ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಹುಟ್ಟುಗುಣ ನೃತ್ಯ

ಅಭಿನೇತ್ರಿ
Last Updated 31 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ನಟನೆ ಹಾಗೂ ನೃತ್ಯದ ಮೂಲಕ ಕಲಾರಸಿಕರ ಮನಸು ಗೆದ್ದವರು ನಟಿ ಲಕ್ಷ್ಮಿ ಗೋಪಾಲಸ್ವಾಮಿ. ಕನ್ನಡದವರೇ ಆಗಿ ಕನ್ನಡ ಚಿತ್ರರಂಗದಲ್ಲಿಯೂ ಸಾಕಷ್ಟು ಗುರುತಿಸಿಕೊಂಡು ಬೇರೆ ಭಾಷೆಯ ಸಿನಿಮಾಗಳಲ್ಲಿಯೂ ಅವರು ಹೆಸರು ಮಾಡಿದ್ದಾರೆ.

ಚಿತ್ರರಂಗದಲ್ಲಿ ಯಶಸ್ಸು ಪಡೆದ ನಂತರವೂ ನೃತ್ಯ ಸಾಧನೆಯ ದಾರಿ ಬಿಡದ ಅವರು ತಮ್ಮ ಸಹಜ ಸೌಂದರ್ಯ ಹಾಗೂ ನಗುವಿನಿಂದ ಜನರಿಗೆ ಹತ್ತಿರವಾಗುತ್ತಾರೆ. ಸಿನಿಮಾ, ನೃತ್ಯ ಕಾರ್ಯಕ್ರಮಗಳು ಎಂದು ಸದಾ ಬ್ಯುಸಿ ಆಗಿರುವ ಅವರು ಆಭರಣಗಳ ಮೇಳ ಜ್ಯುವೆಲ್ಸ್ ಆಫ್‌ ಇಂಡಿಯಾ ರಾಯಭಾರಿ. ತಮ್ಮ ಮೃದು ಮಾತು, ಸಹಜ ಸೌಂದರ್ಯ, ಮೋಹಕ ನಗುವಿನ ಲಕ್ಷ್ಮಿ ಅವರು ಮೆಟ್ರೊದೊಂದಿಗೆ ಹರಟಿದ ಕೆಲ ಕ್ಷಣಗಳ ಮಾಹಿತಿ ಇಲ್ಲಿದೆ

*ಆಭರಣಗಳ ಮೇಳಕ್ಕೆ ರಾಯಭಾರಿ ಆಗಿದ್ದೀರಿ, ಹೇಗನಿಸುತ್ತಿದೆ?
ಭರತನಾಟ್ಯ ಕಲಾವಿದೆಯಾಗಿ ನಾನು ಮೊದಲಿನಿಂದಲೂ ಆಭರಣಗಳ ಬಗೆಗೆ ಒಲವು ಇರಿಸಿಕೊಂಡವಳು. ಅವುಗಳ ವಿನ್ಯಾಸದ ಸೌಂದರ್ಯ ಆಸ್ವಾದಿಸುವುದು ಎಂದರೆ ನನಗೆ ಬಹಳ ಖುಷಿ. ಹೀಗಾಗಿ ನೂರಾರು ದೇಶಿ ಆಭರಣ ವಿನ್ಯಾಸ ವೈಭವವನ್ನು ಮೆರೆವ ಜ್ಯುವೆಲ್ಸ್ ಆಫ್‌ ಇಂಡಿಯಾ ರಾಯಭಾರಿಯಾಗಿರುವುದು ಹೆಮ್ಮೆ ಎನಿಸುತ್ತದೆ.

*ನಿಮ್ಮಿಷ್ಟದ ಆಭರಣ ಯಾವುದು?
ನನಗೆ ಇಂಥದ್ದೇ ಆಭರಣ ಇಷ್ಟವಾಗುತ್ತದೆ ಎಂದೇನೂ ಇಲ್ಲ. ಬೇರೆ ಬೇರೆ ಪ್ರದೇಶದ ಸಾಂಪ್ರದಾಯಿಕ ಶೈಲಿಯಲ್ಲಿ ರೂಪಿಸಿರುವ ಆಭರಣಗಳನ್ನು ಹೆಚ್ಚು ಇಷ್ಟಪಡುತ್ತೇನೆ. ರಾಜಸ್ತಾನ, ಕೇರಳ, ತಮಿಳುನಾಡು, ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳೂ ತಮ್ಮದೇ ಆದ ವಿಶೇಷ ಶೈಲಿಯನ್ನು ಹೊಂದಿರುತ್ತವೆ. ಸಾಂಪ್ರದಾಯಿಕ ಶೈಲಿಗೆ ಮಾರು ಹೋಗುವ ನಾನು ವಿಶೇಷ ಎನಿಸುವ ಆಭರಣಗಳನ್ನು  ಕೊಳ್ಳುತ್ತೇನೆ. ವಿಶೇಷ ವಿನ್ಯಾಸಗಳನ್ನು ನೋಡುವುದು, ಅದಕ್ಕೆ ಸಂಬಂಧಿಸಿದ ಮಾಹಿತಿ ಕಲೆಹಾಕುವುದೂ ನನಗಿಷ್ಟ. ದುಬೈ, ಷಾರ್ಜಾಕ್ಕೆ ಹೋದಾಗ ಎರೊಬಿಕ್‌ ಪೀಸ್‌ ಖರೀದಿಸಿದ್ದೇನೆ. ಒಟ್ಟಿನಲ್ಲಿ ನನಗೆ ಸಾಂಪ್ರದಾಯಿಕ ಶೈಲಿ ಹೆಚ್ಚು ಇಷ್ಟ.

*ಆಭರಣ ವಿನ್ಯಾಸದ ಬಗ್ಗೆ ನಿಮಗೇಕೆ ಅಷ್ಟು ಮೋಹ?
ಆಭರಣ ವಿನ್ಯಾಸದ ಹಿಂದೆ ಪೌರಾಣಿಕ ಆಶಯಗಳು ಇರುತ್ತವೆ. ನಂಬಿಕೆ, ಸಂಪ್ರದಾಯ ಮತ್ತು ಇತಿಹಾಸದ ಮಾಹಿತಿಗಳು ಇರುತ್ತವೆ. ಒಂದು ಕಮಲದ ವಿನ್ಯಾಸವನ್ನು ಆಭರಣ, ಚಿತ್ರಕಲೆ, ಪೇಂಟಿಂಗ್‌, ನೃತ್ಯ, ಸಾಹಿತ್ಯ ಹೀಗೆ ಹಲವು ವಿಧಗಳಲ್ಲಿ ಬಳಸಿಕೊಳ್ಳಲಾಗುತ್ತದೆ.

*ನೃತ್ಯ, ಸಿನಿಮಾ, ಮನೆ ನಿಭಾಯಿಸುವುದು ಕಷ್ಟವಲ್ಲವೆ?
ಅನೇಕ ಸಲ ಹಾಗೆ ಎನಿಸಿದ್ದಿದೆ. ಆದರೆ ಈ ಎಲ್ಲವನ್ನೂ ನಾನು ಇಷ್ಟಪಟ್ಟು ಮಾಡುತ್ತಿರುವುದರಿಂದ ನಿಭಾಯಿಸಲೇಬೇಕು. ಸಮಯ ನಿರ್ವಹಣೆ ಸರಿಯಾಗಿದ್ದರೆ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಬಹುದು. ಇತ್ತೀಚೆಗೆ ಮಲ್ಟಿ ಟಾಸ್ಕಿಂಗ್ ಜನಪ್ರಿಯವಾಗಿದೆ. ಆದರೆ ನನ್ನಿಂದ ಮಾತ್ರ ಅದು ಸಾಧ್ಯವೇ ಇಲ್ಲ. ನಾನು ಸಿನಿಮಾ ಎಂದರೆ ಅದೊಂದನ್ನೇ ಮಾಡುವುದು. ನೃತ್ಯ ಮಾಡುವಾಗ ಸಿನಿಮಾ ಕಡೆ ಯೋಚಿಸುವುದೂ ಇಲ್ಲ. ಮನೆಯಲ್ಲಿದ್ದಾಗಲೂ ಅದರತ್ತಲೇ ನನ್ನ ಗಮನ ಇರುತ್ತದೆ. ಯಾವ ಕೆಲಸ ಮಾಡುತ್ತೇನೆಯೋ ಅದೊಂದನ್ನೇ ನಿಷ್ಠೆಯಿಂದ ಮಾಡುತ್ತಿರುತ್ತೇನೆ. ಇಲ್ಲವೆಂದರೆ ಯಾವುದರಲ್ಲೂ  ಗುಣಮಟ್ಟ ತರಲು ಸಾಧ್ಯವೇ ಇಲ್ಲ.

*ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿದ್ದಂತೆ ಅನೇಕರು ನೃತ್ಯ, ಸಂಗೀತಗಳನ್ನು ಬಿಟ್ಟುಬಿಡುತ್ತಾರೆ. ಆದರೆ, ನೀವಿನ್ನೂ ನೃತ್ಯ ಕಲಾವಿದೆಯಾಗಿ ಗುರುತಿಸಿಕೊಳ್ಳುತ್ತಿರಲು ಕಾರಣ?
ನನ್ನ ಹುಟ್ಟುಗುಣವೇ ನೃತ್ಯ. ಒಮ್ಮೆ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಮೇಲೆ ನೃತ್ಯ ಕಷ್ಟ ಎನಿಸುತ್ತದೆ. ಆದರೆ ಚಿಕ್ಕಂದಿನಿಂದ ಭರತನಾಟ್ಯದ ಬಗ್ಗೆ ನನಗೆ ಆಸಕ್ತಿ ಇತ್ತು. ಅದಕ್ಕೇ ನನ್ನ ಮೊದಲ ಆದ್ಯತೆ. ನಟಿಯಾಗಿ ನಾನೆಂದೂ ಬ್ಯುಸಿ ಆಗಿರಬೇಕು ಎಂದು ಬಯಸಿಲ್ಲ. ಹೀಗಾಗಿಯೇ ನನ್ನ ಮನೋಧರ್ಮಕ್ಕೆ ಹೊಂದುವಂಥ ಸಿನಿಮಾಗಳಲ್ಲಿ ಮಾತ್ರ ಅಭಿನಯಿಸುತ್ತೇನೆ.  ನೃತ್ಯದಲ್ಲಿ ನಮ್ಮ ಪ್ರತಿಭೆ, ಕ್ರಿಯಾಶೀಲತೆಗೆ ಹೆಚ್ಚಿನ ಅವಕಾಶವಿದೆ.

*ಸಿನಿಮಾ ಆಯ್ಕೆಯಲ್ಲಿ ನೀವು ತುಂಬಾ ಚ್ಯೂಸಿ ಎನಿಸುತ್ತದೆ. ಆಯ್ಕೆಗೆ ಅನುಸರಿಸುವ ಮಾನದಂಡಗಳೇನು?
ನನಗೆ ಸಿಕ್ಕಾಪಟ್ಟೆ ಆಫರ್‌ಗಳು ಬರುತ್ತಿವೆ ಎಂದೇನೂ ಇಲ್ಲ. ಇಷ್ಟವಾಗುವ ಪಾತ್ರಗಳು ಬಂದರೆ ಬಿಡುವುದಿಲ್ಲ. ದೊಡ್ಡ ಪ್ರೊಡಕ್ಷನ್‌ ಹೌಸ್‌ ಸಿನಿಮಾಗಳಾದರೆ ಒಪ್ಪಿಕೊಳ್ಳಬೇಕಾಗುತ್ತದೆ. ದೊಡ್ಡ ನಟರಾದರೆ ಅದು ಒಳ್ಳೆಯ ಅವಕಾಶ. ಹೀಗಾಗಿಯೇ ಮಮುಟ್ಟಿ ಅವರ ಜೊತೆ ತುಂಬಾ ಸಿನಿಮಾ ಮಾಡಿದ್ದೇನೆ. ‘ಆಪ್ತರಕ್ಷಕ’ದಂಥ ವ್ಯಾಪಾರಿ ಸಿನಿಮಾವೂ ಒಳ್ಳೆ ಹೆಸರು ತಂದುಕೊಟ್ಟಿದೆ. ಕಥೆ ಮತ್ತು ಚಿತ್ರತಂಡ ಚೆನ್ನಾಗಿದೆ ಎನಿಸಿದರೆ ಮಾತ್ರ ಪಾತ್ರ ಒಪ್ಪಿಕೊಳ್ಳುತ್ತೇನೆ. ಕೆಲವೊಮ್ಮೆ ಯಾವ ನಿರ್ದೇಶಕರು ಇದ್ದಾರೆ ಎಂಬುದೂ ಮುಖ್ಯವಾಗುತ್ತದೆ.
ಸಾಮಾಜಿಕವಾಗಿ ಕೆಟ್ಟ ಸಂದೇಶ ಕೊಡುವ ಸಿನಿಮಾ, ಅಶ್ಲೀಲತೆ ಜಾಸ್ತಿ ಇದೆ ಎನಿಸಿದರೆ, ಕಳಪೆ ಎನಿಸಿದರೆ, ಹೆಂಗಸರನ್ನು ಕೀಳುಮಟ್ಟದಲ್ಲಿ ನೋಡುವಂತಿದ್ದರೆ ನಾನು ಅಂಥ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ. ನನ್ನ ಮನಃಸ್ಥಿತಿಗೆ ಅವು ಹೊಂದುವುದಿಲ್ಲ.

*ಮಹಿಳಾ ಪ್ರಧಾನ ಚಿತ್ರಗಳ ಬಗೆಗೆ ನಿಮ್ಮ ಅಭಿಪ್ರಾಯ?
ಇದು ಚಿತ್ರರಂಗದಲ್ಲಿ ಕಂಡು ಬರುತ್ತಿರುವ ಆರೋಗ್ಯಕರ ಬೆಳವಣಿಗೆ. ಮಹಿಳಾ ಪ್ರಧಾನ ಸಿನಿಮಾ ಬರುತ್ತಿದೆ ಎನ್ನುವ ಸಂತೋಷದೊಂದಿಗೆ ಅವು ಜನಪ್ರಿಯತೆ ಗಳಿಸುತ್ತಿವೆ ಎಂಬುದೂ ಅಷ್ಟೇ ಮುಖ್ಯ.
ಹಿಂದಿ ಮತ್ತು ಮಲಯಾಳಂಗಳಲ್ಲಿ ಇಂಥ ಸಿನಿಮಾಗಳು ಸಾಕಷ್ಟು ಬರುತ್ತಿವೆ. ಇದು ವ್ಯಾಪಾರಿ ಚಿತ್ರಗಳು ಎಂದು ಗೊತ್ತಿದ್ದರೂ ಜನ ನೋಡಲು ಬರುತ್ತಿದ್ದಾರೆ.  ಮಹಿಳೆಯರಷ್ಟೇ ಅಲ್ಲ, ಪುರುಷರೂ ಈ ಸಿನಿಮಾಗಳನ್ನು ನೋಡಲು ಇಚ್ಛಿಸುವುದು ಖುಷಿಯ ವಿಷಯ.

*ನಿಮ್ಮ ಫಿಟ್‌ನೆಸ್‌ ಗುಟ್ಟೇನು?
ನಿಜ ಹೇಳಬೇಕು ಎಂದರೆ ಈ ವಿಷಯದಲ್ಲಿ ನಾನು ಅಷ್ಟೊಂದು ಡಿಸಿಪ್ಲಿನ್ಡ್‌ ಅಲ್ಲ. ನೃತ್ಯಾಭ್ಯಾಸದಿಂದ ಒಂದು ಮಟ್ಟದ ಫಿಟ್‌ನೆಸ್‌ ಸಿಗುತ್ತದೆ. ಆಗಾಗ ಯೋಗ ಮಾಡುತ್ತೇನೆ. ನಡೆಯುವುದು ಎಂದರೆ ತುಂಬ ಇಷ್ಟ. ಸಮಯ ಹಾಳು ಮಾಡುವುದು ನನಗೆ ಇಷ್ಟವಾಗುವುದಿಲ್ಲ. ಲಿಫ್ಟ್‌ಗೆ ಕಾಯುತ್ತಾ ನಿಲ್ಲುವ ಬದಲು ಮೆಟ್ಟಿಲು ಹತ್ತಿಕೊಂಡು ಹೋಗಿ ಬಿಡುತ್ತೇನೆ. ಸದಾ ಚಲನಶೀಲವಾಗಿರುವುದರಿಂದ ವ್ಯಾಯಾಮ ಆಗಿಯೇ ಆಗುತ್ತದೆ.

*ಮುಂದಿನ ಸಿನಿಮಾ?
ನಾಗಾಭರಣ ಸರ್‌ ಅವರ ‘ಅಲ್ಲಮ’ ಸಿನಿಮಾ ಮಾಡುವ ಯೋಜನೆ ಇದೆ. ಮಲಯಾಳಂನಲ್ಲಿ ‘ಕಾಂಬೋಜಿ’ ಎನ್ನುವ ಸಿನಿಮಾದಲ್ಲಿ ಮೋಹಿನಿಯಾಟ್ಟಂ ನೃತ್ಯಗಾರ್ತಿಯಾಗಿ ಅಭಿನಯಿಸಿದ್ದೇನೆ. ನವೆಂಬರ್‌ನಲ್ಲಿ ಅದು ಬಿಡುಗಡೆಯಾಗಲಿದೆ.

ಸಿನಿಮಾಕ್ಕಿಂತ ನೃತ್ಯ ಕಷ್ಟ
ಸಿನಿಮಾ ಟೇಸ್ಟ್‌ ಮಾಡಿದ ಮೇಲೆ ನೃತ್ಯ ಬಲು ಕಷ್ಟ ಎನಿಸುತ್ತದೆ. ಸಿನಿಮಾದಲ್ಲಾದರೆ ಸಹಾಯ ಮಾಡುವುದಕ್ಕೆ ಹತ್ತಾರು ಜನ ಇರುತ್ತಾರೆ. ಆದರೆ ನೃತ್ಯದ ವಿಷಯಕ್ಕೆ ಬಂದರೆ ನಾವೇ ಹೋರಾಡಬೇಕು. ಪ್ರತಿಭೆ, ಮೇಕಪ್‌, ನಿರ್ವಹಣೆ, ನಿರ್ದೇಶನ ಹೀಗೆ ನೃತ್ಯದ ಎಲ್ಲಾ ಆಯಾಮಗಳನ್ನು ನಾವೇ ನಿಭಾಯಿಸಿಕೊಳ್ಳಬೇಕು.

*
ನನ್ನ ಹಾಗೂ ವಿನೀತ್‌ ಜೋಡಿಯನ್ನು ಅನೇಕರು ಇಷ್ಟಪಡುತ್ತಾರೆ. ನಾವಿಬ್ಬರೂ ಅಭಿನಯಿಸಿದ ಸಿನಿಮಾಗಳು ಹಿಟ್ ಆಗಿವೆ. ‘ಜ್ಞಾನಪಾನ’ಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನಮ್ಮಿಬ್ಬರಲ್ಲೂ ನೃತ್ಯದೆಡೆಗಿನ ಪ್ರೀತಿ, ಶ್ರದ್ಧೆ ಒಂದೇ ರೀತಿ ಇದೆ.
–ಲಕ್ಷ್ಮಿ ಗೋಪಾಲಸ್ವಾಮಿ,
ಕಲಾವಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT