ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕ್, ಟಿಕ್... ಏನಿದು?

Last Updated 22 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಗಡಿಯಾರದ ಟಿಕ್, ಟಿಕ್ ಶಬ್ದ ಕೇಳಿದ್ದೀರಲ್ಲವೆ? ‘ಟಿಕ್ ಸಮಸ್ಯೆ’ (Tic disorder) ಎಂದೇ ಒಂದು ನರಕ್ಕೆ ಸಂಬಂಧಿಸಿದ ಕಾಯಿಲೆ ಉಂಟು.  ಕ್ಷಿಪ್ರಗತಿಯ, ಪುನರಾವರ್ತಿಸುವ ಸ್ನಾಯುಗಳ ಸಂಕೋಚನ (Contraction)ದಿಂದಾಗಿ ಇಚ್ಛೆಗೆ ವಿರುದ್ಧವಾಗಿ ಆಗುವ ದೇಹದ ಕೆಲವು ಅಂಗಾಂಗಗಳ ಚಲನೆಗಳಿಗೆ ‘ಟಿಕ್’ / ‘Tic’ ಎನ್ನುತ್ತಾರೆ. ಕಾರಣವಿಲ್ಲದೆ ಕಣ್ಣು ಮಿಟುಕಿಸುವುದು, ಮೋರೆ ಸೊಟ್ಟ ಮಾಡುವುದು, ‘Tics’ನ ಉದಾಹರಣೆಗಳೇ.

ಸಾಮಾನ್ಯವಾಗಿ ಬಾಲ್ಯದಲ್ಲಿ ಅಥವಾ ಹದಿಹರೆಯದ ಆರಂಭಿಕ ವರ್ಷಗಳಲ್ಲಿ ಮಕ್ಕಳಲ್ಲಿ ಕಾಣಿಸಿಕೊಂಡು, ಹರೆಯ ಮುಗಿಯುವಷ್ಟರಲ್ಲಿ ಅಂದರೆ ಹದಿನೆಂಟು ವರ್ಷ ದಾಟುವಷ್ಟರಲ್ಲಿ ತನಗೆ ತಾನೇ ಕಡಿಮೆಯಾಗುತ್ತದೆ. ಕೆಲವು ಬಾರಿ ವಯಸ್ಕರಲ್ಲೂ ಇದು ಉಳಿದು ಬಿಡಬಹುದು. ಪ್ರತಿ ಹತ್ತು ಸಾವಿರ ಜನರಿಗೆ, ನಾಲ್ಕರಿಂದ ಐದು ಮಕ್ಕಳು/ವ್ಯಕ್ತಿಗಳಲ್ಲಿ ಇದು ಇರಬಹುದು.

ಯಾವೆಲ್ಲಾ ರೀತಿಯ ಟಿಕ್ಸ್ ಇರಬಹುದು?
ಟಿಕ್ಸ್‌ಗಳಲ್ಲೂ ವಿಧಗಳಿವೆ. ಅವು ಸ್ನಾಯುಗಳ ಚಲನೆಗಳಿಗೆ ಸಂಬಂಧಪಟ್ಟಿದ್ದರೆ ‘Motor Tics’ ಎಂದೂ, ಉಚ್ಚಾರಣೆಗೆ ಸಂಬಂಧಪಟ್ಟಿದ್ದರೆ ‘Vocal Tics’ ಎಂದೂ ಕರೆಯುತ್ತಾರೆ. ಈ ಮೋಟಾರ್ ಟಿಕ್ಸ್‌ನಲ್ಲೂ ಸರಳ ಮತ್ತು ಸಂಕೀರ್ಣ ಎಂಬ ಪ್ರಬೇಧಗಳಿವೆ. ಒಂದು ಮಗುವಿನಲ್ಲಿ ಒಂದು ರೀತಿಯ ಟಿಕ್ಸ್ ಅಥವಾ  2–3ವಿಧದ ಟಿಕ್ಸ್‌ಗಳೂ ಇರಬಹುದು. ಹೆಚ್ಚಿನ ರೀತಿಯ ಟಿಕ್ಸ್ ಇದ್ದರೆ, ಅದಕ್ಕೆ ‘Tourette's disorder’ ಎಂದು ಕರೆಯುತ್ತಾರೆ.

ಕಾರಣವಿಲ್ಲದೆ ಮತ್ತೆ ಮತ್ತೆ ತುಟಿ ಕಚ್ಚುವುದು, ಮುಖ ಸೊಟ್ಟ ಮಾಡುವುದು, ಕಣ್ಣು ಮಿಟುಕಿಸುವುದು, ಗಂಟಲು ಸ್ಷಷ್ಟೀಕರಣ, ಭುಜ ಏರಿಸುವುದು, ನಶ್ಯ ಸೇದುವಂತೆ ಮೂಗಿನಲ್ಲಿ  ಉಸಿರೆಳೆದುಕೊಳ್ಳುವುದು ಇತ್ಯಾದಿ ಟಿಕ್ಸ್‌ನ ಉದಾಹರಣೆಗಳು. ಕಾರಣವಿಲ್ಲದೆ, ಮನಸ್ಸಿನ ಇಚ್ಛೆ ಇಲ್ಲದೆ ಕೆಲವು ಬಾರಿ ಬಾಯಿಂದ ಕೆಟ್ಟ ಶಬ್ದಗಳು ಬರುವುದೂ ಕೆಲವು ‘Vocal Tics’ನಲ್ಲಿ ಸಾಧ್ಯ.

ಟಿಕ್ಸ್ ಜೊತೆಗಿನ ಸಮಸ್ಯೆಗಳು
ಮಕ್ಕಳಲ್ಲಿ ಈ ಟಿಕ್ಸ್‌ನಿಂದಾಗಿ ಜೀವಕ್ಕೇನೂ ಹಾನಿಯಿಲ್ಲ. ಆದರೆ ಕಲಿಕೆಯಲ್ಲಿ, ಕೆಲಸ–ಕಾರ್ಯಗಳಲ್ಲಿ ತೊಂದರೆಯಾಗುತ್ತದೆ. ಶಾಲೆಯಲ್ಲಿ ಸ್ನೇಹಿತರ ಮುಂದೆ ನಾಚಿಕೆ ಎನಿಸಬಹುದು. ಇತರರಿಂದ ನಗೆಗೀಡಾಗಬಹುದು. ಟಿಕ್ಸ್ ಇರುವ ಕೆಲವು ಮಕ್ಕಳಲ್ಲಿ ಹಟಮಾರಿತನ, ಅತಿ ಚಟುವಟಿಕೆಯಂಥ ವರ್ತನಾ ಸಮಸ್ಯೆಗಳೂ ಕಾಣಿಸುತ್ತವೆ. ಇನ್ನು ಕೆಲವು ಬಾರಿ, ಗೀಳಿನ ಲಕ್ಷಣಗಳೂ ಈ ಮಕ್ಕಳಲ್ಲಿರಬಹುದು.

ಯಾವಾಗ ಹೆಚ್ಚು /ಕಡಿಮೆ?
ಟಿಕ್ಸ್ ಸಾಮಾನ್ಯವಾಗಿ ಆ ಮಗು / ವ್ಯಕ್ತಿಯ ನಿಯಂತ್ರಣದಲ್ಲಿ ಇಲ್ಲದಿದ್ದರೂ ಸ್ವಲ್ಪ ಮಟ್ಟಿಗೆ, ಒಂದು ಹಂತದವರೆಗೆ ತಡೆಯಬಹುದು. ಗಮನ ಬೇರೆ ಚಟುವಟಿಕೆಗಳಲ್ಲಿದ್ದಾಗ, ಈ ಟಿಕ್ಸ್‌ಗಳ ತೀವ್ರತೆ ಕಡಿಮೆಯಿರುತ್ತದೆ. ನಿದ್ರೆಯಲ್ಲಿದ್ದಾಗ ಪೂರ್ಣ ಮಾಯ ಕೂಡ ಆಗಬಹುದು. ಅದೇ ಹೆಚ್ಚಿನ ಜನರು ಸೇರಿರುವ ಕಡೆ, ಯಾರೋ ನಮ್ಮನ್ನೇ ಗಮನಿಸುತ್ತಿದ್ದಾರೆ ಎನ್ನುವಾಗ, ವೇದಿಕೆಯ ಮೇಲೆ ಹೋಗಬೇಕಾದಾಗ, ಆತಂಕ ಉಂಟಾದಾಗ, ಈ ಟಿಕ್ಸ್‌ಗಳು ಜಾಸ್ತಿಯಾಗುತ್ತವೆ.

ಚಿಕಿತ್ಸೆ ಏನು?
ಸೌಮ್ಯ ರೀತಯ ಕೆಲಸ-ಕಾರ್ಯಗಳಲ್ಲಿ ಸಮಸ್ಯೆ ಉಂಟು ಮಾಡದ ಟಿಕ್ಸ್‌ಗಳಿಗೆ ಚಿಕಿತ್ಸೆಯೇ ಅಗತ್ಯವಿಲ್ಲ. ಅದೇ ಈ ಚಲನೆಗಳಿಂದಾಗಿ, ಮಗುವಿಗೆ ಶಾಲೆಯಲ್ಲಿ ತೊಂದರೆ ಆಗುತ್ತಿದ್ದರೆ, ಕಲಿಕೆಯಲ್ಲಿ / ಆಟದಲ್ಲಿ ಭಾಗವಹಿಸಲು ಆಗದಿದ್ದರೆ, ಚಿಕಿತ್ಸೆ ಅಗತ್ಯವಿದೆ. ಕೆಲವು ರೀತಿಯ ವರ್ತನಾ ಚಿಕಿತ್ಸೆ ಮತ್ತು ಮಾತ್ರೆಗಳು ಟಿಕ್ಸ್‌ಗಳನ್ನು ಶಮನ ಮಾಡುವಲ್ಲಿ ಸಹಕಾರಿ. ಪೋಷಕರು ಈ ಸಮಸ್ಯೆ ಬಗ್ಗೆ ಅರಿತು, ಮಕ್ಕಳಿಗೆ ಆತಂಕ ಹೆಚ್ಚದಂತೆ ನಡೆದುಕೊಳ್ಳುವುದೂ ಅಗತ್ಯ.

ಏಳು ವರ್ಷದ ಪ್ರದೀಪ ಚೂಟಿ ಹುಡುಗ. ಯಾಕೋ ಈ ಎರಡು ತಿಂಗಳಿನಿಂದ ವಿಚಿತ್ರವಾಗಿ ವರ್ತಿಸುತ್ತಿದ್ದಾನೆ. ಮತ್ತೆ ಮತ್ತೆ  ತುಟಿ ಒಂದು ಕಡೆ ಸೊಟ್ಟ ಮಾಡುವುದು, ಬಲಭುಜ ಮತ್ತೆ ಮತ್ತೆ ಅಲ್ಲಾಡಿಸುವುದು, ಮೊದ-ಮೊದಲು ತಂದೆ-ತಾಯಿ ಇವನು ‘Style’ಗಾಗಿ ಹೀಗೆ ಮಾಡುತ್ತಾನೆ ಎಂದುಕೊಂಡರು. ಬುದ್ಧಿ ಹೇಳಿದರು, ಬೈದರು.

ಹೊಡೆತವೂ ಬಿತ್ತು. ಶಾಲೆಯಲ್ಲಿ ಕೂಡ ಟೀಚರ್‌ನಿಂದ ದೂರು. ಪ್ರದೀಪ್ ಇವರೆಲ್ಲರೂ ಬೈದಷ್ಟೂ ಮತ್ತೂ ಹೆಚ್ಚಾಗಿ ಈ ಚಲನೆಗಳನ್ನು ಮಾಡಲಾರಂಭಿಸಿದ. ಏನೋ ಅರ್ಥವಾಗದೇ ಮಕ್ಕಳ ವೈದ್ಯರಲ್ಲಿ ಕರೆದೊಯ್ದಾಗ, ಅವರು ಹೇಳಿದಾಗಷ್ಟೇ ಪ್ರದೀಪನ ತಂದೆ-ತಾಯಿಗೆ ತಿಳಿದದ್ದು ತಮ್ಮ ಮಗನಿಗೆ ‘ಟಿಕ್ ಕಾಯಿಲೆ’ ಇದೆಯೆಂದು ಮತ್ತು ಅವನು ಅದನ್ನು ಬೇಕೆಂದು ಮಾಡುತ್ತಿಲ್ಲವೆನ್ನುವ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT