ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥಪೂರ್ಣವಾಗಿ ನಡೆದ 8ನೇ ರಾಜ್ಯಮಟ್ಟದ ವಿಶ್ವಕರ್ಮ ಜಯಂತ್ಯುತ್ಸವ

Last Updated 26 ಸೆಪ್ಟೆಂಬರ್ 2016, 11:01 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ ಕೇಂದ್ರದ ಡಾ.ಬಿ.ಆರ್‌. ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣವು ಭಾನುವಾರ ಜನರಿಂದ ತುಂಬಿ ತುಳುಕುತ್ತಿತ್ತು. ಕ್ರೀಡಾಂಗಣಕ್ಕೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ವಿಶ್ವಕರ್ಮ ಸಮುದಾಯದ ಜನರು ದಾಂಗುಡಿ ಇಟ್ಟಿದ್ದರು. ಜನಾಂಗಕ್ಕೆ ಸೂಕ್ತ ರಾಜಕೀಯ ಪ್ರಾತಿ ನಿಧ್ಯ ಸಿಕ್ಕಿಲ್ಲ ಎಂಬ ಕೊರಗು ಕಾಡಿತು. ಜೊತೆಯಲ್ಲಿಯೇ ಪ್ರಾತಿನಿಧ್ಯ ನೀಡ ಬೇಕೆಂಬ ಕೂಗು ಪ್ರತಿಧ್ವನಿಸಿತು.

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದಿಂದ ಹಮ್ಮಿಕೊಂಡಿದ್ದ 8ನೇ ರಾಜ್ಯಮಟ್ಟದ ವಿಶ್ವಕರ್ಮ ಜಯಂ ತ್ಯುತ್ಸವವು ಸಮುದಾಯದ ಒಗ್ಗಟ್ಟಿನ ದ್ಯೋತಕವಾಗಿತ್ತು. ಪಂಚಕಸುಬು ಮಾಡುವ ಅಪಾರ ಸಂಖ್ಯೆಯ ಜನರು ಪಾಲ್ಗೊಂಡಿದ್ದರು. ಚೊಕ್ಕಟವಾಗಿ ನಡೆದ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ ಕುಮಾರ್‌ ಆಕರ್ಷಣೆಯ ಕೇಂದ್ರಬಿಂದು ವಾಗಿದ್ದರು.

ಮೊದಲಿಗೆ ಭಾಷಣ ಆರಂಭಿಸಿದ ಶಹಾಪುರದ ಕಾಳಹಸ್ತೇಂದ್ರ ಸ್ವಾಮೀಜಿ, ‘16 ವರ್ಷದಿಂದ ಕೆ.ಪಿ.ನಂಜುಂಡಿ ಅವರು ಹೇಳಿದ ಮಾತುಗಳನ್ನು ಸಮು ದಾಯದ ಮಠಾಧೀಶರು ಮತ್ತು ಜನರು ಪಾಲಿಸಿದ್ದಾರೆ. ಇತ್ತೀಚೆಗೆ ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ ನಡೆದ ವಿಶ್ವಕರ್ಮ ಜಯಂತಿಯಲ್ಲಿ 4 ಸಾವಿರ ಕುರ್ಚಿ ಹಾಕಲಾಗಿತ್ತು. ಆದರೆ, ವಿಧಾನಸೌಧದ ಮೂರನೇ ಮಹಡಿಯಲ್ಲಿ ಸಮು ದಾಯಕ್ಕೆ ಒಂದು ಕುರ್ಚಿಯೂ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ವಿಶ್ವಕರ್ಮ ಜನಾಂಗ ರಾಜಕೀಯ ವಾಗಿ ಹಿಂದುಳಿದಿದೆ. ಇಲ್ಲಿಯವರೆಗೆ ನಂಜುಂಡಿ ಹೇಳಿದಂತೆ ನಾವು ಕೇಳಿದ್ದೇವೆ. ಪ್ರಾತಿನಿಧ್ಯ ಸಿಗದಿದ್ದರೆ ನಾವು ಹೇಳಿದಂತೆ ಅವರ ಕೇಳಬೇಕಾಗುತ್ತದೆ. ಹಾಗಾಗಿ, ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕಿದೆ’ ಎಂದರು.

ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಕೆ.ಪಿ. ನಂಜುಂಡಿ ಮಾತನಾಡಿ, ‘ರಾಜಕೀಯ ಪ್ರಜ್ಞೆ ಇಲ್ಲವೆಂಬ ಕಾರಣಕ್ಕೆ ಹಿಂದುಳಿದ ಸಮುದಾಯವನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ರಾಜಕೀಯ ಪ್ರಜ್ಞಾವಂತರಾದಾಗ ಮಾತ್ರ ಸಮು ದಾಯದ ಅಭಿವೃದ್ಧಿ ಸಾಧ್ಯ’ ಎಂದರು.

‘16 ವರ್ಷದಿಂದ ಕಾಂಗ್ರೆಸ್‌ನ ನಿಷ್ಠಾ ವಂತ ಕಾರ್ಯಕರ್ತನಾಗಿದ್ದೇನೆ. ರಾಜ ಕೀಯ ಮಾಡುವವರು ದೇವ ಲೋಕ ದಿಂದ ಬಂದಿಲ್ಲ. ಎಲ್ಲರಿಗೂ ಒಂದು ಸಹನೆ ಇರುತ್ತದೆ. ಸಹನೆಯ ಕಟ್ಟೆ ಒಡೆ ಯಲು ಅವಕಾಶ ಕೊಡಬಾರದು’ ಎಂದರು.

ಗೃಹಸಚಿವ ಡಾ.ಜಿ. ಪರಮೇಶ್ವರ್‌ ಮಾತನಾಡಿ, ‘ಯಾವುದೇ ಸಮುದಾಯ ಸಂಘಟಿತರಾದಾಗ ಮಾತ್ರ ಸೌಲಭ್ಯ ಪಡೆಯಲು ಸಾಧ್ಯ. ವಿಶ್ವಕರ್ಮ ಸಮು ದಾಯದವರು ನಿರಾಸೆ ಅನುಭವಿಸ ಬೇಕಿಲ್ಲ. ಒಗ್ಗಟ್ಟು ಪ್ರದರ್ಶಿಸಿದರೆ ರಾಜಕೀಯ ಪ್ರಾತಿನಿಧ್ಯ ಹುಡುಕಿ ಕೊಂಡು ಬರುತ್ತದೆ’ ಎಂದು ಅವರು ಹೇಳಿದರು.

ಶೋಷಿತ ಮತ್ತು ಹಿಂದುಳಿದ ಸಮುದಾಯದ ಜನರು ಪ್ರಜ್ಞಾವಂತ ರಾಗಬೇಕಿದೆ. ಸಮುದಾಯ ದಲ್ಲಿ ಸಂಘ ಟನೆಗಾಗಿ ನಂಜುಂಡಿ ಶ್ರಮಿಸುತ್ತಿ ದ್ದಾರೆ. ಅವರಿಗೆ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದ ಅವರು, ನಟ ಶಿವರಾಜ್‌ಕುಮಾರ್‌ ಅವರು ರಾಜಕೀಯ ಕ್ಷೇತ್ರಕ್ಕೆ ಬರಬೇಕು ಎಂದು ಕೋರಿದರು.

ರಾಜ್ಯ ಯೋಜನಾ ಮಂಡಳಿ ಉಪಾ ಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತನಾಡಿ, ‘ವಿಶ್ವಕರ್ಮ ಸಮುದಾಯದವರು ಶ್ರಮಜೀವಿಗಳಾಗಿದ್ದಾರೆ. ಎಲ್ಲ ವರ್ಗದ ಜನರಿಗೆ ಅವರ ಸೇವೆ ಬೇಕಿದೆ. ಕಾಲ ವಿಳಂಬವಾದಷ್ಟು ಗಟ್ಟಿಯಾಗುತ್ತದೆ. ಹಾಗಾಗಿ, ನಂಜುಂಡಿ ಅವರಿಗೆ ಸೂಕ್ತ ರಾಜಕೀಯ ಸ್ಥಾನಮಾನ ಲಭಿಸಲಿದೆ ಎಂದು ಹೇಳಿದರು.

ಸಹಕಾರ ಮತ್ತು ಸಕ್ಕರೆ ಸಚಿವ ಎಚ್‌.ಎಸ್. ಮಹದೇವಪ್ರಸಾದ್‌ ಮಾತ ನಾಡಿ, ‘ರಾಜ್ಯ ಸರ್ಕಾರವು ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ಒತ್ತು ನೀಡಿದೆ’ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ. ದೇವೇಗೌಡ ಮಾತನಾಡಿದರು. ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನೀಲಕಂಠ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ನಟ ಶಿವರಾಜ್‌ಕುಮಾರ್‌, ಸಂಸದ ಆರ್‌. ಧ್ರುವನಾರಾಯಣ, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎಸ್‌. ಜಯಣ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ, ಪತ್ರಕರ್ತ ರವಿ ಹೆಗಡೆ, ಹೈಕೋರ್ಟ್‌ನ ಹಿರಿಯ ವಕೀಲ ವಿ. ಲಕ್ಷ್ಮಿನಾರಾಯಣ, ನಿರ್ದೇಶಕ ಮೈಲಾರಿ ಚಂದ್ರು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕುಲದೀಪ್‌ ಕುಮಾರ್‌ ಆರ್‌.ಜೈನ್‌ ಸೇರಿದಂತೆ ಇತರರು ಹಾಜರಿದ್ದರು.

ರಂಜಿಸಿದ ನಟ ಶಿವರಾಜ್‌ಕುಮಾರ್
ಚಾಮರಾಜನಗರ: ನಗರದಲ್ಲಿ ನಡೆದ ವಿಶ್ವಕರ್ಮ ಜಯಂತಿಯಲ್ಲಿ ನಟ ಶಿವರಾಜ್‌ಕುಮಾರ್‌ ಆಕರ್ಷಣೆಯ ಕೇಂದ್ರಬಿಂದು ವಾಗಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾರೆಂಬ ಸುದ್ದಿ ತಿಳಿದ ಅವರ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಜಮಾಯಿಸಿದ್ದರು.

ಅವರು ವೇದಿಕೆ ಬಳಿಗೆ ಬಂದಾಗ ಅಭಿಮಾನಿಗಳು ಮತ್ತು ಸಭಿಕರ ಕೇಕೆ ಮುಗಿಲು ಮುಟ್ಟಿತು. ವೇದಿಕೆ ಮುಂಭಾಗ ಕುಳಿತ ಅವ ರನ್ನು ಕ್ಯಾಮೆರಾ, ಮೊಬೈಲ್‌ನಲ್ಲಿ ಸೆರೆಹಿಡಿಯಲು ಯುವಕರು ಮುಗಿಬಿದ್ದರು.

ಪ್ರಶಸ್ತಿ ಸ್ವೀಕರಿಸಿ ಭಾಷಣಕ್ಕೆ ನಿಂತಾಗ ಕರತಾಡನ ಮೊಳಗಿತು. ‘ನನಗೆ ಈ ಜಿಲ್ಲೆಗೆ ಬರಲು ತುಂಬಾ ಇಷ್ಟ. ಅಪ್ಪಾಜಿಗೂ ಈ ಜಿಲ್ಲೆಯ ಮೇಲೆ ಅಪಾರ ಪ್ರೀತಿ ಇತ್ತು. ಖುಷಿ ಯಿಂದ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ’ ಎಂದಾಗ ಜನರು ಚಪ್ಪಾಳೆ ತಟ್ಟಿದರು.

‘ಜೈಕಾರ ಗಳಿಸುವುದು ಸುಲಭ. ಆದರೆ, ಅದಕ್ಕಿಂತಲೂ ಜನರ ಪ್ರೀತಿ, ವಿಶ್ವಾಸ ಮುಖ್ಯ. ನಾವೆಲ್ಲರೂ ಜೀವನ ದಲ್ಲಿ ಸಂತೋಷದಿಂದ ಇರಲು ವಿಶ್ವಕರ್ಮರ ಶ್ರಮವೇ ಕಾರಣ. ಸಮಾಜದಲ್ಲಿ ಯಾವುದೇ ಜಾತಿ ಇಲ್ಲ. ಗಂಡು ಮತ್ತು ಹೆಣ್ಣು ಎರಡೇ ಜಾತಿ ಇವೆ. ನಿಮಗೆ ಸಂಪೂರ್ಣ ಬೆಂಬಲ ನೀಡುತ್ತೇನೆ’ ಎಂದರು.
ಕೊನೆಯಲ್ಲಿ ಜನುಮದ ಜೋಡಿ, ಮೈಲಾರಿ, ಜೋಗಿ, ವಜ್ರಕಾಯ ಸಿನಿಮಾದ ಹಾಡು ಹೇಳಿ ರಂಜಿಸಿದರು.

ಆಕರ್ಷಕ ಮೆರವಣಿಗೆ: ನಗರದ ತಾಲ್ಲೂಕು ಕಚೇರಿ ಮೈದಾನದಲ್ಲಿ ಮಹಾಸಭಾದ ಅಧ್ಯಕ್ಷ ಕೆ.ಪಿ. ನಂಜುಂಡಿ ಅವರು ವಿಶ್ವಕರ್ಮ ದೇವನ ಪುತ್ಥಳಿಯನ್ನು ಬೆಳ್ಳಿರಥದಲ್ಲಿ ಕೂರಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ಕಾಳಿಕಾ ದೇವಿ, ಸಿದ್ದಪ್ಪಾಜಿ, ಮೌನೇಶ್ವರ, ವೀರಬ್ರಹ್ಮೇಂದ್ರಸ್ವಾಮಿ ಮತ್ತು ವಿಶ್ವಕರ್ಮರ ಪಂಚಕಸುಬುಗಳಿಂದ ಜಗತ್ತಿಗೆ ಕೊಟ್ಟ ಕೊಡುಗೆಗಳ ಸ್ತಬ್ಧಚಿತ್ರ ಪ್ರದರ್ಶನ ನೋಡುಗರ ಮನ ಸೆಳೆಯಿತು.  ಪೂರ್ಣಕುಂಭ ಹೊತ್ತ ಮಹಿಳೆಯರು ಮತ್ತು ಜನಪದ ಕಲಾ ತಂಡಗಳು ಪಾಲ್ಗೊಂಡಿದ್ದವು. ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT