ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡವಿಸೋಮಾಪುರ ಎಂಬ ಟಗರಿನ ಸಾಮ್ರಾಜ್ಯ

Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಜೈ ಗಣೇಶ, ಗದುಗಿನ ಗಾಮಾ, ಚಾಂಪಿಯನ್ ರಾಮ, ಭಜರಂಗಿ.. ಇವೆಲ್ಲಾ ಈ ವಾರ ತೆರೆ ಕಾಣಲಿರುವ ಚಿತ್ರಗಳ ಹೆಸರಲ್ಲ. ಗದಗದ ಅಡವಿಸೋಮಾಪುರ ಎಂಬ ಪುಟ್ಟ ಗ್ರಾಮದ ಜನತೆ ತಮ್ಮ ನೆಚ್ಚಿನ ಟಗರುಗಳಿಗೆ ಇಟ್ಟಿರುವ ಹೆಸರುಗಳು.

ಅಂದಾಜು ಎರಡು ಸಾವಿರದಷ್ಟು ಜನಸಂಖ್ಯೆ ಇರುವ ಈ ಗ್ರಾಮದಲ್ಲಿ, ಈ ಸಂಖ್ಯೆಯ ಅರ್ಧದಷ್ಟು ಟಗರುಗಳಿವೆ. ಪ್ರತಿ ಮನೆಯಲ್ಲಿ ಏನಿಲ್ಲವೆಂದರೂ ಎರಡು ಮೂರು ಟಗರುಗಳಿವೆ. ಅಷ್ಟೇ ಅಲ್ಲ, ಇದೇ ಊರಿನಲ್ಲಿ ಚಾಂಪಿಯನ್‌ ರಾಮ ಎಂಬ ಟಗರಿನ ಗದ್ದುಗೆಯೂ ಇದೆ. ಸದ್ಯದಲ್ಲೇ ಟಗರಿನ ದೇವಸ್ಥಾನ ನಿರ್ಮಿಸುವ ಯೋಜನೆ ಗ್ರಾಮಸ್ಥರಲ್ಲಿದೆ.

ಶತಮಾನಗಳ ನಂಟು: ಅಡವಿಸೋಮಾಪುರ ಗ್ರಾಮಕ್ಕೂ ಟಗರಿಗೂ ಶತಮಾನಗಳ ನಂಟು. ‘ಬೀರಲಿಂಗೇಶ್ವರ’ ಗ್ರಾಮದ ದೇವರು. ಬೀರಲಿಂಗೇಶ್ವರನಿಗೆ ಟಗರು ಎಂದರೆ ಅಚ್ಚುಮೆಚ್ಚು. ಗ್ರಾಮಸ್ಥರಿಗೂ ಅಷ್ಟೇ ಇಷ್ಟ. ಹೀಗಾಗಿ ಪ್ರತಿ ವರ್ಷ ಇಲ್ಲಿ ಜಾತ್ರೆಯ ಸಂದರ್ಭದಲ್ಲಿ ಬೃಹತ್‌ ಟಗರಿನ ಕಾಳಗ ನಡೆಯುತ್ತದೆ.

ಹಾವೇರಿ, ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಹೊಸಪೇಟೆ, ರಾಯಚೂರು, ಕಲ್ಬುರ್ಗಿ ಸೇರಿದಂತೆ ಇಡೀ ಉತ್ತರ ಕರ್ನಾಟಕ ಭಾಗದ ಟಗರುಗಳು ಇಲ್ಲಿ ಕಣಕ್ಕಿಳಿಯುತ್ತವೆ.ಅಷ್ಟೇ ಅಲ್ಲ, ಈ ಗ್ರಾಮದ ಟಗರಿಗೆ  ದೇಶದಾದ್ಯಂತ ಬೇಡಿಕೆ ಇದೆ.

ಸ್ಪರ್ಧೆಗಾಗಿ ಸಾಕಲು ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡಿನಿಂದಲೂ ಜನರು ಬಂದು ಇಲ್ಲಿಂದ ಟಗರುಗಳನ್ನು ಖರೀದಿಸುತ್ತಾರೆ. ಕಾಳಗದ ಟಗರಿಗೆ ₹50 ಸಾವಿರದಿಂದ ₹1 ಲಕ್ಷದವರೆಗೆ ಮಾರಾಟ ಮಾಡಲಾಗುತ್ತದೆ. ಟಗರು ಸಾಕುವವರು ಆರ್ಥಿಕವಾಗಿ ಸದೃಢವಾಗುತ್ತಿದ್ದಾರೆ. ಹೀಗಾಗಿ ನಮ್ಮ ಗ್ರಾಮ ಟಗರುಗಳ ಸಾಮ್ರಾಜ್ಯ ಎನ್ನುತ್ತಾರೆ ಗ್ರಾಮಸ್ಥ ರಾಮಣ್ಣ ಪುರದ. 

ಗಾಮಾನ ಗದ್ದುಗೆ: ಟಗರಿನ ಮಾಲೀಕರು ಅಡವಿ ಸೋಮಾಪುರ ಗ್ರಾಮಕ್ಕೆ ಬಂದು ಇಲ್ಲಿರುವ ‘ಚಾಂಪಿಯನ್‌ ರಾಮ’ನ ಗದ್ದುಗೆಗೆ ಪೂಜೆ ಮಾಡಿಸಿಕೊಂಡು ಹೋಗುತ್ತಾರೆ.ಹೀಗೆ ಮಾಡಿದರೆ ಸ್ಪರ್ಧೆಯಲ್ಲಿ ಭಾಗವಹಿಸುವ ಟಗರು ವಿಜಯಶಾಲಿಯಾಗುತ್ತದೆ ಎಂಬ ನಂಬಿಕೆ ಇದೆ. ಚಾಂಪಿಯನ್‌ ರಾಮನ ಗದ್ದುಗೆ ಕಥೆಯೂ ಅಷ್ಟೇ ರೋಚಕವಾದುದು.

ಗದುಗಿನ ಜಮ್ಮಾ ಮಸೀದಿ ಬಳಿಯ ಬಾಬುಸಾ ಬಾಂಡಗೆ ಅವರು ಸಾಕಿದ್ದ ‘ರಾಮ’ ಎಂಬ ಟಗರು, ಎಲ್ಲಿ ಕಾಳಗ ನಡೆದರೂ ಅಲ್ಲೆಲ್ಲ ವಿಜಯಶಾಲಿಯಾಗಿ ಚಾಂಪಿಯನ್‌ ಪಟ್ಟವನ್ನು ವರ್ಷಗಳಿಂದ ತನ್ನ ಬೆನ್ನಿಗೆ ಕಟ್ಟಿಕೊಂಡಿತ್ತು ಸೋಲಿಲ್ಲದ ಸರ್ದಾರ ಆಗಿದ್ದ ರಾಮನಿಗೆ ಊರಿನ ಹಿರಿಯರು ಪ್ರೀತಿಯಿಂದ ‘ಗದುಗಿನ ಗಾಮಾ’ ಎಂಬ ಹೆಸರಿಟ್ಟು ಕರೆಯಲು ಆರಂಭಿಸಿದರು.

ಗಾಮಾನಿಗೆ ವಯಸ್ಸಾಗುತ್ತಾ ಬಂದಂತೆ, ಸಮರ್ಥ ಉತ್ತರಾಧಿಕಾರಿಯನ್ನು ತಯಾರು ಮಾಡುವ ಉದ್ದೇಶದಿಂದ, ವಂಶಾಭಿವೃದ್ಧಿಯ ಮಹತ್ತರ ಜವಾಬ್ದಾರಿಯನ್ನು ವಹಿಸಿ ಅದನ್ನು ಅಡವಿಸೋಮಾಪುರ ಗ್ರಾಮಕ್ಕೆ ತಂದು ಬಿಡಲಾಯಿತು. ಆದರೆ, ದುರದೃಷ್ಟವಶಾತ್‌ ಇಲ್ಲಿಗೆ ಬಂದ ಮೂರು ತಿಂಗಳು ಕಳೆಯುವುದರೊಳಗೆ ರಾಮ ಮೃತಪಟ್ಟಿತು.

ಜೀವಿತಾವಧಿಯಲ್ಲಿ ಮಹತ್ತರ ಸಾಧನೆಗಳನ್ನು ಮಾಡಿದ್ದ ಗಾಮಾನ ನೆನಪಿಗೆ ಗ್ರಾಮಸ್ಥರು ಬೀರಲಿಂಗೇಶ್ವರ ದೇವಸ್ಥಾನದ ಎದುರು ಗಾಮಾನ ಗದ್ದುಗೆ ನಿರ್ಮಿಸಿದರು. ಟಗರಿನ ದೇವಸ್ಥಾನ ನಿರ್ಮಾಣಕ್ಕೆ ಜಾಗವನ್ನೂ ಬಿಡಲಾಯಿತು.

ಹೀಗಿದೆ ತಯಾರಿ
ಒಂದೂವರೆ ವರ್ಷದಲ್ಲಿ ಟಗರು ಕಾಳಗದಲ್ಲಿ ಭಾಗವಹಿಸುವ ಮಟ್ಟಕ್ಕೆ ಬೆಳೆಯುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಟಗರಿಗೆ ವಿಶೇಷ ಉಪಚಾರದ ಮೂಲಕ ಪೈಲ್ವಾನನಂತೆ ಸಿದ್ಧಗೊಳಿಸಲಾಗುತ್ತದೆ. ದಿನಕ್ಕೆ 4 ಜವಾರಿ ಮೊಟ್ಟೆ, 2 ಲೀಟರ್‌ ಹಾಲು, 1ಕೆ.ಜಿಯಷ್ಟು ನೆನೆಸಿದ ಹುರಳಿ, 250 ಗ್ರಾಂ ಶೇಂಗಾ, ಕುಸುಬಿ, ಸೂರ್ಯಕಾಂತಿ ಬೀಜ ಇದು ಟಗರಿನ ದೈನಂದಿನ ಮೆನು. ಇಷ್ಟು ಆಹಾರ ಪೂರೈಸಲು ತಿಂಗಳಿಗೆ  3 ರಿಂದ 4 ಸಾವಿರ ರೂಪಾಯಿ ಖರ್ಚಾಗುತ್ತದೆ. ಟಗರು ಸಾಕಲು ಆಸಕ್ತಿಯಷ್ಟೇ ಇದ್ದರೆ ಸಾಲದು ಆರ್ಥಿಕವಾಗಿ ಶಕ್ತರಿರಬೇಕು. ನಿತ್ಯ 5 ಕಿ.ಮೀ ವಾಯುವಿಹಾರವೂ ಕಡ್ಡಾಯ.

***
ಕಳೆದ 4 ದಶಕಗಳಿಂದ ಟಗರು ಸಾಕುತ್ತಿದ್ದೇನೆ, ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೇನೆ. ಸದ್ಯ ಜೈ ಗಣೇಶ ಹೆಸರಿನ ನಾಲ್ಕನೇ ಟಗರು ಸಾಕುತ್ತಿದ್ದೇನೆ. ಬಹುಮಾನಕ್ಕಾಗಿ ಅಲ್ಲ, ಈ ಹವ್ಯಾಸದಿಂದ ಲಭಿಸುವ ಖುಷಿಗೆ ಬೆಲೆ ಕಟ್ಟಲಾಗುವುದಿಲ್ಲ.
–ರಮೇಶ ವಾಲ್ಮೀಕಿ, ಟಗರಿನ ಮಾಲೀಕ  ಅಡವಿಸೋಮಾಪುರ ಗ್ರಾಮ
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT