ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವು ಬದುಕಿನ ನಡುವಣ ನಿರ್ಲಿಪ್ತ ನೆಲ

Last Updated 19 ನವೆಂಬರ್ 2016, 19:30 IST
ಅಕ್ಷರ ಗಾತ್ರ
ಛಾಯಾಗ್ರಹಣದ ಮೇಲೆ ನನಗೆ ವಿಶೇಷ ಆಸಕ್ತಿ ಯಾವಾಗ ಶುರುವಾಯ್ತು ಎನ್ನುವುದು ಸ್ಪಷ್ಟವಾಗಿ ನೆನಪಿಲ್ಲ. ಕಳೆದ ಆರೇಳು ವರ್ಷಗಳಿಂದ ಫೋಟೊಗ್ರಫಿಯಲ್ಲಿ ತೊಡಗಿಕೊಂಡಿದ್ದೇನೆ. 
 
ಮೊದಲು ನನ್ನ ಬಳಿ ಒಂದು ಹ್ಯಾಂಡಿ ಕ್ಯಾಮೆರಾ ಇತ್ತು. ಅದರಲ್ಲಿ ವಿಡಿಯೊ ಮಾಡಿದ್ದಕ್ಕಿಂತ ಫೋಟೊ ತೆಗೆದಿದ್ದೇ ಹೆಚ್ಚು. ಅಲ್ಲಿಂದಲೇ ಫೋಟೊಗ್ರಫಿಯ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದು. ನನಗೆ ಚಿತ್ರಕಲೆಯಲ್ಲೂ  ಆಸಕ್ತಿ ಇತ್ತು. ಚಿತ್ರಕಲೆಯಂತೆಯೇ ಫೋಟೊಗ್ರಫಿ ಕೂಡ ಅಭಿವ್ಯಕ್ತಿಯ ಒಂದು ಸಮರ್ಥ ಮಾಧ್ಯಮ ಅನ್ನಿಸಿತು. 
 
ನಾನು ಕಲಿತಿದ್ದು ಎಂ.ಸಿಎ. ಜಾಹೀರಾತು ಏಜೆನ್ಸಿಯಲ್ಲಿ ಐದು ವರ್ಷ ಕೆಲಸ ಮಾಡಿದೆ. ಆ ಸಮಯದಲ್ಲಿ ನನ್ನ ಛಾಯಾಚಿತ್ರಗಳಿಗೆ ಒಂದೆರಡು ಬಹುಮಾನವೂ ಬಂದವು ಆಗ ಈ ಮಾಧ್ಯಮದಲ್ಲಿ ಉಳಿದವರು ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಗಮನಿಸತೊಡಗಿದೆ. ಬಾಂಗ್ಲಾದೇಶದಲ್ಲಿ ಡಾಕ್ಯುಮೆಂಟರಿ ಫೋಟೊಗ್ರಫಿಯಲ್ಲಿ ವಿಶೇಷ ತರಬೇತಿ ಪಡೆದೆ. ಅದು ನನಗೆ ಈ ಮಾಧ್ಯಮದಲ್ಲಿ ಹಲವು ಒಳನೋಟಗಳನ್ನು ನೀಡಿತು. ಮಾಧ್ಯಮದ ಸಾಧ್ಯತೆ ಅರಿವಾಗುತ್ತಿದ್ದ ಹಾಗೆಯೇ ‘ನಾನು ಇನ್ನೂ ಏನೂ ಮಾಡಿಲ್ಲ’ ಎಂಬುದು ತಿಳಿಯುತ್ತಾ ಹೋಯಿತು. 
 
ಒಂದು ಚಿತ್ರ ತೆಗೆದು ಸುಮ್ಮನಾಗುವುದಕ್ಕಿಂತ ಸರಣಿ ಚಿತ್ರಗಳನ್ನು ತೆಗೆಯುತ್ತಾ ಇಡೀ ಕಥನವನ್ನು ಕಟ್ಟಿಕೊಡುವುದರಲ್ಲಿ ನನ್ನ ಆಸಕ್ತಿ ಕುದುರಿತು. ‘ಮಹಾಕುಂಭ ಮೇಳ’ ನನ್ನ ಮೊದಲ ಸರಣಿ ಚಿತ್ರ.ಗಳ ವಸ್ತು. ಛಾಯಾಚಿತ್ರಗಳ ಮೂಲಕ ಕಥೆ ಹೇಳುವ ಕ್ರಮ ನನಗೆ ಇಷ್ಟವಾಗುತ್ತಾ ಹೋಯಿತು.  
 
ಬಾಂಗ್ಲಾದೇಶದಲ್ಲಿ ಫೋಟೊಗ್ರಫಿ ತರಬೇತಿ ಪಡೆದುಕೊಂಡು ಬಂದಮೇಲೆ ನನಗೊಂದು ಅನುದಾನ ದೊರೆಯಿತು. ಅದನ್ನು ವಿನಿಯೋಗಿಸಿಕೊಂಡು ಭಾರತದ ಯಾವುದಾದರೂ ಸಾಂಸ್ಕೃತಿಕ ಪ್ರದೇಶದ ಸರಣಿ ಛಾಯಾಚಿತ್ರ ತೆಗೆಯಬೇಕಿತ್ತು. ಆಗ ನನ್ನ ಮನಸ್ಸಿಗೆ ಬಂದಿದ್ದು ವಾರಾಣಸಿ.
 
ವಾರಾಣಸಿ ಭಾರತದ ಅತ್ಯಂತ ಹಳೆಯ ನಗರಗಳಲ್ಲಿ ಒಂದು. ಹಲವಾರು ಹಳೆಯ ನಗರಗಳು ತಮ್ಮ ಚಹರೆಗಳನ್ನು ಪೂರ್ತಿಯಾಗಿ ಬದಲಿಸಿಕೊಂಡು ಬೇರೆಯೇ ಆಗಿಬಿಟ್ಟಿವೆ. ಆದರೆ ವಾರಾಣಸಿ ಇಂದಿಗೂ ತನ್ನ ಚಹರೆಗಳನ್ನು ಉಳಿಸಿಕೊಂಡಿರುವ ಹಳೆಯ ನಗರ. ಇದುವರೆಗೆ ಸಾಕಷ್ಟು ಛಾಯಾಗ್ರಾಹಕರು ವಾರಾಣಸಿಯ ಚಿತ್ರಗಳನ್ನು ತೆಗೆದಿದ್ದಾರೆ. ಆ ನಗರದ ಕುರಿತು ಸಾಕಷ್ಟು ಬರವಣಿಗೆ ಮಾಡಿದ್ದಾರೆ. ನಾನು ಅವೆಲ್ಲಕ್ಕಿಂತ ಭಿನ್ನವಾಗಿ ಏನಾದರೂ ಮಾಡಬೇಕಾಗಿತ್ತು. 
 
ನಾನು ವಾರಾಣಸಿಯಲ್ಲಿ ಇಪ್ಪತ್ತೈದು ದಿನಗಳನ್ನು ಕಳೆದೆ. ಮೊದಲ ಹತ್ತು ದಿನಗಳನ್ನು ಸುಮ್ಮನೇ ಅಲ್ಲಿನ ನಗರದ ಮೇಲು ಮೇಲಿನ ಲಕ್ಷಣಗಳನ್ನು ಗಮನಿಸುತ್ತಾ, ಅಲ್ಲಿಗೆ ಬರುವ ಪ್ರವಾಸಿಗರ ಫೋಟೊ ತೆಗೆಯುತ್ತಾ ಕಳೆದೆ. ಅದೊಂದು ಮೇಲ್ಪದರದ ಥರ. ನಂತರದ ದಿನಗಳಲ್ಲಿ ನಿಧಾನವಾಗಿ ಆ ನಗರ ತನ್ನ ಬೇರೆ ಬೇರೆ ಆಯಾಮಗಳನ್ನು ನನ್ನೆದುರು ತೆರೆದುಕೊಳ್ಳುತ್ತಾಹೋಯಿತು. ಅಲ್ಲಿನ ಜನಜೀವನ, ಆ ನಗರದ ಗಾಳಿಯಲ್ಲಿಯೇ ಸೇರಿಹೋಗಿರುವ ಅಧ್ಯಾತ್ಮದ ಅಂಶ – ಎಲ್ಲವೂ ನನ್ನ ಅನುಭವಕ್ಕೆ ನಿಲುಕಲು ಪ್ರಾರಂಭವಾಯಿತು. 
 
ಅಧ್ಯಾತ್ಮ ವಾರಾಣಸಿಯ ಮೂಲಗುಣಗಳಲ್ಲಿ ಒಂದು. ಆ ಎಳೆ ಇಡೀ ನಗರವನ್ನೂ ಹೆಣೆದಿದೆ. ಎಲ್ಲ ಇದ್ದೂ ಏನೂ ಇಲ್ಲದ ಆ ನಗರದ ವಿಚಿತ್ರ ಸ್ಥಿತಿಯನ್ನೇ ನಾನು ನನ್ನ ಛಾಯಾಚಿತ್ರಗಳ ವಸ್ತುವನ್ನಾಗಿಸಿಕೊಳ್ಳಲು ನಿರ್ಧರಿಸಿದೆ. 
 
ಈ ಚಿತ್ರಸರಣಿಯ ಹೆಸರು ‘ಲ್ಯಾಂಡ್‌ ಬಿಟ್ವೀನ್‌ ಲೈಫ್‌ ಆ್ಯಂಡ್‌ ಲಿಬರೇಶನ್‌’. ಸರಣಿಯ ಹೆಚ್ಚಿನ ಚಿತ್ರಗಳನ್ನು ತೆಗೆದಿದ್ದು ಮಣಿಕರ್ಣಿಕಾ ಘಾಟ್‌ನಲ್ಲಿ. ಪ್ರತಿದಿನ ಸಂಜೆ ಆ ಘಾಟ್‌ಗೆ ಹೋಗಿ ಕುಳಿತುಕೊಳ್ಳುತ್ತಿದ್ದೆ. ಅಲ್ಲಿ ಹೆಣ ಸುಡುತ್ತಿರುತ್ತಾರೆ. ಆದರೆ ಅಲ್ಲಿನ ಜನರಿಗೆ ಅದೇನೂ ವಿಶೇಷ ಅನಿಸುವುದೇ ಇಲ್ಲ. ಸಂಸ್ಕಾರ ನಡೆಯುವ ಸ್ಥಳದ ಪಕ್ಕದಲ್ಲೇ ಮಕ್ಕಳು ಕ್ರಿಕೆಟ್‌ ಆಡುತ್ತಿರುತ್ತಾರೆ. ಒಂದಿಷ್ಟು ಜನ ಹರಟೆ ಹೊಡೆಯುತ್ತಿರುತ್ತಾರೆ. ಹೆಂಗಸರು ಬಟ್ಟೆ ತೊಳೆಯುತ್ತಿರುತ್ತಾರೆ. ಸತ್ತವರಿಗಾಗಿ ಅಳುವವರು ಯಾರೂ ಇರುವುದಿಲ್ಲ. ನಮ್ಮ ಬದುಕೆಷ್ಟು ಚಿಕ್ಕದು, ಮನುಷ್ಯ ಸತ್ತ ಮೇಲೆ ಅವನ ಬೆಲೆ ಎಷ್ಟು ಎಂಬೆಲ್ಲ ಆಲೋಚನೆಗಳು ನನ್ನ ಮನಸಿನಲ್ಲಿ ಹುಟ್ಟಿಕೊಂಡವು. 
 
ಒಂದು ದಿನ ಯಾವುದೋ ಊರಿನಿಂದ ಬಸ್‌ನಲ್ಲಿ ಮೃತದೇಹವನ್ನು ಹಾಕಿಕೊಂಡು ಅಲ್ಲಿಗೆ ಬಂದಿದ್ದರು. ಅಲ್ಲಿ  ಘಾಟ್‌ ಒಳಗಡೆ ಗಾಡಿ ಹೋಗಲ್ಲ. ಆದ್ದರಿಂದ ಮಾರ್ಕೆಟ್‌ ಪಕ್ಕ ಹೆಣವನ್ನು ಇಳಿಸಿಕೊಂಡರು. ಅಲ್ಲಿಂದ ಘಾಟ್‌ಗೆ ಹೆಣ ಹೊತ್ತುಕೊಂಡು ಹೋಗಲು ಜನರು ಇನ್ನೂ ಬಂದಿರಲಿಲ್ಲ. ಬಾಳೆಹಣ್ಣು ಮಾರುವ ತಳ್ಳುಗಾಡಿ ಇರುತ್ತದಲ್ಲ, ಅಂಥದ್ದೊಂದು ಖಾಲಿ ಗಾಡಿಯ ಮೇಲೆ ಬಿಳಿ ಬಟ್ಟೆಯಲ್ಲಿ ಸುತ್ತಿದ ಆ ಹೆಣವನ್ನು ಇಟ್ಟಿದ್ದರು. ಸುತ್ತಮುತ್ತ ಹಣ್ಣು, ತರಕಾರಿ ಅಂಗಡಿಗಳು, ವ್ಯಾಪಾರ ಮಾಡುತ್ತಿರುವ ಜನರು ಎಲ್ಲರೂ ಇದ್ದರು. ಅವುಗಳ ಮಧ್ಯದಲ್ಲಿ ಆ ಹೆಣ ಸುಮಾರು ಮುಕ್ಕಾಲು ಗಂಟೆ ಹಾಗೆಯೇ ಇತ್ತು. ಯಾರೂ ಅದನ್ನು ವಿಶೇಷ ಎಂಬಂತೆ ನೋಡಲಿಲ್ಲ, ಅಚ್ಚರಿಪಡಲೂ ಇಲ್ಲ.
 
ಎಂಥ ಭಯಾನಕ ಸಂಗತಿಯಾದರೂ ಮತ್ತೆ ಮತ್ತೆ ಅದನ್ನೇ ನೋಡುತ್ತಿದ್ದರೆ ನಮಗೆ ಅದು ಅಭ್ಯಾಸವಾಗಿಬಿಡುತ್ತದೆ– ಸಾವೂ ಅದಕ್ಕೆ ಹೊರತಲ್ಲ. ಅಲ್ಲಿನ ಜನರಿಗೆ ಸಾವು ಎನ್ನುವುದು ಅತ್ಯಂತ ಸಹಜವಾಗಿಬಿಟ್ಟಿತ್ತು. ಹೆಣ ಎನ್ನುವುದು ತರಕಾರಿಗಳಂತೆ ಸಂತೆಯಲ್ಲಿನ ಇನ್ನೊಂದು ವಸ್ತುವಷ್ಟೇ ಆಗಿಬಿಟ್ಟಿತ್ತು. ಈ ಎಲ್ಲ ಅಂಶಗಳೂ ನನ್ನ ಛಾಯಾಚಿತ್ರಗಳ ಮೇಲೆ ಪರಿಣಾಮ ಬೀರಿವೆ. 
 
ಬರೀ ಹೆಣ ಸುಡುವ ಚಿತ್ರಗಳನ್ನೇ ನಾನು ತೆಗೆದಿಲ್ಲ. ಆ ಜಾಗವನ್ನು ಸಾಧ್ಯವಿದ್ದಷ್ಟೂ ವೈಡ್‌ ಆ್ಯಂಗಲ್‌ನಲ್ಲಿ ತೋರಿಸಲು ಪ್ರಯತ್ನಿಸಿದ್ದೇನೆ. ನಾರ್ಮಲ್‌ ಕಲರ್‌ಗಳಿಗಿಂತ ಕೊಂಚ ಭಿನ್ನವಾಗಿರುವಂತೆ ನೋಡಿಕೊಂಡಿದ್ದೇನೆ. ಆ ಜಾಗದಲ್ಲಿನ ಮೌನವನ್ನೂ ತೋರಿಸುವ ಸಲುವಾಗಿ ಕೊಂಚ ಮಂದ ಬೆಳಕಿನಲ್ಲಿಯೇ ಚಿತ್ರಗಳನ್ನು ತೆಗೆದಿದ್ದೇನೆ. 
 
ತಾಂತ್ರಿಕವಾಗಿ ನಾನು ಅಷ್ಟೇನೂ ಪರಿಣತನಲ್ಲ. ಆದರೆ ಚಿತ್ರದ ಮೂಲಕ ಒಂದು ಕಥೆ ಹೇಳಬೇಕಾಗಿದ್ದರೆ ಅದರ ವಸ್ತು ಮತ್ತು ಅದನ್ನು ಹೇಳುವ ದೃಷ್ಟಿಕೋನ ಮಹತ್ವ ಎನಿಸುತ್ತದೆ. ತಾಂತ್ರಿಕ ಅಂಶಗಳು ಅದಕ್ಕೆ ಪೂರಕವಾಗಿ ಒದಗಿಬರಬೇಕು. ಒಂದು ವಸ್ತುವಿಗೆ ಸಂಬಂಧಿಸಿದ ಎಲ್ಲ ಚಿತ್ರಗಳನ್ನು ಒಟ್ಟಿಗೆ ನೋಡಿದಾಗ ನಮ್ಮಲ್ಲಿ ಒಂದು ರೀತಿಯ ಅನುಭೂತಿ ಹುಟ್ಟಬೇಕು. ಪ್ರೇಕ್ಷರೊಂದಿಗೆ ಸಂವಾದವೊಂದು ರೂಪುಗೊಳ್ಳಬೇಕು. ಹಾಗೆಂದು ಚಿತ್ರವೇ ಎಲ್ಲವನ್ನೂ ಹೇಳುವಂತಿರಬಾರದು. ಒಂದು ಚಿತ್ರವನ್ನು ನೋಡಿದಾಕ್ಷಣ ನಮಗೆ ಏನಾದರೂ ಅನಿಸಬೇಕು. ಜತೆಗೆ ಆ ಚಿತ್ರದಲ್ಲಿ ಇರುವ ಸಂಕೇತಗಳ ಮೂಲಕ ಅದು ಮನಸ್ಸಿನೊಳಗೆ ಬೆಳೆಯತ್ತಾ ಹೋಗಬೇಕು. ನೋಡುಗನನ್ನೂ ಒಳಗೊಳ್ಳಬೇಕು. 
 
ಯಾರಾದರೂ ನಾನು ತೆಗೆದ ಚಿತ್ರಗಳನ್ನು ನೋಡಿದಾಗ ಅವರಲ್ಲಿ ಏನಾದರೂ ಆಲೋಚನೆ ಹುಟ್ಟಿಸಬೇಕು. ಎರಡು ಕ್ಷಣಗಳ ಮಟ್ಟಿಗಾದರೂ ಅವರನ್ನು ಹಿಡಿದಿಟ್ಟುಕೊಂಡರೆ ಆ ಚಿತ್ರ ಸಾರ್ಥಕ.
 
*
ಚಿತ್ರವೇ ಎಲ್ಲವನ್ನೂ ಹೇಳುವಂತಿರಬಾರದು. ಒಂದು ಚಿತ್ರವನ್ನು ನೋಡಿದಾಕ್ಷಣ ನಮಗೆ ಏನಾದರೂ ಅನಿಸಬೇಕು. ಜತೆಗೆ ಆ ಚಿತ್ರದಲ್ಲಿ ಇರುವ ಸಂಕೇತಗಳ ಮೂಲಕ ಅದು ಮನಸ್ಸಿನೊಳಗೆ ಬೆಳೆಯತ್ತಾ ಹೋಗಬೇಕು. ನೋಡುಗನನ್ನೂ ಒಳಗೊಳ್ಳಬೇಕು...
 
**
ಕವೀರ್‌ ರೈ
ಮಂಗಳೂರು ಮೂಲದ ಛಾಯಾಗ್ರಾಹಕ ಕವೀರ್‌ ರೈ ಅವರಿಗೆ ಮನುಷ್ಯನ ಬದುಕಿನ ಭಿನ್ನ ಆಯಾಮಗಳನ್ನು – ಭ್ರಮಿತ ಸತ್ಯಗಳನ್ನು ಕ್ಯಾಮೆರಾ ಕಣ್ಣುಜ್ಜಿಕೊಂಡು ಸೆರೆಹಿಡಿವ ಹಂಬಲ. 2010ರಲ್ಲಿ ಕವೀರ್‌ ಛಾಯಾಚಿತ್ರಕ್ಕೆ ‘ನ್ಯಾಷನಲ್‌ ಜಿಯೋಗ್ರಫಿ ಮೊಮೆಂಟ್‌ ಅವಾರ್ಡ್‌’ ಲಭಿಸಿದೆ.
 
ಜಾಹೀರಾತು ಕಂಪೆನಿಯಲ್ಲಿ ಕ್ರಿಯೇಟೀವ್‌ ವಿಷುವಲೈಸರ್‌ ಆಗಿ ಕೆಲಸ ಮಾಡಿದ ಅನುಭವವೂ ಅವರ ‘ನೋಟ’ದ ಆ್ಯಂಗಲ್‌ಗಳನ್ನು ತಿದ್ದಿದೆ. ಛಾಯಾಚಿತ್ರದ ಮೂಲಕ ಏನನ್ನು ಹೇಳಹೊರಟಿರುತ್ತೇವೆಯೋ ಅದಕ್ಕೆ ಪೂರಕವಾಗಿ ತಾಂತ್ರಿಕತೆಯನ್ನು ದುಡಿಸಿಕೊಳ್ಳಬೇಕು ಎನ್ನುವ ಅವರ ನಿಲುವಿಗೆ ಅವರ ಚಿತ್ರಗಳೇ ನಿದರ್ಶನ. kaveerrai.com ಜಾಲತಾಣದಲ್ಲಿ ಅವರ ಚಿತ್ರಗಳನ್ನು ನೋಡಬಹುದು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT