ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಕುರಿತ ಓದು: ಅಮೆರಿಕಕ್ಕೆ 2ನೇ ಸ್ಥಾನ

ಗೂಗಲ್ ಅನಲಿಟಿಕ್ಸ್ ವರದಿ
Last Updated 2 ಅಕ್ಟೋಬರ್ 2016, 19:58 IST
ಅಕ್ಷರ ಗಾತ್ರ

ಮುಂಬೈ: ಮಹಾತ್ಮ ಗಾಂಧಿ ತಮ್ಮ ಜೀವಿತಾವಧಿಯಲ್ಲಿ ಅಮೆರಿಕಕ್ಕೆ ಒಮ್ಮೆಯೂ ಭೇಟಿ ನೀಡಲಿಲ್ಲ. ಆದರೆ ಮಹಾತ್ಮನ ಬಗ್ಗೆ ಬಂದಿರುವ ಪುಸ್ತಕ ಹಾಗೂ ಇತರ ಬರಹಗಳಿಗೆ ಎರಡನೆಯ ಅತಿಹೆಚ್ಚು ಓದುಗರು ಇರುವುದು ಅಮೆರಿಕದಲ್ಲಿ.

ಗೂಗಲ್‌ ಅನಲಿಟಿಕ್ಸ್‌ ನಡೆಸಿದ ಅಧ್ಯಯನದಿಂದ ಈ ವಿಚಾರ ಗೊತ್ತಾಗಿದೆ. ಮಹಾತ್ಮನ ಬದುಕು, ಬರಹಗಳಿಗೆ ಸಂಬಂಧಿಸಿದ www.mkgandhi.org ವೆಬ್‌ಸೈಟ್‌ಗೆ ಭೇಟಿ ನೀಡುವವರ ಸಂಖ್ಯೆ, ಅಲ್ಲಿಂದ ಮಾಹಿತಿ ಡೌನ್‌ಲೋಡ್‌ ಮಾಡಿಕೊಳ್ಳುವವರ ಸಂಖ್ಯೆ, ಅಲ್ಲಿರುವ ಇ–ಪುಸ್ತಕಗಳನ್ನು ಓದುವವರ ಪ್ರಮಾಣದ ಬಗ್ಗೆ ಗೂಗಲ್‌ ಅನಲಿಟಿಕ್ಸ್‌ ಸಿದ್ಧಪಡಿಸಿದ ವರದಿಯಿಂದ ಇದು ಗೊತ್ತಾಗಿದೆ.

ಮಹಾತ್ಮನ ಬಗೆಗಿನ ಪುಸ್ತಕ, ಬರಹಗಳಿಗೆ ಅತಿಹೆಚ್ಚಿನ ಸಂಖ್ಯೆಯ ಓದುಗರು ಇರುವುದು ಭಾರತದಲ್ಲಿ ಎಂದು ಈ ವೆಬ್‌ಸೈಟ್‌ನ ವಿನ್ಯಾಸಕ ರಾಜೇಶ್ ಶಿಂಧೆ ತಿಳಿಸಿದರು. ಮಹಾತ್ಮನ ಜನ್ಮದಿನವನ್ನು ವಿಶ್ವಸಂಸ್ಥೆಯು ‘ವಿಶ್ವ ಅಹಿಂಸಾ ದಿನ’ ಎಂದು ಘೋಷಿಸಿದೆ.

www.mkgandhi.org ವೆಬ್‌ಸೈಟನ್ನು ಮುಂಬೈನ ‘ಬಾಂಬೆ ಸರ್ವೋದಯ ಮಂಡಲ’ ನಿರ್ವಹಿಸುತ್ತಿದೆ. ವೆಬ್‌ಸೈಟ್‌ಗೆ ಹೊಸ ಮಾಹಿತಿ ಸೇರಿಸುವುದು ಈ ಸಂಸ್ಥೆಯ ಕೆಲಸ. ಮಹಾತ್ಮನ ಬರಹಗಳು ಹಾಗೂ ಮಹಾತ್ಮನ ಬಗ್ಗೆ ಬಂದಿರುವ ಬರಹಗಳನ್ನು ವಿಚಾರ ಸಂಕಿರಣ, ಕಾರ್ಯಾಗಾರ, ಸಭೆಗಳ ಮೂಲಕ ಪ್ರಚುರಪಡಿಸುವ ಕಾರ್ಯದಲ್ಲಿ ಈ ಸಂಸ್ಥೆ ತೊಡಗಿಕೊಂಡಿದೆ.

‘ಮಹಾತ್ಮನ ಬಗೆಗಿನ ಬರಹಗಳ ಓದುಗರು ವಿಶ್ವದ ಎಲ್ಲ ರಾಷ್ಟ್ರಗಳಲ್ಲೂ ಇದ್ದಾರೆ ಎಂಬುದು ಆನ್‌ಲೈನ್‌ ಓದುಗರ ವಿಶ್ಲೇಷಣೆಯಿಂದ ಗೊತ್ತಾಗುತ್ತದೆ. ಗಾಂಧಿಯ ಬಗ್ಗೆ ಓದುವುದರಲ್ಲಿ ಅಮೆರಿಕಕ್ಕೆ ಎರಡನೇ ಸ್ಥಾನ’ ಎಂದು ಶಿಂಧೆ ತಿಳಿಸಿದರು.

‘ಗಾಂಧಿ ಕುರಿತ ಒಂದು ಕೋಟಿಗೂ ಹೆಚ್ಚು ಇ–ಪುಸ್ತಕಗಳನ್ನು ಕಳೆದ ಆರು ವರ್ಷಗಳ ಅವಧಿಯಲ್ಲಿ ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಲಾಗಿದೆ. ಇದರಲ್ಲಿ ಭಾರತೀಯರ ಪಾಲು 60 ಲಕ್ಷ, ಅಮೆರಿಕದವರ ಪಾಲು 25 ಲಕ್ಷ’ ಎಂದು ವಿವರಿಸಿದರು.

‘ಗೂಗಲ್‌ ವರದಿಯ ಪ್ರಕಾರ, ಗಾಂಧಿ ಕುರಿತು ಓದುವವರು ಹೆಚ್ಚಿರುವ ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನದ ಸ್ಥಾನ 18ರಿಂದ 20ರ ನಡುವೆ ಇದೆ. ಇದು ಗಾಂಧೀಜಿಯ ಮಹತ್ವ ಆ ದೇಶದಲ್ಲಿ ಎಷ್ಟಿದೆ ಎಂಬುದನ್ನು ತೋರಿಸುತ್ತದೆ’ ಎಂದು ಮಂಡಲದ ವ್ಯವಸ್ಥಾಪಕ ಟ್ರಸ್ಟಿ ತುಳಸಿದಾಸ್ ಸೋಮಯ್ಯ ಹೇಳಿದರು.
ಮೊಬೈಲ್‌ ಆ್ಯಪ್‌ಗಳು ಪಡೆಯುತ್ತಿರುವ ಜನಪ್ರಿಯತೆಯನ್ನು ಗಮನಿಸಿ, ಗಾಂಧೀಜಿಗೆ ಸಂಬಂಧಿಸಿದ 150 ಪುಸ್ತಕಗಳನ್ನು ಮೊಬೈಲ್‌ನಲ್ಲಿ ಓದಲು ಸಾಧ್ಯವಾಗುವಂತೆ ಮಾಡಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT