ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಂತ್ರ ಮನುಷ್ಯ’ನ ಅನ್ವೇಷಣೆಗಳು

Last Updated 4 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಬಾಲ್ಯದಲ್ಲಿ ಇದ್ದಾಗಿನಿಂದಲೂ  ಯಂತ್ರಗಳ ಬಗ್ಗೆ ಎಲ್ಲಿಲ್ಲದ ಆಸಕ್ತಿ. ಏನಾದರೂ ಹೊಸದನ್ನು ಮಾಡಬೇಕು ಎಂಬ ತುಡಿತ. ಇಂತಹ ಮನೋಭಾವವೇ ತಮಿಳುನಾಡಿನ ಕಾಂಚೀಪುರದ ಡಾ. ಎಸ್‌. ಆರ್. ಪಾಂಡಿಯನ್‌ ಅವರನ್ನು ಇಂದು ವಿಶ್ವದಲ್ಲೇ ಗುರುತಿಸುವಂತೆ ಮಾಡಿದೆ.

ತಮಿಳುನಾಡಿನ ಈರೋಡ್‌ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾಗಲೇ ಪಾಂಡಿಯನ್‌ ಅವರಲ್ಲಿ ಯಂತ್ರಗಳ ಬಗ್ಗೆ  ಕುತೂಹಲ ಹುಟ್ಟಿತ್ತು. ಶಾಲಾ ಹಂತದಲ್ಲೇ  ಭಾಗವಹಿಸಿದ್ದ ‘ವಿಜ್ಞಾನ ಪ್ರದರ್ಶನ’ಗಳು  ಇವರ ಕುತೂಹಲ ಇನ್ನಷ್ಟು ಹೆಚ್ಚಲು ಕಾರಣವಾದವು. ಇವರ ಹಿಂದೆ ನಿಂತು ಶಿಕ್ಷಕರೂ ಸಹ ಬೆನ್ನುತಟ್ಟಿದ್ದರು. 

ರೋಬೊಟಿಕ್ಸ್ ಕ್ಷೇತ್ರದಲ್ಲಿ ಪಾಂಡಿಯನ್‌ ಸಾಕಷ್ಟು ಹೆಸರು ಮಾಡಿದ್ದಾರೆ. ಸಂಶೋಧನೆ ಕೇವಲ ಪ್ರಯೋಗಾಲಯಕ್ಕೆ ಸೀಮಿತವಾಗದೆ ಅದು ಜನ ಸಾಮಾನ್ಯರಿಗೂ ದೊರೆಯಬೇಕು. ಆದರೆ ಅದಕ್ಕೆ ಭಾರಿ ವೆಚ್ಚವಾಗಬಾರದು ಎಂಬುದು ಅವರ ಅಭಿಪ್ರಾಯವಾಗಿದೆ.

ಐಐಟಿ ಕಾನ್ಪುರದಲ್ಲಿ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಮುಗಿಸಿದ ನಂತರ, ಪಾಂಡಿಯನ್ ಅವರು ಐಐಟಿ ದೆಹಲಿಯಲ್ಲಿ ಪಿಎಚ್‌.ಡಿ ಪಡೆದರು. ಸದ್ಯ ಕಾಂಚೀಪುರದ ಭಾರತೀಯ ಮಾಹಿತಿ ತಂತ್ರಜ್ಞಾನ ವಿನ್ಯಾಸ ಮತ್ತು ತಯಾರಕಾ ಸಂಸ್ಥೆಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ. 

55 ವರ್ಷದ ಪಾಂಡಿಯನ್‌ ಅವರು 2003ರಲ್ಲಿ ಪ್ರೊಟೊಟೈಪ್‌ ಸ್ವಯಂಚಾಲಿತ  ಆಂದೋಲಕ (seesaw) ಕಂಡು ಹಿಡಿದ ನಂತರ ಪ್ರಸಿದ್ಧಿಯಾದರು. ಈ ವೇಳೆಗೆ ಅವರು ಮಿಚಿಗನ್‌ ವಿಶ್ವವಿದ್ಯಾಲಯದಲ್ಲಿದ್ದರು. ಇವರ  ಸಾಧನೆ ಬಗ್ಗೆ ನ್ಯೂಯಾರ್ಕ್‌ ಟೈಮ್ಸ್‌ ನಿಯತಕಾಲಿಕ ಲೇಖನವನ್ನೂ ಪ್ರಕಟಿಸಿತು.

ಜಪಾನ್‌ ಮತ್ತು ಅಮೆರಿಕದಲ್ಲಿ 10 ವರ್ಷ ಕೆಲಸ ಮಾಡಿದ ನಂತರ  ಅವರು ತಮಿಳುನಾಡಿಗೆ ವಾಪಸ್‌ ಬಂದರು. ತಮ್ಮ ತವರು ರಾಜ್ಯದಲ್ಲಿ  ರೋಬೊಟಿಕ್ಸ್‌ ವಿಜ್ಞಾನದಲ್ಲಿ  ಆಸಕ್ತ ತರುಣರಿಗೆ ಬೋಧನೆ ಮಾಡಲು ಆರಂಭಿಸಿದರು.

ಪಾಂಡಿಯನ್‌ ಅವರು ವಿದ್ಯಾರ್ಥಿಯಾಗಿದ್ದಾಗ ಬ್ಯಾಟರಿಗಳನ್ನು ಕೊಳ್ಳುವುದೂ ಸಾಧ್ಯವಿರಲಿಲ್ಲ. ಏಕೆಂದರೆ ಅವುಗಳು ಅಷ್ಟು ದುಬಾರಿಯಾಗಿದ್ದವು. ಆದರೆ ಇಂದು ಇವರು 20 ಕಡಿಮೆ ವೆಚ್ಚದ ರೋಬೊಟಿಕ್ಸ್‌ಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಇವುಗಳನ್ನು ಇಂದು ಹಲವಾರು ಕ್ಷೇತ್ರಗಳಲ್ಲಿ ಉಪಯೋಗಿಸಲಾಗುತ್ತದೆ. ಅದಕ್ಕೆಂದೇ  ಇವರಿಗೆ ‘ಮಷಿನ್‌ ಮ್ಯಾನ್‌’ ಎಂದು ಕರೆಯುತ್ತಾರೆ.

ಪಾಂಡಿಯನ್‌ ಅವರ ಮೊಬೈಲ್‌ ರೋಬೊಟಿಕ್ಸ್‌ ಅನ್ನು ಶಾಲಾಮಕ್ಕಳಿಗಾಗಿಯೇ ವಿನ್ಯಾಸ ಮಾಡಲಾಗಿದೆ. ಕಂಪ್ಯೂಟರ್‌ ನಿಯಂತ್ರಣದಲ್ಲಿ ಇದು ಮಕ್ಕಳೊಂದಿಗೆ ಸಂವಹನ ನಡೆಸುತ್ತದೆ. ಇದರಲ್ಲಿ ಎಚ್‌ಡಿ ವೆಬ್‌ಕ್ಯಾಮೆರಾ, ಮೈಕ್ರೊಫೋನ್‌, ಸ್ಪೀಕರ್‌ಗಳು ಇರುತ್ತವೆ. ಇದರಲ್ಲಿರುವ ಗಾಳಿಯ ಗುಣಮಟ್ಟ ಅಳೆಯುವ ಸೆನ್ಸರ್‌ಗಳು ಮಕ್ಕಳಿಗೆ ಪರಿಸರ ಜ್ಞಾನ ತಿಳಿಸಿಕೊಡಲು ಅನುಕೂಲವಾಗಲಿವೆ.

ಪಾಂಡಿಯನ್‌ ಅವರ ಮೊಬೈಲ್‌ ರೋಬೊಟಿಕ್ಸ್‌, ಅಮೆರಿಕದಲ್ಲಿ  ಮುಂದಿನ ತಿಂಗಳು ನಡೆಯಲಿರುವ ಅಂತರ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರದರ್ಶಿಸಲಾಗುತ್ತದೆ. ‌ಇತ್ತೀಚೆಗೆ ತಮ್ಮ ವಿದ್ಯಾರ್ಥಿಗಳು, ಸಹೋದ್ಯೋಗಿ ಮತ್ತು ವಿಜ್ಞಾನಿಗಳ ಸಹಯೋಗದಲ್ಲಿ ಭಾರತೀಯ ವೈದ್ಯಕೀಯ ಮತ್ತು ಸಂಶೋಧನಾ ಮಂಡಳಿಯಲ್ಲಿ ಕಡಿಮೆ ವೆಚ್ಚದ ಸೊಳ್ಳೆ ಹಿಡಿಯುವ ಉಪಕರಣವನ್ನು ಕಂಡುಹಿಡಿದಿದ್ದಾರೆ. ಆಳಸಮುದ್ರದ ಅನ್ವೇಷಣೆಗೆ ಅನುಕೂಲವಾಗುವ ರೋಬೊಟೊ ಅನ್ನು  ಪಾಂಡಿಯನ್‌ ಕಂಡುಹಿಡಿದಿದ್ದಾರೆ.

ಸದ್ಯ ಪಾಂಡಿಯನ್‌ ಅವರು ಜಪಾನಿನ ಸಂದರ್ಶಕ ವಿದ್ಯಾರ್ಥಿಗಳು ಮತ್ತು ಎಂಜಿನಿಯರ್ಸ್ ಜತೆ ಸಂಶೋಧನೆ ಯೊಂದರಲ್ಲಿ ತೊಡಗಿಕೊಂಡಿದ್ದಾರೆ. ಕಡಿಮೆ ವೆಚ್ಚದ ಪವನಶಕ್ತಿ ಸಾಧನ ಇದಾಗಿದ್ದು,  ಹೆಚ್ಚು ಗಾಳಿ ಬೀಸುವ ಪ್ರದೇಶಗಳಲ್ಲಿರುವ ಮನೆಗಳಲ್ಲಿ ಇದನ್ನು ಬಳಸಿ ವಿದ್ಯುತ್‌ ಉತ್ಪಾದನೆ ಮಾಡಬಹುದಾಗಿದೆ.

***
‘ದೇಶದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಜನಸಾಮಾನ್ಯರಿಗೆ ದೊರೆಯುವುದಿಲ್ಲ. ಕಾಲೇಜುಗಳ ವಿದ್ಯಾರ್ಥಿಗಳಿಗೆ ಇದು ಸುಲಭವಾಗಿ ಸಿಗಬೇಕು. ಆಗ ಶಿಕ್ಷಣ ಕಷ್ಟವಾಗುವುದಿಲ್ಲ.
–ಡಾ.ಎಸ್‌.ಆರ್. ಪಾಂಡಿಯನ್‌, ರೊಬೊಟಿಕ್ಸ್‌ ಅನ್ವೇಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT