ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾ. ಮುಖರ್ಜಿ ವಿರುದ್ಧ ಆಕ್ರೋಶ

ಪ್ರಕರಣದಿಂದ ಹಿಂದೆ ಸರಿಯಲು ಹವ್ಯಕ ಮಹಾಸಭಾ ಕೋರಿಕೆ
Last Updated 19 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳನ್ನು ಪೀಠದಿಂದ ಕೆಳಗಿಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯಿಂದ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಹಿಂದೆ ಸರಿಯಬೇಕು’ ಎಂದು ಅಖಿಲ ಹವ್ಯಕ ಮಹಾಸಭಾ ಕೋರಿದೆ.

ಈ ಸಂಬಂಧ ಮಹಾಸಭಾದ  ನಿರ್ದೇಶಕ ಬೆಂಗಳೂರು ನಿವಾಸಿ ಮಹಾಬಲೇಶ್ವರ ಭಟ್ ಶನಿವಾರ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.
‘ಎದುರ್ಕುಳ ಈಶ್ವರ ಭಟ್‌ ಮತ್ತಿತರರ ಸಂಗಡ  ಮುಖರ್ಜಿ  ಶಾಮೀಲಾಗಿದ್ದಾರೆ.   ರಾಮಚಂದ್ರಾಪುರ ಮಠದ ಬಗ್ಗೆ ಹೊಂದಿರುವ ಅವರ ಧೋರಣೆ ಎಂತಹುದು ಎಂಬುದು ಇದೇ 14ರಂದು ನಡೆದ ವಿಚಾರಣೆ ವೇಳೆ ಬಹಿರಂಗವಾಗಿದೆ’ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

‘ಮುಖರ್ಜಿ ಅವರು ಕೋರ್ಟ್‌ನಲ್ಲಿ ಮೌಖಿಕವಾಗಿ ಆಡಿದ ಮಾತುಗಳನ್ನು ಪತ್ರಿಕೆಗಳು ಯಥಾವತ್‌ ವರದಿ ಮಾಡಿವೆ. ಇದನ್ನು ನೋಡಿದರೆ ಅವರು ಈ ಪ್ರಕರಣದಲ್ಲಿ ಪೂರ್ವಗ್ರಹ ಪೀಡಿತರಾಗಿದ್ದಾರೆ. ಹಾಗಾಗಿ ನಮಗೆ ನ್ಯಾಯ ಸಿಗುವ ಸಾಧ್ಯತೆ ಕಾಣುತ್ತಿಲ್ಲ. ಆದ್ದರಿಂದ ಅವರು  ತಮ್ಮ ಮುಂದಿರುವ ರಾಮಚಂದ್ರಾಪುರ ಮಠದ ವಿರುದ್ಧದ ಪಿಐಎಲ್‌ ವಿಚಾರಣೆಯಿಂದ ಹಿಂದೆ ಸರಿಯಬೇಕು’ ಎಂದು  ಕೋರಲಾಗಿದೆ.

ಮುಖರ್ಜಿ ಮನೆಯಲ್ಲಿ ಶ್ರೀಗಳ ವಾಸ್ತವ್ಯ: ‘ಮುಖರ್ಜಿ ದ್ವಾರಕಾ ಪೀಠದ ಸ್ವರೂಪಾನಂದ ಸ್ವಾಮೀಜಿ ಅವರ ಶಿಷ್ಯರಾಗಿದ್ದಾರೆ. ದಸರಾ ಸಮಯದಲ್ಲಿ ಸ್ವರೂಪಾನಂದ ಸ್ವಾಮೀಜಿ ಬೆಂಗಳೂರಿಗೆ ಬಂದಿದ್ದಾಗ ಎರಡು ದಿನಗಳ ಕಾಲ ಮುಖರ್ಜಿ ಅವರ ಮನೆಯಲ್ಲೇ ವಾಸ್ತವ್ಯ ಹೂಡಿದ್ದರು’ ಎಂದು ಪ್ರಮಾಣ ಪತ್ರದಲ್ಲಿ ವಿವರಿಸಲಾಗಿದೆ.

‘ರಾಮಚಂದ್ರಾಪುರ ಮಠವು ಚತುರಾಮ್ನಯ ಪೀಠಕ್ಕೆ ಸೇರಿದ್ದಲ್ಲ. ಆದರೂ ಅವರು ಶಂಕರಾಚಾರ್ಯ ಎಂಬ ಪದವನ್ನು ತಮ್ಮ ಹೆಸರಿನ ಮುಂದೆ ಬಳಸಿಕೊಳ್ಳುತ್ತಾರೆ. ಇದನ್ನು ಸ್ವರೂಪಾನಾಂದ ಸ್ವಾಮೀಜಿ ಹಿಂದಿನಿಂದಲೂ ವಿರೋಧಿಸುತ್ತಾ ಬಂದಿದ್ದಾರೆ. ಬೆಂಗಳೂರಿನಲ್ಲಿದ್ದ ಸ್ವಾಮೀಜಿ ಅವರನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಕೃತ ಭಾರತಿಯ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖ ಸಿ.ಎಂ.ಕೃಷ್ಣಶಾಸ್ತ್ರಿ ನೇತೃತ್ವದಲ್ಲಿ ಎದುರ್ಕುಳ ಈಶ್ವರ ಭಟ್ಟ ಹಾಗೂ ಇತರರು ಭೇಟಿ ಮಾಡಿದ್ದಾರೆ. ರಾಘವೇಶ್ವರ ಶ್ರೀಗಳ ವಿರುದ್ಧ ಸಲ್ಲದ ದೂರು ನೀಡಿದ್ದಾರೆ.

ಇದನ್ನು ನಂಬಿ ಸ್ವರೂಪಾನಂದ ಸ್ವಾಮೀಜಿ ಮುಖರ್ಜಿ ಅವರ ಜೊತೆ ಚರ್ಚಿಸಿದ್ದಾರೆ ಮತ್ತು ರಾಘವೇಶ್ವರ ಶ್ರೀಗಳ ವಿರುದ್ಧ ಪಿತೂರಿ ಹೆಣೆಯಲು ಪ್ರಯತ್ನಿಸಿದ್ದಾರೆ. ಅದರ ಫಲವಾಗಿಯೇ ವಿಚಾರಣೆ ವೇಳೆ ಮುಖರ್ಜಿ ಕೆಂಡ ಕಾರಿದ್ದಾರೆ’ ಎಂದು ದೂರಲಾಗಿದೆ. ರಾಘವೇಶ್ವರ ಶ್ರೀಗಳನ್ನು ರಾಮಚಂದ್ರಾಪುರ ಮಠದ ಪೀಠಾಧಿಪತಿ ಸ್ಥಾನದಿಂದ ಕೆಳಗಿಳಿಸಿ, ಮಠಕ್ಕೆ ಆಡಳಿತಾಧಿಕಾರಿ ನೇಮಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿರುವ ಪಿಐಎಲ್ ಇದೇ 21ರಂದು ಎಸ್‌.ಕೆ.ಮುಖರ್ಜಿ  ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬರಲಿದೆ.

ಇದು ಇವರಿಗೆ ಹಳೇ ಚಾಳಿ...
‘ತಮ್ಮ ವಿರುದ್ಧದ ಪ್ರಕರಣಗಳ ವಿಚಾರಣೆ ಮುಕ್ತಾಯದ ಹಂತ ತಲುಪಿ ಇನ್ನೇನು ನ್ಯಾಯಾಲಯ ತಾರ್ಕಿಕ ಆದೇಶವೊಂದನ್ನು ನೀಡುತ್ತದೆ ಎಂಬ ಸಮಯ ಬಂದಾಗಲೆಲ್ಲಾ ರಾಘವೇಶ್ವರ ಶ್ರೀಗಳ ಭಕ್ತರು ಸದರಿ ಪ್ರಕರಣದ ವಿಚಾರಣೆ ನಡೆಸುವ ನ್ಯಾಯಾಧೀಶರು ಮತ್ತು ನ್ಯಾಯಮೂರ್ತಿಗಳ ವಿರುದ್ಧ ದಿಢೀರನೆ ಆರೋಪ ಮಾಡುತ್ತಾರೆ...’

ಇದು ಶ್ರೀ ಕ್ಷೇತ್ರ ಗೋಕರ್ಣ ರಕ್ಷಣಾ ಸಮಿತಿಯ ಅಧ್ಯಕ್ಷ ಗಣಪತಿ ಗಜಾನನ ಭಟ್‌ ಅವರ ಆರೋಪ. ಈ ಕುರಿತಂತೆ ಶನಿವಾರ ಗೋಕರ್ಣದಿಂದ ಅವರು ದೂರವಾಣಿ ಮುಖಾಂತರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ನ್ಯಾಯಾಲಯದ ಮೇಲೆ ಇವರಿಗೆ ನಂಬಿಕೆ ಇಲ್ಲ. ಎಲ್ಲ ಸಂದರ್ಭಗಳಲ್ಲೂ ಹೀಗೆಯೇ ಮಾಡುತ್ತಾ ಕೋರ್ಟ್ ಸಮಯ ಹಾಳು ಮಾಡುತ್ತಾರೆ.

ಕೋರ್ಟ್‌ ವಿಚಾರಣೆಗಳನ್ನು ನ್ಯಾಯಾಲಯದ ಪರಿಧಿಯಿಂದ ಹೊರಗೆ ಚರ್ಚಿಸಿ ಅದನ್ನು ವಿವಾದಗ್ರಸ್ತ ಮಾಡುತ್ತಾರೆ. ಇದರಿಂದ ನ್ಯಾಯಾಧೀಶರು ಮತ್ತು ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿಯುತ್ತಾರೆ.  ಅತ್ಯಾಚಾರ ಆರೋಪದ ಪ್ರಕರಣದಲ್ಲಿ ಐದು ಜನ ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದಿದ್ದು  ಇದಕ್ಕೆ ಉದಾಹರಣೆ’ ಎಂದು ಗಣಪತಿ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT