ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಪ್ರಾರ್ಥನೆಯ ಸಮಯ...

Last Updated 27 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

‘ಅಯ್ಯೋ ದೇವರೇ’, ‘ದೇವರೇ ಕಾಪಾಡಪ್ಪಾ’ - ಇವೆಲ್ಲ ನಾವು ದಿನನಿತ್ಯ ಆಡುಮಾತಿನಲ್ಲಿ ಉಪಯೋಗಿಸುವ ನುಡಿಗಟ್ಟುಗಳು. ಪ್ರತಿದಿನ ದೇವರಿಗೆ ನಮಸ್ಕಾರ ಮಾಡುವ ಅಭ್ಯಾಸ ನಮ್ಮಲ್ಲಿ ಹೆಚ್ಚಿನವರಿಗೆ ಇರುತ್ತದೆ. ದೇವರಿಗೆ ದೀಪವನ್ನು ಹಚ್ಚಿಯೇ ಯಾವುದೇ ಕೆಲಸಕ್ಕೂ ತೊಡಗುವುದು ಬಹಳಷ್ಟು ಜನರಿಗೆ ಇರುವ ಅಭ್ಯಾಸ. ಕೆಲವು ಧರ್ಮಗಳಲ್ಲಂತೂ ಪ್ರಾರ್ಥನೆಯ ಅಭ್ಯಾಸವನ್ನು ಕಟ್ಟುನಿಟ್ಟಾಗಿ ಮಾಡಿಸುತ್ತಾರೆ, ವೇಳಾಪಟ್ಟಿಯಿಟ್ಟು ಮಾಡಿಸುತ್ತಾರೆ.

ಹಾಗಿದ್ದರೆ ಪ್ರಾರ್ಥನೆಗೆ ನಮ್ಮ ದಿನಚರಿಯಲ್ಲಿ ಪ್ರಾಮುಖ್ಯ ನೀಡುವ ಅಗತ್ಯವಿದೆಯೇ? ದೇವಸ್ಥಾನಕ್ಕೆ/ಇನ್ಯಾವುದೇ ಪೂಜಾಸ್ಥಳಕ್ಕೆ ಭೇಟಿ ನೀಡುವಾಗ ಅದರಿಂದ ನಮಗೆ ನಾವು ನಿರೀಕ್ಷಿಸಿದ (ದೇವರು ಪಾಸು ಮಾಡಿಸಲಿ / ಕಾಯಿಲೆ ಗುಣ ಮಾಡಲಿ ಇತ್ಯಾದಿ ಇತ್ಯಾದಿ) ‘ಲಾಭ’ವನ್ನು ಬದಿಗಿರಿಸಿ, ನಮ್ಮ ಆರೋಗ್ಯಕ್ಕೆ ಅದರಿಂದ ಉಪಯೋಗವಾಗಬಹುದೇ? ಮನೋವಿಜ್ಞಾನ ಈ ಬಗ್ಗೆ ಏನೆಂದು ವಿವರಿಸುತ್ತದೆ?

ಪ್ರಾರ್ಥನೆಗೂ ಧರ್ಮಕ್ಕೂ ವ್ಯತ್ಯಾಸವಿದೆ. ‘ಪ್ರಾರ್ಥನೆ’ ಎನ್ನುವುದು ಧಾರ್ಮಿಕ ಪದ್ಧತಿಗಳಿಗೆ ಅಥವಾ ಮೊದಲಿನಿಂದ ಬಂದ ಸಂಪ್ರದಾಯಗಳಿಗೇ ಸಂಬಂಧಿಸಿರಬೇಕೆಂದಿಲ್ಲ.‘ಪ್ರಾರ್ಥನೆ’ಯ ಬಗ್ಗೆ ಹಲವಾರು ಸಂಶೋಧನೆಗಳು ಕೇಂದ್ರಿತವಾಗಿರುವುದು ಧಾರ್ಮಿಕ ಆಚರಣೆಗಳ, ಸಾಮೂಹಿಕ ಪ್ರಾರ್ಥನೆಗಳ ಬದಲು, ವ್ಯಕ್ತಿಗತವಾಗಿ ಪ್ರತಿಯೊಬ್ಬರೂ ಏಕಾಂಗಿಯಾಗಿ ‘ದೇವರೊ’ಡನೆ ಕೆಲನಿಮಿಷಗಳನ್ನು ಕಳೆಯುವಂತಹ ‘ಪ್ರಾರ್ಥನೆ’ಯ ಬಗೆಗೆ.

ನಮ್ಮ ‘ದೇವರು’ ಯಾರೇ ಆಗಿರಲಿ, ಪ್ರಾರ್ಥನೆಯ ಸಂದರ್ಭದಲ್ಲಿ ಹೆಚ್ಚಿನವರ ಕಲ್ಪನೆಯಲ್ಲಿ ಮೂಡುವುದು ನಮ್ಮನ್ನು ಮೀರಿದ ಒಂದು ಶಕ್ತಿ, ನಾವು ಭಾವಿಸುವ ನಮ್ಮ ಕಷ್ಟಗಳೆಲ್ಲವನ್ನೂ ಪರಿಹರಿಸುವ ಒಬ್ಬ ಕರುಣಾಮಯಿ ಎಂಬುದು ಪ್ರಾರ್ಥನೆಯ ಕುರಿತ ಅಧ್ಯಯನಗಳಲ್ಲಿ ದೃಢಪಟ್ಟಿರುವ ಅಂಶ. ಹಾಗೆಯೇ ಪ್ರಾರ್ಥನೆಯ ಸಂದರ್ಭದಲ್ಲಿ ನಾವು ದೇವರನ್ನು ನಮ್ಮ ಆತ್ಮೀಯನೆಂದೇ ನಂಬುತ್ತೇವೆ. ಅಷ್ಟೇಕೆ, ದೇವರನ್ನು ನಾವು ಸಂಬೋಧಿಸುವುದೂ ‘ಏಕವಚನ’ದಲ್ಲಿಯೇ! ಅಂದರೆ ನಮ್ಮ ತುಂಬ ಹತ್ತಿರದ ಯಾವಾಗಲೂ ಲಭ್ಯವಿರುವ ವ್ಯಕ್ತಿಯಾತ!

ಇತ್ತೀಚಿನ ಮನೋವೈದ್ಯಕೀಯ ಸಂಶೋಧನೆಗಳು ತೋರಿಸಿರುವ ಒಂದು ವಿಷಯ ಅಚ್ಚರಿ ಮೂಡಿಸುತ್ತದೆ. ಅದೆಂದರೆ, ನಮ್ಮ ವ್ಯಕ್ತಿತ್ವ ಬಿಡಿ, ನಾವು ನಂಬುವ, ನಮ್ಮ ಮನಸ್ಸಿನ ಪಟಲದಲ್ಲಿ ಮೂಡಿರುವ, ಗಟ್ಟಿಯಾಗಿ ಅಚ್ಚೊತ್ತಿರುವ ನಮ್ಮ ‘ದೇವರ’ ವ್ಯಕ್ತಿತ್ವಕ್ಕೂ, ನಮ್ಮ ಮಾನಸಿಕ ಆರೋಗ್ಯಕ್ಕೂ ಬಲವಾದ ನಂಟಿದೆ ಎಂಬುದು!  ಅಂದರೆ, ನಿಮ್ಮ ದೇವರು ತುಂಬಾ ‘ಶಿಸ್ತಿ’ನಿಂದ ಕೂಡಿದ್ದರೆ, ‘ನೀನು ಹೀಗೆ ಮಾಡದಿದ್ದರೆ ಶಿಕ್ಷಿಸುತ್ತೇನೆ, ಹಾಗೆ ಮಾಡದಿದ್ದರೆ ಶಪಿಸುತ್ತೇನೆ’ ಎನ್ನುವವನಾದರೆ, ನಿಮಗೆ ಆತನನ್ನು ಭೇಟಿಯಾಗಲು ಸಾಧ್ಯವಿಲ್ಲ ಎನ್ನಿಸುತ್ತಿದ್ದರೆ, ಆಗ ನಿಮಗೆ ಭಯ, ಆತಂಕ, ಗೀಳು – ಇವೆಲ್ಲಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು.

ಅಂದರೆ ‘ಪ್ರಾರ್ಥನೆ’ಯ ಮೂಲಕ ದೇವರೊಂದಿಗೆ ಆತ್ಮೀಯ ಸಂಬಂಧ ಬೆಳೆಸಿಕೊಳ್ಳದೆ, ಬರೀ ಪದ್ಧತಿ-ನಂಬಿಕೆ-ಸಂಪ್ರದಾಯಗಳ ಹೆಸರಿನಲ್ಲಿ, ದೇವರ ಮೇಲಿನ ಭಯದಿಂದ ಆಚರಣೆಗಳನ್ನಷ್ಟೇ ನಡೆಸಿದಾಗ ಮಾನಸಿಕ ಆರೋಗ್ಯ ಬಿಡಿ, ದೈಹಿಕ-ಮಾನಸಿಕ ಕಾಯಿಲೆಗಳೆರಡೂ ಬರುವ ಸಂಭವನೀಯತೆ  ಹೆಚ್ಚು.

‘ಪ್ರಾರ್ಥನೆ’ಯನ್ನೇ ಮಾಡದಿರುವವರ ಕಥೆ ಇದಾದರೆ, ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ನಮ್ಮ ನಂಬುಗೆ ಯಾವ ಪಾತ್ರ ವಹಿಸುತ್ತದೆ ಎಂಬುದನ್ನೂ ವಿಶ್ಲೇಷಿಸಿ ನೋಡಲಾಗಿದೆ. ಪ್ರಾರ್ಥನೆ ಮಾಡುವಾಗ ನಾವು ದೇವರನ್ನು ‘ನಮಗೆ ಸಹಾಯ ಮಾಡೇ ಮಾಡುತ್ತಾನೆ’ ಎಂದು ದೃಢವಾಗಿ ನಂಬಿದ್ದೇವೆ; ಜೊತೆಗೆ ನಮ್ಮ ಪ್ರಯತ್ನವೂ ಅವಶ್ಯ ಎಂಬುದನ್ನೂ ಅರಿತಿದ್ದೇವೆ ಎಂದುಕೊಳ್ಳಿ, ನಮ್ಮ ‘ದೇವರು’ ನಮಗೆ ಸಹಾಯ ಮಾಡುವ ಸಾಧ್ಯತೆ ಹೆಚ್ಚು!

ಅಕಸ್ಮಾತ್ ವಿಫಲರಾದರೆ, ದೇವರನ್ನೇ ಬೈದು ‘ಪ್ರಾರ್ಥನೆ’ಯನ್ನೇ ಕೈ ಬಿಡುವ ಸಾಧ್ಯತೆ ಕಡಿಮೆ. ಅದೇ ನಮ್ಮ ಪ್ರಯತ್ನವನ್ನೇ ಮಾಡದೆ ದೇವರಿಗೆ ‘ಪ್ರಾರ್ಥನೆ’ಯಷ್ಟೇ ಮಾಡಿ, ವೈಫಲ್ಯವುಂಟಾದಾಗ ಸಹಜವಾಗಿಯೇ ನಮಗೆ ದೇವರ ಮೇಲೆಯೇ ಕೋಪ ಬರುತ್ತದೆ. ‘ಪ್ರಾರ್ಥನೆ’ಯನ್ನೇ ಕೈಬಿಟ್ಟು ಪ್ರಾರ್ಥನೆ ನಮಗೆ ನೀಡಬಹುದಾದ ಎಷ್ಟೋ ಆರೋಗ್ಯದ ಲಾಭಗಳಿಂದ ವಂಚಿತರಾಗುತ್ತೇವೆ!

ಪ್ರಾರ್ಥನೆ ಮಾಡುವ ಸ್ಥಳ-ರೀತಿ ಇವ್ಯಾವುವೂ ಪ್ರಾರ್ಥನೆಯ ಲಾಭಗಳನ್ನು ಬಹುಮಟ್ಟಿಗೆ ನಿರ್ಧರಿಸುವುದಿಲ್ಲ. ನೀವು ನಿಮ್ಮ ಮನೆಯ ದೇವರ ಮನೆಗೆ ಹೋಗಿ ಪ್ರಾರ್ಥಿಸುತ್ತೀರೋ ಅಥವಾ ದೇವರು ಎಲ್ಲರಿಗಾಗಿ ವಾಸಿಸುವ ಅವನ ಮನೆಗೆ, ಅಂದರೆ ದೇವಸ್ಥಾನ/ಚರ್ಚ್/ಮಸೀದಿ ಇತ್ಯಾದಿಗಳಿಗೆ ಹೋಗುತ್ತೀರೋ, ಸ್ನಾನ ಮಾಡಿ/ಮಾಡದೆ, ‘ಮಡಿ’ಯಾಗಿ/‘ಮಡಿ’ಯಾಗದೆ ಇತ್ಯಾದಿ ಇತ್ಯಾದಿ ಏನೇ ಆದರೂ ಪ್ರಾರ್ಥನೆಯಲ್ಲಿ ನಿಜವಾಗಿ ಆರೋಗ್ಯದ ದೃಷ್ಟಿಯಿಂದ ಕೆಲಸ ಮಾಡುವುದು ನೀವು ಎಷ್ಟು ‘ನಂಬುಗೆ’, ‘ಆಶಾವಾದ’, ‘ಶಾಂತಿ’ಯಿಂದ ಪ್ರಾರ್ಥಿಸುತ್ತೀರಿ ಎಂಬುದು.

ಸ್ವಾಮಿ ವಿವೇಕಾನಂದರಂತೆ, ದೇವರ ಬಳಿ ಎಷ್ಟು ಬಾರಿ ಹೋದರೂ ಏನನ್ನೂ ಕೇಳಲಾಗದೆ ಮರೆತು ಕೇವಲ ಪ್ರಾರ್ಥನೆಯಷ್ಟೇ ಮಾಡಿ ಬಂದ ಘಟನೆ ಬಹು ಜನರ ಸ್ವಾನುಭವವೂ ಆಗಿರಲು ಸಾಧ್ಯ. ‘ಅಯ್ಯೋ ಏನೆಲ್ಲಾ ಕೇಳಬೇಕೆಂದುಕೊಂಡಿದ್ದೆ. ಆದರೆ ನಮಸ್ಕಾರ ಮಾಡುವ ಕ್ಷಣದಲ್ಲಿ ಅದ್ಯಾವುದೂ ತಲೆಗೆ ಹೊಳೆಯಲೇ ಇಲ್ಲ’ ಎಂಬುದು ನಮಗೆಲ್ಲರಿಗೂ ಬಹಳಷ್ಟು ಬಾರಿ ಆಗುವ ಅನುಭವವೇ.

ಮನೋವೈಜ್ಞಾನಿಕವಾಗಿ ನೋಡಿದರೆ ‘ಪ್ರಾರ್ಥನೆ’ ಮಾಡುವುದು ದೇವರಿಗಾಗಿ ಎನ್ನುವುದಕ್ಕಿಂತ ನಮ್ಮ ಆತ್ಮವಿಶ್ವಾಸಕ್ಕಾಗಿ, ಆತ್ಮವಿಮರ್ಶೆಗಾಗಿ, ನಮಗಾಗುತ್ತಿರುವ ತೊಳಲಾಟ- ನಿರಾಳತೆ-ಸಂತೋಷ-ದುಃಖಗಳ ಭಾವನೆಗಳನ್ನು ಸಾವಧಾನವಾಗಿ ಅರ್ಥೈಸಿಕೊಳ್ಳುವ - ಅದಕ್ಕಿರುವ ಹಲವು ದಾರಿಗಳನ್ನು ಕಂಡುಕೊಳ್ಳುವ ‘ನಮ್ಮದೇ’ ಆದ ‘ಖಾಸಗೀ’ ಸಮಯ ಎನ್ನುವುದು ಹೆಚ್ಚು ಸೂಕ್ತ. ಹಾಗೆಯೇ ಒಂದು ರೀತಿಯ ‘ಕೃತಜ್ಞತಾ’ಭಾವವನ್ನು ನಮ್ಮಲ್ಲಿ ‘ಪ್ರಾರ್ಥನೆ’ಯ ಸಮಯ ಹುಟ್ಟಿಸುತ್ತದೆ.

ಜೀವನದ ಒಳ್ಳೆಯದನ್ನು ಗುರುತಿಸುವ, ಕೆಟ್ಟದನ್ನು ದೇವರ ನಿರ್ಧಾರವೆಂದು ಸ್ವೀಕರಿಸುವ ಧೈರ್ಯವನ್ನು ನೀಡುತ್ತದೆ. ಮನೋವೈದ್ಯಕೀಯ ಸಂಶೋಧನೆಗಳು ಭಾರತೀಯ ರೋಗಿಗಳಲ್ಲಿ ‘ಪ್ರಾರ್ಥನೆ’ಯ ಕಾರಣದಿಂದಲೇ ಖಿನ್ನತೆಗೆ ಗುರಿ ಮಾಡುವ ‘ತಪ್ಪಿತಸ್ಥ’ ಮನೋಭಾವ ಕಡಿಮೆಯೆಂದು ಗುರುತಿಸಿವೆ. ಅಂದರೆ ಭಾರತೀಯರು ಯಾವುದೇ ಸಮಸ್ಯೆ ಬಂದರೂ ‘ಎಲ್ಲವೂ ನಮ್ಮ ಕರ್ಮ’ ಎಂದೇ ಭಾವಿಸಿ ‘ದೇವರ ಮೇಲೆ ಭಾರ’ ಹಾಕಿ, ಪ್ರಾರ್ಥನೆ ಮುಂದುವರಿಸುವುದು ಕೆಲವು ರೀತಿಯಲ್ಲಾದರೂ ಮಾನಸಿಕ ನೆಲೆಗಟ್ಟನ್ನು ಸದೃಢಗೊಳಿಸುತ್ತದೆ.

‘ಪ್ರಾರ್ಥನೆ’ ಎಂಬ ಅಭ್ಯಾಸ ಸಹಜವಾಗಿ, ಅನುಕರಣೆಯಿಂದ ಮನುಷ್ಯನಿಗೆ ಬರಬಹುದಾದರೂ ಇಂದು ನಮ್ಮಲ್ಲಿ ಅದು ಒಂದು ಸಾಮೂಹಿಕ ಆಚರಣೆಯಾಗಿಯೋ ಅಥವಾ ಒಣಪದ್ಧತಿಯಾಗಿಯೋ ಆಗಿ ಬದಲಾಗಿಬಿಟ್ಟಿದೆ. ಸೀರಿಯಲ್‌ಗಳಲ್ಲಿ ತೋರಿಸುವ ಸತತವಾದ ಮಾಟ-ಮಂತ್ರ/ ಪುನರ್ಜನ್ಮದ ಘಟನೆಗಳು/‘ದೇವರಿದ್ದಾನೆ ಎಂದ ಮೇಲೆ ದೆವ್ವವೂ ಇದೆ’ ಎಂಬಂಥ ಹೇಳಿಕೆಗಳು ಅಧ್ಯಾತ್ಮವನ್ನು ರಂಜನೀಯ ಸರಕಾಗಿ ಪರಿವರ್ತಿಸಿದೆ. ಧ್ಯಾನವನ್ನು ವೈಭವೀಕರಿಸಿ ಹೇಳಿಕೊಡುವ ಕೋರ್ಸುಗಳೂ ಕಡಿಮೆಯೇನಲ್ಲ.

ಇವುಗಳ ಬದಲು ಯಾರೂ ತರಬೇತಿ ನೀಡಬೇಕಿಲ್ಲದ, ನಮ್ಮೊಂದಿಗೆ ನಾವೇ, ನಮ್ಮ ದೇವರೊಂದಿಗೆ ಕಳೆಯುವ ಹತ್ತೇ ಹತ್ತು ನಿಮಿಷಗಳ ‘ಪ್ರಾರ್ಥನೆ’ ಆರೋಗ್ಯಕ್ಕೆ ಬಹು ಉಪಯುಕ್ತ ಎಂಬುದು ಅಚ್ಚರಿಯೇ ಆದರೂ ನಿಜವಾದ ಸಂಗತಿ.

ಅಧ್ಯಯನವೊಂದು ‘ಪ್ರಾರ್ಥನೆ’ಯನ್ನು ಸಾಮಾಜಿಕ ಸಂವಹನವಾಗಿಯೂ ಗುರುತಿಸಿದೆ. ಇಲ್ಲಿ ನಾವು ಸಂವಹನ ನಡೆಸುತ್ತಿರುವುದು ದೇವರೊಡನೆ! ಸಾಮಾಜಿಕ ಸಂವಹನ ಭಾವನಾತ್ಮಕ ಆರೋಗ್ಯ ಹೆಚ್ಚಿಸಿ, ಮಿದುಳಿನ ಕ್ಷಮತೆ, ಏಕಾಗ್ರತೆ, ಧ್ಯಾನವನ್ನು ಹೆಚ್ಚಿಸುತ್ತದೆ. ಇವೆಲ್ಲವೂ ಮತ್ತೆ ದೈಹಿಕ ಆರೋಗ್ಯಕ್ಕೂ ಬೇಕಾದಂಥ ಅಂಶಗಳೇ. ರಕ್ತದೊತ್ತಡದ ನಿಯಂತ್ರಣ, ರೋಗ ನಿರೋಧಕಶಕ್ತಿಯ ಹೆಚ್ಚಳ, ಹೃದಯದ ಕ್ಷಮತೆ – ಇವು ‘ಪ್ರಾರ್ಥನೆ’ಯನ್ನು ನಿಯಮಿತವಾಗಿ ಮಾಡುವ ವ್ಯಕ್ತಿಗಳಲ್ಲಿ ವೈಜ್ಞಾನಿಕವಾಗಿಯೂ ದೃಢಪಟ್ಟಿವೆ.

ದೇವರ ಅಸ್ತಿತ್ವವನ್ನೇ ನಂಬದ, ದೇವರನ್ನು ನೆನೆಸದ ನಾಸ್ತಿಕರೇ ನೀವಾಗಿದ್ದರೂ, ‘ಪ್ರಾರ್ಥನೆ’ ಮಾಡುವ ಅಭ್ಯಾಸ, ನಮಗಿಂತ ಮೇಲೆ ಒಂದು ‘ಶಕ್ತಿ’ಯಿದೆ (ಅದು ನಮ್ಮೊಳಗೇ ಇರುವಂತಹದ್ದು ಎಂದಾದರು ಪರವಾಗಿಲ್ಲ, ಯಾವಾಗಲಾದರೊಮ್ಮೆ ಕಾಣಿಸುವಂತಹದ್ದು ಎಂದರೂ ಸರಿ!) ಎಂಬ ನಂಬುಗೆ ಕಷ್ಟದ ಸಮಯದಲ್ಲಿ ನಮ್ಮ ಆತ್ಮವಿಶ್ವಾಸವನ್ನು ಕಾಯಬಲ್ಲದು. ದೇವರಲ್ಲಿ ನಂಬಿಕೆಯಿದ್ದರೆ ದೇವರೊಂದಿಗೆ, ನಮ್ಮದೇ ಆದ ಸಮಯಕ್ಕಾಗಿ, ದೇವರನ್ನು ನಂಬದಿದ್ದರೆ ನಮ್ಮ ಮನಸ್ಸಿನೊಳಗನ್ನು ಅರ್ಥ ಮಾಡಿಕೊಳ್ಳುವ ಅವಕಾಶಕ್ಕಾಗಿ ಪ್ರಾರ್ಥನೆಯ ಅಭ್ಯಾಸ ಬೆಳೆಸಿಕೊಳ್ಳುವುದು ಆರೋಗ್ಯಕರ.

ಮಕ್ಕಳಿಗೆ ಈ ಅಭ್ಯಾಸವನ್ನು ಮಾಡಿಸುವುದು ಹೇಗೆ? ಮಕ್ಕಳು ಸಹಜವಾಗಿ ‘ಪ್ರಾರ್ಥನೆ’ಯ ಸಮಯವನ್ನು ಅರ್ಥ ಮಾಡಿಕೊಂಡು ಕಳೆಯುವ ಪ್ರಬುದ್ಧತೆ ಹೊಂದಿರಲಾರರು.ಯಾಂತ್ರಿಕವಾಗಿ ಅಪ್ಪ-ಅಮ್ಮ ‘ದೇವರಿಗೆ ನಮಸ್ಕಾರ ಮಾಡು’ ಎಂದರೆ, ‘ಶ್ಲೋಕ ಹೇಳು’ ಎಂದರೆ ಹೆದರಿಕೆಯಿಂದಷ್ಟೇ ಮಾಡುತ್ತಿರಬಹುದು. ಆದರೆ ಕೋಪ-ದುಃಖಗಳನ್ನು ಅಪ್ಪ-ಅಮ್ಮ ನಿಭಾಯಿಸುವ ರೀತಿಯನ್ನು ಮಕ್ಕಳು ನೋಡಿ ಕಲಿಯುವ ರೀತಿಯಲ್ಲಿ ಅಪ್ಪ-ಅಮ್ಮ ಮಾಡುವ ‘ಪ್ರಾರ್ಥನೆ’ಯನ್ನು ತಮ್ಮ ಮಾನಸಿಕ ಆರೋಗ್ಯಕ್ಕಾಗಿ ಉಪಯೋಗಿಸುವುದನ್ನೂ ಕಲಿಯುವುದು ಸಾಧ್ಯವಿದೆ. ಹಾಗಾಗಿ ನಮ್ಮದೇ ಆದ ‘ಮನಸ್ಸಿನ ಖಾಸಗೀ ಸಮಯಕ್ಕಾಗಿ ಒಂದಿಷ್ಟು ಕ್ಷಣಗಳನ್ನು ಪ್ರತಿನಿತ್ಯ ಪ್ರಾರ್ಥನೆಗಾಗಿ ಮೀಸಲಿಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT