ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ತು ಸೀಳಿ ಅತ್ತೆ– ಸೊಸೆ ಬರ್ಬರ ಹತ್ಯೆ

ಮಿಲ್ಲರ್ಸ್ ರಸ್ತೆ ಬಳಿಯ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳ ಕೃತ್ಯ
Last Updated 26 ಸೆಪ್ಟೆಂಬರ್ 2016, 19:36 IST
ಅಕ್ಷರ ಗಾತ್ರ

ಬೆಂಗಳೂರು: ವಸಂತನಗರದ ಸಮೀಪದ ಮಿಲ್ಲರ್ಸ್ ರಸ್ತೆ ಬಳಿಯ ಮನೆಯೊಂದಕ್ಕೆ ಸೋಮವಾರ ನುಗ್ಗಿದ್ದ ದುಷ್ಕರ್ಮಿಗಳು, ಸಂತೋಷಿ ಬಾಯಿ (60) ಹಾಗೂ ಅವರ ಸೊಸೆ ಲತಾ (39) ಎಂಬುವರ ಕತ್ತು ಸೀಳಿ ಹತ್ಯೆಗೈದಿದ್ದಾರೆ.

‘ರಾಜಸ್ತಾನ ಮೂಲದ ಸಂತೋಷಿಬಾಯಿ ಹಾಗೂ ಲತಾ ಅವರು ಕುಟುಂಬದೊಂದಿಗೆ ವಾಸವಿದ್ದರು. ಸಂತೋಷಿಬಾಯಿ ಅವರ ಪತಿ ಸಂಪತ್‌ರಾಜ್‌ ದೇವ್ರಾ, ರಾಸಾಯನಿಕ ಅಂಗಡಿ ಇಟ್ಟುಕೊಂಡಿದ್ದಾರೆ. ಲತಾ ಅವರ ಪತಿ ದಿನೇಶ್‌ ಸಹ ಅಂಗಡಿಯ ಪಾಲುದಾರರಾಗಿದ್ದಾರೆ. ಅವರಿಗೆ ಮೂವರು ಮಕ್ಕಳಿದ್ದಾರೆ’ ಎಂದು ಹೈಗ್ರೌಂಡ್ಸ್ ಠಾಣೆಯ ಅಧಿಕಾರಿ ತಿಳಿಸಿದರು.

‘ಎಂದಿನಂತೆ ಬೆಳಿಗ್ಗೆ 6ಕ್ಕೆ ಸಂಪತ್‌ರಾಜ್‌ ಹಾಗೂ ದಿನೇಶ್‌ ಅಂಗಡಿಗೆ ಹೋಗಿದ್ದರು.ಇಬ್ಬರು ಪುತ್ರಿಯರು ಸಹ ಶಾಲೆಗೆ ಹೋಗಿದ್ದರು.   ಈ ವೇಳೆ ಸಂತೋಷಿ ಬಾಯಿ ಹಾಗೂ ಲತಾ ಮಾತ್ರ ಮನೆಯಲ್ಲಿದ್ದರು’.

‘ಬೆಳಿಗ್ಗೆ 8ರ ಸುಮಾರಿಗೆ ಮನೆಯೊಳಗೆ ನುಗ್ಗಿದ್ದರು ಎನ್ನಲಾದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಅತ್ತೆ– ಸೊಸೆ ಕತ್ತು ಸೀಳಿದ್ದರು. ಸ್ಥಳದಲ್ಲೇ ಕುಸಿದು ಬಿದ್ದ ಅವರಿಬ್ಬರು ತೀವ್ರ ರಕ್ತಸ್ರಾವದಿಂದ ಅಸುನೀಗಿದ್ದಾರೆ’ ಎಂದು ಮಾಹಿತಿ ನೀಡಿದರು.

ಶಾಲೆಯಿಂದ ಬಂದ ಬಳಿಕ ಕೃತ್ಯ ಬೆಳಕಿಗೆ: ಶಾಲೆಗೆ ಹೋಗಿದ್ದ ಲತಾ ಅವರ 10 ವರ್ಷದ ಮಗಳು, ಶಾಲೆ ಮುಗಿಸಿ ಬೆಳಿಗ್ಗೆ 11ರ ಸುಮಾರಿಗೆ ಮನೆಗೆ ಬಂದಿದ್ದಳು. ಮನೆಯೊಳಗೆ ಹೋಗುತ್ತಿದ್ದಂತೆ ತಾಯಿ ಹಾಗೂ ಅಜ್ಜಿ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಚೀರಾಡತೊಡಗಿದ್ದಳು. ಅದನ್ನು ಗಮನಿಸಿದ ಸ್ಥಳೀಯರೊಬ್ಬರು ಕಿಟಕಿಯಲ್ಲಿ ನೋಡಿದಾಗ ಕೊಲೆಯಾಗಿದ್ದು ಗೊತ್ತಾಯಿತು. ಬಳಿಕ ಸಂಪತ್‌ರಾಜ್‌ ಹಾಗೂ ದಿನೇಶ್‌  ಅವರಿಗೆ ವಿಷಯ ಮುಟ್ಟಿಸಿದರು’ ಎಂದು ತನಿಖಾಧಿಕಾರಿ ತಿಳಿಸಿದರು. 

ಮುಖ, ಕತ್ತಿನಲ್ಲಿ ಗಾಯ: ಘಟನಾ ಸ್ಥಳಕ್ಕೆ ನಗರ ಪೊಲೀಸ್‌ ಕಮಿಷನರ್‌್ ಎನ್‌.ಎಸ್‌.ಮೇಘರಿಕ್‌, ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಚರಣ್‌ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಚರಣ್‌ ರೆಡ್ಡಿ, ‘ಇಬ್ಬರ ಮುಖದ ಮೇಲೆ ಪರಚಿದ ಗಾಯಗಳಾಗಿದ್ದು, ಕತ್ತು ಸೀಳಲಾಗಿದೆ. ಮನೆಯ ಮುಖ್ಯಬಾಗಿಲಿನ ಹತ್ತಿರದಲ್ಲೇ ಅವರಿಬ್ಬರ ಶವ ಬಿದ್ದಿದೆ’ ಎಂದು ತಿಳಿಸಿದರು.

‘ಕೊರಳಲ್ಲಿ ಆಭರಣಗಳಿವೆ. ಆದರೆ ಮನೆಯಲ್ಲಿದ್ದ ಆಭರಣಗಳು ಕಳುವಾಗಿವೆ ಎಂದು ಸಂಬಂಧಿಕರು ಹೇಳಿಕೆ ನೀಡಿದ್ದಾರೆ. ಕೊಲೆ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲನೆ ನಡೆಸಲಾಗುತ್ತಿದ್ದು, ಈಗಾಗಲೇ ಕೆಲ ಸುಳಿವುಗಳು ಲಭ್ಯವಾಗಿವೆ’ ಎಂದು ಮಾಹಿತಿ ನೀಡಿದರು.

ಪರಿಚಯಸ್ಥರ ಕೈವಾಡ ಶಂಕೆ: ‘ಘಟನಾ ಸ್ಥಳ ಪರಿಶೀಲಿಸಿದಾಗ ಪರಿಚಯಸ್ಥ ವ್ಯಕ್ತಿಗಳೇ ಈ ಕೃತ್ಯ ಎಸಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ’ ಎಂದು ತನಿಖಾಧಿಕಾರಿ ತಿಳಿಸಿದರು.

‘ಮನೆಯ ಎದುರು ಗೇಟ್‌ ಇದೆ. ಅದನ್ನು ತೆಗೆದು ಒಳಹೋಗುವಾಗ ಶಬ್ದ ಬರುತ್ತದೆ. ಸ್ಥಳಕ್ಕೆ ಹೋದಾಗ ಆ ಗೇಟ್‌ ಅರ್ಧ ಮಾತ್ರ ತೆಗೆದಿತ್ತು. ಜತೆಗೆ  ಮುಖ್ಯ ಬಾಗಿಲು ಸಹ ಅರ್ಧ ತೆಗೆದಿತ್ತು. ಈ ಅಂಶಗಳನ್ನು ಗಮನಿಸಿದಾಗ ಕೊಲೆಯಾದ ಮಹಿಳೆಯರಿಗೆ ಪರಿಚಯ ಇರುವವರೇ ಮನೆಯೊಳಗೆ ಹೋಗಿರಬಹುದು’ ಎಂದು ಅವರು ತಿಳಿಸಿದರು.

ಕೊಠಡಿಯಲ್ಲಿತ್ತು ಒಂದು ವರ್ಷದ ಮಗು: ‘ಲತಾ ಅವರಿಗೆ ಹತ್ತು ವರ್ಷ ಹಾಗೂ ಮೂರು ವರ್ಷದ ಪುತ್ರಿಯರು ಮತ್ತು ಒಂದು ವರ್ಷದ ಗಂಡು ಮಗುವಿದೆ. ಪುತ್ರಿಯರು ಬೆಳಿಗ್ಗೆ ಶಾಲೆಗೆ ಹೋಗಿದ್ದರು. ಮಗು ಮಾತ್ರ ಕೊಠಡಿಯ ತೊಟ್ಟಿಲಿನಲ್ಲಿ ಮಲಗಿತ್ತು’ ಎಂದು ತನಿಖಾಧಿಕಾರಿ ತಿಳಿಸಿದರು.

‘ಹತ್ಯೆ ನಡೆದ ಗಳಿಗೆಯಲ್ಲೂ ಮಗು ತೊಟ್ಟಿಲಿನಲ್ಲಿತ್ತು. ಅಕ್ಕ ಮನೆಗೆ ಬಂದು ಚೀರಾಡಿದಾಗಲೇ ಎಚ್ಚರವಾಗಿ ಅದು ಸಹ ಅಳಲಾರಂಭಿಸಿತ್ತು. ಮನೆಗೆ ಬಂದ ದಿನೇಶ್‌ ಮಗುವನ್ನು ಎತ್ತಿಕೊಂಡು ಸಮಾಧಾನಪಡಿಸಿದರು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT