ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ತಂಡದಿಂದ ಕೃತ್ಯ; ಸದ್ಯದಲ್ಲೇ ವರದಿ

ಸಂಶೋಧಕ ಎಂ. ಎಂ. ಕಲಬುರ್ಗಿ, ದಾಭೋಲ್ಕರ್‌, ಗೋವಿಂದ ಪಾನ್ಸರೆ ಹತ್ಯೆ ಪ್ರಕರಣ
Last Updated 11 ಅಕ್ಟೋಬರ್ 2016, 19:35 IST
ಅಕ್ಷರ ಗಾತ್ರ

ಬೆಂಗಳೂರು: ಸಂಶೋಧಕ ಎಂ.ಎಂ. ಕಲಬುರ್ಗಿ, ಮಹಾರಾಷ್ಟ್ರದ ನರೇಂದ್ರ ದಾಭೋಲ್ಕರ್‌ ಹಾಗೂ ಗೋವಿಂದ ಪಾನ್ಸರೆ ಅವರನ್ನು ಕೊಂದಿದ್ದು ಒಂದೇ ತಂಡವೆಂದು ತನಿಖಾ ತಂಡಗಳು ಬಲವಾದ ಅನುಮಾನ ವ್ಯಕ್ತಪಡಿಸಿವೆ.

‘ಮೂರೂ ಹತ್ಯೆ ನಡೆದ ಸ್ಥಳದಲ್ಲಿ ದೊರಕಿದ್ದ ಪಿಸ್ತೂಲಿನ ಖಾಲಿ ಕೋಕಾಗಳನ್ನು (ಕಾಟ್ರೇಜ್‌)  ಪರೀಕ್ಷೆಗಾಗಿ ಇಂಗ್ಲೆಂಡ್‌ನ ನ್ಯೂ ಸ್ಕಾಟ್‌ಲೆಂಡ್ ಯಾರ್ಡ್‌ ಪೊಲೀಸರ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿಯ ಪೊಲೀಸರು, ಒಂದೇ ತಂಡದ ಸದಸ್ಯರು ಈ ಹತ್ಯೆಗಳನ್ನು ಮಾಡಿರುವುದಾಗಿ ಮೌಖಿಕವಾಗಿ ಹೇಳಿದ್ದಾರೆ’ ಎಂದು ಸಿಐಡಿಯ ತನಿಖಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೈಕ್‌ನಲ್ಲಿ ಬಂದು ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ಹತ್ಯೆಗೆ ದೇಶೀಯ ನಿರ್ಮಿತ 7.65 ಎಂ.ಎಂ. ಪಿಸ್ತೂಲ್‌ ಬಳಸಿದ್ದಾರೆ.  ಈ ಎಲ್ಲ ಅಂಶಗಳನ್ನು ಪರಿಶೀಲನೆ ನಡೆಸುತ್ತಿರುವ ಸ್ಕಾಟ್‌ಲೆಂಡ್‌ ಯಾರ್ಡ್‌ ಪೊಲೀಸರು ಕೆಲವೇ ದಿನಗಳಲ್ಲಿ ವರದಿ ನೀಡಲಿದ್ದಾರೆ. ಆ ವರದಿಗಾಗಿ ಕಾಯುತ್ತಿದ್ದೇವೆ’ ಎಂದು ತಿಳಿಸಿದರು.

ಗೋಪ್ಯ ಸ್ಥಳದಲ್ಲಿ ದುಷ್ಕರ್ಮಿಗಳು: 2013ರ ಆಗಸ್ಟ್‌ನಲ್ಲಿ ನರೇಂದ್ರ ದಾಭೋಲ್ಕರ್‌, 2015ರ  ಫೆಬ್ರುವರಿನಲ್ಲಿ ಗೋವಿಂದ ಪಾನ್ಸರೆ, 2015ರ ಆಗಸ್ಟ್‌ 30ರಂದು ಕಲಬುರ್ಗಿ ಹತ್ಯೆ ನಡೆದಿದೆ. ಹತ್ಯೆ ಬಳಿಕ ಪರಾರಿಯಾದ  ದುಷ್ಕರ್ಮಿಗಳು ಗೋಪ್ಯ ಸ್ಥಳಗಳಲ್ಲಿ ಅಡಗಿರುವ ಮಾಹಿತಿ ಇದ್ದು, ಅವರಿಗಾಗಿ ತನಿಖಾ ತಂಡಗಳು ಹುಡುಕಾಟ ನಡೆಸಿವೆ.

‘ಮೂರು ಹತ್ಯೆ ನಡೆದ ಸ್ಥಳದ ಸುತ್ತಮುತ್ತ ಅಳವಡಿಸಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದುಷ್ಕರ್ಮಿಗಳ ಹಾವಭಾವವನ್ನು  ತಜ್ಞರು  ಪರಿಶೀಲಿಸಿದ್ದಾರೆ. ಮೂರು ಹತ್ಯೆ ಮಾಡಿರುವ ವ್ಯಕ್ತಿಗಳ ಹಾವಭಾವದಲ್ಲಿ ಸಾಕಷ್ಟು ಸಾಮ್ಯತೆ ಇರುವುದಾಗಿ ಅಭಿಪ್ರಾಯಪಟ್ಟಿದ್ದಾರೆ. ಅವರಿಂದ ಈಗಾಗಲೇ ಹೇಳಿಕೆ ಪಡೆಯಲಾಗಿದ್ದು, ದುಷ್ಕರ್ಮಿಗಳು ಸಿಕ್ಕ ಬಳಿಕ ಆ ಹೇಳಿಕೆಯನ್ನು ಸಾಕ್ಷಿಯನ್ನಾಗಿ ಬಳಸಿಕೊಳ್ಳಲಾಗುವುದು’ ಎಂದು ಸಿಐಡಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಆರೋಪಿಗಳು ಮಹಾರಾಷ್ಟ್ರ ಅಥವಾ ನೇಪಾಳದಲ್ಲಿ ಅವಿತುಕೊಂಡಿರುವ ಅನುಮಾನವಿದೆ. ಅದೇ ಕಾರಣಕ್ಕೆ ಅಲ್ಲೆಲ್ಲ  ವಿಶೇಷ ತಂಡಗಳು ನಿಗಾ ಇರಿಸಿವೆ. ಕಾಲ ಕಾಲಕ್ಕೆ ತನಿಖಾ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಆದಷ್ಟು ಬೇಗ ಆರೋಪಿಗಳ ನಿಖರ ಮಾಹಿತಿ ಲಭ್ಯವಾಗುವ ವಿಶ್ವಾಸವಿದೆ’ ಎಂದು ಅವರು ಹೇಳಿದರು.

ಉತ್ತರ ಕರ್ನಾಟಕದಲ್ಲಿ ಭಾಷಣ: ದಾಭೋಲ್ಕರ್‌ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿರುವ ಆರೋಪಿಯು ಉತ್ತರ ಕರ್ನಾಟಕದ ಹಲವು ನಗರಗಳಲ್ಲಿ ಭಾಷಣ ಮಾಡುತ್ತಿದ್ದರು ಎಂಬ ಮಾಹಿತಿ ತನಿಖಾಧಿಕಾರಿಗಳಿಗೆ ಸಿಕ್ಕಿದೆ.

‘ಹುಬ್ಬಳ್ಳಿ, ಬೆಳಗಾವಿಯಲ್ಲಿ ನಡೆಯುತ್ತಿದ್ದ ಧಾರ್ಮಿಕ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ನಡೆಯುತ್ತಿದ್ದ ಗುಪ್ತ ಸಭೆಗಳಿಗೆ ಆರೋಪಿ ಬಂದು ಹೋಗುತ್ತಿದ್ದರು. ಆ ಸಂಬಂಧ ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅವರ ಹೇಳಿಕೆಯನ್ನೂ ಪಡೆಯಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ವಿಚಾರಣೆ ವೇಳೆ ತಮ್ಮ ಮೇಲಿನ ಆರೋಪ ತಳ್ಳಿ ಹಾಕಿರುವ ಬಂಧನದಲ್ಲಿರುವ   ಆರೋಪಿಯು ‘ಧರ್ಮದ ಏಳಿಗೆಗಾಗಿ ಭಾಷಣ ಮಾಡುತ್ತಿದ್ದೆ ಹೊರತು, ಬೇರೆ ಯಾವುದೇ ದುರುದ್ದೇಶವಿರಲಿಲ್ಲ’ ಎಂದು ಹೇಳಿರುವುದಾಗಿ ಗೊತ್ತಾಗಿದೆ.

ಇನ್ನೂ ಮೂರು ಪ್ರಕರಣಗಳಲ್ಲಿ ಸಾಮ್ಯತೆ ಕಂಡುಬಂದಿದ್ದರಿಂದ  ಸಿಐಡಿ, ಪುಣೆಯ ಎಸ್‌ಐಟಿ ಹಾಗೂ ಸಿಬಿಐ ಅಧಿಕಾರಿಗಳು ಜಂಟಿಯಾಗಿ ತನಿಖೆ ಮುಂದುವರಿಸಿದ್ದಾರೆ.

***
ಕಲಬುರ್ಗಿ ಒಡನಾಡಿಗಳ ವಿಚಾರಣೆಗೆ ನಿರ್ಧಾರ: 
ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ಲಭ್ಯವಾಗದಿದ್ದರಿಂದ ಕಲಬುರ್ಗಿ ಅವರ ಒಡನಾಡಿಗಳನ್ನು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸಲು ಸಿಐಡಿ ನಿರ್ಧರಿಸಿರುವುದಾಗಿ ಗೊತ್ತಾಗಿದೆ.

ಇತ್ತೀಚೆಗೆ ಧಾರವಾಡ ಸೇರಿದಂತೆ ಕೆಲವೆಡೆ ನಡೆದಿರುವ ಕಾರ್ಯಕ್ರಮಗಳ ಮಾಹಿತಿ ಪಡೆದುಕೊಂಡಿರುವ ಅಧಿಕಾರಿಗಳು, ಕಲಬುರ್ಗಿ ಅವರ ಒಡನಾಟದ ಬಗ್ಗೆ ಭಾಷಣ ಮಾಡಿದವರನ್ನು ಸಂಪರ್ಕಿಸುತ್ತಿದ್ದಾರೆ. ಅವರಿಂದ ಲಿಖಿತ ಹೇಳಿಕೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಕೆಲವರು ಅಧಿಕಾರಿಗಳ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ತಿಳಿದುಬಂದಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT