ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯಮುಕ್ತಿಯ ಪಣ ತೊಟ್ಟು...

Last Updated 24 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ
ಮದ್ಯಪಾನದ ದಾಸನಾಗಲು ಕಲಿಸುವ ಸಾಕಷ್ಟು ಮಂದಿ ನಮ್ಮಲ್ಲಿದ್ದಾರೆ. ಆದರೆ ಮದ್ಯಮುಕ್ತರನ್ನಾಗಿಸುವವರು ಕಾಣಸಿಗುವುದು ಬಹಳ ಅಪರೂಪ. ಒಮ್ಮೆ ಅಮಲುದಾಸನಾದವನನ್ನು ಮತ್ತೆ ಸರಿದಾರಿಗೆ ಕರೆತರುವುದು ಅಷ್ಟು ಸುಲಭದ ಕೆಲಸವಲ್ಲ.
 
ಮದ್ಯಮುಕ್ತರನ್ನಾಗಿಸುವ ಹೆಸರಿನಲ್ಲಿ ಸಾವಿರಾರು ರೂಪಾಯಿ ಸಂಪಾದಿಸುವ ಹಲವಾರು ಚಿಕಿತ್ಸಾ ಕೇಂದ್ರಗಳು ರಾಜ್ಯದಲ್ಲಿವೆ. ಮದ್ಯಪಾನ ಎಂಬ ದುಶ್ಚಟವನ್ನು ಔಷಧ, ಚಿಕಿತ್ಸೆಗಳಿಂದ ದೂರಗೊಳಿಸುವುದು ಕಷ್ಟಸಾಧ್ಯ. 
 
ಆದರೆ ಯಾವುದೇ ಶುಲ್ಕ ಪಡೆಯದೆ ಮನಪರಿವರ್ತನೆಯ ಮೂಲಕ ಮದ್ಯಮುಕ್ತ ಸಮಾಜದ ನಿರ್ಮಾಣದಲ್ಲಿ ಕಳೆದ 25 ವರ್ಷಗಳಿಂದ ಶ್ರಮಿಸುತ್ತಿರುವ ‘ಜನಜಾಗೃತಿ ವೇದಿಕೆ’ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿದೆ. ಈಗಾಗಲೇ ಒಂದು ಸಾವಿರ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಿ 72,224 ಜನರನ್ನು ವ್ಯಸನಮುಕ್ತರನ್ನಾಗಿಸಲಾಗಿದೆ.
 
ಇದರರ್ಥ ಶಿಬಿರಗಳಲ್ಲಿ ಪಾಲ್ಗೊಂಡಿರುವ ಶೇ80ರಷ್ಟು ಮಂದಿ ಕುಡಿತವನ್ನು ಸಂಪೂರ್ಣ ಬಿಟ್ಟಿದ್ದಾರೆ. ಒತ್ತಾಯಪೂರ್ವಕವಾಗಿ ಶಿಬಿರಕ್ಕೆ ಬಂದು ಪ್ರಯೋಜನ ಪಡೆದುಕೊಂಡಿರುವವರ ಸಂಖ್ಯೆಯೂ ದೊಡ್ಡದಿದೆ.
 
1991ರಲ್ಲಿ ಪ್ರಾರಂಭವಾಗಿದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ. ಬೆಳ್ತಂಗಡಿ ತಾಲ್ಲೂಕಿನ ಜನತೆಯನ್ನು ಮದ್ಯಮುಕ್ತರನ್ನಾಗಿಸಬೇಕೆಂಬ ನಿಟ್ಟಿನಲ್ಲಿ ಶುರು ಮಾಡಲಾದ ಈ ಕೇಂದ್ರದಲ್ಲಿ ಆರಂಭದ ದಿನಗಳು ಅಷ್ಟೇನೂ ಸುಲಭವಾಗಿರಲಿಲ್ಲ.
 
ಮದ್ಯವ್ಯಸನಿಗಳನ್ನು ಶಿಬಿರಕ್ಕೆ ಸೇರಿಸುವುದು ಕಷ್ಟವಾಗಿತ್ತು. ಆದರೆ ಇದೀಗ ವೇದಿಕೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಅಗತ್ಯವಿರುವ ಕಡೆಗಳಲ್ಲಿ ಮಹಿಳಾ ಶಿಬಿರಗಳನ್ನು ನಡೆಸಲಾಗುತ್ತಿದೆ. ವಿಶೇಷವೆಂದರೆ ಶಿಬಿರಕ್ಕೆ ಸೇರಿ ಕುಡಿತ ಬಿಟ್ಟವರನ್ನು ನೋಡಿ ಸ್ವಯಂ ಪ್ರೇರಣೆಯಿಂದ ಮದ್ಯಮುಕ್ತರಾದವರ ಸಂಖ್ಯೆಯೂ ಬಹುದೊಡ್ಡದಿದೆ. 
 
ಈಗಾಗಲೇ ಶಿಬಿರಕ್ಕೆ ಸೇರಿ ಕುಡಿತ ಬಿಟ್ಟವರನ್ನು ಒಟ್ಟುಗೂಡಿಸಿ ಅವರ ಕಷ್ಟ ಸುಖಗಳನ್ನು ಆಲಿಸುವ, ಅವರೊಂದಿಗೆ ನೇರ ಸಂವಾದ ನಡೆಸುವ ಕಾರ್ಯಕ್ರಮವನ್ನು ಪ್ರತಿ ವರ್ಷ ಗಾಂಧಿ ಜಯಂತಿಯಂದು ಡಾ. ಡಿ.ವೀರೇಂದ್ರ ಹೆಗ್ಗಡೆಯವರು ನಡೆಸಿಕೊಂಡು ಬರುತ್ತಿದ್ದಾರೆ.
 
ಈಗಾಗಲೇ ಒಂದು ಸಾವಿರ ಶಿಬಿರಗಳನ್ನು ನಡೆಸುವ ಮೂಲಕ ಒಂದು ಲಕ್ಷದಷ್ಟು ಪಾನಮುಕ್ತರ ಪಾಲಿಗೆ ಬೆಳಕು ಚೆಲ್ಲಿದ ಹೆಗ್ಗಳಿಕೆ ಈ ವೇದಿಕೆಯದ್ದು. ಪ್ರತಿ ಶಿಬಿರಕ್ಕೆ ₹3 ಲಕ್ಷದವರೆಗೆ ಖರ್ಚು ತಗಲುತ್ತಿದ್ದು ಈ ವೆಚ್ಚವನ್ನು ಜನಜಾಗೃತಿ ವೇದಿಕೆ ಮತ್ತು ಊರಿನ ಪ್ರಮುಖರು ಭರಿಸುತ್ತಾರೆ. 
 
ಪ್ರತಿ ಊರಿನಲ್ಲಿ ಶಿಬಿರವನ್ನು ಪರಿಣಾಮಕಾರಿಯನ್ನಾಗಿಸುವ ನಿಟ್ಟಿನಲ್ಲಿ ಸ್ಥಳೀಯರನ್ನು ಸೇರಿಸಿ ಸಮಿತಿ ರಚಿಸಲಾಗುತ್ತದೆ. ಶಿಬಿರಕ್ಕೆ ಸೇರಲಿಚ್ಛಿಸುವವರು ಇವರಲ್ಲಿ ತಿಳಿಸಬೇಕು. 80 ರಿಂದ 100 ಮಂದಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಶಿಬಿರ ಆರಂಭವಾಗುವ ಮೊದಲ ದಿನವೇ ಸೇರಬೇಕು. ಪ್ರತಿ ಶಿಬಿರದ ಜವಾಬ್ದಾರಿಯನ್ನು ಒಬ್ಬ ಶಿಬಿರಾಧಿಕಾರಿಗೆ ನೀಡಲಾಗುತ್ತದೆ. ಶಿಬಿರಾರ್ಥಿಗಳಿಗೆ ಮನಪರಿವರ್ತನೆ ಮಾಡುವ ಮೂಲಕ ಕುಡಿತ ಬಿಡಿಸಲು ಪ್ರಯತ್ನಿಸುತ್ತಾರೆ.
 
ಜೊತೆಗೆ ಒಂದಷ್ಟು ಭಾವನಾತ್ಮಕ ಸಂಬಂಧವನ್ನು ಬೆಸೆಯುವ ಕೆಲಸವನ್ನು ಮಾಡಲಾಗುತ್ತದೆ. ಅವನ ಕಷ್ಟ ಸುಖಗಳಿಗೆ ಜನಜಾಗೃತಿ ವೇದಿಕೆ ಬೆನ್ನುಲುಬಾಗಿ ನಿಲ್ಲುತ್ತದೆ. ಮನೆಯವರಿಗೆ ಶಿಬಿರಾರ್ಥಿಗಳ ಬಗ್ಗೆ ತಾತ್ಸಾರ ಮನೋಭಾವನೆ ಮೂಡದೇ ಇರಲು ಮಧ್ಯಾಹ್ನದ ಊಟವನ್ನು ಶಿಬಿರಾರ್ಥಿಯ ಹೆಂಡತಿ, ತಾಯಿ ಅಥವಾ ತಂಗಿ ತಂದು ಉಣಬಡಿಸಬೇಕು. ದಿನನಿತ್ಯ ಶಿಬಿರಾರ್ಥಿಗಳಿಗೆ ಗುಂಪು ಆಟವನ್ನು ಆಡಿಸಲಾಗುತ್ತದೆ. ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನವನ್ನು ನೀಡಲಾಗುತ್ತದೆ. 
 
ಭಜನೆ ಒಂದು ವಿಶಿಷ್ಟ ಚಿಕಿತ್ಸೆ. ಪ್ರತಿದಿನ ಸ್ಥಳೀಯ ಭಜನಾ ಮಂದಿರಗಳು ಹಾಗೂ ಧಾರ್ಮಿಕ ಮುಖಂಡರ ಸಹಕಾರದಲ್ಲಿ ಭಜನೆ ಕಾರ್ಯಕ್ರಮ ನಡೆಯುತ್ತದೆ. ಶಿಬಿರಾರ್ಥಿಗಳಿಗೆ ಇದೊಂದು ಮಾನಸಿಕ ಪರಿವರ್ತನೆಗೆ ವಿಶೇಷ ಪ್ರಯೋಗವಾಗಿದೆ.
 
ಶಿಬಿರದ ಕೊನೆಯ ರಾತ್ರಿ ನಡೆಯಲಿರುವ ಕಾರ್ಯಕ್ರಮವೇ ಶಿಬಿರದ ಬೆಂಕಿ. ದುರಭ್ಯಾಸಗಳನ್ನೆಲ್ಲಾ ಬೆಂಕಿಗೆ ಹಾಕುವ ವಿಧಿ ವಿಧಾನ ಇದು. ಅಂದು ಗರಿದೀಪ ಹಿಡಿದು ಘೋಷಣೆ ಕೂಗಿ, ಕಟ್ಟಿಗೆ ರಾಶಿಗೆ ಬೆಂಕಿ ಉರಿಸಿ ಮದ್ಯರಾಕ್ಷಸನನ್ನು ಭಸ್ಮಗೊಳಿಸಿ ಹಿಂದಿನ ದುಶ್ಚಟಗಳ ಜೀವನವನ್ನು ಮರೆಯುವ ಪ್ರಕ್ರಿಯೆ ಇದಾಗಿದೆ. ನಂತರ ‘ರಘುಪತಿ ರಾಜಾ ರಾಮ್’ ಭಕ್ತಿಗೀತೆ ಹಾಡಲಾಗುತ್ತದೆ. ಇದರ ಜೊತೆಗೆ ಅಂದು ‘ಕುಟುಂಬದ ದಿನ’ ಆಚರಿಸಲಾಗುತ್ತದೆ. ಕೌಟುಂಬಿಕ ಸಾಮರಸ್ಯಕ್ಕೆ ರೂಪಕವಾಗಲು ಈ ಕಾರ್ಯಕ್ರಮ ಅನುಕೂಲವಾಗಿದೆ. 
 
ನವಜೀವನ ಸಮಿತಿ 
ಇದು ಮದ್ಯಮುಕ್ತರನ್ನೊಳಗೊಂಡ ಸಮಿತಿಯಾಗಿದ್ದು ಇದೀಗ 25 ಜಿಲ್ಲೆಗಳಲ್ಲಿ ಒಟ್ಟು 3,102 ನವಜೀವನ ಸಮಿತಿಗಳು ಅಸ್ತಿತ್ವದಲ್ಲಿದ್ದು ಒಟ್ಟು 35ಸಾವಿರ ಮಂದಿ ಸದಸ್ಯರಿದ್ದಾರೆ. ದುಶ್ಚಟಮುಕ್ತ ಸಮಾಜದ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳಿಗೆ ‘ಸ್ವಾಸ್ಥ್ಯ ಸಂಕಲ್ಪ’ ಎಂಬ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಪ್ರತಿ ವರ್ಷ ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದೆ.
 
ವೇದಿಕೆಯ ಸಮರ್ಪಕ ನಿರ್ವಹಣೆ ಮತ್ತು ಅನುಷ್ಠಾನಕ್ಕಾಗಿ ಪ್ರಸ್ತುತ 25 ಜಿಲ್ಲಾ ವೇದಿಕೆ, ಒಂಬತ್ತು ತಾಲ್ಲೂಕು ವೇದಿಕೆ, 112 ವಲಯ ವೇದಿಕೆ, 273 ಗ್ರಾಮ ಸಮಿತಿಗಳು ಅಸ್ತಿತ್ವದಲ್ಲಿವೆ. ರಾಜ್ಯ ವೇದಿಕೆಯ ಸಮಗ್ರ ನಿರ್ವಹಣೆಯ ನಿಗಾವಹಿಸಲು ಯೋಜನೆಯ ಪ್ರಾದೇಶಿಕ ನಿರ್ದೇಶಕರನ್ನೊಳಗೊಂಡ ಸಲಹಾ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ವಾರ್ಷಿಕವಾಗಿ ಎರಡು ಬಾರಿ ಸಭೆ ಸೇರಿ ಕಾರ್ಯಕ್ರಮಗಳ ರೂಪುರೇಷೆಗಳನ್ನು ತಯಾರಿಸುತ್ತದೆ.
 
ಗೌಪ್ಯವಾಗಿ ನಡೆಸುವ ವಿಶೇಷ ಶಿಬಿರ ಇದಾಗಿದೆ. ಸೇರಲು ಇಚ್ಛಿಸುವವರು  ಯೋಜನೆಯ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್ ಅವರನ್ನು 9901321186 ಅಥವಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಸ್‌ ಅವರನ್ನು 9448984840 ಇಲ್ಲಿ ಸಂಪರ್ಕಿಸಬಹುದು.
 
**
ಶಿಬಿರದ ವಿವರಣೆ
ಮದ್ಯವರ್ಜನ ಶಿಬಿರ ಬಯಸುವ ಗ್ರಾಮಸ್ಥರು ಈ ಕೋರಿಕೆಯನ್ನು ತಮ್ಮ ತಾಲ್ಲೂಕಿನ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕರು ಅಥವಾ ಯೋಜನಾಧಿಕಾರಿಗಳ ಶಿಫಾರಸಿನ ಜೊತೆ ಜನಜಾಗೃತಿ ವೇದಿಕೆಯ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಸ್‌ರವರಿಗೆ ಕಳುಹಿಸಿಕೊಡಬೇಕು.
 
ನಂತರ ಈ ಯೋಜನೆಯ ರೂವಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಮತ್ತು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್‌ ಅವರ ಮಾರ್ಗದರ್ಶನದಂತೆ ಆ ಊರಿನಲ್ಲಿ ಎಂಟು ದಿನ ಶಿಬಿರ ನಡೆಸಲಾಗುತ್ತದೆ.
 
**
ಎಂಟು ದಿನಗಳಲ್ಲಿ...
1– ಪ್ರವೇಶ, ಉದ್ಘಾಟನೆ
2– ದೈಹಿಕ, ಮಾನಸಿಕ ಸಮಸ್ಯೆಗಳ ವಿಚಾರಣೆ ಮತ್ತು ಆರೋಗ್ಯ ಪರೀಕ್ಷೆ
3– ಶಿಬಿರದ ಉದ್ದೇಶದ ಮನವರಿಕೆ, ವೈಯಕ್ತಿಕ ಸಲಹೆ, ಪರಿಚಯ 
4– ಕುಡಿತದ ದುಷ್ಪರಿಣಾಮದ ಕುರಿತು ಪ್ರಾತ್ಯಕ್ಷಿಕೆ
5– ಮಾನಸಿಕ ಸಮತೋಲನ ಕಾಪಾಡುವುದು, ದೇಹ ಮತ್ತು ಮನಸ್ಸಿನ ಸಮರ್ಪಣೆಯ ಪರಿಚಯ
6– ಗುಂಪು ಸಲಹೆ, ನಾಯಕತ್ವ ಬೆಳವಣಿಗೆಗೆ ಬೇಕಾದ ರಸಪ್ರಶ್ನೆ, ಮಾತುಗಾರಿಕೆ
7– ಆತ್ಮಾವಲೋಕನ, ನವಜೀವನ ಸಮಿತಿಯ ಮಾಹಿತಿ, ಶಿಬಿರಾಗ್ನಿ, ಭಜನಾ ಮಂಗಳೋತ್ಸವ, ಜನಜಾಗೃತಿ ಜಾಥಾ, ವಿದಾಯ ಕಾರ್ಯಕ್ರಮ
8– ಕುಟುಂಬದ ದಿನ. ಸಾರ್ವಜನಿಕ ಜನಜಾಗೃತಿ ಸಮಾವೇಶ ಹಾಗೂ ಸಮಾರೋಪ ಸಮಾರಂಭ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT