ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯ್ನುಡಿಯ ತತ್ತ್ವಜ್ಞಾನಕ್ಕೆ ತಾಯ್ತನದ ಮೆರುಗು

Last Updated 28 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ತಾಯ್ತನಕ್ಕೂ ತಾಯ್ನುಡಿಗೂ ನೇರ ನಂಟಿದೆ. ಮಗು ಭಾಷೆಯನ್ನು ಕಲಿಯುವುದೇ ತಾಯಿಯ ಮೂಲಕ. ಆದರೆ ವ್ಯಾಕರಣದ ಉಪಾಧ್ಯಾಯರು ಭಾಷೆಯನ್ನು ಕಲಿಸುವಂತೆ ತಾಯಿ ಮಗುವಿಗೆ ಕಲಿಸುವುದಿಲ್ಲ; ಅವಳು ತಾಯ್ತನದ ಭಾಗವಾಗಿಯೇ ಮಗುವಿಗೆ ನುಡಿಯನ್ನು ಕಲಿಸುತ್ತಾಳೆ.

ಮಾತ್ರವಲ್ಲ, ಅವಳ ಈ ಕ್ರಮ ತುಂಬ ಪರಿಣಾಮಕಾರಿಯೂ ಹೌದು. ಕನ್ನಡ ರಾಜ್ಯೋತ್ಸವ ಬಂತೆಂದರೆ ಕನ್ನಡದ ಬಗ್ಗೆ, ತಾಯ್ನುಡಿಯ ಬಗ್ಗೆ ಚರ್ಚೆ–ಸಂವಾದಗಳು ಆರಂಭವಾಗುತ್ತವೆ. ಈ ಹಿನ್ನೆಲೆಯಲ್ಲಿ ತಾಯ್ನುಡಿಯ ಮೀಮಾಂಸೆ ಈ ಲೇಖನದಲ್ಲಿದೆ....

ಕ್ಕಳ ಮೊದಲ ಶಿಕ್ಷಣ ತಾಯ್ನುಡಿಯಲ್ಲೇ ಆಗಬೇಕು, ತಾಯ್ನುಡಿಯಲ್ಲಿ ಮಾತ್ರ ನಮ್ಮ ನಿಜವಾದ ಆಳವಾದ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯ, ತಾಯ್ನುಡಿಯ ನೆಲೆಯಿಲ್ಲದಿದ್ದರೆ ನಮ್ಮ ಅನುಭವವೆಲ್ಲಾ ಪರಕೀಯವಾಗುತ್ತದೆ ಎಂಬ ಹಲವಾರು ವಿಚಾರಗಳನ್ನು ನಾವೆಲ್ಲ ಕೇಳಿರುತ್ತೇವೆ.
 
ಆದರೆ ಈ ಭಾವನೆಗಳಿಗೆ ಸರಿಯಾದ ಬೌದ್ಧಿಕ ನೆಲೆಗಟ್ಟಿಲ್ಲದೇ ಅವು ಕೇವಲ ಸೆಂಟಿಮೆಂಟಲ್ ಮಟ್ಟಕ್ಕೆ ಇಳಿದುಬಿಡುವ ಅಪಾಯವೂ ಇರುತ್ತದೆ. 
ತಾಯ್ನುಡಿಯ ಬಗ್ಗೆ ನಮಗಿರುವ ಒಲವಿಗೆ ಕಾರಣ ಹುಡುಕಬೇಕೆಂದರೆ ಎಲ್ಲ ತಾಯ್ನುಡಿಗಳಿಗೂ ಸಮಾನವಾಗಿರುವಂಥ ಅಂಶಗಳನ್ನು ಹುಡುಕಬೇಕು.
 
ಎಲ್ಲ ತಾಯ್ನುಡಿಗಳಿಗೂ ಇರುವ ಒಂದೇ ಸಮಾನ ಅಂಶವೆಂದರೆ ಅದನ್ನು ನಾವು ಕಲಿಯುವ ಬಗೆ. ಮಿಕ್ಕೆಲ್ಲ ಮೇಲ್ಮಟ್ಟದ ಕಲಿಕೆಗಳಿಗೆ ಮೊದಲ ಭಾಷೆಯ ಕಲಿಕೆ ಒಂದು ಮಾದರಿಯನ್ನು ಸ್ಥಾಪಿಸುವಂಥದ್ದು.
 
ನಾವು ನಮ್ಮ ಮೊದಲ ಭಾಷೆಯನ್ನು ಹೆಚ್ಚಾಗಿ ನಮ್ಮ ತಾಯಂದಿರ ದೇಖರೇಖಿಯ ಅಡಿಯಲ್ಲೇ ಕಲಿಯುವುದರಿಂದ, ತಾಯಂದಿರು ನಮಗೆ ಭಾಷೆಯನ್ನು ಕಲಿಸಿದ ಕ್ರಮವನ್ನು ಕುರಿತೂ ಸ್ವಲ್ಪ ಗಮನಿಸಬೇಕು. 
 
ಒಂದು ಮಗು ಭಾಷೆಯನ್ನು ಕಲಿಯುವಾಗ ಇರುವ ಸವಾಲು ಏನೆಂದು ಗಮನಿಸಿ. ಹಾಲನ್ನು ನೋಡಿ ‘ಹಾಲು’ ಎಂದು ಹೇಳಬೇಕು. ಅಂದಮೇಲೆ, ಆ ಮಗು ಹಾಲಿಗೆ ಮನಸ್ಸಿನಲ್ಲೇ ಒಂದು ಲೇಬಲ್ ಹಾಕಬೇಕು.
 
ಆದರೆ ಇಲ್ಲೊಂದು ಸಮಸ್ಯೆ. ‘ಹಾಲು’ ಎಂದರೆ ಯಾವುದು? ನಿಮಗೇನೋ ಹಾಲು ಎಂದರೇನು ಎಂದು ಗೊತ್ತು. ಆದರೆ ಆ ಮಗುವಿಗೆ ಅದಿನ್ನೂ ತಿಳಿದಿಲ್ಲವಲ್ಲ.
 
ಹಾಗಾದರೆ ಯಾವ ವಸ್ತುವಿಗೆ ಅದು ಲೇಬಲ್ ಹಾಕಬೇಕು? ’ಅದು ಕುಡಿಯುವ ಬೆಳ್ಳಗಿನ ವಸ್ತು ಇದೆಯಲ್ಲಾ, ಅದಕ್ಕೇ ಹಾಲು ಎಂದು ಲೇಬಲ್ ಹಾಕಬೇಕು’ ಎಂದಿರೋ? ಹಾಗೆ ಮಾಡುವುದಕ್ಕೆ ಕನಿಷ್ಠ ಒಂದು ವಸ್ತುವಿನ ಬಣ್ಣ ಏನೆಂದು ತಿಳಿದಿರಬೇಕು.
 
ಅಂದಮೇಲೆ, ‘ಬಿಳಿ’ ಎನ್ನುವ ಲೇಬಲ್ ಕೂಡ ಗೊತ್ತಿರಬೇಕು. ‘ಬಿಳಿ’ ಎನ್ನುವ ಲೇಬನ್ನು ಯಾವ ವಸ್ತುವಿಗೆ ಹಾಕಬೇಕು? ಹಾಲಿಗೆ ಹಾಕಿದರೆ, ಆ ವಸ್ತುವಿನ ಹೆಸರೇ ‘ಬಿಳಿ’ ಎಂದಾಗಿಬಿಡುತ್ತದೆ.
 
ಆದರೆ, ಹಾಲಿಗೆ ಮಾತ್ರವಲ್ಲದೇ, ಅಪ್ಪನ ಪಂಚೆಗೂ ಅದೇ ‘ಬಿಳಿ’ ಎನ್ನುವ ಲೇಬಲ್ ಅಂಟಿಸಬೇಕಲ್ಲ? ಇಷ್ಟಕ್ಕೇ ಮುಗಿಯಲಿಲ್ಲ ನಿಮ್ಮ ಮಗುವಿನ ಸಮಸ್ಯೆ.
 
‘ಹಾಲು’ ಎನ್ನುವುದು ಒಂದು ರೀತಿಯ ಲೇಬಲ್. ಒಂದೇ ರೀತಿಯ ವಸ್ತುಗಳಿಗೆ ಹಚ್ಚುವಂಥದ್ದು (‘ನಾಮಪದ’); ‘ಬಿಳಿ’ ಎನ್ನುವುದು ಇನ್ನೊಂದು ರೀತಿಯ ಲೇಬಲ್. ಬೇರೆಬೇರೆ ರೀತಿಯ ವಸ್ತುಗಳಿಗೆ ಹಚ್ಚುವಂಥದ್ದು (’ಗುಣವಾಚಕ’) ಎನ್ನುವುದನ್ನೂ ಹೇಗೋ ತಿಳಿದುಕೊಂಡಿರಬೇಕು.
 
ಇನ್ನೂ ಮೂಲಭೂತವಾಗಿ ತನ್ನ ಸುತ್ತ ಏನೇನೋ ಸದ್ದುಗಳನ್ನು ಮಾಡುತ್ತಿರುವ ಜನರೆಲ್ಲ ಆ ಸದ್ದುಗಳನ್ನು ಪ್ರಪಂಚದಲ್ಲಿರುವ ನಿರ್ದಿಷ್ಟ ವಸ್ತುಗಳಿಗೆ ಲೇಬಲ್‌ಗಳು ಎನ್ನುವಂತೆ ಉಪಯೋಗಿಸುತ್ತಿದ್ದಾರೆ; ಅವು ಬರೀ ಸದ್ದುಗಳಲ್ಲ – ಎನ್ನುವ ಅಂಶವೂ ಹೇಗೋ ಈ ಮಗುವಿಗೆ ತಿಳಿದಿರಬೇಕು.
 
ಈ ಅಯೋಮಯವಾದ ಸಿದ್ಧಾಂತವನ್ನು ನಂಬಿಕೊಂಡು ನಿಮ್ಮ ತಾಯಿ ನಿಮಗೆ ಮಾತಾಡಲು ಹೇಳಿಕೊಟ್ಟಿದ್ದರೆ ಮಾತು ಬರುವುದು ಹಾಗಿರಲಿ, ನಿಮ್ಮ ತಲೆಯೇ ಶಾರ್ಟ್‌ಸರ್ಕೀಟಾಗಿರುತ್ತಿತ್ತು.
 
ಪುಣ್ಯಕ್ಕೆ ನಮ್ಮ ತಾಯಂದಿರ ವಿಧಾನ ಈ ಸಿದ್ಧಾಂತಕ್ಕಿಂತಲೂ ಬಹಳ ಉತ್ತಮವಾದ, ಸಮರ್ಥವಾದ ವಿಧಾನ. ಅದರ ಮೊದಲ ಅಂಶ ಇದು: ತಾಯಂದಿರು ಮಕ್ಕಳಿಗೆ ಭಾಷೆಯನ್ನು ಭಾಷೆಯಾಗಿ, ಅಂದರೆ ಸಂವಹನಕ್ಕೆ ಇರುವ ಮಾಧ್ಯಮ ಎನ್ನುವಂತೆ ಸ್ವತಂತ್ರವಾಗಿ ಹೇಳಿಕೊಡುವುದಿಲ್ಲ.
 
ಭಾಷೆ ಯಾವಾಗಲೂ ಒಂದು ಕ್ರಿಯೆಯ ಭಾಗವಾಗಿಯೇ ಬರುವುದು. ಹಾಲು ಕುಡಿಯುವ ಕ್ರಿಯೆಯ ಭಾಗವಾಗಿ ಮಾತ್ರವೇ ‘ಹಾಲು’ ಎನ್ನುವ ಪದ (ಅಥವಾ ಮಕ್ಕಳ ಭಾಷೆಯಲ್ಲಿ ‘ಹಾಲು’ ಎನ್ನುವುದಕ್ಕೆ ಏನೇನು ಪದವೋ ಅಂಥ ಪದ) ಬರುವುದು.
 
ಕುಡಿಯುವ ಕ್ರಿಯೆಯ ಜೊತೆಗೆ ಮಾತ್ರ ‘ಕುಡಿ’ ಎನ್ನುವ ಪದವೂ ಬರುವುದು. ಕುಡಿಯುವುದಕ್ಕೆ, ತಿನ್ನುವುದಕ್ಕೆ ಅಥವಾ ಮುಟ್ಟುವುದಕ್ಕೆ ಇರುವ ಅಪಾಯಗಳನ್ನು ಸೂಚಿಸುವ ಸಂದರ್ಭದಲ್ಲಿ ಮಾತ್ರ ’ಬಿಸಿ’, ‘ತಣ್ಣ’ ಎನ್ನುವ ಪದಗಳು ಬರುವುದು.
 
ಅಂದಮೇಲೆ, ತಾಯ್ನುಡಿಯ ಕಲಿಕೆಯಲ್ಲಿ ಇರುವ ಮೊದಲ ಮುಖ್ಯ ಅಂಶ: ಪದಗಳು ಮೂಲತಃ ವಸ್ತುಗಳನ್ನು ಸೂಚಿಸುವ ಲೇಬಲ್‌ಗಳಲ್ಲ; ಬದಲಾಗಿ ಕ್ರಿಯೆಗಳನ್ನು ನಿಭಾಯಿಸಲು ಇರುವ ಹತಾರಗಳು.  
 
ನಮ್ಮ ದೇಶದಲ್ಲಿ ಹಳ್ಳಿಯ ಮಕ್ಕಳಿಗೆ ಇಂಗ್ಲಿಷ್‌ ಹೇಳಿಕೊಡುವ ದೊಡ್ಡದೊಡ್ಡ ಯೋಜನೆಗಳೆಲ್ಲಾ ಮುಗ್ಗರಿಸಿ ಬಿದ್ದಿರುವುದೂ ಇದೇ ಕಾರಣಕ್ಕೇ. ದಿನನಿತ್ಯದ ವಸ್ತುಗಳನ್ನು, ಸಂದರ್ಭಗಳನ್ನು ನಿಭಾಯಿಸುವ ಭಾಗವಾಗಿ ಇಂಗ್ಲಿಷನ್ನು ಹೇಳಿಕೊಡುವ ಬದಲು, ಪಾಸ್ಟ್ ಟೆನ್ಸ್, ಪ್ರಾಪರ್ ನೌನ್, ಕಾಮನ್ ನೌನ್, ಪಾಸ್ಟ್ ಪಾರ್ಟಿಸಿಪಲ್ ಎಂದು ಹೇಳಿಕೊಡುವುದರಿಂದ.
 
ಅದರ ಬದಲು ಸುಮ್ಮನೆ ನಮ್ಮ ತಾಯಂದಿರನ್ನು ಗಮನಿಸಿದ್ದರೆ ಸಾಕಾಗುತ್ತಿತ್ತು. ಮಕ್ಕಳಿಗೆ ಭಾಷೆ ಬರುವುದು ಹೇಗೆ ಎನ್ನುವ ಬ್ರಹ್ಮವಿದ್ಯೆ ತಂತಾನೇ ತಿಳಿಯುತ್ತಿತ್ತು. 
 
ತಾಯ್ನುಡಿಯ ತತ್ತ್ವಜ್ಞಾನದ ಎರಡನೇ ಮುಖ್ಯ ಅಂಶ ಇದು: ನಮ್ಮ ಕ್ರಿಯೆಗಳ ಸಂದರ್ಭದಲ್ಲಿ ನಾವು ಏನೇನು ವ್ಯತ್ಯಾಸಗಳನ್ನು ಮಾಡಬೇಕೋ ಅಷ್ಟರ ಮಟ್ಟಿಗೆ ಮಾತ್ರ ನಮಗೆ ಪದಗಳು ಬೇಕು. ಮಿಕ್ಕಂತೆ ಪದಗಳು ಮತ್ತು ಪರಿಕಲ್ಪನೆಗಳು ತುರ್ತಾಗಿಯೇನೂ ಬೇಕಿಲ್ಲ.
 
ನಮ್ಮ ಕ್ರಿಯೆಗಳು ಎಷ್ಟರ ಮಟ್ಟಿಗೆ ಸಂಕೀರ್ಣವಾಗುತ್ತಾ ಹೋಗುತ್ತವೆಯೋ, ಆ ಕ್ರಿಯೆಗಳೊಳಗೆ ಎಷ್ಟರ ಮಟ್ಟಿಗೆ ಒಳವ್ಯತ್ಯಾಸಗಳು ಬೆಳೆಯುತ್ತಾ ಹೋಗುತ್ತವೆಯೋ ಅಷ್ಟರ ಮಟ್ಟಿಗೆ ಮಾತ್ರ ನಮ್ಮ ಪದಸಂಪತ್ತಿಯೂ ವಾಕ್ಯಸಂಪತ್ತಿಯೂ ಬೆಳೆಯುತ್ತಹೋದರೆ ಸಾಕು.
 
ನಮಗೆ ಬೆಂಗಳೂರಿನಲ್ಲಿ ಓಡಾಡಲು ನಾಲ್ಕು ದಿಕ್ಕುಗಳ ಜ್ಞಾನವಿದ್ದರೆ ಸಾಕು. ಆದರೆ, ಅದೇ ನಾವಿಕರಾದರೆ ಹದಿನಾರು ದಿಕ್ಕುಗಳ ಸೂಚಿ ಇರುವ ಕಂಪಾಸ್ ರೋಸ್ ಬೇಕಾಗುತ್ತದೆ.
 
ನೀವು ತಾಯಂದಿರನ್ನು ಗಮನಿಸಿದ್ದರೆ ಅವರು ಎಂದೂ ದೊಡ್ಡವರ ಭಾಷೆಯಲ್ಲಿ ಚಿಕ್ಕ ಮಕ್ಕಳೊಂದಿಗೆ ಮಾತನಾಡುವುದಿಲ್ಲ. ಕಲಿಕೆಯ ಸಂದರ್ಭಕ್ಕೆಂದೇ ಒಂದು ತೊದಲುಭಾಷೆ ಇರುತ್ತದೆ.
 
ಅದು ಆ ಮಗುವಿನ ಪ್ರಪಂಚದಲ್ಲಿ ಎಷ್ಟು ಭೇದಗಳಿವೆಯೋ ಅಷ್ಟಕ್ಕೆ ಮಾತ್ರ ಪರಿಕಲ್ಪನೆಗಳಿರುವ ಮತ್ತು ಕಲಿಕೆಯ ಸಂದರ್ಭದ ಬಗ್ಗೆ ಸಣ್ಣಸಣ್ಣ ಸೂಕ್ಷ್ಮಗಳನ್ನೂ ಗುರುತಿಸುವಂಥ ಭಾಷೆ. ಒಂದು ವಿಚಾರದ ಕುರಿತು ಮಾತನಾಡುವುದಕ್ಕೆ ಒಂದು ಭಾಷೆ ಇರುತ್ತದೆ.
 
ಆದರೆ, ಅದೇ ವಿಚಾರವನ್ನು ಕುರಿತು ಹೇಳಿಕೊಡುವುದಕ್ಕೆ ಸ್ವಲ್ಪ ಬೇರೆಯದೇ ಆದ ಭಾಷೆ ಇರುತ್ತದೆ. ತಾಯಂದಿರು ಇಂತಹ ಸೂಕ್ಷ್ಮಗಳಲ್ಲಿ ಬಹಳ ನಿಷ್ಣಾತರು. ನೀವು ಚಿಕ್ಕ ಮಕ್ಕಳಿಗೆ ಅರ್ಥವಾಗದ ಪದಗಳನ್ನು ಉಪಯೋಗಿಸಿ ಏನಾದರೂ ಪ್ರಶ್ನೆ ಕೇಳಿ.
 
ತಕ್ಷಣ ಈ ತಾಯಂದಿರು ತಮ್ಮ ಮಕ್ಕಳ ಭಾಷೆಯ ಚೌಕಟ್ಟಿಗೆ ಅದನ್ನು ಅನುವಾದ ಮಾಡಿ, ಅದರಲ್ಲಿರುವ ಪರಿಕಲ್ಪನೆಗಳು ಪದಗಳ ಮೂಲಕ ನಿಮ್ಮ ಮಾತನ್ನು ಪುನಃಸೃಷ್ಟಿ ಮಾಡುವುದನ್ನು ಗಮನಿಸಿರುತ್ತೀರಿ. 
 
ತಾಯ್ನುಡಿಯನ್ನು ಕಲಿಯುವಾಗ ಕೆಲಸ ಮಾಡುವ ಮೂರನೇ ಅಂಶ. ವ್ಯಾಕರಣದ ವ್ಯತ್ಯಾಸಗಳೆಲ್ಲಾ ಕ್ರಿಯೆಯಲ್ಲಿ ನಾವು ಮಾಡಬೇಕಾದ ವ್ಯತ್ಯಾಸಗಳಿಗೆ ನೇರವಾಗಿ ತಾಳೆಯಾಗುವಂಥವು.
 
ಉದಾಹರಣೆಗೆ, ನೆಲದ ಮೇಲೆ ಬಿದ್ದಿರುವ ಹಲವು ವಸ್ತುಗಳ ನಡುವೆ ಕೆಂಪುಬಣ್ಣದ ಪೆನ್ನನ್ನು ಮಾತ್ರ ಮಗು ತಂದುಕೊಡಬೇಕು. ‘ಆ ಕೆಂಪು ಪೆನ್ನು ತಂಡುಕೊಡು’ ಎಂದು ನೀವು ಹೇಳಿದರೆ, ಅದರ ವ್ಯಾಕರಣ ಗಮನಿಸಿ.
 
ಗುಣವಾಚಕ (ಕೆಂಪು), ನಾಮಪದ (ಪೆನ್ನು) ಮತ್ತು ಕ್ರಿಯಾಪದ (ತಂದುಕೊಡು). ಆದರೆ ಇದನ್ನೇ ಕ್ರಿಯೆಗಳ ಭಾಷೆಯಲ್ಲಿಯೂ ಹೇಳಬಹುದು. ಮಾಡಬೇಕಾದ ಕೆಲಸ (ಕ್ರಿಯಾಪದ), ಮಾಡುವವರು (ಕರ್ತೃಪದ), ಯಾವ ವಸ್ತುವಿನ ಕುರಿತು ಈ ಕೆಲಸ (ವಸ್ತುವಾಚಕ) ಯಾವ ನಿರ್ದಿಷ್ಟವಸ್ತು ಎಂದು ಗುರುತಿಸುವುದು ಹೇಗೆ (ಗುಣವಾಚಕ). ಇತ್ಯಾದಿ. 
 
ಇದರರ್ಥ ಒಂದು ಮಗು ತನ್ನ ತಲೆಯಲ್ಲಿ ವ್ಯಾಕರಣ ಮತ್ತು ಕ್ರಿಯೆ ಎನ್ನುವ ಜೋಡಿ ಎತ್ತುಗಳನ್ನು ಏಕಕಾಲಕ್ಕೆ ಹೊಡೆಯುತ್ತಿದೆ ಎಂದಲ್ಲ. ಬದಲಾಗಿ ಇಡೀ ಒಂದು ಭಾಷೆಯೇ ಕ್ರಿಯೆಗಳನ್ನು ನಿಭಾಯಿಸುವಾಗ ಉಪಯೋಗಕ್ಕೆ ಬರುವ ಒಂದು ವ್ಯವಸ್ಥೆ.
 
ಇಲ್ಲೇ ಒಂದು ವಿಚಾರವನ್ನೂ ಗಮನಿಸಿ. ಬರಿಯ ವಸ್ತುಗಳನ್ನು ಸೂಚಿಸಲು ಭಾಷೆಯ ಅಗತ್ಯವೇ ಇಲ್ಲ. ಯಾವುದಾದರೂ ಒಂದು ಪಟ್ಟಿಯನ್ನು ಮಾಡಬಹುದಾದ ವ್ಯವಸ್ಥೆಯೇ ಸಾಕು.
 
ಉದಾಹರಣೆಗೆ, ಇತ್ತೀಚಿನ ಸೂಪರ್‌ಮಾರ್ಕೆಟ್ ರೀತಿಯ ಅಂಗಡಿಗಳಲ್ಲಿರುವ ತರಹೇವಾರಿ ವಸ್ತುಗಳನ್ನೆಲ್ಲ ಭಾಷೆಯ ಅಗತ್ಯವೇ ಇಲ್ಲದೇ ಕೇವಲ ಬಾರ್‌ಕೋಡ್‌ಗಳ ಮೂಲಕ ಗುರುತಿಸುವುದನ್ನು ನೀವು ನೋಡಿರುತ್ತೀರಿ.
 
ಆದರೆ ಒಂದು ಸಣ್ಣ ಕ್ರಿಯೆಯ ಕುರಿತು ಮಾತನಾಡಬೇಕಾದರೂ ವ್ಯಾಕರಣಬದ್ಧವಾದ ವಾಕ್ಯಗಳ, ಅಂದರೆ ಭಾಷೆಯ, ಅಗತ್ಯವಿದೆ – ’ಬೇಗ ಬಾ’, ’ಕಾಫಿ ಕೊಡು’ – ಹೀಗೆ. 
 
ತಾಯ್ನುಡಿಗೆ ಪ್ರಾಮುಖ್ಯ ಯಾಕೆ ಎಂದರೆ ಹೀಗೆ ಕಲಿಕೆಯನ್ನು ಕ್ರಿಯಾಕೇಂದ್ರಿತಗೊಳಿಸುತ್ತದೆ ಎನ್ನುವ ಕಾರಣಕ್ಕೆ. ಕ್ರಿಯಾಕೇಂದ್ರಿತ ಕಲಿಕೆಯಿಂದ ಮಾತ್ರ ಅನುಭವ ಸಾಧ್ಯವಾಗುವುದು.
 
ಅನುಭವದ ಅರ್ಥವೇ ನಮ್ಮ ಸುತ್ತದ ಪ್ರಪಂಚದ ಜೊತೆಗೆ ನಮ್ಮ ಇರುಸರಿಕೆ ಎಷ್ಟು ಅನುನಯವಾಗಿದೆ ಎಂದು. ‘ಭವ’ ಎಂದರೆ ನಮ್ಮ ಸುತ್ತದ ಬದುಕು ಅಥವಾ ಪ್ರಪಂಚ; ‘ಅನು’ ಎಂದರೆ ಮೇಳದಿಂದಿರುವುದು, ಸರಿಯಾದ ಹದದಲ್ಲಿರುವುದು ಎಂದು.
 
ಅಂದಮೇಲೆ, ತನ್ನ ಸುತ್ತದ ಪ್ರಪಂಚದ ಜೊತೆಗೆ ಸರಿಯಾಗಿ ವರ್ತಿಸಲು ಬರುವವನಿಗೆ ಯಾವ ರೀತಿಯ ಜ್ಞಾನ ಇದೆಯೋ ಅದು ಅನುಭವ. ಈ ಜ್ಞಾನ ನಮ್ಮ ಕ್ರಿಯೆಗಳಿಗೆ ಸಂಬಂಧಿಸಿದ್ದೇ ಹೊರತೂ ಅದು ನಮ್ಮ ಪ್ರಪಂಚದ ಕುರಿತಾದ ಸಾಮಾನ್ಯಜ್ಞಾನ ಅಲ್ಲ.
 
ಇಂತಹ ಜ್ಞಾನಕ್ಕೆ ಬುನಾದಿ ಹಾಕುವುದೇ ಕ್ರಿಯಾಮೂಲವಾದ ಕಲಿಕೆಯುಳ್ಳ ತಾಯ್ನುಡಿ. ಸಾಮಾನ್ಯವಾಗಿ ನಾವು ಎರಡನೆಯ ಭಾಷೆಯನ್ನು ಕಲಿಯುವಾಗ ನಮ್ಮ ತಾಯ್ನುಡಿಯಲ್ಲಿ ಕ್ರಿಯಾಕೇಂದ್ರಿತವಾಗಿ ಕಲಿತ ಪರಿಕಲ್ಪನೆಗಳ ಮೇಲೆ ಈ ಹೊಸ ಭಾಷೆಯನ್ನು ಕಸಿ ಮಾಡುತ್ತೇವೆ.
 
ಹಾಗಾಗಿ, ನಮಗೆ ಎರಡನೇ ಭಾಷೆಯಾಗಿರುವಂಥದ್ದನ್ನು ಮಕ್ಕಳಿಗೆ ಮೊದಲ ಭಾಷೆ ಎನ್ನುವ ರೀತಿಯಲ್ಲಿ ಹೇಳಿಕೊಡಲು ಹೋದರೆ, ಇಂತಹ ಕ್ರಿಯಾಕೇಂದ್ರಿತ ರೀತಿಯಲ್ಲಿ ಅದನ್ನು ಹೇಳಿಕೊಡುವುದಿಲ್ಲ.
 
ಬದಲಾಗಿ ಈ ಲೇಖನದ ಮೊದಲಲ್ಲಿ ಹೇಳಿದ ಹಾಗೆ ಈಗಾಗಲೇ ನಾವು ಗುರುತಿಸಿಬಿಟ್ಟಿರುವ ವಸ್ತುಗಳಿಗೆ ಲೇಬಲ್ ಹಚ್ಚುವ ರೀತಿಯಲ್ಲಿ ಹೇಳಿಕೊಡುತ್ತೇವೆ. ಅನುಭವಕೇಂದ್ರಿತ ಕಲಿಕೆಗೆ ಅಲ್ಲೊಂದು ಪೆಟ್ಟು ಬಿದ್ದಿರುತ್ತದೆ. ಹಲವು ಭಾಷೆಗಳನ್ನು ಕಲಿತರೂ ತಾಯ್ನುಡಿಗೆ ಇರುವ ಪ್ರಾಶಸ್ತ್ಯ ಈ ಕಾರಣಕ್ಕೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT