ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಕೆಟ್‌ ತಂತ್ರಜ್ಞಾನದ ಪಿತಾಮಹ ಟಿಪ್ಪು ಸುಲ್ತಾನ್‌!

Last Updated 22 ನವೆಂಬರ್ 2016, 9:42 IST
ಅಕ್ಷರ ಗಾತ್ರ

‘The development of the indian rockets in the twentieth century can be seen as a revival of the eighteen century dream of Tipu sultan. When Tipu sultan was killed, the British captured more than 700 rockets and sub systems of 900 rockets in the battle of Turukhanahally in 1799. His army had 27 brigades, each brigade had a company of rocket men, called jourks’.

(18ನೇ ಶತಮಾನದ ಟಿಪ್ಪು ಸುಲ್ತಾನನ ಕನಸು ನನಸಾದಂತೆ/ಮರುಜೀವ ಪಡೆದಂತೆ, 20ನೇ ಶತಮಾನದಲ್ಲಿ ಭಾರತೀಯ ರಾಕೆಟ್‌ಗಳನ್ನು ಅಭಿವೃದ್ಧಿಪಡಿಸಿರುವುದು ಗೋಚರಿಸುತ್ತದೆ. ಟಿಪ್ಪು ಸುಲ್ತಾನನನ್ನು ಕೊಂದಾಗ ಬ್ರಿಟಿಷರು 700 ಪೂರ್ಣ ಪ್ರಮಾಣದ ರಾಕೆಟ್‌ಗಳನ್ನು ಮತ್ತು 900 ಪರ್ಯಾಯ ಪದ್ಧತಿಗಳಿಂದ ತಯಾರಿಸಿದ ರಾಕೆಟ್‌ಗಳನ್ನು ತುರುಕನಹಳ್ಳಿ ಬಳಿಯ ಯುದ್ಧದಲ್ಲಿ ವಶಪಡಿಸಿಕೊಂಡಿದ್ದರು.

ಟಿಪ್ಪು ಸೇನೆ 27 ಸೇನಾ ವಿಭಾಗಗಳನ್ನು ಹೊಂದಿದ್ದು, ಪ್ರತಿ ವಿಭಾಗದಲ್ಲೂ ರಾಕೆಟ್‌ ಪಡೆಯ ಯೋಧರಿದ್ದರು. ಅವರನ್ನು  ಜೋರ್ಕ್ಸ್‌ ಎಂದು ಕರೆಯಲಾಗುತ್ತಿತ್ತು) –ಇದು ಮಾಜಿ ರಾಷ್ಟ್ರಪತಿ, ಆಧುನಿಕ ರಾಕೆಟ್‌ ತಂತ್ರಜ್ಞಾನದ ಪಿತಾಮಹ ದಿವಂಗತ ಎ ಪಿ ಜೆ ಅಬ್ದುಲ್‌ ಕಲಾಂ ಅವರ ಆತ್ಮಕತೆ ‘WINGS OF FIRE’ ಕೃತಿ (ಪುಟ 42 ಮತ್ತು 43)ಯಲ್ಲಿರುವ ಮಹತ್ವದ ಉಲ್ಲೇಖ.

ತನ್ನ ತಂದೆ ಹೈದರ್ ಅಲಿ ಮರಣದ ನಂತರ ಟಿಪ್ಪು ಸುಲ್ತಾನ್‌ ಮೂರು ಯುದ್ಧ (1782–84, 1790–92 ಮತ್ತು 1799)ಗಳಲ್ಲಿ ಬ್ರಿಟಿಷರ ವಿರುದ್ಧ ಕಾದಾಡಿದ್ದ. ಈ ಯುದ್ಧಗಳ ಪೈಕಿ ಎರಡು ಯುದ್ಧಗಳಲ್ಲಿ ಆತನ ಸೇನೆ ಬ್ರಿಟಿಷ್‌ ಸೇನೆಗೆ ತೀವ್ರ ಪ್ರತಿರೋಧ ತೋರಿತ್ತು. ಬ್ರಿಟಿಷರು, ಮರಾಠರು ಮತ್ತು ಹೈದರಾಬಾದಿನ ನಿಜಾಮರ ಜಂಟಿ ಸೇನೆಗೂ ಜಗ್ಗದೆ ಹೋರಾಟ ನಡೆಸಿತ್ತು. ಅದಕ್ಕೆ ಬಹು ಮುಖ್ಯ ಕಾರಣ, ಮಿಂಚಿನ ವೇಗದಲ್ಲಿ ಜಿಗಿಯುತ್ತಿದ್ದ ಕುದುರೆ ಪಡೆ ಮತ್ತು ಎದುರಾಳಿಗಳನ್ನು ಕಂಗೆಡಿಸಿ ಸಾಕಷ್ಟು ಹಾನಿ ಮಾಡುತ್ತಿದ್ದ ರಾಕೆಟ್‌ಗಳ ಬಳಕೆ. ಮೈಸೂರು ಸೇನೆಯ ಅವಿಭಾಜ್ಯ ಅಂಗವಾಗಿದ್ದ ತರಬೇತು ಪಡೆದ ‘ಜರ್ಕ್ಸ್‌’ಗಳು ಯುದ್ಧ ಭೂಮಿಗೆ ರಾಕೆಟ್‌ಗಳನ್ನು ಹೊತ್ತೊಯ್ದು ಶತ್ರು ಪಾಳೆಯದ ಮೇಲೆ ಗುರಿಯಿಟ್ಟು ಉಡಾಯಿಸುತ್ತಿದ್ದರು.

ಇದರಿಂದ ಶತ್ರು ಸೇನೆ ದಿಕ್ಕಾಪಾಲಾಗಿ ಓಡುತ್ತಿತ್ತು. ‘1799ರ 4ನೇ ಆಂಗ್ಲೋ–ಮೈಸೂರು ಯುದ್ಧದಲ್ಲಿ ಮೈಸೂರು ಸೇನೆಯ ರಾಕೆಟ್‌ ದಾಳಿಯಿಂದ ಬ್ರಿಟಿಷ್‌ ಸೇನೆಯ ಅಧಿಕಾರಿ ವೆಲ್ಲಿಂಗ್‌ಟನ್‌ ಡ್ಯೂಕ್‌ ತೀವ್ರವಾಗಿ ಗಾಯಗೊಂಡಿದ್ದ’ ಎಂದು ಡಾ.ಬಿ. ಷೇಕ್‌ಅಲಿ ತಮ್ಮ ‘ಟಿಪ್ಪು ಸುಲ್ತಾನ್‌’ ಕೃತಿ (ಪುಟ 38)ಯಲ್ಲಿ ಮನಗಾಣಿಸಿದ್ದಾರೆ.

‘ಚೀನಾ ದೇಶದಲ್ಲಿ ರಾಕೆಟ್‌ಗಳನ್ನು ಮನರಂಜನೆಗಾಗಿ ಆಟಿಕೆಗಳಾಗಿ ಬಳಸುತ್ತಿದ್ದರು. ಆದರೆ ಯುದ್ಧ ಭೂಮಿಯಲ್ಲಿ, ಇಡೀ ಜಗತ್ತಿನಲ್ಲಿ ಶತ್ರು ಸೇನೆಯ ಮೇಲೆ ಮೊಟ್ಟ ಮೊದಲು ರಾಕೆಟ್‌ ದಾಳಿ ನಡೆಸಿದ್ದು ಟಿಪ್ಪು ಸುಲ್ತಾನ್‌. ರಣರಂಗದಲ್ಲಿ ಗೆರಿಲ್ಲಾ ಯುದ್ಧ, ಗೂಳಿಗಳು ಮತ್ತು ಮದಗಜಗಳ ದಾಳಿಯಂತಹ ವಿಶಿಷ್ಟ ಪ್ರಯೋಗಗಳನ್ನು ನಡೆಸುತ್ತಿದ್ದ ಟಿಪ್ಪು, ರಾಕೆಟ್‌ ಯುದ್ಧ ತಂತ್ರವನ್ನು ಯಶಸ್ವಿಯಾಗಿ ನಡೆಸುತ್ತಿದ್ದ. ಹಾಗಾಗಿ ಆತ 17 ವರ್ಷಗಳ ಕಾಲ ಬಲಿಷ್ಠ ಬ್ರಿಟಿಷರ ವಿರುದ್ಧ ಸೆಣೆಸಾಡಲು ಸಾಧ್ಯವಾಯಿತು’ ಎನ್ನುತ್ತಾರೆ ಹಿರಿಯ ಸಾಹಿತಿ ಪ್ರೊ.ಎಂ. ಕರಿಮುದ್ದೀನ್‌.

ಹೀಗಿತ್ತು ರಾಕೆಟ್‌: ಮೈಸೂರು ಸೇನೆ (ಟಿಪ್ಪು ಸೇನೆ) ಯುದ್ಧದಲ್ಲಿ ಬಳಸುತ್ತಿದ್ದ ರಾಕೆಟ್‌ ಅನ್ನು ಬಿದಿರು ಬೊಂಬಿನಿಂದ ಮಾಡಲಾಗುತ್ತಿತ್ತು. ಸುಮಾರು 8ರಿಂದ 10 ಅಡಿ ಉದ್ದದ ಬೊಂಬಿನ ಹಿಂದೆ ಲೋಹದ ತಗಡಿನ, ಅಳತೆ ಮಾಪನ ‘ಪಾವು’ ಮಾದರಿಯ ಡಬ್ಬಿಯನ್ನು ಕಟ್ಟಿ ಅದರಲ್ಲಿ ಮದ್ದು ತುಂಬಲಾಗುತ್ತಿತ್ತು. ಅದರ ಮುಂತುದಿಗೆ ಚೂಪಾದ ಲೋಹದ ನಳಿಕೆ ಮತ್ತು ಹಿಂತುದಿಗೆ ಬಾಲವನ್ನು ಅಳವಡಿಸಲಾಗುತ್ತಿತ್ತು. ಮದ್ದು ತುಂಬಿದ ಡಬ್ಬಿಗೆ ಬೆಂಕಿ ಹಚ್ಚಿ ಶತ್ರು ಪಾಳೆಯದ ಮೇಲೆ ಹಾರಿಸಲಾಗುತ್ತಿತ್ತು. ಈ ರಾಕೆಟ್‌ ಸುಮಾರು ಒಂದೂವರೆಯಿಂದ 2 ಕಿ.ಮೀ. ದೂರ ಹಾರಿ ನಂತರ ಸಿಡಿಯುತ್ತಿತ್ತು ಎಂಬುದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ.

ಮೈಸೂರು ಸೇನೆಯ ಬಳಿ ಎರಡು ಬಗೆಯ ಯುದ್ಧದ ರಾಕೆಟ್‌ಗಳಿದ್ದವು. ಒಂದು ಮಾದರಿ ಲಂಬಾಕಾರದಲ್ಲಿ ಮೇಲಕ್ಕೆ ಚಿಮ್ಮಿ ನಂತರ ತನ್ನ ದಿಕ್ಕು ಬದಲಿಸುತ್ತಿತ್ತು. ಇದನ್ನು ಹೆಚ್ಚಾಗಿ ರಾತ್ರಿ ವೇಳೆ, ಶತ್ರು ಸೇನೆಯ ಶಿಬಿರಗಳ ಮೇಲೆ ಉಡಾಯಿಸಲಾಗುತ್ತಿತ್ತು. ಮತ್ತೊಂದು ಮಾದರಿಯನ್ನು ಮೈದಾನ ಪ್ರದೇಶದಲ್ಲಿ ನಡೆಯುವ ಯುದ್ಧಗಳಲ್ಲಿ ಪ್ರಯೋಗಿಸಲಾಗುತ್ತಿತ್ತು. ಅದು ನೆಲಮಟ್ಟದಲ್ಲಿ, ಶರ ವೇಗದಲ್ಲಿ ಮುನ್ನುಗ್ಗುತ್ತಿತ್ತು.

ಈ ರಾಕೆಟ್‌ ತಯಾರಿಕಾ ತಂತ್ರಜ್ಞಾನದ ಬಗ್ಗೆ ಟಿಪ್ಪು ಸುಲ್ತಾನ್‌ ಬಹು ಆಸಕ್ತಿ ಹೊಂದಿದ್ದ. ರಾಕೆಟ್‌ ತಯಾರಿಕೆ ಮತ್ತು ಯುದ್ಧಗಳಲ್ಲಿ ಅವುಗಳ ಬಳಕೆಯನ್ನು ನೋಡಿಕೊಳ್ಳಲು ಸಯ್ಯದ್‌ ಗಫಾರ್‌ ಎಂಬ ನಂಬಿಕಸ್ಥ ಅಧಿಕಾರಿಯನ್ನು ನಿಯೋಜಿಸಿದ್ದ. ಟಿಪ್ಪು ಗ್ರಂಥಾಲಯದಲ್ಲಿದ್ದ ಒಂದು ಸಾವಿರ ಪುಸ್ತಕಗಳ ಪೈಕಿ ವಿಜ್ಞಾನ ಮತ್ತು ಶಸ್ತ್ರಾಸ್ತ್ರಗಳ ತಯಾರಿಕೆಗೆ ಸಂಬಂಧಿಸಿದ ಪುಸ್ತಕಗಳೂ ಇದ್ದವು ಎನ್ನುವುದು ಪ್ರೊ.ಎಂ. ಕರಿಮುದ್ದೀನ್‌ ಅವರ ಮಾತು.

‘ಶ್ರೀರಂಗಪಟ್ಟಣವನ್ನು ಸುತ್ತುವರಿದಿರುವ ಕೋಟೆಯ ಅಂಚಿನಲ್ಲಿ, ಆಯಕಟ್ಟಿನ ಜಾಗಗಳಲ್ಲಿ ರಾಕೆಟ್‌ ಉಡಾವಣಾ ತಾಣಗಳಿದ್ದವು. ಶತ್ರು ಸೇನೆ ಈ ದ್ವೀಪ ಪಟ್ಟಣವನ್ನು ಪ್ರವೇಶಿಸದಂತೆ ರಾಕೆಟ್‌ ಉಡಾವಣಾ ಪಡೆ (ಜರ್ಕ್‌್ಸಗಳು) ಕಾಯುತ್ತಿತ್ತು. ಆದರೆ 4ನೇ ಆಂಗ್ಲೋ ಮೈಸೂರು ಯುದ್ದ (1799)ದಲ್ಲಿ ಮೈಸೂರು ಸೇನೆಯ ಮುಖ್ಯಸ್ಥರು ನಡೆಸಿದ ಒಳ ಸಂಚಿನಿಂದಾಗಿ ರಾಕೆಟ್‌ಗಳನ್ನು ಯಶಸ್ವಿಯಾಗಿ ಬಳಸಲಾಗಲಿಲ್ಲ. ಹಾಗಾಗಿ ಶತ್ರು ಸೇನೆ ಕೋಟೆ ಪ್ರವೇಶಿಸಿ ಟಿಪ್ಪು ಸುಲ್ತಾನನನ್ನು ಕೊಂದು ರಾಜಧಾನಿಯನ್ನು ಸೂರೆ ಮಾಡಿತು’ ಎನ್ನುತ್ತಾರೆ ಅವರು.

ಟಿಪ್ಪು ಸುಲ್ತಾನ್‌ ಸೇನೆಯಲ್ಲಿ ಬಳಸುತ್ತಿದ್ದ ರಾಕೆಟ್‌ಗಳಲ್ಲಿ ಕೆಲವನ್ನು ಲಂಡನ್‌ನ ಬಕಿಂಗ್‌ಹ್ಯಾಂ ಅರಮನೆಯಲ್ಲಿ ಸಂರಕ್ಷಿಸಲಾಗಿದೆ. 18ನೇ ಶತಮಾನದ ಅಂತ್ಯದಲ್ಲಿ ಮೈಸೂರು ಸೇನೆ ಬಳಸುತ್ತಿದ್ದ ರಾಕೆಟ್‌ ಮಾದರಿಯ ಪೇಂಟಿಂಗ್‌ ಅಮೆರಿಕದ ನಾಸಾ ಕೇಂದ್ರ ಕಚೇರಿಯಲ್ಲಿಯೂ ಇದೆ.

ಅಲ್ಲಿಗೆ ಭೇಟಿ ನೀಡಿದ್ದಾಗ ಅದನ್ನು ಕಂಡ ಡಾ.ಅಬ್ದುಲ್‌ ಕಲಾಂ ‘ಟಿಪ್ಪು ಸಲ್ತಾನನ ಸ್ವಂತ ದೇಶದಲ್ಲಿ ಮರೆತಿರುವ ಆತನ ರಾಕೆಟ್‌ ತಂತ್ರಜ್ಞಾನವನ್ನು ಭೂಮಿಯ ಇನ್ನೊಂದು ಭಾಗವಾದ ಇಲ್ಲಿ (ಅಮೆರಿಕದಲ್ಲಿ) ಗೌರವಿಸಿದ್ದಾರೆ. ನನಗೆ ನಿಜಕ್ಕೂ ಸಂತೋಷವಾಗಿದ್ದೆಂದರೆ ಒಬ್ಬ ಭಾರತೀಯನನ್ನು ನಾಸಾದವರು ರಾಕೆಟ್‌ ಯುದ್ಧ ತಂತ್ರದ ಹೀರೊ ಎಂದು ಗುರುತಿಸಿ ಕೊಂಡಾಡಿರುವುದು’ ಎಂದು ಉದ್ಗರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT