ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲದ ಓಟದಲ್ಲಿ ಜೀವನದ ಮಾಟ

Last Updated 18 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಯಾರಾದರೂ ನಮಗೆ ಏನಾದರೊಂದು ಕೆಲಸವನ್ನು ಹೇಳಲು ಬಂದಾಗ ಕೂಡಲೇ ನಾವು ಹೇಳುವ ಮಾತು: ’ಕ್ಷಮಿಸಿ, ನನಗೆ ಸಮಯವಿಲ್ಲ. ತುಂಬ ಬ್ಯುಸಿಯಾಗಿದ್ದೇನೆ.’

ಈ ಮಾತು ಕೆಲವೊಮ್ಮೆ ನಿಜವಿದ್ದೀತು; ಹಲವೊಮ್ಮೆ ನಮಗೆ ಇಷ್ಟವಿಲ್ಲದ ಕೆಲಸದಿಂದ ತಪ್ಪಿಸಿಕೊಳ್ಳುವ ಉಪಾಯದ ಮಾತು ಕೂಡ ಇದಾಗಿರಬಹುದು; ಬಹುಪಾಲು ಸಮಯದಲ್ಲಿ ನಮ್ಮ ಸೋಮಾರಿತನವೂ ಈ ಮಾತನ್ನು ನಮ್ಮಿಂದ ಆಡಿಸಿರಬಹುದು.

ಆದರೆ ಕೆಲವರಿಗೆ ಕೆಲಸ ಮಾಡುವ ಮನಸ್ಸು ಇರುತ್ತದೆ; ಇಷ್ಟವೂ ಇರುತ್ತದೆ; ಶಕ್ತಿಯೂ ಇರುತ್ತದೆ; ಆದರೆ ನಿಜವಾಗಿಯೂ ಈ ಹೊಸ ಕೆಲಸದಲ್ಲಿ ತೊಡಗಿಕೊಳ್ಳುವಷ್ಟು ಸಮಯ ಇರುವುದಿಲ್ಲ; ಅಂಥವರು ಪ್ರಾಮಾಣಿಕವಾಗಿ ‘ಸಮಯ ಇಲ್ಲ’ ಎಂದು ತುಸು ಬೇಸರದಿಂದಲೂ ಹೇಳಬೇಕಾಗಬಹುದು. ಇಲ್ಲಿ ನಾವು ಗಮನಿಸಬೇಕಾದ್ದು – ಮೇಲಿನ ಮಾತಿನಲ್ಲಿ ಎಲ್ಲ ರೀತಿಯ ಜನರೂ ಸಮಾನವಾಗಿ ಹೇಳುತ್ತಿರುವುದು ‘ಸಮಯ’ದ ಬಗ್ಗೆ. ಸಮಯ ಎನ್ನುವುದು ಕಾಲದ ನಡಿಗೆ. ನಾವಿಲ್ಲಿ ಯೋಚಿಸಬೇಕಾದದ್ದು ‘ಕಾಲ’ವನ್ನು ಕುರಿತು.

ನಾವು ಜೀವನದಲ್ಲಿ ಏನು ಮಾಡುತ್ತಿದ್ದರೂ, ಏನನ್ನು ಮಾಡದಿದ್ದರೂ, ಪ್ರತಿಕ್ಷಣವೂ ತನ್ನ ಪಾಡಿಗೆ ತಾನು ಮುಂದಕ್ಕೆ ಸಾಗುತ್ತಹೋಗುತ್ತಿರುತ್ತದೆ ‘ಕಾಲ.’ ಯಾರಿಗೂ ಕಾಯದೆ ಅದು ಮುನ್ನುಗ್ಗುತ್ತಲೇ ಇರುತ್ತದೆ. ಹೀಗಾಗಿ ನಾವಿಲ್ಲಿ ಯೋಚಿಸಬೇಕಾದ್ದು  – ಈ ‘ಕಾಲ’ದ ಸದುಪಯೋಗ ಹೇಗೆ? ನಾವು ಕ್ರಿಯಾಶೀಲರಾಗಿದ್ದರೂ ಅಥವಾ ಸೋಮಾರಿಗಳಾಗಿದ್ದರೂ ಕಾಲಕ್ಕೆ ಏನೂ ತೊಂದರೆಯಿಲ್ಲ.

ಆದರೆ ನಮ್ಮ ಜೀವನವು ಸಾರ್ಥಕತೆಯನ್ನು ಪಡೆಯಬೇಕಾದರೆ, ಅದು ಗುರಿಯೊಂದನ್ನು ಮುಟ್ಟಬೇಕಾದರೂ ನಾವು ಈ ಕಾಲವನ್ನು ಒಲಿಸಿಕೊಳ್ಳದೆ ಬೇರೆ ದಾರಿಯಿಲ್ಲ. ಕಾಲವನ್ನು ಒಲಿಸಿಕೊಳ್ಳುವುದು ಎಂದರೆ ಕಾಲದ ಸದುಪಯೋಗವೇ ಹೌದು.

ನಮ್ಮ ಯಾವುದೋ ಮಾತಿಗೂ ಆಜ್ಞೆಗೂ ಕಾರ್ಯಕ್ಕೂ ಚಿಂತನೆಗೂ ಚಿಂತೆಗೂ ಸುಖಕ್ಕೂ ದುಃಖಕ್ಕೂ ನೋವಿಗೂ ನಲಿವಿಗೂ ಕಾಯದೆ ಸದಾ ನಮ್ಮನ್ನು ಬಿಟ್ಟು ನಮ್ಮಿಂದ ದೂರ ಸರಿಯುತ್ತಲೇ ಇರುತ್ತದೆ ಕಾಲ. ಹೀಗೆ ನಮ್ಮಿಂದ ದೂರ ಓಡುತ್ತಿರುವ ಅದನ್ನು ನಮ್ಮದನ್ನಾಗಿಸಿಕೊಳ್ಳಲು ಸಾಧ್ಯ. ಇದಕ್ಕಾಗಿ ಇರುವ ದಾರಿ ಎಂದರೆ ಒಂದೊಂದು ಕ್ಷಣವನ್ನೂ ನಾವು ವ್ಯರ್ಥವನ್ನಾಗಿಸದೆ ಬದುಕಿನ ಹಿತಕ್ಕಾಗಿ ಬಳಸಿಕೊಳ್ಳುವುದು.

ಕಾಲ ಕಣ್ಣಿಗೆ ಕಾಣದು; ಆದರೆ ಅದರ ಪರಿಣಾಮ ನಮ್ಮ ಅನುಭವಕ್ಕೆ ಬರಬಲ್ಲದು. ನಮಗೆ ಒದಗಿದ ಕಾಲವನ್ನು ನಾವು ಹೇಗೆ ಸಾರ್ಥಕವಾಗಿ ಬಳಸಿಕೊಂಡಿದ್ದೇವೆ ಎನ್ನುವುದಕ್ಕೆ ನಮ್ಮ ಜೀವನವೇ ಸಾಕ್ಷಿಯಾಗಿರುತ್ತದೆ.
-ಎಸ್ಸೆಸ್‌ಪೀಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT