಿಸಿಕೊಳ್ಳುತ್ತಿದೆ  ಎಂದು ವೈದ್ಯರು ‘ಪ್ರಜಾವಾಣಿ’ಗೆ ತಿಳಿಸಿದರು.

ಇಲಾಖೆಯ ನಿರ್ಲಕ್ಷ: ‘ಹಾಡಿಯು ತಾಲ್ಲೂಕು ಕೇಂದ್ರಕ್ಕೆ ಸನಿಹದಲ್ಲಿದ್ದರೂ ಸೌಲಭ್ಯಗಳು ದೊರೆಯುತ್ತಿಲ್ಲ. ಸಮಾಜ ಕಲ್ಯಾಣಾಧಿಕಾರಿಗಳು ಮತ್ತು ಗಿರಿಜನ ವಿಸ್ತರಣಾಧಿಕಾರಿಗಳು ಈ ಹಿಂದೆ ಹಾಡಿಗೆ ಬಂದೇ ಇರಲಿಲ್ಲ’ ಎಂದು ಆರೋಪಿಸುತ್ತಾರೆ ಹಾಡಿಯ ಬಸವಯ್ಯ.

‘ಇಲ್ಲಿ ವಾಸಿಸುವ ಮಂದಿಗೆ ಯಾವುದೇ ಜಮೀನು ಇಲ್ಲ. ಕೂಲಿಯನ್ನೇ ಅವಲಂಬಿಸಿ ಬದುಕು ಸಾಗುತ್ತಿದೆ. ಅನಾರೋಗ್ಯಕ್ಕೆ ಒಳಗಾದರೆ ಆಸ್ಪತ್ರೆಗೆ ಬರುವಷ್ಟು ಜ್ಞಾನವೂ ಇಲ್ಲ. ತಾಲ್ಲೂಕಿನಲ್ಲಿ ಎರಡು ಸಂಚಾರಿ ಘಟಕಗಳಿದ್ದರೂ ಸಕಾಲಕ್ಕೆ ಬಂದು ಚಿಕಿತ್ಸೆ ನೀಡುತ್ತಿಲ್ಲ. ಆದಿವಾಸಿಗಳನ್ನು ಆರೋಗ್ಯ ಇಲಾಖೆಯು ನಿರ್ಲಕ್ಷಿಸುತ್ತಿದೆ’ ಎಂದು ಆದಿವಾಸಿ ಮುಖಂಡ ಪಡು ಕೋಟೆ ಮಹದೇವು ಆರೋಪಿಸಿದರು.

ಗಿರಿಜನ ಜಿಲ್ಲಾ ವಿಸ್ತರಣಾಧಿಕಾರಿ ಶಿವಕುಮಾರ್, ಹಾಡಿಯ ಜನರಲ್ಲಿ ಅನಾರೋಗ್ಯ ಕಾಡುತ್ತಿರುವುದು ಗಮನಕ್ಕೆ ಬಂದಿದೆ. ಚಿಕಿತ್ಸೆ ನೀಡುವಂತೆ ತಾಲ್ಲೂಕು ವೈದ್ಯಾಧಿಕಾರಿಗೆ ತಿಳಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT