ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪೂ ಆನೆ ಮತ್ತು ಬಿಂಕದ ನೀಲಿ ಹಕ್ಕಿ

ಅಮ್ಮ ಹೇಳಿದ ಕಥೆ
Last Updated 12 ನವೆಂಬರ್ 2016, 19:30 IST
ಅಕ್ಷರ ಗಾತ್ರ
–ಗೀತಾ ವಸಂತ
*
ಹಿತ್ತಲ ಕಿಟಕಿಯಿಂದ ಒಂದು ಚೆಂದನೆ ಹಕ್ಕಿ ಕಾಣುತ್ತಿತ್ತು. ಅದರ ಮೈಯೆಲ್ಲ ಮೋಹಕ ನೀಲಿ. ಕಣ್ಣಿಗೆ ಕಾಡಿಗೆ ಬಳಿದಂಥ ಕಡುಕಪ್ಪು. ತಲೆ ಮೇಲೆ ಬಣ್ಣಬಣ್ಣದ ತುರಾಯಿ ಹೊತ್ತು ಡೌಲು ಮಾಡುತ್ತಿತ್ತು. ಆಗಾಗ ಕುಂಡೆ ಕುಣಿಸುತ್ತ ಬಿನ್ನಾಣ ಬೇರೆ! 
 
‘ಮಗಾ... ಇಲ್ನೋಡು... ಹಕ್ಕಿ ಎಷ್ಟ್ ಛಂದಿದೆ!’ ಎಂದು ಕೂಗಿದ್ದೇ ಅವ ಓಡೋಡಿ ಬಂದ. ಹಕ್ಕಿಯ ಊಟ, ಮನೆಮಾರು ಕುರಿತೆಲ್ಲ ನೂರೆಂಟು ಪ್ರಶ್ನೆ ಎಸೆದ. ‘ಅದನ್ನ ಹಿಡ್ಕೊಡ್ತೀಯಾ?’ ಅಂತ ದುಂಬಾಲು ಬಿದ್ದ. ‘ಅದಕ್ಕೆ ಆಕಾಶವೇ ಮನೆ ಮಗಾ... ಊರು, ರಾಜ್ಯ, ದೇಶ, ಇವೆಲ್ಲಾ ಅದಕ್ಕಿಲ್ಲ’ ಎಂದೆ. ‘ಯಾಕಿಲ್ಲ?’ ಎಂದ. ‘ಅದು ರಾತ್ರಿ ಎಲ್ಲಿ ಮಲಗುತ್ತೆ ಹೇಳು’ ಎಂದು ಸೆರಗು ಹಿಡಿದು ಸುತ್ತಾಡಿದ. ‘ದೂರದಲ್ಲಿ ಕಾಡು ಇದೆಯಲ್ಲಾ ಅಲ್ಲಿ’ ಅಂತ ಹೇಳಿ ಪ್ರಶ್ನೆ ದಾಳಿ ತಪ್ಪಿಸಿಕೊಂಡರೆ, ‘ಕಾಡಿಗೆ ಹೋಗೋಣ ನಡಿ’ ಎಂದು ಉತ್ಸುಕನಾದ. ‘ಕಾಡಂದ್ರೆ ಕತ್ತಲೂ... ಕ್ರೂರ ಪ್ರಾಣಿಗಳೂ... ನಿಗೂಢ, ಭಯಾನಕ. ಬ್ಯಾಡಪ್ಪಾ...’ ಅಂದೆ. ‘ಪ್ರಾಣಿಗಳನ್ನು ಫ್ರೆಂಡ್ ಮಾಡ್ಕೊಳ್ವಾ. ಆಗ ಏನೂ ಮಾಡೋದಿಲ್ಲ, ನಮ್ಮನೆ ಕಾಮಿ ಬೆಕ್ಕಿನಂಗೆ!’ ಅಂದ. ಕೊನೆಗೆ ಹಗಲೆಲ್ಲಾ ಕಾಡಿ ರಾತ್ರಿಯೂ ಕಾಡಿನ ಕನವರಿಕೆಯಲ್ಲಿರುವ ಮಗನಿಗೆ ಕತೆಯಲ್ಲಿ ಕಾಡು ಕಾಣಿಸಿದೆ.
 
‘‘ಒಂದೂರಲ್ಲಿ ಒಬ್ಬ ಪುಟಾಣಿ ಪುಟ್ಟ ಇದ್ದ. ಅವ ಒಂದಿನ ಚೆಂದದ ಹಕ್ಕಿ ಕಂಡ. ಎಷ್ಟು ಚೆಂದ ಅಂದ್ರೇ... ಹೇಳಲೇ ಸಾಧ್ಯವಿಲ್ಲ! ಅದನ್ನು ಹಿಡಿದುಕೊಡಲು ಅಮ್ಮನನ್ನು ಕೇಳಿದ. ಅವಳೋ ಅವಳ ಕೆಲಸದಲ್ಲಿ ಬಿಜಿ. ‘ತಡ್ಕಳೋ ಮಾರಾಯಾ...’ ಎಂದು ಏನೇನೋ ಕೆಲಸ ಮಾಡುತ್ತ ಮಧ್ಯಾಹ್ನ ಊಟವಾದಮೇಲೆ ಸುಸ್ತಾಗಿದೆ ಎಂದು ಮಲಗಿಬಿಟ್ಟಳು. 
 
ಹೊತ್ತುಹೋಗದೇ ತಲೆಕೆಟ್ಟ ಪೋರ ಹಕ್ಕಿ ಹಿಡಿಯಲು ಹೋದ. ಅದು ಕುಂಡೆ ಕುಣಿಸುತ್ತ, ತುಂಡುಗುಪ್ಪು ಹೊಡೆಯುತ್ತ ದೂರದೂರ ಹಾರಿತು. ಇವ ಅದರ ಹಿಂದೆ ಓಡುತ್ತ ಓಡುತ್ತ ಸಾಗಿದ. ಬೆಟ್ಟ ಬೇಣ ದಾಟಿದ. ಆಗ ಧುತ್ತೆಂದು ಒಂದು ಹೊಳೆ ಎದುರಾಯಿತು. ಅದಕ್ಕೆ ಒಂದೇ ಮರದ ತುಂಡಿನ ಸಂಕ. ದಾಟೋದು ಹೇಗೆಂದು ಹೌಹಾರಿದ. ಹಕ್ಕಿ ಅರಾಮಾಗಿ ಪುರ್ರೆಂದು ಹಾರಿ ಆಚೆಬದಿಗೆ ಹೋಗಿ ಉಲಿಯಿತು. ಇವ ಎದೆ ಢವಗುಟ್ಟುತ್ತಿದ್ದರೂ ಹೆಜ್ಜೆ ಬ್ಯಾಲೆನ್ಸ್ ಮಾಡುತ್ತ, ಹೊಳೆಯ ಸಂಗೀತಕ್ಕೆ ಗುಂಗು ಹಿಡಿದವನಂತೆ ಹೆದರಿಕೆ ಮರೆಯುತ್ತ ದಾಟಿಯೇಬಿಟ್ಟ! 
 
ಆ ಕಡೆ ಹೋದರೆ, ಅಮ್ಮ ಹೇಳಿದ ಅದೇ ಕಾಡು. ಮುಗಿಲೆತ್ತರದ ಮರಗಳ ದಟ್ಟ ಸಂದಣಿ. ಹೋಗಲೋ ಬೇಡವೋ ಅಂತ ಅರೆಕ್ಷಣ ಅನಿಸಿದರೂ ಕಾಡು ಅವನನ್ನು ಸೆಳೆದುಕೊಂಡುಬಿಟ್ಟಿತು. ಅಂಥ ಮೋಹಕ, ಅಂಥ ಮಾಯಕ ಕಾಡದು. ಕಾಡಿಯೇ ಕಾಡುವುದು...’’ ಎಂದು ಕಣ್ಮುಚ್ಚಿದೆ. 
 
‘ಅಮ್ಮಾ ಎಲ್ಲಿ ಕಳೆದೆ... ಮುಂದೆ ಹೇಳೇ’ ಎಂದು ಕೈ ಎಳೆದಾಗ ಮುಂದೇನು ಹೇಳೋದೂ ಅಂತ ಯೋಚನೆ.
 
‘‘ಹ್ಞುಂ, ಅಂವಾ ಮುಂದೆ ಮುಂದೆ ಕಾಡೊಳಗೆ ಹೋದ. ಸ್ವಲ್ಪ ಬೆಳಕಿತ್ತು. ಹೆಜ್ಜೆಯೂರುವಲ್ಲೆಲ್ಲ ಭಾರೀ ತಣ್ಣಗಿತ್ತು. ಅಂಥ ಶೀತದ ಅನುಭವ ಮೊದಲು ಆಗಿರಲೇ ಇಲ್ಲ. ಭಯ ಆದ್ರೂ ನಂತರ ಕುತೂಹಲ ಅನಿಸಿತು. ದೈತ್ಯ ಮರಗಳು, ಅದಕ್ಕೆ ಸುತ್ತಿಕೊಂಡ ಬಗೆಬಗೆ ಬಳ್ಳಿಗಳು, ಇದುವರೆಗೂ ಕಾಣದ ಬಣ್ಣಗಳ ಹೂವುಗಳು. ಅದರ ನಮನಮೂನೆ ಕಂಪು ಅವನನ್ನು ಒಳಗೊಳಗೆ ಎಳೆದುಕೊಂಡವು. ಥಟ್ಟನೆ ಹಕ್ಕಿಯ ನೆನಪಾಯಿತು. ಹುಡುಕಿದರದು ನಾಪತ್ತೆ! ಅಷ್ಟೊತ್ತಿಗೆ ಕತ್ತಲು ದಟ್ಟವಾಗತೊಡಗಿತು. ಜೀಂಯ್... ಜೀಂಯ್... ಮರ್ರೋ... ಮರ್ರೋ... ಅಂತೆಲ್ಲ ಕೀಟಗಳ ವಿಚಿತ್ರ ಸದ್ದುಗಳು ಅವನ ತಲೆಬುರುಡೆಯೊಳಗೆ ತುಂಬಿದವು. ಮತ್ತೆ ಮನೆಗೆ ಹೋಗುತ್ತೇನೋ ಇಲ್ಲವೊ ಎಂಬ ದಿಗ್ಭ್ರಮೆ. ತುಂಬಾ ಹಸಿವು, ಭಯ ಎಲ್ಲಾ ಆಗಿ, ಮಧ್ಯಾಹ್ನ ಮಲಗಿದ್ದ ಅಮ್ಮನ ನೆನಪಾಯಿತು. ಅಯ್ಯೋ ಅವಳು ನನ್ನ ಹುಡುಕುತ್ತಾ ಕಂಗಾಲಾಗಿರಬಹುದು. ತನ್ನ ದೋಸ್ತರ ಮನೆಗಳಿಗೆ ಹೋಗಿ ಕೇಳುತ್ತಿರಬಹುದು. ಆಮೇಲೆ... ಅಳುತ್ತಿರಬಹುದು. ಅಂತೆಲ್ಲಾ ಅನಿಸಿ ಪುಟ್ಟನೂ ಜೋರಾಗಿ ಅಳತೊಡಗಿದ. ಅರಣ್ಯರೋದನ! ಅತ್ತತ್ತು ಸುಸ್ತಾಗಿ ಮರವೊಂದರ ಪೊಟರೆಯಲ್ಲಿ ಕುಳಿತ. ಹಾಗೇ ನಿದ್ದೆ ಬಂದಂತಾಯಿತು.
 
ಹುಲಿಯೊಂದು ಎದೆ ಝಲ್ಲೆನಿಸುವಂತೆ ಕೂಗಿದಾಗ ಎಚ್ಚರವಾಗಿ ಮೈಯೆಲ್ಲ ಬೆವತು ಉಚ್ಚೆಹೊಯ್ದುಕೊಂಡುಬಿಟ್ಟ ಪುಟ್ಟ!’’
 
ಮಗ ಮತ್ತಷ್ಟು ಹತ್ತಿರ ಸರಿದು ಗಟ್ಟಿಯಾಗಿ ತಬ್ಬಿಕೊಂಡ. ‘ಮುಂದೆ... ಹ್ಞುಂ.. ಮುಂದೆ...’ ದನಿಯಲ್ಲಿ ಅಳುವಿನ ಪಸೆ. 
 
‘‘ಕಂದಾ... ಅದು ಒಳ್ಳೆಯ ಹುಲಿ. ಅದು ಅಮ್ಮಹುಲಿ. ಅದಕ್ಕೆ ಎರಡು ಪುಟಾಣಿ ಮರಿಗಳಿದ್ದವು. ಅದು ಅಲ್ಲೇ ತನ್ನ ಮರಿಗಳೊಂದಿಗೆ ಆಟವಾಡುತ್ತಾ ಮಲಗಿತ್ತು. ಇವ ಪೊಟರೆಯೊಳಗಿಂದ ನೋಡೇ ನೋಡಿದ. ಕಾಮಿಬೆಕ್ಕಿನ ಮರಿಗಳ ನೆನಪಾಗಿ ಮುದ್ದು ಉಕ್ಕಿತು. ನಿಧಾನಕ್ಕೆ ಹುಲಿಮರಿಗಳ ಬಳಿಹೋದ. ಅಷ್ಟರಲ್ಲಿ ಅಮ್ಮಹುಲಿ ನಿದ್ದೆಗೆ ಜಾರಿತ್ತು. ಹುಲಿಮರಿಗಳ ಜೊತೆ ಆಟ ಎಂಥಾ ಮಜಾ ಬಂತು ಗೊತ್ತಾ? ಅವನಿಗೆ ಹೊತ್ತು ಹೋದದ್ದೇ ತಿಳಿಯಲಿಲ್ಲ. ಕೊನೆಗೆ ಆ ಮುದ್ದುಮರಿಗಳು ಅಮ್ಮನ ಹೊಟ್ಟೆ ಹಿಡಿದು ಮಲಗಿಬಿಟ್ಟಾಗ ಇವನಿಗೆ ಮತ್ತೆ ಹಕ್ಕಿ ನೆನಪಾಯಿತು. ಹಕ್ಕಿಯ ಮನೆಯಾದ್ರೂ ಸಿಕ್ಕಿದ್ರೆ ಅಲ್ಲಿ ಬೆಚ್ಚಗೆ ಮಲಗಬಹುದಿತ್ತಾ? ತನಗೆ ಜಾಗ ಸಾಕಾಗುತ್ತಾ? ಅಂತೆಲ್ಲ ಯೋಚಿಸಿದ. ಯಾಕಂದ್ರೆ... ಕಾಡಲ್ಲಿ ಮನೆಗೆ ವಾಪಸ್ ಬರುವ ದಾರಿ ಗೊತ್ತಿರುವುದು ಆ ಹಕ್ಕಿಗೆ ಮಾತ್ರ! 
 
ಹಕ್ಕಿ ಹಕ್ಕಿ ಸಮುದ್ರನೀಲಿಯ ಹಕ್ಕಿ ಸಮುದ್ರದ ಮೇಲೆ ಹಾರುತ್ತಿದ್ದೀಯಾ... ಹಕ್ಕಿ ಹಕ್ಕಿ ಆಕಾಶನೀಲಿಯ ಹಕ್ಕಿ ಆಕಾಶ ಅಳೆಯುತ್ತಿದ್ದೀಯಾ? ನಾನು ಏನೋ ಹೇಳ್ತಾ ಇದ್ರೆ ಮಗ ಅಳುತ್ತಿದ್ದ. ‘ಅಯ್ಯೋ ಅಳಬೇಡ ಮಗಾ. ಕತೆ ಕೇಳು. ಕೊನೆಗೆ ಅವನಿದ್ದ ಪೊಟರೆಯ ಬಳಿಯೇ ಭಾರೀ ಗಾತ್ರದ ಹೆಜ್ಜೆಗಳನ್ನಿಟ್ಟಂತೆ ಪರಪರ ಸಪ್ಪಳವಾಗತೊಡಗಿತು. ಪುಟ್ಟ ಇಣುಕಿ ನೋಡುತ್ತಾನೆ... ಬೆಟ್ಟದಂಥ ಆನೆ! ಥ್ರಿಲ್ ಎನ್ನಿಸಿತು. ಸಣ್ಣಗೆ ಹೆದರಿಕೆಯೂ... ಚೌತಿ ಗಣಪತಿಗೆ ಆನೆಯ ಮುಖವೇ ಇರೋದಲ್ವಾ? ಅದು ಪಾಪದ ಪ್ರಾಣಿ. ಮನುಷ್ಯರನ್ನು ತಿನ್ನೋದಿಲ್ಲ ಅಂತೆಲ್ಲ ಏನೇನೋ ಪುಟ್ಟ ತಲೆಗೆ ಹೊಳೆಯಿತು. ಎದ್ದು ಬಂದವನೇ ಆನೆಯ ದಪ್ಪ ಕಾಲು ತಬ್ಬಿಕೊಂಡು ಅಳತೊಡಗಿದ. 
 
‘ಆನೇ, ಆನೆ ದೇವರೇ, ನನ್ನನ್ನು ಹೇಗಾದರೂ ಮನೆಗೆ ಮುಟ್ಟಿಸು. ಇಲ್ಲವಾದರೆ ನಾನು ಈ ಕಾಡಲ್ಲಿ ಕಳೆದೇ ಹೋಗುತ್ತೇನೆ’ ಎಂದ. ಆನೆ ಸರ್ರನೆ ತನ್ನ ಸೊಂಡಿಲಿನಿಂದ ಪುಟ್ಟನನ್ನು ಸೆಳೆದು ಬೆನ್ನಮೇಲೆ ಎಸೆಯಿತು. ಪುಟ್ಟ ಗಕ್ಕನೆ ಅದರ ಬೆನ್ನು ಆತುಕೊಂಡ. ಏನಾಶ್ಚರ್ಯ! ಆನೆ ಮಾತನಾಡಿತು. ‘ನೀನು ಬಂದ ದಾರಿ ನೆನಪಿಸಿಕೊಂಡು ಹೇಳು’ ಎಂದಿತು. ಆಗಲೇ ಸಣ್ಣಗೆ ಬೆಳಕು ಮೂಡುತ್ತಿತ್ತು. ತಾನು ನೋಡಿದ ಬಳ್ಳಿ, ಹೂವು, ಕಂಪು... ಏನೇನೋ ನೆನಪಿಸಿಕೊಂಡು ಪುಟ್ಟ ಹೇಳುತ್ತಲೇ ಹೋದ. ಆನೆ ನಡೆದದ್ದೇ ದಾರಿ! ಎಲ್ಲ ಸರಿಸುತ್ತ ದಾರಿಮಾಡಿಕೊಳ್ಳುತ್ತ ಆನೆ ನಡೆಯಿತು. ಆನೆ ಮೇಲೆ ಅಂಬಾರಿ... ಪುಟ್ಟನ ಸವಾರಿ... ಹೊರಟಿತು. ಹೂವು–ಹಣ್ಣು ಎಲ್ಲ ಈಗ ಕೈಗೇ ಎಟುಕತೊಡಗಿದವು. ಸುಮಾರು ದೂರ ಬಂದ ಮೇಲೆ ಫಳ್ಳನೆ ಬೆಳಕು ಎರಚಿದಂತೆ ಬಯಲು ಕಾಣತೊಡಗಿತು. ‘ಊರು ಹತ್ತಿರಾಯ್ತು’ ಎಂದು ಪುಟ್ಟ ಆನೆಗೆ ಮುತ್ತಿಟ್ಟ.
 
ಸಂಕದವರೆಗೂ ಬಂದ ಆನೆ ಸವಾರಿ ಗಕ್ಕನೆ ನಿಂತುಬಿಟ್ಟಿತು. ಅದು ಒಂಟಿ ದಿಮ್ಮಿಯ ಸಂಕ ದಾಟುವುದು ಹೇಗೆ? ‘ಸರ್ಕಸ್ ಆನೆಯಂತೆ ಎರಡು ಕಾಲು ಮೇಲೆತ್ತಿ ಎರಡೇ ಕಾಲಲ್ಲಿ ನಡೆಯೋಕೆ ಬರುತ್ತಾ ಗಣಪೂ?’ ಎಂದು ಆನೆಯನ್ನು ಪುಟ್ಟ ಕೇಳಿದ. ತನ್ನ ಹೊಸ ಹೆಸರು ಕೇಳಿ ಆನೆಗೆ ಸಂಭ್ರಮವಾಗಿ ಜೋರಾಗಿ ಘೀಳಿಟ್ಟಿತು. ಮರುಕ್ಷಣವೇ ಮುಖ ಚಿಕ್ಕದು ಮಾಡಿ ಸಂಕ ದಾಟಿ ಪುಟ್ಟನ ಮನೆಯವರೆಗೂ ಬರಲಾಗದ್ದಕ್ಕಾಗಿ ಸಂಕಟದಿಂದ ಕಣ್ಣೀರಿಟ್ಟಿತು. ಆನೆಯನ್ನು ತಬ್ಬಿಕೊಂಡು ಪುಟ್ಟನೂ ಅತ್ತ’’. 
 
‘ಅಮ್ಮಾ! ಪುಟ್ಟ ಅಷ್ಟು ದೊಡ್ಡ ಆನೆಯನ್ನು ಹ್ಯಾಗೆ ತಬ್ಕೊಂಡಾ?’ ಮಗ ಮಧ್ಯೆ ಬಾಯಿ ಹಾಕಿದ. ಹೌದಲ್ಲಾ! ‘‘ಕತೆಯಲ್ಲಿ ಇದೆಲ್ಲಾ ಸಾಧ್ಯ’’ ಎಂದೆ. 
 
‘‘ಕೊನೆಗೂ ಪುಟ್ಟ ಆನೆಯನ್ನು ಭಾರವಾದ ಮನಸ್ಸಿನಿಂದ ಬೀಳ್ಕೊಟ್ಟ. ‘ನಾಳೆ ದಿನ ಸಂಕದವರೆಗೂ ಬಾ. ನಾನು ರಾಶಿ ರಾಶಿ ಬಾಳೆ ಹಣ್ಣು, ಕಬ್ಬು, ಜಾಮೂನು, ಚಾಕಲೇಟು, ಐಸ್‌ಕ್ರೀಮು ಎಲ್ಲಾ ತರುತ್ತೇನೆ’ ಎಂದು ಪ್ರಾಮಿಸ್ ಮಾಡಿದ. ಆನೆ ಸೊಂಡಿಲು ಅಲ್ಲಾಡಿಸಿತು. ಮತ್ತೆ ಪುಟ್ಟ ಒಬ್ಬನೇ ಸಂಕ ದಾಟತೊಡಗಿದ. 
ಆಗ ನೋಡು ಎಲ್ಲಿತ್ತೋ ಈ ಬಿಂಕದ ಹಕ್ಕಿ! ಪುರ್ರಂತ ಹೊಳೆಗುಂಟ ಹಾರಿಬಂತು. ‘ಎತ್ಲಾಗೆ ಹೋಗಿದ್ಯೇ? ನಿಂಗೆ ರೆಕ್ಕೆ ಇದೆ ಅಂತಾ ಸೊಕ್ಕು’ ಎಂದು ಮೂತಿ ತಿರುವಿ ಛೇಡಿಸಿದ. ಅದು ಇವನ ಭುಜದ ಮೇಲೆ ಕುಳಿತು, ‘ಕಾಡು ನೋಡಿದ್ಯಾ?’ ಅಂತ ಕೇಳಿ ಕಣ್ಣುಹೊಡೆಯಿತು. ಎಲಲಾ ಹಕ್ಕಿ! ಮಾಯದ ಹಕ್ಕಿ! ಅನ್ನುತ್ತಿದ್ದಂತೆ ಸುಂಯ್ ಅಂತ ಮನೆ ಕಡೆ ಹಾರಿತು. ಪುಟ್ಟನೂ ಮನೆ ಕಡೆ ಓಡಿದ’’.
 
‘ಅಮ್ಮಾ ಕತೆ ರಾಶಿ ಚಲೊ ಇದೆ. ಇಷ್ಟು ಬೇಗ ಮುಗಿದೇ ಹೋಯ್ತಾ? ಅವನಮ್ಮ ಏನೆಂದಳು? ಪುಟ್ಟ ಅಮ್ಮನಿಗೆ ಏನೆಂದ? ಮರುದಿನ ಗಣಪೂ ಆನೆ ಸಂಕದ ಹತ್ತಿರ ಬಂದಿತ್ತಾ? ಅಂತೆಲ್ಲ ಪ್ರಶ್ನೆಗಳು ಕತ್ತಲಲ್ಲಿ ಮಿನುಗುತ್ತಿದ್ದವು’. 
 
‘‘ಮಗನೇ ಇದು ಮುಗಿಯದ ಕತೆ... ನೋಡೋಣ ನಾಳೆ. ಬಂದ್ರೂ ಬಂತು ಆನೆ; ಮಕ್ಕಳ ಕಟ್ಕೊಂಡು!’’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT