ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ: ಮೃದುವಾದ ‘ಸುಪ್ರೀಂ’

ಎರಡು ದಿನ 6000 ಕ್ಯುಸೆಕ್‌ ನೀರು ಬಿಡಲು ಆದೇಶ * ಇಂದು ಸರ್ವಪಕ್ಷ, ಮಂತ್ರಿಪರಿಷತ್‌ ಸಭೆ
Last Updated 27 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ: ಮಳೆಯ ಕೊರತೆಯಿಂದಾಗಿ ತಮಿಳುನಾಡಿಗೆ ನೀರು ಬಿಡದಿರುವ ಪರಿಸ್ಥಿತಿಯನ್ನು ಮನದಟ್ಟು ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಧ್ಯಸ್ಥಿಕೆ ಬಯಸುತ್ತಿದ್ದ ಕರ್ನಾಟಕಕ್ಕೆ ಆಶಾದಾಯಕವಾದ ಆದೇಶವನ್ನು ಸುಪ್ರೀಂ ಕೋರ್ಟ್‌ ನೀಡಿದೆ.

‘ಕೇಂದ್ರ ಸರ್ಕಾರ ಮಧ್ಯಸ್ಥಿಕೆವಹಿಸಿ ಉಭಯ ರಾಜ್ಯಗಳ ಮುಖ್ಯಸ್ಥರ ಸಭೆ ಆಯೋಜಿಸಿ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಬೇಕು’ ಎಂದು ಮಂಗಳವಾರ ಮಧ್ಯಾಹ್ನ ನಡೆದ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ದೀಪಕ್‌ ಮಿಶ್ರಾ, ಹಾಗೂ ಉದಯ್‌ ಲಲಿತ್‌ ಅವರ ಪೀಠವು ಕೇಂದ್ರದ ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ ಅವರಿಗೆ ನಿರ್ದೇಶನ ನೀಡಿತು.

ಈ ಮೂಲಕ ಕಾವೇರಿ ನೀರು ಹಂಚಿಕೆ ಬಿಕ್ಕಟ್ಟು ತಲೆದೋರಿದಂದಿನಿಂದ ಕರ್ನಾಟಕ ಎದುರಿಸುತ್ತಿದ್ದ ಆತಂಕವನ್ನು ಕೊಂಚ ಮಟ್ಟಿಗೆ ದೂರವಾಗಿಸಿತು.

ಆದರೆ, ಇದೇ 30ರಂದು ಮಧ್ಯಾಹ್ನ 2 ಗಂಟೆಗೆ ಪ್ರಕರಣದ ವಿಚಾರಣೆಯನ್ನು ಮುಂದೂಡಿರುವ ನ್ಯಾಯಮೂರ್ತಿಗಳು, ‘ಅಲ್ಲಿಯವರೆಗೆ ನಿತ್ಯ 6,000 ಕ್ಯುಸೆಕ್‌ ನೀರು ಹರಿಸುವ ಮೂಲಕ ಕೋರ್ಟ್‌ ಆದೇಶವನ್ನು ಪಾಲಿಸಲೇಬೇಕು’ ಎಂದು ಕರ್ನಾಟಕಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ತಮಿಳುನಾಡು ವಿರೋಧ: ‘ಏಳು ದಿನಗಳ ಕಾಲ ನಿತ್ಯ 6,000 ಕ್ಯುಸೆಕ್‌ ನೀರು ಹರಿಸುವಂತೆ ಸುಪ್ರೀಂ ಕೋರ್ಟ್‌ ಸೆ. 20ರಂದು ನೀಡಿರುವ ಆದೇಶ ಸೇರಿದಂತೆ ಯಾವುದೇ ಆದೇಶ ಪಾಲಿಸದ ಕರ್ನಾಟಕ ಸರ್ಕಾರ, ಆದೇಶ ಮಾರ್ಪಾಡು ಕೋರಿ ಮತ್ತೆ ಅರ್ಜಿ ಸಲ್ಲಿಸಿದೆ. ಅವರ ಅರ್ಜಿಯನ್ನು ಮಾನ್ಯ ಮಾಡಿದರೆ, ದೇಶದ ಅತ್ಯುನ್ನತ ನ್ಯಾಯಾಲಯವು ಬೇರೆ ರೀತಿಯ ಸಂದೇಶವನ್ನು ರವಾನಿಸಿದಂತಾಗಲಿದೆ. ಅದರಿಂದ ಉಂಟಾಗುವ ಪರಿಣಾಮಗಳನ್ನು ಅರ್ಥೈಸಿಕೊಂಡು ಕರ್ನಾಟಕದ ಅರ್ಜಿಯನ್ನು ತಿರಸ್ಕರಿಸಬೇಕು’ ಎಂದು ತಮಿಳುನಾಡು ಪರ ವಕೀಲ ಶೇಖರ್‌ ನಾಫಡೆ ವಿಚಾರಣೆಯ ಆರಂಭದಲ್ಲೇ ವಿರೋಧ ವ್ಯಕ್ತಪಡಿಸಿದರು.

‘ಇದು ನೀರು, ಟಿಎಂಸಿ ಅಥವಾ ಕ್ಯುಸೆಕ್‌ನ ಪ್ರಶ್ನೆಯಲ್ಲ. ಬದಲಿಗೆ, ನಿಮ್ಮ ಆದೇಶವನ್ನು ಉಲ್ಲಂಘಿಸಿರುವ ಪ್ರಶ್ನೆಯಾಗಿದೆ. ಯಾವುದೇ ರಾಜ್ಯಕ್ಕೆ ಸುಪ್ರೀಂ ಕೋರ್ಟ್‌ನ ಆದೇಶ ಉಲ್ಲಂಘನೆಯ ಅವಕಾಶ ನೀಡಿದಲ್ಲಿ ಪರಿಣಾಮ ಏನಾಗಬಹುದು ಎಂಬುದನ್ನು ಅರಿಯಬೇಕು’ ಎಂದು ಅವರು ತಿಳಿಸಿದರು.

‘ತಮಿಳುನಾಡು ನೀರನ್ನು ಕೋರಿ ಮನವಿ ಸಲ್ಲಿಸಿದೆ. ಮೊದಲ ಬಾರಿ ವಿಚಾರಣೆ ನಡೆದ ದಿನವಾದ ಸೆ. 5ರಿಂದಲೂ ನೀರಿಲ್ಲ ಎಂಬುದನ್ನೇ ಹೇಳುತ್ತ ಬಂದಿರುವ ಕರ್ನಾಟಕ, ಸುಪ್ರೀಂ ಕೋರ್ಟ್‌ ಆದೇಶ ಪಾಲಿಸದೆ ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆದು, ನೀರು ಬಿಡದಿರುವ ನಿರ್ಣಯ ಕೈಗೊಂಡಿದೆ. ನೀರನ್ನು ಕೋರಿ ನಾವು ನಿಮ್ಮ ಬಳಿ ಬಂದಿದ್ದೇವೆ. ಅವರು ನೀರು ಬಿಡುವುದಿಲ್ಲ ಎಂಬ ನಿರ್ಣಯ ಕೈಗೊಂಡರೆ ನಾವು ಯಾರ ಬಳಿ ಹೋಗಬೇಕು’ ಎಂದು ಅವರು ಪ್ರಶ್ನಿಸಿದರು.

ನೀರು ಬಿಡುವ ಸೂಚನೆಗೆ ನಾರಿಮನ್ ವಿರೋಧ
ನವದೆಹಲಿ:
ಕೋರ್ಟ್‌ನ ಸೆ. 20ರ ಆದೇಶ ಮಾರ್ಪಾಡು ಕೋರಿ ಕರ್ನಾಟಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬಳಿಕವೂ, ನೀರು ಬಿಡುವಂತೆ ನ್ಯಾಯಮೂರ್ತಿಗಳು ಆದೇಶ ನೀಡಿದ್ದನ್ನು ಕರ್ನಾಟಕ ಪರ ಹಿರಿಯ ವಕೀಲ ಫಾಲಿ ನಾರಿಮನ್‌ ತೀವ್ರವಾಗಿ ವಿರೋಧಿಸಿದರು.

‘ನೀರು ಇಲ್ಲ ಎಂಬ ಕಾರಣದಿಂದಲೇ ನಾವು ನಿಮ್ಮ ಆದೇಶ ಪಾಲಿಸಲಾಗಿಲ್ಲ. ಅದಕ್ಕೆಂದೇ ನಮ್ಮ ಶಾಸನಸಭೆ ನಿರ್ಣಯ ಕೈಗೊಂಡು, ನೀರನ್ನು ಕುಡಿಯಲು ಮಾತ್ರ ಬಳಸಲು ನಿರ್ಧರಿಸಿದೆ. ಮತ್ತೆ ನೀರು ಬಿಡಿ ಎಂದರೆ ಪಾಲಿಸುವುದು ಸಾಧ್ಯವೇ ಇಲ್ಲ’ ಎಂದು ಅವರು ಏರುದನಿಯಲ್ಲೇ ಹೇಳಿದರು.

ಆಗ ಮಾತನಾಡಿದ ತಮಿಳುನಾಡು ಪರ ವಕೀಲ ಶೇಖರ್ ನಾಫಡೆ, ‘ಇದು ನಮ್ಮ ತಾಳ್ಮೆಯನ್ನು ಪರೀಕ್ಷಿಸುವಂತಹ ವಾದ. ಇಂತಹ ವಾದವೇ ಕರ್ನಾಟಕದ ವರ್ತನೆಯನ್ನು ತೋರಿಸುತ್ತದೆ. ಅದನ್ನು ಒಪ್ಪಿಕೊಳ್ಳಲು ಸಾಧ್ಯವೇ’ ಎಂದರು.

ಕೊನೆಗೆ 6,000 ಕ್ಯುಸೆಕ್ ನೀರು ಬಿಡಬೇಕು ಎಂದು ನ್ಯಾಯಮೂರ್ತಿಗಳು ಆದೇಶಿಸಿದಾಗ ಮತ್ತೆ ಎದ್ದು ನಿಂತ ನಾರಿಮನ್‌, ‘ಹಾಗೆ ಆದೇಶ ನೀಡಬೇಡಿ. ಕುಡಿಯುವ ನೀರಿಲ್ಲ ಎಂಬುದನ್ನು ಪರಿಗಣಿಸಿ’ ಎಂದು ಕೋರಿದರು.

‘ತಮಿಳುನಾಡಿನ ಜನತೆಗೆ ಕುಡಿಯುವ ಉದ್ದೇಶದಿಂದ ನೀವು ಸೆ. 30ರವರೆಗೆ ನೀರು ಹರಿಸಲೇಬೇಕು’ ಎಂದು ಆದೇಶ ಹೊರಡಿಸಿದರು.

ತಾರಕಕ್ಕೇರಿದ ವಾದ– ಪ್ರತಿವಾದ: ‘ನಾವು ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ನಮ್ಮ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ. ನಗರ, ಪಟ್ಟಣ, ಗ್ರಾಮೀಣ ಪ್ರದೇಶದ ಜನತೆಗೆ ಕುಡಿಯುವುದಕ್ಕೂ ನೀರು ಸಾಕಾಗದ ಸ್ಥಿತಿ ಇದೆ. ಅದಕ್ಕೆಂದೇ ಆದೇಶ ಮಾರ್ಪಾಡು ಅರ್ಜಿ ಸಲ್ಲಿಸಿದ್ದೇವೆ. ತಮಿಳುನಾಡು ಆ ಅರ್ಜಿಯನ್ನು ಪುರಸ್ಕರಿಸಲು ವಿರೋಧ ವ್ಯಕ್ತಪಡಿಸುತ್ತಿದೆ. ನಮಗೆ ವಾದ ಮಾಡುವ ಮನಃಸ್ಥಿತಿ ಇಲ್ಲ. ಬದಲಿಗೆ ನಿಮ್ಮಲ್ಲಿ ಕೋರಿಕೆ ಸಲ್ಲಿಸಲಿದ್ದೇವೆ. ನೀವು ನಮ್ಮ ಮನವಿ ಆಲಿಸದಿದ್ದರೆ ಹೇಗೆ’ ಎಂದು ಕರ್ನಾಟಕ ಪರ ವಕೀಲ ಫಾಲಿ ನಾರಿಮನ್‌ ಕೇಳಿದರು.

‘ನಿಮ್ಮ ಎಲ್ಲ ಆದೇಶಗಳನ್ನೂ ಧಿಕ್ಕರಿಸಲಾಗಿದೆ ಎಂದು ತಮಿಳುನಾಡು ದೂರಿದೆ. ನಮ್ಮ ಅರ್ಜಿಯನ್ನು ಈಗ ವಿಚಾರಣೆಗೆ ಕೈಗೆತ್ತಿಕೊಳ್ಳದಿದ್ದರೂ ಪರವಾಗಿಲ್ಲ. ನೀರು ಬಿಡಲು  ನವೆಂಬರ್‌ ಅಂತ್ಯದವರೆಗೂ ಅವಕಾಶ ನೀಡಿ’ ಎಂದು ಅವರು ಮನವಿ ಸಲ್ಲಿಸಿದರು.

‘ನಾವು ನಿಮ್ಮ ಮನವಿಯನ್ನು ಆಲಿಸುವುದಿಲ್ಲ ಎಂದು ಹೇಳಿಯೇ ಇಲ್ಲ. ಆಯಾ ಜಲ ವರ್ಷದ ಅಂತ್ಯಕ್ಕೆ ನೀರು ಹಂಚಿಕೆ ಮಾಡಿ ಎಂದು ತಿಳಿಸಿದ್ದೀರಲ್ಲ, ಈಗ ನವೆಂಬರ್‌ ಅಂತ್ಯಕ್ಕೆ ಬಿಡುವುದಾಗಿ ಒಪ್ಪಿಕೊಂಡಿದ್ದೀರಿ. ಆಗಲೂ ಮಳೆ ಸುರಿಯದಿದ್ದರೆ ನೀರನ್ನು ಹೇಗೆ ಬಿಡುತ್ತೀರಿ’ ಎಂದು ನ್ಯಾಯಮೂರ್ತಿ ಮಿಶ್ರಾ ಕೇಳಿದರು.

‘ನಾವು ನೀರು ಹರಿಸುವಂತಾಗಬೇಕು. ಅದು ದೇವರ ಕೈಲಿದೆ. ಈಶಾನ್ಯ ಮಳೆಯ ಮಾರುತಗಳು ಮಳೆ ಸುರಿಸಲಿ ಎಂಬ ಆಶಾಭಾವ ನಮ್ಮದಾಗಿದೆ. ಕಾದು ನೋಡೋಣ. ನವೆಂಬರ್‌ ಅಂತ್ಯದವರೆಗೆ ಕಾಲಾವಕಾಶ ನೀಡಿ’ ಎಂದು ನಾರಿಮನ್‌ ಮನವಿ ಮಾಡಿದರು.

‘ಹಾಗಾದರೆ ಕೇವಲ 6,000 ಕ್ಯುಸೆಕ್‌ ನೀರು ಹರಿಸುವಂತೆ ಸೂಚಿಸಲಾದ ಆದೇಶವನ್ನು ಪಾಲಿಸದಿರುವುದು ಏಕೆ’ ಎಂದು ಮಿಶ್ರಾ ಮರು ಪ್ರಶ್ನೆ ಎಸೆದಾಗ, ‘ನಮಗೆ ನಿಮ್ಮ ಆದೇಶವನ್ನು ಪಾಲನೆ ಮಾಡಲು ಸಾಧ್ಯವಾಗಿಲ್ಲ. ನೀರು ಇಲ್ಲದ್ದರಿಂದ ಅದು ಸಾಧ್ಯವಾಗುವುದೂ ಇಲ್ಲ. ನೀವು ನಮ್ಮ ಮನವಿಯನ್ನು ಆಲಿಸುವುದು ಬೇಡ, ತಮಿಳುನಾಡಿನ ಮನವಿಯನ್ನೇ ಪುರಸ್ಕರಿಸಿ’ ಎಂದು ನಾರಿಮನ್‌ ಭಾವೋದ್ವೇಗದಿಂದ ದನಿ ಏರಿಸಿದಾಗ ವಾತಾವರಣ ಕಾವು ಪಡೆದುಕೊಂಡಿತು.

‘ನೀವು ಕರ್ನಾಟಕದ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳುವುದು ಬೇಡ. ಅವರ ವಾದ ಆಲಿಸುವುದು ಬೇಡ. ಆಲಿಸುವುದಾದರೆ ನಮ್ಮ ಸಮಸ್ಯೆಯ ಬಗ್ಗೆ ಏನು ಹೇಳುತ್ತೀರಿ’ ಎಂದು ನಾಫಡೆ ಕೇಳಿದರು.

ಮಾತುಕತೆ ಸಲಹೆ: ಆಗ ಭಾರತದ ಅಟಾರ್ನಿ ಜನರಲ್‌ ಮುಕುಲ್‌ ರೋಹಟ್ಗಿ ಅವರ ಸಲಹೆಯನ್ನು ಕೋರಿದ ನ್ಯಾಯಮೂರ್ತಿಗಳು, ಮಧ್ಯ ಪ್ರವೇಶದ ಸಾಧ್ಯತೆ ಬಯಸಿದರು.

‘ಉಭಯ ರಾಜ್ಯಗಳು ಸಮಸ್ಯೆ ಎದುರಿಸುತ್ತಿವೆ. ಕರ್ನಾಟಕ ಸಂದಿಗ್ಧ ಸ್ಥಿತಿ ಎದುರಿಸುತ್ತಿದೆ. ಅದಕ್ಕೆಂದೇ ಅಲ್ಲಿನ ಶಾಸನಸಭೆಯ ವಿಶೇಷ ಅಧಿವೇಶನ ನಡೆಸಿ ನೀರು ಬಿಡದಿರುವ ನಿರ್ಧಾರ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕಾನೂನು ಸಮರದ ಹೊರತಾಗಿ, ಸೌಹಾರ್ದಯುತ ಮಾತುಕತೆಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆ ಇದೆ. ಕೋರ್ಟ್‌ ಈ ಅಂಶದ ಕುರಿತು ಗಮನ ಹರಿಸಬೇಕು’ ಎಂಬ ಸಲಹೆಯನ್ನು ರೋಹಟ್ಗಿ ನೀಡಿದರು.

ಕಾವೇರಿ ನದಿ ನೀರು ಹಂಚಿಕೆ ವಿಷಯವು ಮೇಲುಸ್ತುವಾರಿ ಸಮಿತಿ ಅಥವಾ ನಿರ್ವಹಣಾ ಮಂಡಳಿಗಳಿಗೆ ಸೇರಿದ್ದಾಗಿದೆ. ಮೇಲುಸ್ತುವಾರಿ ಸಮಿತಿ ಸಭೆ ನಡೆಸಿದ ಸೂಚನೆಯನ್ನು ಎರಡೂ ರಾಜ್ಯಗಳು ವಿರೋಧಿಸಿದ್ದರಿಂದಲೇ ಮಂಡಳಿ ರಚಿಸುವಂತೆ ತಿಳಿಸಲಾಗಿದೆ. ಮಂಡಳಿಯೇ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಶಾಸನಸಭೆ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾದರೂ ಹೇಗೆ, ಸಂವಿಧಾನದ ಯಾವ ಕಲಮಿನ ಅಡಿ ನಿರ್ಧಾರ ಕೈಗೊಳ್ಳಲಾಯಿತು ಎಂದು ಮಿಶ್ರಾ ಪ್ರಶ್ನಿಸಿದರು.

‘ಪ್ರತಿ ಬಾರಿಯೂ ಆದೇಶ ನೀಡಿದಾಗ ವಿರೋಧ ವ್ಯಕ್ತಪಡಿಸುತ್ತಿರುವ ಕರ್ನಾಟಕ ನೀರು ಇಲ್ಲ ಎಂಬ ವಾದವನ್ನೇ ಪ್ರಧಾನವಾಗಿ ಮಂಡಿಸುತ್ತಿದೆ. ನವೆಂಬರ್‌ ನಂತರ ಅವರು ನೀರು ಬಿಟ್ಟರೂ ಆಗ ನಮ್ಮ ಬೆಳೆಗಳು ಸಂಪೂರ್ಣ ಹಾಳಾಗಿರುತ್ತವೆ. ಅವರು ನೀರು ಇಲ್ಲ ಎಂದು ತಿಳಿಸುವ ಕ್ರಮ ಸರಿಯಲ್ಲ. ನಮ್ಮ ಮನವಿಯನ್ನು ಪುರಸ್ಕರಿಸಿ, ಅವರ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಬೇಡಿ’ ಎಂದು ನಾಫಡೆ ಮತ್ತೆ ಆಗ್ರಹಿಸಿದಾಗ ನ್ಯಾಯಮೂರ್ತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಒಕ್ಕೂಟ ವ್ಯವಸ್ಥೆಯಲ್ಲಿ ಹಾಗೆ ಹೇಳಲು ಬರುವುದಿಲ್ಲ. ಪರಸ್ಪರ ಸಹಕಾರ ಅತ್ಯಗತ್ಯ. ನೀವೆಲ್ಲರೂ ಸಂವಿಧಾನಕ್ಕೆ ಬಾಧ್ಯಸ್ಥರಾಗಿರಬೇಕು. ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವ ಕೆಲಸವನ್ನು ಎಲ್ಲರೂ ನಿರ್ವಹಿಸಬೇಕು’ ಎಂದು ಗದರಿದ ಅವರು, ‘ಎರಡೂ ರಾಜ್ಯ ಸರ್ಕಾರಗಳ ಮುಖ್ಯಸ್ಥರು ಒಂದೆಡೆ ಕುಳಿತು ಮಾತನಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿ. ಅದನ್ನು ಬಿಟ್ಟು ಬೇರೆ ದಾರಿ ಇಲ್ಲ’ ಎಂದು ಅಭಿಪ್ರಾಯಪಟ್ಟರು.
ಪ್ರಕರಣದ ವಿಚಾರಣೆಯನ್ನು ಸೆ. 30ರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ಸಂಧಾನ ಸೂತ್ರ: ರಾಜ್ಯ ನಿರಾಳ
ಕಾವೇರಿ ಬಿಕ್ಕಟ್ಟು ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಮಧ್ಯಸ್ಥಿಕೆ ಕೋರಿದ್ದ ಕರ್ನಾಟಕದ ಅನೇಕ ದಿನಗಳ ಬೇಡಿಕೆಗೆ ಕೊನೆಗೂ ಮನ್ನಣೆ ದೊರೆತಿದೆ. ರಾಜಕೀಯ ಮುಖಂಡರು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದ ಸಂಧಾನಕ್ಕೆ ಸುಪ್ರೀಂ ಕೋರ್ಟ್‌ ವೇದಿಕೆ ಒದಗಿಸಿದೆ.

ಕಾವೇರಿ ಮೇಲುಸ್ತುವಾರಿ ಸಮಿತಿಯ ತೀರ್ಮಾನದಿಂದ, ಬೀಸುವ ದೊಣ್ಣೆಯನ್ನು ತಪ್ಪಿಸಿಕೊಂಡಂತಾಗಿದ್ದ ಕರ್ನಾಟಕಕ್ಕೆ ನಿರ್ವಹಣಾ ಮಂಡಳಿ ಪ್ರಸ್ತಾಪ ಮಾಡಿ ಗಾಯಕ್ಕೆ ಉಪ್ಪು ಸವರಿದ್ದ ಸುಪ್ರೀಂ ಕೋರ್ಟ್, ನ್ಯಾಯಾಂಗ ನಿಂದನೆಯಂತಹ ಕಠಿಣ ಆರೋಪ ಹೊರಿಸುವ ಸಾಧ್ಯತೆಯ ಆತಂಕ ಸೃಷ್ಟಿಗೆ ಕಾರಣವಾಗಿತ್ತು.

ಆದರೆ, ಆ ಆತಂಕದ ಮೋಡಗಳನ್ನು ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಶಾಶ್ವತವಾಗಿ ಅಲ್ಲದಿದ್ದರೂ ತಾತ್ಕಾಲಿಕವಾಗಿ ದೂರವಾಗುವಂತೆ ಮಾಡಿರುವ ಸುಪ್ರೀಂ ಕೋರ್ಟ್‌, ಕರ್ನಾಟಕದ ಮೇಲೆ ಮೃಧು ಧೋರಣೆ ತಾಳಿದೆ.

ಮುಖ್ಯವಾಗಿ ಕೇಂದ್ರ ಸರ್ಕಾರದ ಸಂಧಾನಕ್ಕೆ ಮುನ್ನುಡಿ ಬರೆಯುವ ಮೂಲಕ ಆಶಾದಾಯಕ ವಾತಾವರಣ ಸೃಷ್ಟಿಗೆ ಪ್ರೇರಣೆಯಾಗಿದೆ.
ಮೇಲುಸ್ತುವಾರಿ ಸಮಿತಿ ಸೂಚನೆಯ ಮೇರೆಗೆ 30,000 ಕ್ಯುಸೆಕ್‌ ನೀರು ಹರಿಸುವುದಕ್ಕೆ ಸಿದ್ಧವಾಗಿದ್ದ ಕರ್ನಾಟಕ, ಒಳಹರಿವು ಹೆಚ್ಚಿರುವುದರಿಂದ 18,000 ಕ್ಯುಸೆಕ್‌ ನೀರು ಹರಿಸಿದರೆ ನಷ್ಟವೇನಿಲ್ಲ ಎಂಬ ಧೋರಣೆಯನ್ನು ತಾಳುವಂತಾಗಿದೆ.

22 ದಿನಗಳ ಪ್ರಹಸನ: ಸೆಪ್ಟೆಂಬರ್ 5ರಂದು ಆರಂಭವಾದ ಕಾವೇರಿ ಬಿಕ್ಕಟ್ಟು ಸತತ 22 ದಿನಗಳಿಂದ ಮುಂದುವರಿದೇ ಇದೆ. ಸೆ. 5ರಂದು10 ದಿನಗಳ ಕಾಲ ನಿತ್ಯ 15,000, ಸೆ. 12 ರಂದು ಎಂಟು ದಿನಗಳ ಕಾಲ 12,000 ಕ್ಯುಸೆಕ್‌ ನೀರು ಹರಿಸುವಂತೆ ಆದೇಶ ಹೊರಡಿಸಲಾಗಿತ್ತು. ಇದರಿಂದ ರಾಜ್ಯದಲ್ಲಿ ಪ್ರತಿಭಟನೆ, ಹಿಂಸಾಕೃತ್ಯಗಳಿಗೆ ಕಾವು ದೊರೆತಿತ್ತು.

ಸಂಧಾನ ಸಭೆ ನಾಳೆ
ಕಾವೇರಿ ನೀರು ಹಂಚಿಕೆ ಕುರಿತ ಸಮಸ್ಯೆ ನಿವಾರಣೆಗಾಗಿ ಇದೇ 29ರಂದು ಸಂಧಾನ ಸಭೆ ಆಯೋಜಿಸಿರುವ ಕೇಂದ್ರ, ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿದೆ.

ನವದೆಹಲಿಯಲ್ಲಿ ಅಂದು ಬೆಳಿಗ್ಗೆ 11.30ಕ್ಕೆ ನಡೆಯಲಿರುವ ಸಭೆಯ ನೇತೃತ್ವವನ್ನು ಪ್ರಧಾನಿ ನರೇಂದ್ರ ಮೋದಿ ಅಥವಾ ಕೇಂದ್ರದ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ ಅವರು ವಹಿಸುವ ಸಾಧ್ಯತೆಗಳಿವೆ.

ಕಾವೇರಿ ಕಣಿವೆಯ ಇತರ ರಾಜ್ಯಗಳಾದ ಕೇರಳ ಮತ್ತು ಪುದುಚೇರಿಯ ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸದಿರಲು ನಿರ್ಧರಿಸಲಾಗಿದೆ.

ಆಸ್ಪತ್ರೆಯಲ್ಲೇ ಸಭೆ ನಡೆಸಿದ ಜಯಾ
ಚೆನ್ನೈ:  ಕಾವೇರಿ ನದಿಯಿಂದ ಆರು ಸಾವಿರ ಕ್ಯುಸೆಕ್ ನೀರನ್ನು ಮೂರು ದಿನಗಳವರೆಗೆ ತಮಿಳುನಾಡಿಗೆ ಬಿಡಬೇಕು ಎಂದು ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದ ನಂತರ ಮುಖ್ಯಮಂತ್ರಿ ಜಯಲಲಿತಾ ಅವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯಲ್ಲೇ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು.

ಮತ್ತೊಂದು ಸರ್ವಪಕ್ಷ ಸಭೆ ಇಂದು
ಬೆಂಗಳೂರು:
ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂಕೋರ್ಟ್‌ ನೀಡಿರುವ ಆದೇಶ ಪಾಲನೆ ಕುರಿತಂತೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಸರ್ವಪಕ್ಷ ಸಭೆ ಕರೆದಿದ್ದಾರೆ.

ಸುಪ್ರೀಂಕೋರ್ಟ್‌ ಆದೇಶವನ್ನು ಪಾಲಿಸುವುದೋ ಬಿಡುವುದೋ ಎಂಬ ಬಗ್ಗೆ ಸಲಹೆ ಪಡೆಯಲಿರುವ ಸಿದ್ದರಾಮಯ್ಯ, ಮಧ್ಯಾಹ್ನ 12ಕ್ಕೆ ನಡೆಯಲಿರುವ ಮಂತ್ರಿ ಪರಿಷತ್‌ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಗೊತ್ತಾಗಿದೆ.

ಒಂದು ವೇಳೆ ತಮಿಳುನಾಡಿಗೆ ನೀರು ಹರಿಸಿದರೆ ಇದೇ 23ರಂದು ನಡೆದ ವಿಧಾನಮಂಡಲ ವಿಶೇಷ ಅಧಿವೇಶನದಲ್ಲಿ ಕೈಗೊಂಡ ಸರ್ವಸಮ್ಮತ ನಿರ್ಣಯವನ್ನು ಉಲ್ಲಂಘಿಸಿದಂತಾಗುತ್ತದೆ. ಹೀಗಾದಲ್ಲಿ ಉಭಯ ಸದನಗಳ ಹಕ್ಕುಚ್ಯುತಿ ಮಾಡಿದ ಆರೋಪಕ್ಕೆ ಸರ್ಕಾರ ಗುರಿಯಾಗಬೇಕಾಗುತ್ತದೆ. ಸುಪ್ರೀಂಕೋರ್ಟ್ ಆದೇಶ ಪಾಲಿಸದೇ ಇದ್ದರೆ ನ್ಯಾಯಾಂಗ ನಿಂದನೆಯ ಆಪಾದನೆಗೆ ಸಿಲುಕುವ ಅಪಾಯ ಎದುರಿಸಬೇಕಾಗುತ್ತದೆ.  ಇಬ್ಬಾಯಿಯ ಖಡ್ಗದ ಇರಿತದಿಂದ ಪಾರಾಗುವ ಕುರಿತು ಸರ್ವಪಕ್ಷ ಸಭೆಯಲ್ಲಿ ಮುಖ್ಯಮಂತ್ರಿ ಪ್ರಸ್ತಾಪಿಸಲಿದ್ದಾರೆ.

ಸರ್ವಪಕ್ಷ ಸಭೆಯ ತೀರ್ಮಾನ ಆಧರಿಸಿ ಮುಂದಿನ ಹೆಜ್ಜೆ ಇಡಲು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಇದು ನಾಲ್ಕನೆ ಸಭೆ: ಕಾವೇರಿ ವಿಷಯಕ್ಕೆ ಸಂಬಂಧಿಸಿ  ಮುಖ್ಯಮಂತ್ರಿ ಕರೆದ ನಾಲ್ಕನೆ ಸರ್ವಪಕ್ಷ ಸಭೆ ಇದಾಗಿದೆ. ಆಗಸ್ಟ್‌ 27, ಸೆಪ್ಟೆಂಬರ್‌ 6 ಹಾಗೂ 21ರಂದು ಸರ್ವಪಕ್ಷ ಸಭೆ ನಡೆದಿತ್ತು.

ಸೆ.21ರ ಸಭೆಯನ್ನು ಬಿಜೆಪಿ ಬಹಿಷ್ಕರಿಸಿತ್ತು. ಆದರೆ, ಜೆಡಿಎಸ್‌ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್.ಡಿ. ದೇವೇಗೌಡ ಪಾಲ್ಗೊಂಡಿದ್ದರು.
ಯಾವುದೇ ಕಾರಣಕ್ಕೂ ಸುಪ್ರೀಂಕೋರ್ಟ್‌ ಆದೇಶ ಪಾಲಿಸುವುದು ಬೇಡ. ನ್ಯಾಯಾಂಗ ಆದೇಶ ಉಲ್ಲಂಘನೆಯಾದರೂ ಅಡ್ಡಿಯಿಲ್ಲ ತಮಿಳುನಾಡಿಗೆ ಒಂದು ಹನಿ ನೀರು ಬಿಡುವುದು ಬೇಡ ಎಂಬ ಸಲಹೆ  ವ್ಯಕ್ತವಾಗಿತ್ತು.

ಕಾವೇರಿ ತೀರ್ಪು: ಪ್ರತಿಕ್ರಿಯೆಗೆ ಸಿಎಂ ನಕಾರ
ಕಲಬುರ್ಗಿ:
ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸಿದರು.

‘ನಾನು ಪ್ರವಾಸದಲ್ಲಿದ್ದು, ಸುಪ್ರೀಂ ಕೋರ್ಟ್‌ ಆದೇಶದ ಪೂರ್ಣಪಾಠ ಗೊತ್ತಿಲ್ಲ. ಹೀಗಾಗಿ ನಾನು ಏನನ್ನೂ ಹೇಳುವುದಿಲ್ಲ. ನಮ್ಮ ವಕೀಲರು ಹಾಗೂ ಅಧಿಕಾರಿಗಳ ಜೊತೆಗೆ ಚರ್ಚಿಸಿದ ನಂತರವಷ್ಟೇ ಪ್ರತಿಕ್ರಿಯೆ ನೀಡುತ್ತೇನೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

* ಸುಪ್ರೀಂ ಕೋರ್ಟ್‌ ಆದೇಶ ಸರಿಯೋ, ತಪ್ಪೋ ಪಾಲಿಸಬೇಕು. ಆದರೆ, ಕಾವೇರಿ ವಿಚಾರದಲ್ಲಿ ಸುಪ್ರೀಂಕೋರ್ಟ್‌ ಸಿಟ್ಟಿನಿಂದ ಆದೇಶ ನೀಡುತ್ತಿದೆ. ಇಂತಹ ಆದೇಶ ಪಾಲಿಸುವ ಅಗತ್ಯ ಇಲ್ಲ
–ಬಿ.ವಿ. ಆಚಾರ್ಯ, ಹಿರಿಯ ವಕೀಲ

* ಕುಡಿಯುವುದಕ್ಕೆ ಮಾತ್ರ ಕಾವೇರಿ ನೀರು ಎಂದು ನಿರ್ಣಯಿಸಲಾಗಿದೆ. ಈಗ ನೀರು ಬಿಟ್ಟರೆ ಹಿಂದೆ ಹೇಳಿದ್ದಕ್ಕೆ ತದ್ವಿರುದ್ಧ ಆಗಲಿದೆ. ಸರ್ಕಾರ ತನ್ನ ನಿಲುವಿಗೆ ಬದ್ಧವಾಗಿ ಇರಬೇಕು

–ಅಶೋಕ್‌ ಹಾರನಹಳ್ಳಿ, ಹಿರಿಯ ವಕೀಲ

* ಶಾಸಕಾಂಗವು ಆರು ಕೋಟಿ ಜನರ ಭಾವನೆ ಆಧಾರದ ಮೇಲೆ ತಮಿಳುನಾಡಿಗೆ ಕಾವೇರಿ ನೀರು ಬಿಡದೇ ಇರಲು ನಿರ್ಣಯ ಕೈಗೊಂಡಿದೆ. ಹೀಗಾಗಿ, ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸುವ ಪ್ರಶ್ನೆ ಇಲ್ಲ
–ಕೆ.ಬಿ.ಕೋಳಿವಾಡ ವಿಧಾನಸಭೆ ಅಧ್ಯಕ್ಷರು

* ತಮಿಳುನಾಡಿಗೆ  ಮೂರು ದಿನಗಳ ಕಾಲ ತಲಾ 6,000 ಕ್ಯುಸೆಕ್‌ ನೀರು ಹರಿಸುವಂತೆ ಸುಪ್ರೀಂಕೋರ್ಟ್‌ ಮಂಗಳವಾರ ನೀಡಿರುವ ನಿರ್ದೇಶನ ದುರದೃಷ್ಟಕರ. ಇದು ನ್ಯಾಯ ಸಮ್ಮತವಾದುದಲ್ಲ
–ಬಿ.ಎಸ್‌.ಯಡಿಯೂರಪ್ಪ ರಾಜ್ಯ ಬಿಜೆಪಿ ಅಧ್ಯಕ್ಷ

* ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಕೈಗೊಂಡ ನಿರ್ಣಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬದ್ಧರಾಗಿರಬೇಕು
–ವಾಟಾಳ್‌ ನಾಗರಾಜ್‌, ಅಧ್ಯಕ್ಷ ಕನ್ನಡಪರ ಸಂಘಟನೆಗಳ ಒಕ್ಕೂಟ

ಮುಖ್ಯಾಂಶಗಳು
* ಕುಡಿಯುವುದಕ್ಕೂ ನೀರು ಸಾಲದು: ಕರ್ನಾಟಕ

* ಕುಡಿಯುವ ಉದ್ದೇಶಕ್ಕಾಗಿ ತಮಿಳುನಾಡಿಗೆ ನೀರು ಹರಿಸಲೇಬೇಕು: ‘ಸುಪ್ರೀಂ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT