ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಣಾಮಗಳ ಬಗ್ಗೆ ಯೋಚಿಸಿಲ್ಲ

ನೋಟು ರದ್ದತಿಯ ಸಾಧಕ ಬಾಧಕ
Last Updated 18 ನವೆಂಬರ್ 2016, 19:30 IST
ಅಕ್ಷರ ಗಾತ್ರ

ದಿನನಿತ್ಯದ ಬದುಕಿನ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎನ್ನುವ ಬಗ್ಗೆ ಯೋಚನೆ ಮಾಡದೇ ಈ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ.
ಚಲಾವಣೆಯಲ್ಲಿದ್ದ ಶೇ 85ರಷ್ಟು ಕರೆನ್ಸಿಯನ್ನು ರದ್ದು ಮಾಡಿದರೆ ಅದರಿಂದ ಆಗಬಹುದಾದ ತೊಂದರೆಗಳ ಬಗ್ಗೆ ಯೋಚನೆ ಮಾಡಬೇಕಿತ್ತು. ಹೊಸ ನೋಟುಗಳ ಅಭಾವ ಇದೆ. ಪರಿಸ್ಥಿತಿ ತಕ್ಕಮಟ್ಟಿಗೆ ಸುಧಾರಿಸಲು ಕನಿಷ್ಠ ಎರಡು ತಿಂಗಳು ಬೇಕು. ಅಲ್ಪಾವಧಿಗೆ ಬಹಳ ಕಷ್ಟ. ದೂರಗಾಮಿ ಲಾಭವೇನಿದ್ದರೂ ಸರ್ಕಾರ ಮತ್ತು ಬ್ಯಾಂಕ್‌ಗಳಿಗೆ ಮಾತ್ರ.

ಒಳ್ಳೆಯ ನಿರ್ಧಾರ ಅಲ್ಲ ಎಂದು ಹೇಳಲಾಗದು. ಆದರೆ ಸರ್ಕಾರ ಅಂದುಕೊಂಡಂತೆ ಆಗುತ್ತಿಲ್ಲ. ಕಪ್ಪುಹಣ ಹೊಂದಿರುವವರು ಹಲವಾರು ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಹೀಗಾಗಿ ಅವರಿಗೆ ಯಾವುದೇ ಸಮಸ್ಯೆ ಆಗುತ್ತಿಲ್ಲ. ದಿನಗೂಲಿ ಮಾಡುವವರು, ಸಣ್ಣ ವ್ಯಾಪಾರಿಗಳು, ಕೆಳ ಮತ್ತು ಮಧ್ಯಮ ವರ್ಗದವರು ಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ.

ಯಾರಿಗೆ ಅನುಕೂಲ?: ಕ್ರೆಡಿಟ್, ಡೆಬಿಟ್ ಕಾರ್ಡ್ ಮೂಲಕ ವ್ಯವಹರಿಸುವವರಿಗೆ ಯಾವುದೇ ತೊಂದರೆ ಇಲ್ಲ. ಇದರಿಂದಾಗಿ ಸಂಘಟಿತ ವಲಯ ಅಂದರೆ ಮಾಲ್, ಮೆಗಾ ಸ್ಟೋರ್‌ಗಳಿಗೆ ಹೆಚ್ಚು ಅನುಕೂಲ ಆಗಿದೆ. ಬೀದಿ ಬದಿಯಲ್ಲಿ ವ್ಯಾಪಾರ ನಡೆಸುವ ಅಸಂಘಟಿತ ವಲಯಕ್ಕೆ ಭಾರಿ ಸಮಸ್ಯೆ ಆಗಿದೆ.

ನಿಮ್ಮ ಗ್ರಾಹಕರನ್ನು ಅರಿಯಿರಿ (ಕೆವೈಸಿ) ನಿಯಮದಡಿ ಗ್ರಾಹಕರ ಮಾಹಿತಿಯನ್ನು ಬ್ಯಾಂಕ್‌ಗಳಿಗೆ ಕೊಟ್ಟಿದ್ದೇವೆ. ಖಾತೆಗೆ ಹಣ ಜಮಾ ಮಾಡುವ ಮತ್ತು ತೆಗೆಯುವ ಬಗ್ಗೆಯೂ ಮಾಹಿತಿ ಇರುತ್ತದೆ. ಇಂತಹ ಖಾತೆಗಳಿಗೆ ಹಣ ಪಡೆಯುವ ಮಿತಿ ಹೇರುವುದು ಸರಿಯಲ್ಲ. ಒಬ್ಬ ಅಂಗಡಿ ನಡೆಸಲು ದಿನಕ್ಕೆ ಕನಿಷ್ಠ ₹ 10 ಸಾವಿರದಿಂದ 15  ಸಾವಿರ ಬೇಕು.

ಒಂದು ವಾರಕ್ಕೆ ಕೂಲಿ ಇತ್ಯಾದಿ ಸೇರಿ 1 ಲಕ್ಷ ಖರ್ಚಾಗುತ್ತದೆ. ವಾರಕ್ಕೆ 50 ಸಾವಿರ ಹಣ ತೆಗೆಯುವ ಮಿತಿ ಕೊಟ್ಟರೆ, ವ್ಯವಹಾರ ನಡೆಸಲು ಕಷ್ಟ. ಕೆಲಸಗಾರರಿಗೆ ಚೆಕ್ ಕೊಟ್ಟರೆ, ‘ಹಣ ಪಡೆಯಲು ಬ್ಯಾಂಕಿನಲ್ಲಿ ಸರತಿಯಲ್ಲಿ ನಿಂತಿದ್ದೀನಿ’ ಎಂದು ಹೇಳಿ ಆತ ಮರುದಿನ ಕೆಲಸಕ್ಕೆ ಬರುವುದಿಲ್ಲ. ಹೀಗಾದರೆ ವ್ಯಾಪಾರ ಮುಂದುವರಿಸುವುದು ಹೇಗೆ?
– ಭರತ್ ಕುಮಾರ್ ಷಾ,
ಆಂತರಿಕ ವ್ಯಾಪಾರ ಮತ್ತು ಎಪಿಎಂಸಿ ಸಮಿತಿ ಅಧ್ಯಕ್ಷ
*
ಚೆಕ್‌ ಸಮಸ್ಯೆ
ಒಬ್ಬ ನಾಗರಿಕನಾಗಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಆದರೆ ಒಬ್ಬ ವ್ಯಾಪಾರಸ್ಥನಾಗಿ, ಅದನ್ನು ಜಾರಿಗೆ ತಂದಿರುವ ರೀತಿ ಸರಿ ಇಲ್ಲ ಎಂದು ಹೇಳಬೇಕಾಗುತ್ತದೆ.

ದೇಶದಲ್ಲಿ ನಗದು ಹರಿವು ಸರಿಯಾಗಿಲ್ಲ. ಇದರಿಂದ ವ್ಯಾಪಾರ ನಡೆಯುತ್ತಿಲ್ಲ. ಸಣ್ಣ ವ್ಯಾಪಾರಸ್ಥರು, ಅಂಗಡಿ ಇಟ್ಟುಕೊಂಡಿರುವವರಿಗೆ ಬಹಳಷ್ಟು ಸಮಸ್ಯೆ ಆಗಿದೆ. ನಗದು ಇಲ್ಲದೆ ಎಪಿಎಂಸಿಯಲ್ಲಿ ವ್ಯಾಪಾರ ನಡೆಯುವುದೇ ಕಷ್ಟವಾಗಿದೆ. ಚೆಕ್ ಮೂಲಕ ವ್ಯವಹಾರ ನಡೆಸಿ ಎಂದು ಸರ್ಕಾರ ಹೇಳುತ್ತಿದೆ. ಆದರೆ ಈಗಾಗಲೇ ನಮ್ಮಲ್ಲಿ ಲೆಕ್ಕವಿಲ್ಲದಷ್ಟು ಚೆಕ್ ಬೌನ್ಸ್ ಪ್ರಕರಣಗಳು ಇವೆ.

ಚೆಕ್ ಕೊಟ್ಟಿರುವವರೂ ಸಮಸ್ಯೆ ಎದುರಿಸುತ್ತಿದ್ದಾರೆ. ‘ಖಾತೆಯಲ್ಲಿ ಹಣ ಇಲ್ಲ. ಸದ್ಯಕ್ಕೆ ಚೆಕ್ ಅನ್ನು ನಗದಾಗಿಸಲು ಬ್ಯಾಂಕಿಗೆ ಕೊಡಬೇಡಿ. ಸ್ವಲ್ಪ ಸಮಯ ಕೊಡಿ. ಸಮಸ್ಯೆ ನಿಮಗೂ ಗೊತ್ತಿದೆಯಲ್ಲಾ’ ಎಂದು ಚೆಕ್ ಕೊಟ್ಟಿರುವ ಶೇ 50ರಷ್ಟು ಮಂದಿ ಮನವಿ ಮಾಡಿಕೊಂಡಿದ್ದಾರೆ. ಹೀಗಾದರೆ ವ್ಯವಹಾರ ನಡೆಯುವುದು ಹೇಗೆ?

ಚಾಲ್ತಿ ಖಾತೆಯಿಂದ 50 ಸಾವಿರದವರೆಗೆ ಹಣ ತೆಗೆಯಲು ಅವಕಾಶ ನೀಡಲಾಗಿದೆ. ಆದರೆ ಅದರಿಂದ ವ್ಯವಹಾರ ನಡೆಸುವುದು ಕಷ್ಟ. ರೈತರು ಚೆಕ್ ಪಡೆಯುತ್ತಿಲ್ಲ. ಇದರಿಂದ ಎಪಿಎಂಸಿಯಲ್ಲಿ ಕಳೆದ ಎಂಟು ದಿನಗಳಿಂದ ಸರಕುಗಳ ಪೂರೈಕೆ ಸಮಸ್ಯೆ ಎದುರಾಗಿದೆ.

ಅತಿ ಹೆಚ್ಚು ಚಲಾವಣೆಯಲ್ಲಿ ಇದ್ದ 500 ರೂಪಾಯಿ ನೋಟನ್ನು ರದ್ದು ಮಾಡಿರುವುದಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲ. ಈ ಕಾರಣಕ್ಕಾಗಿಯೇ ಇಷ್ಟು ಸಮಸ್ಯೆ ಎದುರಾಗಿದೆ.

ಬಹಳ ಎಚ್ಚರಿಕೆಯಿಂದ ಸೂಕ್ತ ರೀತಿಯಲ್ಲಿ ಪೂರ್ವ ಸಿದ್ಧತೆ ಮಾಡಿಕೊಂಡಿದ್ದರೆ  ಇಂತಹ ಸಮಸ್ಯೆಗಳು ಉದ್ಭವಿಸುತ್ತಿರಲಿಲ್ಲವೇನೊ. ಪರಿಸ್ಥಿತಿ ಸಹಜ ಸ್ಥಿತಿಗೆ ಬರಲು ಇನ್ನೂ ಮೂರು ತಿಂಗಳಾದರೂ ಬೇಕು.
– ರಮೇಶ್ ಚಂದ್ರ ಲಾಹೋಟಿ
ಎಪಿಎಂಸಿ ಸಮಿತಿ ಅಧ್ಯಕ್ಷ
*
ಅತ್ಯುತ್ತಮ ನಿರ್ಧಾರ
ಇದು ಮೋದಿ ಅವರ ಅತ್ಯುತ್ತಮ ನಿರ್ಧಾರ. ಇದರಿಂದ ದೇಶಕ್ಕೆ ಮತ್ತು ಆರ್ಥಿಕ ಸ್ಥಿತಿಗೆ ತಾತ್ಕಾಲಿಕವಾಗಿ ತೊಂದರೆ ಆಗಬಹುದು. ಆದರೆ ಭವಿಷ್ಯದಲ್ಲಿ ಆರ್ಥಿಕ ಚಟುವಟಿಕೆ ಸುಧಾರಿಸಿ ಸಮೃದ್ಧ ಭಾರತ ನಿರ್ಮಾಣ ಸಾಧ್ಯವಾಗಲಿದೆ. ಆದರೆ ಒಂದರಿಂದ ಎರಡು ತಿಂಗಳಿನಲ್ಲಿ ಎಲ್ಲ ತೊಂದರೆಗಳು ನಿವಾರಣೆಯಾಗಲಿವೆ.

ಸರ್ಕಾರದ ನಿರ್ಧಾರದಿಂದ ಬ್ಯಾಂಕುಗಳ ಖಾತೆಗಳಿಂದ ಅಂದಾಜು 10 ಲಕ್ಷ ಕೋಟಿಯವರೆಗೆ ಹಣ ಸಂಗ್ರಹವಾಗುವ ನಿರೀಕ್ಷೆ ಇದೆ. ಹೀಗಾದರೆ ಸದ್ಯ ಬ್ಯಾಂಕ್‌ಗಳು ಎದುರಿಸುತ್ತಿರುವ ಹಣದ ಅಭಾವ ಸಂಪೂರ್ಣವಾಗಿ ತಗ್ಗುತ್ತದೆ. ಆಗ   ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರದಲ್ಲಿ ಹೆಚ್ಚು ಸಾಲ ನೀಡುವಂತಾಗುತ್ತದೆ.

ಯಾವ ವಲಯಗಳಲ್ಲಿ ಕಪ್ಪುಹಣ ಬಳಕೆಯಾಗುತ್ತಿತ್ತೋ ಅದು ನಿಯಂತ್ರಣಕ್ಕೆ ಬರಲಿದೆ. ನಿರ್ಮಾಣ ವಲಯ, ಭೂಮಿ ಖರೀದಿ-ಮಾರಾಟ, ಶಿಕ್ಷಣ ಕ್ಷೇತ್ರದಲ್ಲಿ ಸೀಟಿಗಾಗಿ ಹಣ ನೀಡುವುದು, ಚುನಾವಣೆಗೆ ಬಳಸುವ ಹಣ, ಹೀಗೆ ಇನ್ನೂ ಹಲವು ರೀತಿಯಲ್ಲಿ ಕಪ್ಪುಹಣ ಬಳಕೆಯಾಗುವುದು ತಪ್ಪುತ್ತದೆ. ಎಲ್ಲರೂ ತೆರಿಗೆ ವ್ಯಾಪ್ತಿಗೆ ಬರುತ್ತಾರೆ. ಇದರಿಂದ ತೆರಿಗೆ ಸಂಗ್ರಹ ಹೆಚ್ಚಾಗುತ್ತದೆ. ಭಯೋತ್ಪಾದನಾ ಚಟುವಟಿಕೆಗೆ ಹಣ ನೀಡುವುದು, ಮಾದಕ ದ್ರವ್ಯಗಳ ಬಳಕೆ ಮತ್ತು ಸಾಗಣೆ ನಿಯಂತ್ರಣಕ್ಕೆ ಬರಲಿದೆ.
– ಸಂಪತ್ ರಾಮನ್,
ಮಾಜಿ ಅಧ್ಯಕ್ಷ, ಎಫ್‌ಕೆಸಿಸಿಐ
*
ದೇಶದ ಉನ್ನತೀಕರಣ
ಭ್ರಷ್ಟಾಚಾರ, ಭಯೋತ್ಪಾದನೆ ತೊಡೆದುಹಾಕಲು, ಚುನಾವಣೆಗಳಲ್ಲಿ ಕೀಳು ಮಟ್ಟದ ಹಣದ ರಾಜಕೀಯ ತಡೆಯಲು ಇದೊಂದು ಉತ್ತಮವಾದ ನಿರ್ಧಾರ. ಮುಂದಿನ ದಿನಗಳಲ್ಲಿ ಈ ಕ್ರಮ ಭಾರತದ ಆರ್ಥಿಕ ನಕ್ಷೆಯನ್ನು ಬದಲಿಸಲಿದೆ.

ಕಪ್ಪುಹಣ ನಿಯಂತ್ರಣಕ್ಕೆ ಬಂದರೆ ಅದರಿಂದ ದೇಶಕ್ಕೆ ಒಳಿತೇ ಆಗುತ್ತದೆ. ನಗದು ಚಲಾವಣೆ ಹೆಚ್ಚಾದರೆ ಸಹಜವಾಗಿಯೇ ಬಡ್ಡಿದರ ತಗ್ಗುತ್ತದೆ. ಇದರಿಂದ ಜನರಿಗೆ ಸುಲಭವಾಗಿ ಸಾಲ ಸಿಗುವಂತಾಗುತ್ತದೆ.

ಜನಸಾಮಾನ್ಯರ ಕಷ್ಟದ ಬಗ್ಗೆ ಅರಿವಿರಬೇಕಿತ್ತು. ಕೃಷಿಕರಿಗೆ, ವ್ಯಾಪಾರಿಗಳಿಗೆ ಸಮಸ್ಯೆ ಆಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಒಂದು ಕ್ರಿಯಾತ್ಮಕ ನಿರ್ಧಾರ ತೆಗೆದುಕೊಳ್ಳಬೇಕಿತ್ತು.

ನೋಟುಗಳು ರದ್ದಾದ ನಂತರ ಈವರೆಗೂ ಕಪ್ಪುಹಣ ಹೊರಗೆ ಬಂದಿಲ್ಲ. ಬೇರೆ ಮಾರ್ಗಗಳ ಮೂಲಕ ಅದನ್ನು ಪರಿವರ್ತಿಸಿಕೊಳ್ಳುತ್ತಿದ್ದಾರೆ ಎನ್ನುವ ಅನುಮಾನ ಮೂಡಿದೆ. ಇದನ್ನು ತಡೆಯಲು ಸರ್ಕಾರ ಒಂದು ಸ್ಪಷ್ಟವಾದ ನಿರ್ಧಾರ ಕೈಗೊಂಡು ಕಾರ್ಯಗತಗೊಳಿಸಬೇಕಿದೆ.

ನೋಟು ರದ್ದಾಗಿರುವುದರಿಂದ ಆರ್ಥಿಕ ಮುಗ್ಗಟ್ಟು ಎದುರಾಗಿರುವುದು ವಾಸ್ತವ. ವ್ಯಾಪಾರಿಗಳು, ಕೃಷಿಕರಿಗೂ ತೊಂದರೆಯಾಗಿದೆ.
– ಚಂದ್ರಶೇಖರ್,
ಅಧ್ಯಕ್ಷ, ಹಾಸನ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ

ಅಭಿಪ್ರಾಯ ಸಂಗ್ರಹ: ವಿಶ್ವನಾಥ್‌ ಎಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT