ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟಗಳ ನಡುವಿನ ಗರಿ ಹುಡುಕತ್ತ

Last Updated 31 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಶಾಲೆಗೆ ಹೋಗುತ್ತಿದ್ದಾಗ ಮೃದುವಾದ ನವಿಲಗರಿಯನ್ನು ಪುಸ್ತಕದೊಳಗೆ ಇಟ್ಟ ನೆನಪು ಈಗಲೂ ಅದರ ಬಣ್ಣದಷ್ಟೇ ಹಚ್ಚಹಸಿರು. ಹೀಗೆ ಮಾಡಿದರೆ ಓದಿರುವುದೆಲ್ಲಾ ಚೆನ್ನಾಗಿ ಜ್ಞಾಪಕದಲ್ಲಿ ಇರುತ್ತದೆ ಎಂಬ ನಂಬಿಕೆ. ಓದಿದ್ದು ನೆನಪಿರುತ್ತಿತ್ತೋ, ಬಿಡುತ್ತಿತ್ತೋ ಗೊತ್ತಿಲ್ಲ... ಒಟ್ಟಿನಲ್ಲಿ ಪುಸ್ತಕದಲ್ಲಿ ಒಂದು ನವಿಲಿನ ಗರಿ ಇದ್ದರೆ ಏನೋ ನೆಮ್ಮದಿ.

ಇದು ಮಕ್ಕಳ ಮಾತಾದರೆ ದೊಡ್ಡವರು ಹಲವಾರು ದೋಷ ನಿವಾರಣೆಗೆ ಇದನ್ನು ಬಳಸುವ ಪರಿಪಾಠವಿದೆ. ವಾಸ್ತು ದೋಷ, ಶನಿ ದೋಷ ದೂರವಾಗಿ ಸಮೃದ್ಧಿ ಹೆಚ್ಚುತ್ತದೆ ಎಂಬುದು ನಂಬಿಕೆ. ಇದರ ಜೊತೆಗೆ ಅಲಂಕಾರಕ್ಕೆ, ಸೌಂದರ್ಯ ಸಾಧನಕ್ಕೂ ಈ ಗರಿ ಬೇಕು. ಆರೋಗ್ಯ ವರ್ಧನೆ, ಕೀಟಬಾಧೆ ನಿವಾರಣೆಗೂ ಇದರ ಬಳಕೆಯಾಗುವುದುಂಟು.

ಇಷ್ಟೆಲ್ಲಾ ನಂಬಿಕೆಯೇ ಈ ಪಕ್ಷಿಗಳ ಜೀವಕಂಟಕವಾಗಿ ಪರಿಣಮಿಸಿದೆ. ಅದರಲ್ಲೂ ಹುಬ್ಬಳ್ಳಿಯಲ್ಲಿ ನವಿಲಿನ ಗರಿಗಳ ಮಾರಾಟದ ದೊಡ್ಡ ಜಾಲ ಶುರುವಾಗಿದೆ. ಮೂಟೆಗಟ್ಟಲೆ ನವಿಲು ಗರಿಗಳನ್ನು ತಂದು ಸ್ವಚ್ಛ ಮಾಡಿ ಬಿಸಿಲಿನಲ್ಲಿ ಒಣಗಿಸಿ ಜೋಡಿಸಿ ಒಂದು ಕಟ್ಟಿಗೆ ಇಷ್ಟೆಂದು ಹಣ ವಸೂಲಿ ಮಾಡಿ ಸಾರ್ವಜನಿಕವಾಗಿ ಮಾರಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಗರಿಗಳನ್ನು ದರ್ಗಾ, ದೇಗುಲ, ವಿಶೇಷ ಪೂಜೆ, ಅಲಂಕಾರಗಳಿಗಾಗಿ ಬಳಕೆ ಮಾಡಲಾಗುತ್ತಿದೆ. ‘ವನ್ಯ ಜೀವಿ ಕಾಯ್ದೆ’ ಪ್ರಕಾರ ಯಾವುದೇ ವನ್ಯಜೀವಿಗಳ ಹತ್ಯೆ, ಮಾಂಸ, ಚರ್ಮ, ಗರಿ ದಾಸ್ತಾನು ಅಪರಾಧ. ಅದರಂತೆಯೇ ನವಿಲುಗರಿ ಮಾರಾಟ ಕೂಡ ಅಪರಾಧವೇ. ಆದರೂ ಇದು ಅವ್ಯಾಹತವಾಗಿ ನಡೆಯುತ್ತಿದೆ. 

ನವಿಲುಗಳ ಸಂಖ್ಯೆ ಎಷ್ಟಿದೆ ಎಂಬುದರ ಲೆಕ್ಕಾಚಾರ ಕೂಡ ಸಿಗುತ್ತಿಲ್ಲ ಎನ್ನುತ್ತಾರೆ ಅರಣ್ಯ  ಇಲಾಖೆ ಅಧಿಕಾರಿಗಳು. ಅಳವಿನಂಚು ತಲುಪುವ ಮುನ್ನ ಎಚ್ಚೆತ್ತುಕೊಳ್ಳಬೇಕು ಎನ್ನುತ್ತಾರೆ ಪರಿಸರವಾದಿಗಳು. ಕರ್ನಾಟಕದಲ್ಲಿ ದಿನೇ ದಿನೇ ನವಿಲುಗಳ ಸಂಖ್ಯೆ ಕ್ಷೀಣಿಸುತ್ತಿದೆ. ರೈತರು ಸಿಂಪಡಿಸುವ ರಾಸಾಯನಿಕ ಔಷಧಿ ತಿಂದು ಒಂದೆಡೆ ಇವುಗಳ ಸಂತತಿ ನಶಿಸುತ್ತಿದ್ದರೆ, ಇನ್ನೊಂದೆಡೆ ಬೇಟೆಗಾರರ ಹಾವಳಿ. ಅದರಲ್ಲಿಯೂ ಬಯಲು ಸೀಮೆ, ಮಲೆನಾಡು, ಉತ್ತರ ಕರ್ನಾಟಕ ಭಾಗಗಳಲ್ಲಿ ಇದರ ಬೇಟೆ ಹೆಚ್ಚಾಗುತ್ತಿದೆ. ನವಿಲಿನ ಮಾಂಸ ತಿಂದರೆ ಅನೇಕ ರೋಗಗಳು ವಾಸಿಯಾಗುತ್ತದೆ ಎಂಬ ಮೂಢನಂಬಿಕೆಯೂ ಇದಕ್ಕೆ ಒಂದು ಕಾರಣ. ನವಿಲಿನ ಜುಟ್ಟಿನಿಂದ ಮಾಡುವ ಬೀಸಣಿಕೆಗೆ ಬೇಡಿಕೆ ಇರುವುದೂ ಇನ್ನೊಂದು ಕಾರಣ.
–ಎಂ.ಆರ್. ಮಂಜುನಾಥ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT