ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ: ರೈತನ ಪರಿಹಾರಕ್ಕಾಗಿ ರೈಲು ಜಪ್ತಿ!

ರೈಲು ಮಾರ್ಗಕ್ಕಾಗಿ 10 ವರ್ಷಗಳ ಹಿಂದೆ ಭೂಸ್ವಾಧೀನ, ಪರಿಹಾರ ನೀಡಲು ವಿಫಲವಾದ ರೈಲ್ವೆ ಇಲಾಖೆ
Last Updated 24 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಹರಿಹರ: ರೈತನ ಪರಿಹಾರ ವಿತರಣೆಗೆ ರೈಲ್ವೆ ಇಲಾಖೆ ನಿರ್ಲಕ್ಷ್ಯ ತೋರಿದ ಪರಿಣಾಮ ಧಾರವಾಡ-–ಬೆಂಗಳೂರು ಇಂಟರ್‌ಸಿಟಿ (ಸಿದ್ಧಗಂಗಾ ಎಕ್ಸ್‌ಪ್ರೆಸ್) ರೈಲನ್ನು ಹರಿಹರ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಬೆಳಿಗ್ಗೆ ನ್ಯಾಯಾಂಗ ಇಲಾಖೆ ಸಿಬ್ಬಂದಿ ಜಪ್ತಿ ಮಾಡಿದ ಅತ್ಯಪರೂಪದ ಪ್ರಸಂಗ ನಡೆಯಿತು.

ಹರಿಹರ-–ಕೊಟ್ಟೂರು ರೈಲ್ವೆ ಮಾರ್ಗ ನಿರ್ಮಾಣಕ್ಕೆ 10 ವರ್ಷಗಳ ಹಿಂದೆ ನಗರದ ಎಂ.ಎಸ್.ಶಿವಕುಮಾರ ಅವರ ಒಡೆತನದ ದೊಗ್ಗಳ್ಳಿ ಬಳಿಯ 1.16 ಎಕರೆ ಜಮೀನು ವಶಪಡಿಸಿಕೊಂಡಿತ್ತು. ಪರಿಹಾರದ ಮೊತ್ತ ನಿಗದಿಯ ಬಗ್ಗೆ ಸುಮಾರು ಐದು ವರ್ಷ ನ್ಯಾಯಾಲಯದಲ್ಲಿ ಪ್ರಕರಣ ನಡೆಯಿತು. 2013ರಲ್ಲಿ ನ್ಯಾಯಾಲಯ ಶಿವಕುಮಾರ್ ಅವರ ಮೂರು ಪ್ರಕರಣಗಳಿಗೆ ಸಂಬಂಧಿಸಿ (1.52+5.0+30.690) ಒಟ್ಟು ₹ 37.21ಲಕ್ಷ ನೀಡುವಂತೆ ಆದೇಶ ನೀಡಿತು. ಪರಿಹಾರ ಮೊತ್ತ ಪಾವತಿಸಲು ರೈಲ್ವೆ ಇಲಾಖೆಗೆ ನೋಟಿಸ್‌ ನೀಡಲಾಯಿತು.

ಇಲಾಖೆ ನ್ಯಾಯಾಲಯದ ಆದೇಶಕ್ಕ ಸ್ಪಂದಿಸದ ಕಾರಣ ಹಿರಿಯ ಸಿವಿಲ್ ನ್ಯಾಯಾಧೀಶ ಸುಭಾಷ್‌ ಬಿ.ಬಂಡು ಹೊಸಕಲ್ಲೆ 2016ರ ಅ.18ರಂದು ನಗರದ ಮೂಲಕ ಬೆಂಗಳೂರಿಗೆ ಹೋಗುವ ಇಂಟರ್‌ಸಿಟಿ (ನಂ. 12726) ರೈಲನ್ನು ಜಪ್ತು ಮಾಡುವಂತೆ ಆದೇಶ ನೀಡಿದರು. ಆದೇಶದ ಅನ್ವಯ ಸೋಮವಾರ ಬೆಳಿಗ್ಗೆ 8 ಗಂಟೆಗೆ ನಗರದ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಇಂಟರ್‌ಸಿಟಿ ರೈಲನ್ನು ನ್ಯಾಯಾಲಯದ ಸಿಬ್ಬಂದಿ ಜಪ್ತಿ ಮಾಡಿದರು.

ರೈಲನ್ನು ಜಪ್ತಿ ಮಾಡಿದ ಕಾರಣ, ಹಿರಿಯ ಅಧಿಕಾರಿಗಳಿಗೆಲ್ಲ ಗಡಿಬಿಡಿಯಿಂದ ನಿಲ್ದಾಣಕ್ಕೆ ಧಾವಿಸಿ ಸಂಧಾನಕ್ಕೆ ಯತ್ನಿಸಿದರು. ನ್ಯಾಯಾಲಯ ಆದೇಶಿದ ಮೊತ್ತದಷ್ಟು ಹಣ ಪಾವತಿಸಿಬೇಕು ಅಥವಾ ಹಣ ಪಾವತಿಸುವುದಾಗಿ ಮುಚ್ಚಳಿಕೆ ಪತ್ರ ನೀಡಿದರೆ ಮಾತ್ರ ಜಪ್ತಿ ಮಾಡಿದ ರೈಲನ್ನು ಬಿಡುವುದಾಗಿ ಕಕ್ಷಿದಾರ ಎಂ.ಎಸ್‌.ಶಿವಕುಮಾರ್‌ ಪಟ್ಟು ಹಿಡಿದರು.

ರೈಲಿನ ಜಪ್ತಿ ಮಾಡಿದ ಪರಿಣಾಮ, ಪ್ರಯಾಣಕ್ಕೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಪ್ರಯಾಣಿಕರು ಆಗ್ರಹಿಸಿದರು. ಅಧಿಕಾರಿಗಳ  ವರ್ತನೆಯಿಂದ ಬೇಸತ್ತ ಪ್ರಯಾಣಿಕರು, ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಪ್ರಯಾಣಿಕರ ಮನವೊಲಿಸಲು ಆರ್‌ಪಿಎಫ್, ಸರ್ಕಾರಿ ರೈಲ್ವೆ ಪೊಲೀಸ್‌ (ಜಿಆರ್‌ಪಿ) ಹಾಗೂ ಸ್ಥಳಿಯ ಪೊಲೀಸ್ ಅಧಿಕಾರಿಗಳು ಹರಸಾಹಸ ಪಡಬೇಕಾಯಿತು.

ಮೈಸೂರು ಹಾಗೂ ಹುಬ್ಬಳ್ಳಿ ವಿಭಾಗದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅಧಿಕಾರಿಗಳು ಏಳು ದಿನದೊಳಗಾಗಿ ನ್ಯಾಯಾಲಯ ಘೋಷಿಸಿದ ಪರಿಹಾರ ನೀಡುವುದಾಗಿ ರೈಲ್ವೆ ಉಪವಿಭಾಗೀಯ ಎಂಜಿನಿಯರ್ (ಕಾಮಗಾರಿ) ವಿಜಯಪ್ರಸಾದ್ ಹಾಗೂ ನಿಲ್ದಾಣ ವ್ಯವಸ್ಥಾಪಕ ಬಿ.ಎಸ್.ಪ್ಯಾಟಿ ಹೊಣೆಗಾರಿಕೆ ಪತ್ರ ನೀಡುವುದಾಗಿ ಭರವಸೆ ನೀಡಿದ ನಂತರ, ರೈಲು ಸುಮಾರು ಒಂದೂವರೆ ಗಂಟೆ ತಡವಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸಿತು.

ನ್ಯಾಯಲಯದ ಸಿಬ್ಬಂದಿ ಎಲ್. ಓಂಕಾರಪ್ಪ, ಎಚ್.ಎಂ. ಸಿದ್ದಬಸಯ್ಯ, ಕೆ. ಸುರೇಶ್ ಹಾಗೂ ಮನೋಹರ, ವಕೀಲ ಕೆ.ಜಿ.ಎಸ್. ಪಾಟೀಲ್, ಆರ್‌ಪಿಎಫ್ ಸಿಪಿಐ ಗೌರಂಗ್ ಬೋರಾ, ಜಿಆರ್‌ಪಿ ಸಿಪಿಐ ಅರ್ಜುಮನ್‌ ಬಾನು, ಪಿಎಸ್ಐ ಹನುಮಂತಪ್ಪ ಎಂ. ಶಿರೇಹಳ್ಳಿ ಹಾಗೂ ರೈಲ್ವೆ ಸಿಬ್ಬಂದಿ ಇದ್ದರು.

***
ನ್ಯಾಯಾಲಯದ ಆದೇಶದ ಬಗ್ಗೆ ರೈಲ್ವೆ ಇಲಾಖೆಗೆ ಯಾವುದೇ ಮಾಹಿತಿ ನೀಡದ ಇಲಾಖೆ ವಕೀಲರ ವೈಫಲ್ಯ ಈ ಪ್ರಕರಣಕ್ಕೆ ಕಾರಣ. ಈ ಬಗ್ಗೆ ವರದಿ ತಯಾರಿಸಿ ಮೇಲಧಿಕಾರಿಗಳಿಗೆ ಸಲ್ಲಿಸಲಾಗುವುದು.
-ಕೆ.ಟಿ. ಅಶೋಕ, ಸಂಚಾರಿ ನಿಯಂತ್ರಕ, ದಾವಣಗೆರೆ ರೈಲ್ವೆ ವಿಭಾಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT