ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ ಪ್ರೇಕ್ಷಕರಿಗೆ ‘ಬರ್ಸ’ದ ಸಿಂಚನ

Last Updated 17 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಕಥೆಯೇ ನಾಯಕನಾಗಿರುವ ಸಿನಿಮಾ ‘ಬರ್ಸ’ (ಮಳೆ) ತುಳು ಚಿತ್ರರಂಗದಲ್ಲಿ ಹೊಸ ಭರವಸೆಯನ್ನು ಮೂಡಿಸುತ್ತಿದೆ. ಮಾರುಕಟ್ಟೆ ತೆರವು ಮಾಡಿ ಕಟ್ಟಡ ನಿರ್ಮಿಸಲು ಹೊರಟಿರುವ ಖಳನಾಯಕ ಶಿವರಾಮನ (ಗೋಪಿನಾಥ್ ಭಟ್) ಆಶಯಕ್ಕೆ ವಿರುದ್ಧವಾಗಿ ನಾಯಕ ಪೃಥ್ವಿ (ಅರ್ಜುನ್ ಕಾಪಿಕಾಡ್) ನಿಲ್ಲುತ್ತಾನೆ.

ಪೃಥ್ವಿಯನ್ನು ಹಣಿಯುವ ಶಿವರಾಮನ ಪ್ರಯತ್ನದಲ್ಲಿ ಹಸೆಮಣೆ ಏರಬೇಕಾದ ಮುಗ್ಧೆಯೊಬ್ಬಳು ಸಾವನ್ನಪ್ಪುತ್ತಾಳೆ. ಮಾರುಕಟ್ಟೆ ವ್ಯಾಪಾರಿಗಳು ಹಾಗೂ ಶಿವರಾಮನ ಸಂಘರ್ಷದಿಂದ ಆರಂಭವಾಗುವ ಸಿನಿಮಾ ಮುಂದುವರಿದಂತೆ ನಾಯಕ ಹಾಗೂ ಖಳನಾಯಕರ ನಡುವಿನ ಹೋರಾಟಕ್ಕೆ ತೆರೆದುಕೊಳ್ಳುತ್ತದೆ. ಮಾರುಕಟ್ಟೆಯನ್ನು ಉಳಿಸಬೇಕೆನ್ನುವ ನಾಯಕನ ಛಲ, ಕಸಿಯಬೇಕೆನ್ನುವ ಖಳನಾಯಕನ ಹಠ, ನಡುವೆ ಚಿಗುರುವ ಪ್ರೇಮ್ ಕಹಾನಿ, ಮಗಳನ್ನು ಕಳೆದುಕೊಂಡ ತಂದೆಯ ಹತಾಶೆ ಇವಿಷ್ಟು ಗುರುವಾರ ಸುರಿಯಲು ಆರಂಭಿಸಿದ ‘ಬರ್ಸ’ದ ಒಟ್ಟು ಕಥಾ ಹಂದರ.

ಬರ್ಸದ ಅಬ್ಬರ ಹೆಚ್ಚಲು ದೇವದಾಸ್ ಕಾಪಿಕಾಡ್ ಅವರ ಸಾಹಿತ್ಯದ ಪಾತ್ರ ಮಹತ್ವದ್ದು. ಸಿನಿಮಾದ ಪ್ರತಿಯೊಂದು ಹಾಡೂ ಅದ್ಭುತವಾಗಿ ಮೂಡಿಬಂದಿದೆ. ಮಾಸ್ ಪ್ರೇಕ್ಷಕರಿಗೆ ತಾಸೆದ ಪೆಟ್ಟ್, ದೈವ ಭಕ್ತರಿಗೆ ಸತ್ಯದಾ ಆ ತುಡರ್, ಪ್ರೇಮಿಗಳಿಗೆ ಮೋನೆಡ್ ನಿನ್ನ, ಓ ಮೈ ಬೇಬಿ ಹಾಡು.. ಹೀಗೆ ಎಲ್ಲ ವರ್ಗದ ಪ್ರೇಕ್ಷಕರಿಗೂ ಹಿಡಿಸುವಂತಹ ಹಾಡುಗಳು ‘ಬರ್ಸ’ದಲ್ಲಿದೆ.

‘ಬರ್ಸ’ ಗಂಭೀರ ಕಥಾವಸ್ತುವನ್ನು ಒಳಗೊಂಡಿರುವುದರಿಂದ ಕಾಮಿಡಿ ಪೂರ್ತಿ ಚಿತ್ರವನ್ನು ಆವರಿಸಿಕೊಂಡಿಲ್ಲ. ನಾಯಕನಾಗಿ ನಟಿಸಿದ ಅರ್ಜುನ್ ಕಾಪಿಕಾಡ್ ಈ ಸಿನಿಮಾದಲ್ಲೂ ತಮ್ಮ ಕಿಂಗ್ ಆಫ್ ಆಕ್ಷನ್ ಬಿರುದನ್ನು ಸಮರ್ಥಿಸಿಕೊಂಡಿದ್ದಾರೆ. ಚಿತ್ರದುದ್ದಕ್ಕೂ ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಮಾಸ್ ಮಾದನ ಸಾಹಸ ಅದ್ದೂರಿಯಾಗಿ ಮೂಡಿಬಂದಿದೆ.

ಗೋಪಿನಾಥ್ ಭಟ್ ಹಾಗೂ ಆರ್. ಜೆ. ಅನುರಾಗ್ ಖಳನಟರಾಗಿ ಭರವಸೆ ಮೂಡಿಸಿದ್ದಾರೆ. ದೇವದಾಸ್ ಕಾಪಿಕಾಡ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಉಮೇಶ್ ಮಿಜಾರ್ ಕಾಮಿಡಿ ಪಾತ್ರಧಾರಿಗಳಾಗಿ ಗಮನ ಸೆಳೆಯುತ್ತಾರೆ. ನಾಯಕಿ ಸ್ವಾತಿ (ಕ್ಷಮಾ) ಅವರಿಗೆ ಬರ್ಸ ಮೊದಲ ಸಿನಿಮಾ ಎನ್ನುವುದು ಪ್ರೇಕ್ಷಕನಿಗೆ ಅರಿವಾಗುತ್ತದೆ. ಪಿ. ಎಲ್. ರವಿ ಛಾಯಾಗ್ರಹಣ ಚಿತ್ರದ ಅಂದವನ್ನು ಹೆಚ್ಚಿಸಿದೆ.

ಆ್ಯಕ್ಷನ್, ಕಾಮಿಡಿ, ಲವ್, ಸೆಂಟಿಮೆಂಟ್‌ಗಳ ಒಟ್ಟು ಹೂರಣವಾದ ಬರ್ಸ ಕುಟುಂಬ ಸಮೇತರಾಗಿ ನೋಡಬಹುದಾದ ಸಿನಿಮಾ ಎನ್ನಬಹುದು. ಸತೀಶ್ ಬಂದಲೆಯ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಹೆಚ್ಚಿನ ಅವಕಾಶ ಸಿಗಬೇಕಾಗಿದೆ.

‘ಚಾಲಿಪೋಲಿಲು’, ‘ದಬಕ್‌ ದಬಾ ಐಸಾ’ ಸಿನಿಮಾಗಳಿಗೆ ಹೋಲಿಸಿದರೆ ‘ಬರ್ಸ’, ತುಳುವಿನಲ್ಲಿ ಗಂಭೀರ ವಿಷಯಗಳ ಕುರಿತಾದ ಚಿತ್ರಗಳ ನಿರೀಕ್ಷೆಯಲ್ಲಿರುವ ಪ್ರೇಕ್ಷಕರಿಗೆ ಇಷ್ಟವಾಗಬಹುದು. ತುಳು ಸಿನಿಮಾ ಅಂದರೆ ಕಾಮಿಡಿ ಅನ್ನುವ ಇಮೇಜ್‌ನಿಂದ ತುಳು ಚಿತ್ರರಂಗ ಹೊರಬರುವ ಪ್ರಯತ್ನಕ್ಕೆ ಇದು ಮುನ್ನುಡಿಯಾಗಬಹುದು. ಕಥೆಯೇ ನಾಯಕನಾಗಿರುವ ಸಿನಿಮಾವೊಂದು ತುಳುವಿನಲ್ಲೂ ಬರಲಿ ಅನ್ನುವ ನಿರೀಕ್ಷೆಯಲ್ಲಿ ಪ್ರೇಕ್ಷಕನಿದ್ದಾನೆ.
-ಧೀರಜ್‌ ಪೊಯ್ಯೆಕಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT