ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಂಸದಂಗಡಿಯ ನವಿಲು (ಕವಿತೆಗಳು)

Last Updated 8 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಮಾಂಸದಂಗಡಿಯ ನವಿಲು (ಕವಿತೆಗಳು)
ಲೇ: ಎನ್‌.ಕೆ. ಹನುಮಂತಯ್ಯ, ಪ್ರ: ಲಡಾಯಿ ಪ್ರಕಾಶನ  ನಂ.21, ಪುಟ:176 ಬೆಲೆ:₹ 140, ಪ್ರಸಾದ ಹಾಸ್ಟೇಲ್‌, ಗದಗ–582 101


ಅಕಾಲಿಕವಾಗಿ ತೀರಿಕೊಂಡ ಕವಿ ಎನ್‌.ಕೆ. ಹನುಮಂತಯ್ಯ ಅವರ ಈತನಕದ ಕವಿತೆಗಳನ್ನು ‘ಮಾಂಸದಂಗಡಿಯ ನವಿಲು’ವಿನಲ್ಲಿ ಸಂಕಲಿಸಲಾಗಿದೆ. ಎನ್ಕೆ ತಮ್ಮ ಜೀವಿತದ ಅವಧಿಯಲ್ಲೇ ‘ಹಿಮದ ಹೆಜ್ಜೆ’, ‘ಚಿತ್ರದ ಬೆನ್ನು’ ಎಂಬ ಎರಡು ಸಂಕಲನಗಳನ್ನು ಪ್ರಕಟಿಸಿದ್ದರು. ಆ ಸಂಕಲನಗಳ ಜೊತೆಗೆ ಅವರದೊಂದು ಅಪ್ರಕಟಿತ ಕವಿತೆಯನ್ನು ಇದು ಒಳಗೊಂಡಿದೆ. ಕವಿ ಹನುಮಂತಯ್ಯ ಕನ್ನಡಕ್ಕೆ ಹೊಸದೆನ್ನಿಸುವ ರೂಪಕಜಗತ್ತನ್ನು ಸೃಷ್ಟಿಸಿದ ಪ್ರತಿಭಾವಂತ ಯುವಕವಿಯಾಗಿದ್ದರು.

‘ಅಸ್ಪೃಶ್ಯ!/ ಹೌದು; ನಾನು ಗೋವು ತಿಂದು/ ಗೋವಿನಂತಾದವನು/ ನೀವು ನೀಡುವ ಮೇವು ತಿಂದು/ ನಿಮ್ಮಂಥ ಮನುಷ್ಯನಾಗಲಾರೆ/ ಮನುಷ್ಯರನ್ನು ತಿನ್ನಲಾರೆ’ (ಗೋವು ತಿಂದು ಗೋವಿನಂತಾದವನು – ಪು.88) ಎಂಬ ಸಾಲುಗಳು ಹೊಸ ರೂಪಕವನ್ನು ಕನ್ನಡ ಕಾವ್ಯದ ಓದುಗರ ಎದುರಿಗಿಟ್ಟಿದ್ದವು. ಈ ಬಗೆಯ ಸಾಲುಗಳನ್ನು ಎದುರುಗೊಂಡ ಓದುಗನ ಅನುಭವ, ಸಂವೇದನೆಗೆ ತಾಜಾ ನುಡಿಗಟ್ಟೊಂದು ಸೇರಿಕೊಂಡಿತ್ತು.

ಎನ್ಕೆ ಬರೆದಿರುವುದು 37 ಕವಿತೆಗಳ ಜೊತೆಗೆ ಇಲ್ಲಿ ಮೊದಲ ಬಾರಿಗೆ ಪ್ರಕಟವಾಗಿರುವ ‘ಅವಳ ಪರಿಮಳ’ ಕವಿತೆಯನ್ನು. ಇಷ್ಟು ಮಾತ್ರದಿಂದಲೇ ಗಾಢ ವಿಷಾದ, ನೋವು, ಸಂಕಟಗಳನ್ನು ತೀವ್ರವಾದ ಸಾಲುಗಳಲ್ಲಿ, ಚಿತ್ರಗಳಲ್ಲಿ ಹಿಡಿದಿಟ್ಟವರು ಈ ಕವಿ. ಆದ್ದರಿಂದಲೇ ಅವರ ಕಾವ್ಯ ಕನ್ನಡ ಕಾವ್ಯ ಜಗತ್ತಿನಲ್ಲಿ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು.

ತನ್ನ ಪುಟ್ಟ ಕೈಗಳಲ್ಲಿ ಜಗತ್ತಿನ ಸಮಸ್ತವನ್ನೂ ಒಳಗೊಳ್ಳಲು ಯತ್ನಿಸಿದ ಈ ಕವಿ ಕಾತರ, ವಿಸ್ಮಯಗಳಿಂದ ಬರೆದದ್ದು ಈಗ ಒಂದೆಡೆ ಸಿಗುವಂತಾಗಿದೆ. ಇಲ್ಲಿ, ಇದೇ ಮೊದಲ ಬಾರಿಗೆ ಪ್ರಕಟವಾಗಿರುವ ‘ಅವಳ ಪರಿಮಳ’ ಕವಿತೆಯ ಒಂದು ಭಾಗ ಹೀಗಿದೆ: ‘ಈ ನಡುರಾತ್ರಿ/ ನನ್ನ ಎದೆಯಾಳದ ಒಲವಿನ ನಾಯಿಮರಿ/ ನಿದ್ದೆಯ ಕಚ್ಚಿಕೊಂಡು/ ನಿನ್ನ ಹೃದಯದ ಬಾಗಿಲಲ್ಲಿ ಮಲಗಿದೆ/ ದಯವಿಟ್ಟು ಹೊಡೆಯದೆ ಕಾಪಾಡು’ (ಪು.154). ಇದು ಎನ್ಕೆ ಮುಂದೆ ನಡೆಯಬಹುದಾಗಿದ್ದ ಕಾವ್ಯದ ಹೆಜ್ಜೆಗುರುತುಗಳನ್ನು ತೋರುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT