ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಗನ ಸೇರಿದ ಪಿಇಎಸ್‌ಐಟಿಯ ಪೈಸ್ಯಾಟ್‌

ಉಪಗ್ರಹ ಹಾರಿಸಿ ಸಂಭ್ರಮಿಸಿದ ಪಿಇಎಸ್ ವಿದ್ಯಾರ್ಥಿಗಳು
Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪೈಸ್ಯಾಟ್‌’ ಉಪಗ್ರಹ 670 ಕಿ.ಮೀ ಎತ್ತರದಲ್ಲಿ ಅಂತರಿಕ್ಷ ಕಕ್ಷೆಗೆ ಸೇರುತ್ತಿದ್ದಂತೆ ಪಿಇಎಸ್‌ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತ್ತು.

ಹೌದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸೋಮವಾರ ಒಮ್ಮೆಗೆ 8 ವಿವಿಧ ಕಕ್ಷೆಗೆ ಉಪಗ್ರಹ ಉಡಾವಣೆ ಮಾಡುವ ಮೂಲಕ ಸಾಧನೆ ತೋರಿದೆ. ಅವುಗಳಲ್ಲಿ ಒಂದಾದ ನಗರದ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ‘ಪೈಸ್ಯಾಟ್‌’ ಉಪಗ್ರಹ ಯಶಸ್ವಿಯಾಗಿ ಕಕ್ಷೆಗೆ ಸೇರಿದೆ.  

ಸೋಮವಾರ ಬೆಳಿಗ್ಗೆ 9.15ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಉಡಾವಣೆಯಾದ ‘ಪೈಸ್ಯಾಟ್‌’ ಉಪಗ್ರಹವನ್ನು ಪಿಎಸ್ಎಲ್‌ವಿ 11.15ಕ್ಕೆ ಕಕ್ಷೆ ಸೇರಿದೆ. ‘ಇಂಡೋನೇಷ್ಯಾದಲ್ಲಿನ ಇಸ್ರೊ ಕಚೇರಿಗೆ ಸಂಜೆ 4.30ಕ್ಕೆ  ಉಪಗ್ರಹದ ಸಂದೇಶ ದೊರೆತಿದೆ’ ಎಂದು ಉಪಗ್ರಹ ಸಿದ್ಧತೆಗೆ ನೆರವಾದ ವಿಜ್ಞಾನಿ ಸಾಂಬಶಿವ ರಾವ್‌ ತಿಳಿಸಿದರು.

ಐದು ವರ್ಷಗಳ ಕಾಲ ಶ್ರಮ ವಹಿಸಿ ವಿದ್ಯಾರ್ಥಿಗಳು ‘ಪೈಸ್ಯಾಟ್’ ಉಪಗ್ರಹ ಸಿದ್ಧಪಡಿಸಿದ್ದಾರೆ. ಇಸ್ರೋ ನಿವೃತ್ತ ವಿಜ್ಞಾನಿಗಳಾದ ಸಾಂಬಶಿವರಾವ್, ಅಗರ್‌ವಾಲ್ ಅವರ  ಮಾರ್ಗದರ್ಶನದಲ್ಲಿ ಈ ಉಪಗ್ರಹ ಸಿದ್ಧಪಡಿಸಲಾಗಿದೆ.

‘ಇದು ಪ್ರಾಯೋಗಿಕ ಉಪಗ್ರಹವಾಗಿರುವುದರಿಂದ ಯಾವುದೇ ನಿರ್ದಿಷ್ಟ ಉದ್ದೇಶವಿಲ್ಲ. ಈ ಉಪಗ್ರಹದಲ್ಲಿ ಕ್ಯಾಮೆರಾ ಅಳವಡಿಸಲಾಗಿದ್ದು, ಮಂಗಳವಾರ ಅದು ಚಿತ್ರಗಳನ್ನು ರವಾನಿಸಲಿದೆ’ ಎಂದು ವಿದ್ಯಾರ್ಥಿ ನಿತಿನ್‌ ತಿಳಿಸಿದರು.

ಪಿಇಎಸ್‌ ವಿವಿ ಕುಲಪತಿ ಕೆ.ಎನ್‌.ಬಿ. ಮೂರ್ತಿ ಅವರು, ‘ಪೈಸ್ಯಾಟ್‌ ಯಶಸ್ಸಿನಿಂದ ನಮ್ಮ ಆತ್ಮವಿಶ್ವಾಸ ಹೆಚ್ಚಿದೆ. ಈ ಉಪಗ್ರಹಕ್ಕಾಗಿ ನಾವು ಕ್ಯಾಮೆರಾ ಒಂದನ್ನು ಬಿಟ್ಟರೆ, ಎಲ್ಲವನ್ನೂ ಇಲ್ಲಿಯೇ ತಯಾರಿಸಿದ್ದೇವೆ. ಹಾಗಾಗಿ ನಿರ್ದಿಷ್ಟ ಉದ್ದೇಶದ ಉಪಗ್ರಹ ಸಿದ್ಧಪಡಿಸಲು ಯೋಜನೆ ರೂಪಿಸಿದ್ದೇವೆ. ಅಲ್ಲದೆ ಪ್ರತಿ ಎರಡು ವರ್ಷಕ್ಕೊಮ್ಮೆ ಉಪಗ್ರಹ ಸಿದ್ಧಪಡಿಸುವ ಗುರಿ ಹೊಂದಿದ್ದೇವೆ’ ಎಂದರು.

ಅಪ್ಲಿಕೇಷನ್‌ಗಳಿಗೆ ಬಳಕೆ: ದೂರ ಸಂವೇದಿ ಅಪ್ಲಿಕೇಷನ್‌ಗಳಿಗಾಗಿ ಸಿದ್ಧಪಡಿಸಿರುವ ‘ಪೈಸ್ಯಾಟ್‌’ 5.25 ಕೆ.ಜಿ ತೂಕ ಇದೆ. ಇದರಲ್ಲಿ 13 ವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗಲಿದೆ. ಜತೆಗೆ ‘ವರ್ತನೆ ನಿರ್ಣಯ ಮತ್ತು ನಿಯಂತ್ರಣ ವ್ಯವಸ್ಥೆ’ (ಎಡಿಸಿಎಸ್‌), ದೂರ ಮಾಪನ ವ್ಯವಸ್ಥೆ, ದೂರಸಂಪರ್ಕ ನಿರ್ದೇಶನ ವ್ಯವಸ್ಥೆ, ಉಷ್ಣ ವಿಶ್ಲೇಷಣೆ ವ್ಯವಸ್ಥೆ, ವಿದ್ಯುತ್‌ ಸಂಗ್ರಹ ವ್ಯವಸ್ಥೆ ಇದೆ.

ಈ ಉಪಗ್ರಹ ಒಂದು ವರ್ಷ ಕಕ್ಷೆಯಲ್ಲಿ ಸುತ್ತುತ್ತದೆ. ಉಪಗ್ರಹ ನಿರ್ವಹಣೆಗೆ ವಿವಿ ಆವರಣದಲ್ಲಿ ‘ಪೈಸ್ಯಾಟ್‌’ ನಿಯಂತ್ರಿಸಲು  ‘ಎಸ್‌’ ಬ್ಯಾಂಡ್‌ ಭೂ ನಿಯಂತ್ರಣ ಕೊಠಡಿ ನಿರ್ಮಿಸಲಾಗಿದೆ. ಆ್ಯಂಟೆನಾವನ್ನು ಅಳವಡಿಸಲಾಗಿದೆ.

‘ಎಸ್‌’ ಬ್ಯಾಂಡ್‌ ರೇಡಿಯೊ ಆವರ್ತನ ಸಂವಹನ ವ್ಯವಸ್ಥೆ ಹೊಂದಿರುವ ದೇಶದ ಮೊದಲ ಉಪಗ್ರಹ ಇದಾಗಿದೆ. 3 ಮೆಗಾ ಪಿಕ್ಸೆಲ್‌ನ 90 ಮ್ಯಾಟರ್‌ ರೆಸಲ್ಯೂಶನ್‌ ಸಾಮರ್ಥ್ಯದ ಕ್ಯಾಮೆರಾವನ್ನು ಇದರಲ್ಲಿ ಅಳವಡಿಸಲಾಗಿದೆ. ಇದು ಭೂಮಿಯ ಚಿತ್ರಗಳನ್ನು ತೆಗೆದು ನಿಯಂತ್ರಣ ಕೊಠಡಿಗೆ ರವಾನಿಸುತ್ತದೆ.

‘ಪೈಸ್ಯಾಟ್‌’ ರೂಪುಗೊಂಡ ಬಗೆ: ಬಾಹ್ಯಾಕಾಶ ವಿಜ್ಞಾನ ಮತ್ತು ಉಪಗ್ರಹ ನಿರ್ಮಾಣದ ಬಗ್ಗೆ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸುವ ಉದ್ದೇಶದಿಂದ ಪಿಇಎಸ್‌ 2011ರಲ್ಲಿ ಕೈಗೆತ್ತಿಕೊಂಡ ಈ ವಿದ್ಯಾರ್ಥಿ ಉಪಗ್ರಹ ಯೋಜನೆಗೆ ಇತರೆ ನಾಲ್ಕು ಎಂಜಿನಿಯರಿಂಗ್‌ ಕಾಲೇಜುಗಳ ಸುಮಾರು 250 ವಿದ್ಯಾರ್ಥಿಗಳು ಕೈಜೋಡಿಸಿದ್ದಾರೆ.

ಪಿಇಎಸ್‌ ಉಪಗ್ರಹದ ಪ್ರಾಥಮಿಕ ವಿನ್ಯಾಸದೊಂದಿಗೆ ಇಸ್ರೊಗೆ 2012ರಲ್ಲಿ ಪ್ರಸ್ತಾವ ಸಲ್ಲಿಸಿತ್ತು. ಇಸ್ರೊ ಅನುಮತಿ ಬಳಿಕ ಉಡಾವಣೆ ಮತ್ತು ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಯಿತು. ಹೀಗೆ ಉಪಗ್ರಹ  ವಿನ್ಯಾಸ ಹಾಗೂ ಅಭಿವೃದ್ಧಿಪಡಿಸುವ ಕೆಲಸಕ್ಕೆ ಚಾಲನೆ ದೊರೆಯಿತು. ಪ್ರತಿ ಆರು ತಿಂಗಳಿಗೊಮ್ಮೆ ಇಸ್ರೊ ವಿಜ್ಞಾನಿಗಳು ಈ ಉಪಗ್ರಹವನ್ನು ಪರೀಕ್ಷಿಸುವ ಜತೆಗೆ ವಿದ್ಯಾರ್ಥಿಗಳಿಗೆ ತಾಂತ್ರಿಕ ಮಾರ್ಗದರ್ಶನ ಮಾಡುತ್ತಿದ್ದರು.

ಇಸ್ರೊ ರಚಿಸಿದ್ದ ಸಮಿತಿ ಸದಸ್ಯರು ‘ಪೈಸ್ಯಾಟ್‌’ನ್ನು ಉಪಗ್ರಹ ಕೇಂದ್ರದಲ್ಲಿ ಕಂಪನ ಮತ್ತು ಉಷ್ಣ ವಿಶ್ಲೇಷಣೆ ಸೇರಿದಂತೆ ಅನೇಕ ಪರೀಕ್ಷೆಗಳಿಗೆ ಒಳಪಡಿಸಿ ಉಡಾವಣೆಗೆ ಅನುಮತಿ ನೀಡಿತ್ತು. ಏಪ್ರಿಲ್‌ 20ರಂದು ‘ಪೈಸ್ಯಾಟ್‌’ ಉಪಗ್ರಹವನ್ನು ಉಡಾವಣೆಗಾಗಿ ವಿವಿ ಇಸ್ರೊಗೆ ಹಸ್ತಾಂತರಿಸಿತ್ತು.
ಉಪಗ್ರಹ ಯೋಜನೆಗೆ ಚೆನ್ನೈನ ಎಸ್‌ಕೆಆರ್‌ ಎಂಜಿನಿಯರಿಂಗ್ ಕಾಲೇಜು ಮತ್ತು ವೆಲ್‌ಟೆಕ್‌ ಯೂನಿರ್ವಸಿಟಿ, ಸೇಲಂನ ಸೋನಾ ತಾಂತ್ರಿಕ ಶಿಕ್ಷಣ ಕಾಲೇಜು, ಕೇರಳದ ತ್ರಿಶ್ಯೂರ್‌ನ ನೆಹರೂ ಎಂಜಿನಿಯರಿಂಗ್‌ ಕಾಲೇಜು ಹಾಗೂ ಎಂಜಿನಿಯರ್‌ ಸಂಸ್ಥೆ ಸಹಭಾಗಿತ್ವವಿದೆ.

ಈ ಉಪಗ್ರಹದ ವಿಶೇಷತೆಗಳು
* ಭೂಮಿಯಿಂದ 670 ಕಿ.ಮೀ ಎತ್ತರದಲ್ಲಿ ಛಾಯಚಿತ್ರಗಳನ್ನು ಸೆರೆ ಹಿಡಿಯಲಿದೆ

* 90 ಮ್ಯಾಟರ್‌ ರೆಸಲ್ಯೂಷನ್‌ ಕ್ಯಾಮೆರಾ ಅಳವಡಿಕೆ
* 5.25 ಕೆ.ಜಿ. ತೂಕದ ಪೈಸ್ಯಾಟ್​ ತಯಾರಿಗೆ ₹ 1.5 ಕೋಟಿ ವೆಚ್ಚ
* ಈ ಉಪಗ್ರಹ ಒಂದು ವರ್ಷ ಭೂಕಕ್ಷೆಯಲ್ಲಿ ಸುತ್ತು ಹೊಡೆಯಲಿದೆ

* ಐದು ವರ್ಷಗಳಿಂದ ಪಟ್ಟ ಪರಿಶ್ರಮಕ್ಕೆ ಇಂದು ಸಾರ್ಥಕತೆ ದೊರೆತಿದೆ. ಇನ್ನೂ ಹೆಚ್ಚು ಹೆಚ್ಚು ಉಪಗ್ರಹ ತಯಾರಿಸುವ ಮನೋಬಲ ನಮ್ಮಲ್ಲಿ ಬಂದಿದೆ
–ಕೆ.ಎನ್‌.ಬಿ. ಮೂರ್ತಿ,
ಪಿಇಎಸ್‌ ವಿಶ್ವವಿದ್ಯಾಲಯದ ಕುಲಪತಿ

* ಉಡಾವಣೆಯ ಸಮಯಕ್ಕಾಗಿ ಕಾತರದಿಂದ ಕಾಯುತ್ತಿದ್ದೆವು. ಭಯ ಮತ್ತು ಖುಷಿಯ ಮಿಶ್ರಣದ ಭಾವನೆ ಅದಾಗಿತ್ತು. ಉಪಗ್ರಹ ಯಶಸ್ವಿಯಾಗಿ ಕಕ್ಷೆ ಸೇರಿದ್ದು ನಮ್ಮ ಜೀವನದಲ್ಲಿ ಮರೆಯಲಾಗದ ಕ್ಷಣ

–ನಿತಿನ್‌,  ಪಿಇಎಸ್‌ ಕಾಲೇಜು ವಿದ್ಯಾರ್ಥಿ

* ಅಭಿನಂದನೆ
ಪಿಇಎಸ್‌ ವಿಶ್ವವಿದ್ಯಾಲಯದ ಉದ್ಯಮಶೀಲತೆ ಮತ್ತು ಕ್ರಿಯಾಶೀಲ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ
–ನರೇಂದ್ರ ಮೋದಿ,  ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT