ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಂದು ಬೇಟೆಗೆ ಕಾದಿರುವವರು...

Last Updated 23 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ
ನಾಯಕ ವಿರಾಟ್‌ ಕೊಹ್ಲಿ ಹಾಗೂ ಕೋಚ್‌ ಅನಿಲ್‌ ಕುಂಬ್ಳೆ ಮಾರ್ಗದರ್ಶನದ ಭಾರತ ಕ್ರಿಕೆಟ್‌ ತಂಡ ನೀಡುತ್ತಿರುವ ಪ್ರದರ್ಶನ ಎದುರಾಳಿ ಆಟಗಾರರಲ್ಲಿ ಭೀತಿ ಹುಟ್ಟಿಸಿರುವುದು ನಿಜ. ನ್ಯೂಜಿಲೆಂಡ್‌ ಎದುರಿನ ಗೆಲುವಿನ ಖುಷಿಯಲ್ಲಿರುವ ಕೊಹ್ಲಿ ಬಳಗ ಕೆಲವೇ ದಿನಗಳಲ್ಲಿ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಆಡಲು ಕಣಕ್ಕಿಳಿಯುತ್ತಿದೆ. ಆದರೆ, ಕಿವೀಸ್‌ ರೀತಿ ಆಂಗ್ಲರು ಸುಲಭ ತುತ್ತಾಗಲಾರರು. ಈ ಕುರಿತು ಕೆ.ಓಂಕಾರ ಮೂರ್ತಿ ವಿಶ್ಲೇಷಿಸಿದ್ದಾರೆ.
 
***
ಮಹೇಂದ್ರ ಸಿಂಗ್‌ ದೋನಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಬೇಕು..!
–2012ರಲ್ಲಿ ಇಂಗ್ಲೆಂಡ್‌ ವಿರುದ್ಧ ಸ್ವದೇಶದಲ್ಲಿ ಭಾರತ ತಂಡದವರು ಟೆಸ್ಟ್‌ ಸರಣಿ ಸೋಲು ಕಂಡು ಟೀಕೆಗೆ ಗುರಿಯಾದಾಗ ಎದ್ದಿದ್ದ ಕೂಗು ಇದು. ಅದಕ್ಕಿಂತ ಒಂದು ವರ್ಷದ ಹಿಂದೆಯಷ್ಟೇ ದೋನಿ ಮುಂಬೈನಲ್ಲಿ ಏಕದಿನ ವಿಶ್ವಕಪ್‌ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 
 
ಆದರೆ, ಅದ್ಯಾವುದನ್ನೂ ನೆನಪಿಸಿಕೊಳ್ಳದ ಅಭಿಮಾನಿಗಳು ದೋನಿ ತಲೆದಂಡಕ್ಕೆ ಆಗ್ರಹಿಸಿದ್ದರು. ಮಾಜಿ ಆಟಗಾರರು ಅದಕ್ಕೆ ದನಿಗೂಡಿಸಿದ್ದರು. ಏಕೆಂದರೆ ಭಾರತ ತಂಡ 1999ರ ಬಳಿಕ ಸ್ವದೇಶದಲ್ಲಿ ಮೊದಲ ಬಾರಿ ಟೆಸ್ಟ್‌ ಸರಣಿಯಲ್ಲಿ ಆಘಾತ ಎದುರಿಸಿತ್ತು.
 
ಇಂಗ್ಲೆಂಡ್‌ ವಿರುದ್ಧ ಭಾರತ 1–2ರಲ್ಲಿ ಮುಗ್ಗರಿಸಿ ಬಿದ್ದ ಆ ಸರಣಿಯಲ್ಲಿ ಸಚಿನ್ ತೆಂಡೂಲ್ಕರ್‌, ವೀರೇಂದ್ರ ಸೆಹ್ವಾಗ್‌ ಅವರಂಥ ಆಟಗಾರರು ಇದ್ದರು. ಈಗ ಸಚಿನ್‌, ಸೆಹ್ವಾಗ್‌ ತಂಡದಲ್ಲಿಲ್ಲ. ನಾಯಕತ್ವ ತ್ಯಜಿಸಿರುವ ದೋನಿ ಟೆಸ್ಟ್‌ನಿಂದಲೇ ನಿವೃತ್ತರಾಗಿದ್ದಾರೆ.
 
ಈಗೇನಿದ್ದರೂ ವಿರಾಟ್‌ ಕೊಹ್ಲಿ ಹವಾ. ಸತತ ಗೆಲುವಿನಿಂದ ಅವರ ನಾಯಕತ್ವದಲ್ಲಿ ಭಾರತ ತಂಡ ಟೆಸ್ಟ್‌ನಲ್ಲಿ ಅಗ್ರಸ್ಥಾನಕ್ಕೇರಿದೆ. ಯುವಕರಿಂದಲೇ ಕೂಡಿರುವ ತಂಡಕ್ಕೆ ಅನಿಲ್‌ ಕುಂಬ್ಳೆ ಅವರಂಥ ಸ್ಪಿನ್‌ ಗಾರುಡಿಗನ ಮಾರ್ಗದರ್ಶನವಿದೆ.
 
ಈ ನಡುವೆ ಮತ್ತೆ ಭಾರತದ ನೆಲಕ್ಕೆ ಕಾಲಿಡಲು ಆಂಗ್ಲರ ತಂಡ ಸಜ್ಜಾಗುತ್ತಿದೆ. ನವೆಂಬರ್‌–ಡಿಸೆಂಬರ್‌ನಲ್ಲಿ ಐದು ಪಂದ್ಯಗಳ ಟೆಸ್ಟ್‌ ಸರಣಿ ನಡೆಯಲಿದೆ. ನ.9ಕ್ಕೆ ರಾಜ್‌ಕೋಟ್‌ನಲ್ಲಿ ಮೊದಲ ಟೆಸ್ಟ್‌ ಆರಂಭ. ಬಳಿಕ ವಿಶಾಖಪಟ್ಟಣ, ಮೊಹಾಲಿ, ಮುಂಬೈ ಮತ್ತು ಚೆನ್ನೈನಲ್ಲಿ ಪಂದ್ಯಗಳು ಆಯೋಜನೆಯಾಗಿವೆ.
 
ಈಚೆಗಷ್ಟೇ ಕೊನೆಗೊಂಡ ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಗೆಲುವು ಸಾಧಿಸಿರುವ ಕೊಹ್ಲಿ ಬಳಗ ಆಂಗ್ಲರ ಸವಾಲಿಗೆ ಸಜ್ಜಾಗುತ್ತಿದೆ. ಕೊಹ್ಲಿ ಅವರಲ್ಲದೆ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಕೆ.ಎಲ್‌.ರಾಹುಲ್‌ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಬೌಲಿಂಗ್‌ನಲ್ಲಿ ಎದುರಾಳಿ ಮೇಲೆ ಒತ್ತಡ ಹೇರಲು ಆಫ್‌ ಸ್ಪಿನ್ನರ್‌ ಆರ್‌.ಅಶ್ವಿನ್‌ ಹಾಗೂ ಎಡಗೈ ಸ್ಪಿನ್ನರ್‌ ರವೀಂದ್ರ ಜಡೇಜ ಸಾಕು. ವೇಗಿ ಮೊಹಮ್ಮದ್‌ ಶಮಿ ಉತ್ತಮ ಫಾರ್ಮ್‌ನಲ್ಲಿ ಇದ್ದಾರೆ.
 
ಕಳೆದ ಬಾರಿಯ ಪ್ರವಾಸದಲ್ಲಿ ಭಾರತ ತಂಡವನ್ನು ಸದೆಬಡಿದಿದ್ದ ಅಲಸ್ಟೇರ್‌ ಕುಕ್ ಸಾರಥ್ಯದ ಇಂಗ್ಲೆಂಡ್‌ ತಂಡ ಅದೇ ವಿಶ್ವಾಸದಿಂದ ಬೀಗುತ್ತಿದೆ. ಅಷ್ಟೇ ಅಲ್ಲ; ಐದು ಪಂದ್ಯಗಳ ಟೆಸ್ಟ್‌ ಸರಣಿ ಆಡಲು 2014ರಲ್ಲಿ ಇಂಗ್ಲೆಂಡ್‌ ಪ್ರವಾಸ ಕೈಗೊಂಡಿದ್ದ ಭಾರತವನ್ನು ಸೋಲಿಸಿದ್ದರು.
 
ಈಗ ಮತ್ತೊಮ್ಮೆ ಆತಿಥೇಯರಿಗೆ ಸವಾಲೊಡ್ಡಲು ಆಂಗ್ಲ ಪಡೆ ಸಜ್ಜಾಗಿದೆ.  ಸದ್ಯ ಬಾಂಗ್ಲಾದೇಶ ಪ್ರವಾಸದಲ್ಲಿರುವ ಇಂಗ್ಲೆಂಡ್‌ ತಂಡದವರು ಎರಡು ಟೆಸ್ಟ್‌ ಪಂದ್ಯಗಳಲ್ಲಿ ಆಡುತ್ತಿದ್ದಾರೆ. ಭಾರತ ಪ್ರವಾಸಕ್ಕೆ ಮುನ್ನ ಉಪಖಂಡದ ಪಿಚ್‌ ಹಾಗೂ ವಾತಾವರಣಕ್ಕೆ ಹೊಂದಿಕೊಳ್ಳುವ ಲೆಕ್ಕಾಚಾರ ಅವರದ್ದು.
 
ಇಂಗ್ಲೆಂಡ್‌ ತಂಡದಲ್ಲಿ ಈಗ ಹೊಸಬರೇ ತುಂಬಿಕೊಂಡಿದ್ದಾರೆ. ಈಗಾಗಲೇ ಎಂಟು ಮಂದಿ ವಿವಿಧ ಆಟಗಾರರೊಂದಿಗೆ ಇನಿಂಗ್ಸ್‌ ಆರಂಭಿಸಿದ ಅನುಭವ ಹೊಂದಿರುವ ನಾಯಕ ಕುಕ್‌ ಅವರಿಗೆ ಈಗ ಬೆನ್‌ ಡಕೆಟ್‌ ಜೊತೆಯಾಗಲಿದ್ದಾರೆ. ಆದರೆ, ಬ್ಯಾಟಿಂಗ್‌ ವಿಭಾಗ ಅಷ್ಟೇನು ಬಲದಿಂದ ಕೂಡಿಲ್ಲ. ಆ್ಯಂಡ್ರ್ಯೂ ಫ್ಲಿಂಟಾಫ್‌, ಕೆವಿನ್ ಪೀಟರ್ಸನ್‌, ಆ್ಯಂಡ್ರ್ಯೂ ಸ್ಟ್ರಾಸ್, ಇಯಾನ್‌ ಬೆಲ್‌ ಹಾಗೂ ಜೊನಾಥನ್ ಟ್ರಾಟ್‌ ಅವರ ಸ್ಥಾನ ತುಂಬುವಂಥ ಸಮರ್ಥ ಆಟಗಾರರು ಇನ್ನೂ ಬಂದಿಲ್ಲ.
 
2012ರ ಪ್ರವಾಸದಲ್ಲಿ ಸ್ಪಿನ್ನರ್‌ಗಳಾದ ಗ್ರೇಮ್‌ ಸ್ವಾನ್‌ ಹಾಗೂ ಮಾಂಟಿ ಪನೇಸರ್‌ ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಪಾಠ ಕಲಿಸಿದ್ದರು. ಈ ಬಾರಿ ಸ್ಪಿನ್ನರ್‌ಗಳಾದ ಗ್ಯಾರೆಥ್‌ ಬ್ಯಾಟಿ, ಮೊಯೀನ್ ಅಲಿ ಹಾಗೂ ಅದಿಲ್‌ ರಶೀದ್ ಅವರನ್ನು ಕರೆತರಲು ಸಜ್ಜಾಗಿದೆ. ಜೊತೆಗೆ ವೇಗಿಗಳಾದ ಸ್ಟುವರ್ಟ್‌ ಬ್ರಾಡ್‌, ಕ್ರಿಸ್‌ ವೋಕ್ಸ್‌ ಹಾಗೂ ಬೆನ್‌ ಸ್ಟೋಕ್ಸ್‌ ಇರಲಿದ್ದಾರೆ.
 
ಭುಜದ ನೋವಿನ ಕಾರಣ ಬಾಂಗ್ಲಾ ವಿರುದ್ಧದ ಟೆಸ್ಟ್‌ ಸರಣಿ ತಪ್ಪಿಸಿಕೊಂಡಿರುವ ಅನುಭವಿ ವೇಗಿ ಜೇಮ್ಸ್‌ ಆ್ಯಂಡರ್ಸನ್‌ ಭಾರತ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯಕ್ಕೆ ಲಭ್ಯರಾಗುವುದು ಅನುಮಾನ. ಎರಡನೇ ಟೆಸ್ಟ್‌ನಿಂದ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ.
 
ಬಾಂಗ್ಲಾ ಪ್ರವಾಸಕ್ಕೂ ಮುನ್ನ ಇಂಗ್ಲೆಂಡ್‌ ತಂಡದವರು ಸ್ವದೇಶದಲ್ಲಿ ನಡೆದ ಪಾಕಿಸ್ತಾನ ಎದುರಿನ ಟೆಸ್ಟ್‌ ಸರಣಿಯಲ್ಲಿ 2-2ರಲ್ಲಿ ಡ್ರಾ ಸಾಧಿಸಿದ್ದರು. ಈ ವರ್ಷ 10 ಟೆಸ್ಟ್‌ ಪಂದ್ಯ ಆಡಿದ್ದಾರೆ. ಹೇಳಿಕೊಳ್ಳುವಂಥ ಪ್ರದರ್ಶನವೇನೂ ಮೂಡಿಬಂದಿಲ್ಲ.
 
ಅದೇನೇ ಇರಲಿ, ಗೆಲುವಿನ ಉತ್ತುಂಗದಲ್ಲಿರುವ ಭಾರತ ತಂಡಕ್ಕೆ ಹಳೆಯ ಸಕಾರಾತ್ಮಕ ನೆನಪುಗಳೊಂದಿಗೆ ಸವಾಲೊಡ್ಡಲು ಇಂಗ್ಲೆಂಡ್‌ ಬಳಗ ಕಾತರದಲ್ಲಿದೆ. ಭಾರತದ ನೆಲದಲ್ಲಿ ಗೆಲುವಿನ ರುಚಿ ನೋಡಿರುವ ಈ ತಂಡದವರು ಮತ್ತೊಮ್ಮೆ ಪೆಟ್ಟು ನೀಡುವ ಹುಮ್ಮಸ್ಸಿನಲ್ಲಿದ್ದಾರೆ. ಆದರೆ, ಅದ್ಭುತ ಪ್ರದರ್ಶನ ನೀಡುತ್ತಿರುವ ಆಫ್‌ ಸ್ಪಿನ್ನರ್ ಅಶ್ವಿನ್ ಅವರನ್ನು ಭಾರತದಲ್ಲಿ ನೆಲದಲ್ಲಿ ಎದುರಿಸುವುದು ಅಷ್ಟು ಸುಲಭವಲ್ಲ. ಈ ವಿಷಯ ಪ್ರವಾಸಿ ತಂಡದವರಿಗೂ ಗೊತ್ತಿದೆ.
 
ಇತ್ತೀಚಿನ ವರ್ಷಗಳಲ್ಲಿ ಭಾರತ ಟೆಸ್ಟ್‌ ತಂಡವನ್ನು ಅವರದ್ದೇ ನೆಲದಲ್ಲಿ ಕಟ್ಟಿ ಹಾಕಿದ ಸಾಧನೆ ಹೊಂದಿರುವ ಈ ತಂಡದವರು ಮತ್ತೊಮ್ಮೆ ಇತಿಹಾಸ ಬರೆಯುತ್ತಾರಾ ಕಾದು ನೋಡಬೇಕು. 28 ವರ್ಷಗಳ ಬಳಿಕ 2012ರಲ್ಲಿ ಭಾರತದಲ್ಲಿ ಟೆಸ್ಟ್‌ ಸರಣಿ ಜಯಿಸಿದ್ದರು. ಇತ್ತ ಸೇಡು ತೀರಿಸಿಕೊಳ್ಳಲು ಕಾದಿರುವ ಭಾರತ ಅದರಲ್ಲಿ ಯಶಸ್ವಿ ಯಾಗುತ್ತಾ ನೋಡಬೇಕು. ಇಂಗ್ಲೆಂಡ್‌ ತಂಡದವರು ಭಾರತದ ನೆಲದಲ್ಲಿ 30 ವರ್ಷಗಳ ಬಳಿಕ ಐದು ಪಂದ್ಯಗಳ ಸರಣಿಯಲ್ಲಿ ಆಡಲಿದ್ದಾರೆ.
 
ಟ್ವಿಟರ್ ಕದನ
ಆಂಗ್ಲರ ಬಳಗ ಭಾರತಕ್ಕೆ ಕಾಲಿಡುವ ಮುನ್ನವೇ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಹಾಗೂ ಇಂಗ್ಲೆಂಡ್‌ ಪತ್ರಕರ್ತ ಪೀಯರ್ಸ್‌ ಮೊರ್ಗನ್‌ ನಡುವೆ ಟ್ವಿಟರ್‌ ಚಕಮಕಿ ನಡೆಯುತ್ತಿದೆ. ಈಚೆಗೆ ಟ್ವೀಟ್‌ ಮಾಡಿದ್ದ ಪಿಯರ್ಸ್‌, ‘ರಿಯೊ ಒಲಿಂಪಿಕ್ಸ್‌ನಲ್ಲಿ ಜಯಿಸಿದ ಎರಡು ಪದಕಗಳಿಗೆ 120 ಕೋಟಿ ಜನಸಂಖ್ಯೆಯ ಭಾರತ ಇಷ್ಟೊಂದು ಅಭಿಮಾನದಿಂದ ಬೀಗುತ್ತಿದೆ. ಮುಜುಗರದ ವಿಷಯವಿದು.
 
ಒಲಿಂಪಿಕ್ಸ್‌ನಲ್ಲಿ ಭಾರತ ಚಿನ್ನ ಗೆಲ್ಲುವ ಮುನ್ನವೇ ಇಂಗ್ಲೆಂಡ್‌ ಕ್ರಿಕೆಟ್‌ ತಂಡ ವಿಶ್ವಕಪ್‌ ಗೆಲ್ಲಲಿದೆ. ಈ ಸಂಬಂಧ ನಾನು ಒಂದು ಕೋಟಿ ರೂಪಾಯಿ ಬೆಟ್‌ ಕಟ್ಟುತ್ತೇನೆ. ಸವಾಲಿಗೆ ಸಿದ್ಧವೇ’ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸೆಹ್ವಾಗ್‌, ‘ನಾವು ಸಣ್ಣ ಸಣ್ಣ ವಿಷಯಕ್ಕೂ ಖುಷಿಪಡುತ್ತೇವೆ. ಆದರೆ, ಕ್ರಿಕೆಟ್‌ ಕಂಡು ಹಿಡಿದ ಇಂಗ್ಲೆಂಡ್‌ ಇದುವರೆಗೆ ಏಕದಿನ ವಿಶ್ವಕಪ್‌ ಗೆದ್ದಿಲ್ಲ. ಇದು ಮುಜುಗರದ ವಿಷಯವಲ್ಲವೇ?’ ಎಂದು ತಿರುಗೇಟು ನೀಡಿದ್ದರು.
 
ಅಲ್ಲದೆ, ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಕಬಡ್ಡಿ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ಸೋತಾಗ ‘ವಿಶ್ವಕಪ್‌ನಲ್ಲಿ ಮತ್ತೆ ಇಂಗ್ಲೆಂಡ್‌ಗೆ ಸೋಲು. ಕ್ರೀಡೆ ಮಾತ್ರ ಬದಲಾಗಿದೆ. ಈ ಬಾರಿ ಇದು ಕಬಡ್ಡಿ’ ಎಂದು ವೀರೂ ಟ್ವೀಟ್‌ ಮಾಡಿದ್ದರು. ಆಗ ಪಿಯರ್ಸ್‌, ‘ನೀವು ಬರೆದಿರುವ ಟ್ವೀಟ್‌ನಲ್ಲಿ ವ್ಯಾಕರಣ ದೋಷವಿದೆ’ ಎಂದು ಮೂದಲಿಸಿದ್ದರು.
 
ಈ ಮಾತಿನ ಚಕಮಕಿ ಇಂಗ್ಲೆಂಡ್‌ ತಂಡದವರು ಟೆಸ್ಟ್‌ ಸರಣಿ ಆಡಲು ಭಾರತಕ್ಕೆ ಕಾಲಿಟ್ಟ ಮೇಲೆ ಮತ್ತಷ್ಟು ಜೋರಾಗುವ ಮುನ್ಸೂಚನೆಯನ್ನು ಕ್ರಿಕೆಟ್‌ ವಲಯ ನೀಡಿದೆ.
 
*
11 ವರ್ಷಗಳ ಬಳಿಕ...
ಇಂಗ್ಲೆಂಡ್‌ ತಂಡದ ಆಫ್‌ ಸ್ಪಿನ್ನರ್‌ ಗ್ಯಾರೆಥ್‌ ಬ್ಯಾಟಿ 11 ವರ್ಷಗಳ ಬಳಿಕ ಟೆಸ್ಟ್‌ ಪಂದ್ಯ ಆಡುತ್ತಿದ್ದಾರೆ. ಬಾಂಗ್ಲಾದೇಶ ಪ್ರವಾಸದಲ್ಲಿರುವ ಅವರಿಗೆ ಚಿತ್ತಗಾಂಗ್‌ ಟೆಸ್ಟ್‌ನಲ್ಲಿ ಆಡಲು ಅವಕಾಶ ಲಭಿಸಿದೆ. ಗ್ಯಾರೆಥ್‌ 2005ರಲ್ಲಿ ಕೊನೆಯ ಬಾರಿ ಆಡಿದ್ದರು. ಈ ಬೌಲರ್‌ಗೆ ಉಪಖಂಡದ ಪಿಚ್‌ಗಳಲ್ಲಿ ಆಡಿದ ಅನುಭವದ ಕೊರತೆ ಇದೆ.

39 ವರ್ಷ ವಯಸ್ಸಿನ ಈ ಬೌಲರ್‌ಗೆ ಈಗ ತಂಡದಲ್ಲಿ ಸ್ಥಾನ ನೀಡಿರುವುದು ಗುಣಮಟ್ಟದ ಸ್ಪಿನ್ನರ್‌ಗಳನ್ನು ನೀಡುವಲ್ಲಿ ಕೌಂಟಿ ಕ್ರಿಕೆಟ್‌ ಯಾವ ರೀತಿ ವಿಫಲವಾಗಿದೆ ಎಂಬುದನ್ನು ಬಿಚ್ಚಿಡುತ್ತದೆ.
 
**
ಉಪಖಂಡದಲ್ಲಿ ಅಲಸ್ಟೇರ್‌ ಕುಕ್‌ ಆಟ...
ಇಂಗ್ಲೆಂಡ್‌ ಟೆಸ್ಟ್‌ ತಂಡದ ನಾಯಕ ಅಲಸ್ಟೇರ್‌ ಕುಕ್‌ ಪಾಲಿಗೆ ಉಪಖಂಡದ ಪಿಚ್‌ಗಳೆಂದರೆ ಪಂಚಪ್ರಾಣ. ಇಲ್ಲಿ ಆಡಿರುವ 21 ಟೆಸ್ಟ್‌ ಪಂದ್ಯಗಳಲ್ಲಿ 2,252 ರನ್‌ ಕಲೆಹಾಕಿದ್ದಾರೆ. ಉಪಖಂಡದ ಹೊರಗಿನ ಆಟಗಾರನೊಬ್ಬ ಗಳಿಸಿರುವ ಅತಿ ಹೆಚ್ಚಿನ ಮೊತ್ತವಿದು.
 
ಹೀಗಾಗಿ, ಅವರು ಭಾರತದ ಪಾಲಿಗೆ ಅಪಾಯಕಾರಿ ಬ್ಯಾಟ್ಸ್‌ಮನ್‌. 2012ರಲ್ಲಿ ಪ್ರವಾಸ ಕೈಗೊಂಡಿದ್ದಾಗ 28 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಸರಣಿ ಗೆಲ್ಲಲು ಪ್ರಮುಖ ಪಾತ್ರ ನಿಭಾಯಿಸಿದ್ದರು.
 
31 ವರ್ಷ ವಯಸ್ಸಿನ ಕುಕ್‌ 2006ರಲ್ಲಿ ನಾಗಪುರದಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಆ ಪಂದ್ಯದಲ್ಲಿ ಅವರು ಶತಕ ಗಳಿಸಿದ್ದರು. ವಿಶೇಷವೆಂದರೆ ಅತಿ ಹೆಚ್ಚು ಟೆಸ್ಟ್‌ ಪಂದ್ಯಗಳಲ್ಲಿ (134 ಪಂದ್ಯ; 10,599 ರನ್‌) ಆಡಿದ ಇಂಗ್ಲೆಂಡ್‌ ಆಟಗಾರ ಕೂಡ. ಈಚೆಗೆ ಅವರು ಅಲೆಕ್‌ ಸ್ಟುವರ್ಟ್‌ (133 ಪಂದ್ಯ) ಅವರ ದಾಖಲೆ ಮುರಿದರು.

ಸಚಿನ್‌ ತೆಂಡೂಲ್ಕರ್‌ ಅವರ ದಾಖಲೆ (200 ಪಂದ್ಯ, 15,921 ರನ್‌) ಮೇಲೂ ಕುಕ್‌ ಕಣ್ಣಿಟ್ಟಿದ್ದಾರೆ. ದಾಖಲೆ ಮುರಿಯುವ ಸಾಧ್ಯತೆಗಳ ಬಗ್ಗೆ ಅವರು ಮಾತನಾಡಿದ್ದಾರೆ ಕೂಡ.
 
**
ಬಿಡುವಿಲ್ಲದ ಆಟ...
ಭಾರತ ಕ್ರಿಕೆಟ್‌ ತಂಡದ ಪಾಲಿಗೆ ಸದ್ಯ ಬಿಡುವಿಲ್ಲದ ವೇಳಾಪಟ್ಟಿ. ಕೆಲ ದಿನಗಳ ಹಿಂದೆಯಷ್ಟೇ ನ್ಯೂಜಿಲೆಂಡ್‌ ವಿರುದ್ಧ ಮೂರು ಪಂದ್ಯಗಳ ಟೆಸ್ಟ್‌ ಸರಣಿ ಆಡಿರುವ ಕೊಹ್ಲಿ ಬಳಗ ಸದ್ಯ ಏಕದಿನ ಸರಣಿಯಲ್ಲಿ ಭಾಗಿಯಾಗಿದೆ.
 
ನವೆಂಬರ್‌ 9ರಂದು ಇಂಗ್ಲೆಂಡ್‌ ವಿರುದ್ಧದ ಸರಣಿ ಶುರುವಾಗಲಿದೆ. ಐದು ಟೆಸ್ಟ್‌ ಪಂದ್ಯ, ಮೂರು ಏಕದಿನ ಹಾಗೂ ಮೂರು ಟ್ವೆಂಟಿ–20 ಪಂದ್ಯ ಆಡಲಿದ್ದಾರೆ.

ಫೆಬ್ರುವರಿಯಲ್ಲಿ ಏಕೈಕ ಟೆಸ್ಟ್‌ ಪಂದ್ಯ ಆಡಲು ಬಾಂಗ್ಲಾದೇಶ ತಂಡದವರು ಹೈದರಾಬಾದ್‌ಗೆ ಬರಲಿದ್ದಾರೆ. ಅದಾದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಸ್ವದೇಶದಲ್ಲಿ ಸರಣಿ ಆರಂಭವಾಗಲಿದೆ. ಹೀಗಾಗಿ, ಮಾರ್ಚ್‌ ಅಂತ್ಯದವರೆಗೆ ಆಟಗಾರರಿಗೆ ಬಿಡುವೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT