ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಸಾಮ್ರಾಜ್ಯಕ್ಕೆ ಅನಿರೀಕ್ಷಿತ ಪ್ರವೇಶ, ಹಠಾತ್‌ ನಿರ್ಗಮನ!

Last Updated 24 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಮುಂಬೈ: ರತನ್‌ ಟಾಟಾ ಅವರ ಉತ್ತರಾಧಿಕಾರಿ ಆಯ್ಕೆ ಸಮಿತಿಯಲ್ಲಿದ್ದ ಸೈರಸ್‌ ಮಿಸ್ತ್ರಿ ಅವರು ಅಚ್ಚರಿದಾಯಕ ಬೆಳವಣಿಗೆಯಲ್ಲಿ ಟಾಟಾ ಸಮೂಹದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಾಲ್ಕು ವರ್ಷದ ಒಳಗೆ ಅವರ ಅಧಿಕಾರಾವಧಿ ಹಠಾತ್ತಾಗಿ ಮೊಟಕುಗೊಂಡಿದೆ. ಅಚ್ಚರಿದಾಯಕ ಬೆಳವಣಿಗೆಯಲ್ಲಿ ಸಮೂಹದ ಅಧ್ಯಕ್ಷ ಹುದ್ದೆ ಅಲಂಕರಿಸಿದ್ದ ಮಿಸ್ತ್ರಿ ಅವರು ಈಗ  ಹಠಾತ್ತಾಗಿ ಹುದ್ದೆ ತೊರೆದಿದ್ದಾರೆ.

ಟಾಟಾ ಸಮೂಹದ ಪ್ರಮುಖ ಪಾಲುದಾರ ಸಂಸ್ಥೆಯಾಗಿರುವ ಟಾಟಾ ಸನ್ಸ್‌ನ ಹೊಸ ಅಧ್ಯಕ್ಷರ ಆಯ್ಕೆ ಸಮಿತಿಯ ಸದಸ್ಯರ ಪೈಕಿ ಈಗ ರತನ್‌ ಟಾಟಾ ಅವರೂ ಒಬ್ಬರಾಗಿದ್ದಾರೆ. ಪ್ರಚಾರದಿಂದ ದೂರ ಇರುವ,  ಏಕಾಂಗಿತನವನ್ನು ಹೆಚ್ಚು ಇಷ್ಟಪಡುವ   ಸೈರಸ್‌  ಮಿಸ್ತ್ರಿ (48) ಅವರು, ರತನ್‌ ಟಾಟಾ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡು ಅಚ್ಚರಿ ಮೂಡಿಸಿದ್ದರು.

ದೇಶದ ಅತಿದೊಡ್ಡ ಕೈಗಾರಿಕಾ ಸಮೂಹದ ಅಧ್ಯಕ್ಷರಾಗಿ ನೇಮಕಗೊಳ್ಳುತ್ತಿದ್ದಂತೆ ಮಿಸ್ತ್ರಿ  ಅವರಿಗೆ ಸ್ವದೇಶಿ ಮತ್ತು ವಿದೇಶಿ  ಮಾರುಕಟ್ಟೆಯಲ್ಲಿ ಹಲವಾರು ಗಂಭೀರ ಸ್ವರೂಪದ ಸವಾಲುಗಳು ಎದುರಾಗಿದ್ದವು. ಸಮೂಹದ ಹಲವಾರು ಅಂಗಸಂಸ್ಥೆಗಳು ಪ್ರತಿಕೂಲ ಪರಿಸ್ಥಿತಿ ಎದುರಿಸುತ್ತಿದ್ದವು.

ರತನ್‌ ಟಾಟಾ ಅವರು ಇದಕ್ಕೆ ವ್ಯತಿರಿಕ್ತವಾಗಿ ಅನೇಕ ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಂಡಿದ್ದರು. ಅವುಗಳ ಪೈಕಿ  ಟಾಟಾ ಟೀನಿಂದ ಟೆಟ್ಲೆ ಸ್ವಾಧೀನ, ಟಾಟಾ ಸ್ಟೀಲ್‌ನಿಂದ ಉಕ್ಕು ತಯಾರಿಕಾ ಸಂಸ್ಥೆ ಕೋರಸ್‌, ಟಾಟಾ ಮೋಟಾರ್ಸ್‌ನಿಂದ ಜಾಗ್ವಾರ್‌ ಲ್ಯಾಂಡ್‌ ರೋವರ್‌ ಖರೀದಿ ಮುಂತಾದವು ಪ್ರಮುಖವಾಗಿದ್ದವು.

ಮಿಸ್ತ್ರಿ ಅವರನ್ನು ವಜಾ ಮಾಡಿರುವುದಕ್ಕೆ ಕಾರಣಗಳೇನು ಎನ್ನುವುದು ಸ್ಪಷ್ಟವಾಗಿರದಿದ್ದರೂ, ಮೂಲಗಳ ಪ್ರಕಾರ, ಟಾಟಾ ಟ್ರಸ್ಟ್‌ನ ಸಲಹೆ ಮೇರೆಗೆ ಈ ನಿರ್ಧಾರಕ್ಕೆ ಬರಲಾಗಿದೆ.

ಜಿಇಸಿ ರದ್ದು: ಮಿಸ್ತ್ರಿ ಅವರು ರಚಿಸಿದ್ದ ಸಮೂಹದ ಕಾರ್ಯನಿರ್ವಹಣಾ ಮಂಡಳಿಯನ್ನು (ಜಿಇಸಿ) ರದ್ದುಪಡಿಸಲಾಗಿದೆ. ಮಿಸ್ತ್ರಿ ಅವರ ನೇತೃತ್ವದಲ್ಲಿನ ‘ಜಿಇಸಿ’ಯನ್ನು 2013ರಲ್ಲಿ ಅಸ್ತಿತ್ವಕ್ಕೆ ತರಲಾಗಿತ್ತು.  ಮಿಸ್ತ್ರಿ ಅವರ ಕಾರ್ಯನಿರ್ವಹಣೆಗೆ ನೆರವಾಗುವ ಉದ್ದೇಶದಿಂದ ಈ ಮಂಡಳಿ ರಚಿಸಲಾಗಿತ್ತು.

ಮಿಸ್ತ್ರಿ ನಿರ್ಗಮನದ ನಂತರವೂ ಮಂಡಳಿ ಸದಸ್ಯರ  ಒಂದಿಬ್ಬರಿಗೆ ಹೊಸ ಹೊಣೆಗಾರಿಕೆ ನೀಡಲು ನಿರ್ಧರಿಸಲಾಗಿದೆ. ಆದರೆ, ಉಳಿದ ಸದಸ್ಯರ ಹಣೆಬರಹ ಏನೆಂಬುದು ತಿಳಿದು ಬಂದಿಲ್ಲ.

ಸ್ಪರ್ಧೆಯಲ್ಲಿ ಇಂದ್ರಾ ನೂಯಿ?
ಮುಂಬೈ:
ಸೈರಸ್‌ ಮಿಸ್ತ್ರಿ ಅವರ ವಜಾದಿಂದ ತೆರವಾದ ಹುದ್ದೆ ಭರ್ತಿಗೆ ಪರಿಗಣಿಸುವವರ ಪಟ್ಟಿಯಲ್ಲಿ ಪೆಪ್ಸಿ ಸಂಸ್ಥೆಯ ಇಂದ್ರಾ ನೂಯಿ, ವೊಡಾಫೋನ್‌ ಮಾಜಿ ಸಿಇಒ ಅರುಣ್‌ ಸರಿನ್‌ ಸೇರಿದಂತೆ ಅನೇಕರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ.

ಟಾಟಾ ಇಂಟರ್‌ನ್ಯಾಷನಲ್‌ನ ನೊಯೆಲ್‌ ಟಾಟಾ, ಟಿಸಿಎಸ್‌ನ ಸಿಇಒ ಎನ್‌. ಚಂದ್ರಶೇಖರನ್‌, ಟಾಟಾ ಗ್ರೂಪ್‌ನ ಇಶ್ಹಾತ್‌ ಹುಸೇನ್‌ ಮತ್ತು ಬಿ. ಮುತ್ತುರಾಮನ್‌ ಅವರೂ ಸ್ಪರ್ಧೆಯಲ್ಲಿ ಇದ್ದಾರೆ ಎನ್ನಲಾಗಿದೆ.

ಸೈರಸ್‌ ಮಿಸ್ತ್ರಿ ನಡೆದು ಬಂದ ಹಾದಿ...
*1930ರಲ್ಲಿ ಪಲ್ಲೊಂಜಿ ಕುಟುಂಬದಿಂದ ಟಾಟಾ ಸನ್ಸ್‌ನಲ್ಲಿ ಮೊದಲ ಬಾರಿಗೆ ಷೇರು ಖರೀದಿ

* ಪಾರ್ಸಿ ಕುಟುಂಬದಲ್ಲಿ ಜನನ: 1968, ಜುಲೈ 4

* ಕಟ್ಟಡ ನಿರ್ಮಾಣ ವಲಯದ ಭಾರಿ ಕೈಗಾರಿಕೋದ್ಯಮಿ ಪಲ್ಲೊಂಜಿ ಮಿಸ್ಟ್ರಿ ಅವರ ಕಿರಿಯ ಮಗ

* ಲಂಡನ್ನಿನ ಇಂಪೇರಿಯಲ್‌ ಕಾಲೇಜ್‌ನಿಂದ ಸಿವಿಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ

* ಲಂಡನ್‌ ಬಿಸಿನೆಸ್‌ ಸ್ಕೂಲ್‌ನಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ

* 2012ರ ಡಿಸೆಂಬರ್‌ನಲ್ಲಿ ಟಾಟಾ ಸನ್ಸ್‌ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ

* ಟಾಟಾ ಸಮೂಹದ 6ನೆ ಅಧ್ಯಕ್ಷ. ಟಾಟಾ ಕುಟುಂಬಕ್ಕೆ ಸೇರದ 2ನೆ ಅಧ್ಯಕ್ಷ

* 2016 ಅಕ್ಟೋಬರ್‌ 24: ಅಧ್ಯಕ್ಷ ಹುದ್ದೆಯಿಂದ ವಜಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT