ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಯೊ ಲೈಫ್‌: ಡಿಜಿಟಲ್‌ ಬದುಕಿಗೆ ಹೊಸ ವ್ಯಾಖ್ಯೆ

Last Updated 22 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಮುಕೇಶ್‌ ಅಂಬಾನಿ ಅವರ ಒಡೆತನದ ಮೊಬೈಲ್‌ ಸೇವಾ ಸಂಸ್ಥೆ ರಿಲಯನ್ಸ್‌ ಜಿಯೊ, ಈಗ ಬರೀ ದೂರಸಂಪರ್ಕ ಸಂಸ್ಥೆಯಾಗಿ ಉಳಿದಿಲ್ಲ.  ಮೊಬೈಲ್‌ ಬಳಕೆದಾರರ ಡಿಜಿಟಲ್‌ ಬದುಕನ್ನು  ಹೊಸ ಎತ್ತರಕ್ಕೆ ಕೊಂಡೊಯ್ಯುವ ವಿಶಿಷ್ಟ ಸ್ಟಾರ್ಟ್‌ಅಪ್‌ ಕೂಡ ಅದಾಗಿದೆ. ದೇಶಿ ಡಿಜಿಟಲ್‌ ಲೋಕವನ್ನು ಆಮೂಲಾಗ್ರವಾಗಿ ಬದಲಿಸುವ, ಬಹು ಕೋಟಿ ರೂಪಾಯಿಗಳಷ್ಟು ಬಂಡವಾಳ ತೊಡಗಿಸಿರುವ ಈ ವಿಶಿಷ್ಟ ನವೋದ್ಯಮವು, ತನ್ನ ವಿಶಿಷ್ಟ ನವ ನವೀನ ಸೇವೆಗಳ ಮೂಲಕ  ದೂರಸಂಪರ್ಕ ರಂಗದಲ್ಲಿ ಈಗ ಭಾರಿ ಸದ್ದು ಮಾಡುತ್ತಿದೆ.

ಜಿಯೊ ಸಿಮ್‌ ಕಾರ್ಡ್‌ ಅನ್ನು ಆಧಾರ್‌ ನೆರವಿನಿಂದ ಕ್ಷಿಪ್ರವಾಗಿ ಚಾಲನೆಗೊಳಿಸುವುದರಿಂದ  ಹಿಡಿದು,  ನಾಲ್ಕೈದು ಜನರು ಏಕಕಾಲಕ್ಕೆ ವಿಡಿಯೊ ಸಂವಾದ ನಡೆಸುವ,  ಏಳು ದಿನಗಳ ಹಿಂದಿನ ಟೆಲಿವಿಷನ್‌ ಕಾರ್ಯಕ್ರಮಗಳನ್ನು ವೀಕ್ಷಿಸುವ, ವೈವಿಧ್ಯಮಯ ಕ್ರೀಡೆ ಗಳಿಗೆ (ಗೇಮಿಂಗ್‌) ಅವಕಾಶ ಮಾಡಿಕೊಡುವ, ಮನೆಯಲ್ಲಿನ ಡಿಜಿಟಲ್‌ ಸಾಧನಗಳನ್ನು ಮೊಬೈಲ್‌ನಿಂದಲೇ ನಿಯಂತ್ರಿಸುವ, ಕಾರಿನ ಮೇಲೆ ಸಂಪೂರ್ಣ ನಿಗಾ ಇರಿಸುವ ವಿಶಿಷ್ಟ ಸೌಲಭ್ಯಗಳನ್ನೆಲ್ಲ ಪರಿಚಯಿಸುತ್ತ  ಮೊಬೈಲ್‌ ಗ್ರಾಹಕರಲ್ಲಿ ಹೊಸ ಸಂಚಲನ ಮೂಡಿಸುತ್ತಿದೆ.

ಅಂತರ್‌ಸಂಪರ್ಕಿತ ಸ್ಮಾರ್ಟ್‌ ಡಿಜಿಟಲ್‌ ಸಾಧನಗಳ ( Internet of Things –IoT) ಜತೆ ಸಂಪರ್ಕ ಸಾಧಿಸುವ ಜಿಯೊ ಮೊಬೈಲ್‌ನಿಂದ  ಮನೆಯಲ್ಲಿನ ಪರಿಕರ ಮತ್ತು  ಕಾರ್‌ ನಿಯಂತ್ರಿಸುವ (ಸ್ಮಾರ್ಟ್‌ ಕಾರ್‌) ಸೌಲಭ್ಯಗಳು ಬಳಕೆದಾರರನ್ನು ಮೋಡಿ ಮಾಡಲಿವೆ.

ರಿಲಯನ್ಸ್ ಜಿಯೊ, ಸುಸ್ಪಷ್ಟ ಧ್ವನಿ ಮತ್ತು ವಿಡಿಯೊ ಕರೆ ಸೌಲಭ್ಯ ನೀಡುವುದರ ಜತೆಗೆ ವಿಶಿಷ್ಟ ಸೇವೆಗಳಾದ ಜಿಯೊ ಮನಿ ಮತ್ತು ಮೈಜಿಯೊ ಸೇವೆಗಳನ್ನೂ ನೀಡುತ್ತಿದೆ.ರಿಲಯನ್ಸ್‌ ಜಿಯೊ ಈಗ  ಕೇವಲ   ದೂರಸಂಪರ್ಕ  ಸಂಸ್ಥೆಯಾಗಿ  ಉಳಿದಿಲ್ಲ.  ಡಿಜಿಟಲ್‌ ಬದುಕಿನ ಹೊಸ ಮಾರ್ಗದರ್ಶಕವಾಗಿ ಮೊಬೈಲ್‌ ಬಳಕೆದಾರರಿಗೆ ನೆರವಾಗುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತ ಬಳಕೆದಾರರನ್ನು  ಬೆರಗುಗೊಳಿಸುತ್ತಿದೆ.

ಒಂದು ಫೋನ್‌ನಿಂದ ಇನ್ನೊಂದು ಪೋನ್‌ಗೆ ದತ್ತಾಂಶ ವರ್ಗಾಯಿಸುವುದನ್ನೂ  ಜಿಯೊ ಸುಲಭಗೊಳಿಸುತ್ತದೆ. ಒಂದು ವೇಳೆ ಕರೆ ಕಡಿತಗೊಂಡರೆ, ಗ್ರಾಹಕರ ಸೇವಾ ಕೇಂದ್ರವು ಸ್ವಯಂಚಾಲಿತವಾಗಿ ಸಮಸ್ಯೆ ಬಗೆಹರಿಸಲಿದೆ. ಎರಡು ಫೋನ್‌ಗಳು ಹಾಟ್‌ಸ್ಪಾಟ್ ಮೂಲಕ ಪರಸ್ಪರ ಸಂಪರ್ಕ ಸಾಧಿಸಿದಾಗ ಮೊಬೈಲ್‌ ಸಂಪರ್ಕ ಸಂಖ್ಯೆ, ಚಿತ್ರ, ವಿಡಿಯೊ, ಸಂದೇಶ, ಸಂಗೀತ ಮತ್ತಿತರ ಮಾಹಿತಿ ನಷ್ಟವಾಗದೆ  ಗೋಪ್ಯತೆ ಕಾಯ್ದುಕೊಳ್ಳಬಹುದು.

ಸಾರ್ವಜನಿಕ ಸ್ಥಳಗಳಲ್ಲಿ ಸಂಸ್ಥೆ ಒದಗಿಸುವ ವೈಫೈ  ಸೌಲಭ್ಯ ಇರುವ ಕಡೆಗಳಲ್ಲಿ  ಜಿಯೊ ಗ್ರಾಹಕರು ಗುರುತಿನ  ಸಂಖ್ಯೆ ಮತ್ತು ರಹಸ್ಯ ಸಂಖ್ಯೆ ನಮೂದಿಸದೆ ವೈಫೈ ಬಳಸಬಹುದು.

ಮೊಬೈಲ್‌ ಕರೆ ಮಾಡುವಾಗ  ಧ್ವನಿಯಿಂದ ವಿಡಿಯೊಗೆ  ತುಂಬ ಸುಲಭವಾಗಿ ವರ್ಗಾವಣೆಗೊಳ್ಳಬಹುದು. ಕರೆ ದನಿ ಸುಸ್ಪಷ್ಟವಾಗಿದ್ದು,  ಇತರ ಮೊಬೈಲ್‌ ಸೇವಾ ಸಂಸ್ಥೆಗಳಿಗೆ ಹೋಲಿಸಿದರೆ ಅತ್ಯಲ್ಪ ಅವಧಿಯಲ್ಲಿ ಕರೆ  ಸಂಪರ್ಕ ಇಲ್ಲಿ ಸಾಧ್ಯವಾಗಲಿದೆ.

ಜಿಯೊ ಚಾಟ್ ನೆರವಿನಿಂದ ಸುತ್ತಮುತ್ತಲಿನ ಗೌಜು ಗದ್ದಲಗಳ ಅಡಚಣೆ ಇಲ್ಲದೆ ಕರೆ (1 + 5 ಜನರು) ಮತ್ತು ವಿಡಿಯೊ ಕಾನ್ಪರೆನ್ಸ್‌ (1 + 4 ಜನರು) ಮಾಡಬಹುದು.ಜಿಯೊ ಮನಿ ಆ್ಯಪ್‌ ಮೂಲಕ ಮೊಬೈಲ್‌ ರೀಚಾರ್ಜ್‌, ಮೆಟ್ರೊ ಟಿಕೆಟ್‌,  ನಾಗರಿಕ ಸೇವೆಗಳ ಬಿಲ್‌ ಪಾವತಿ ಮತ್ತಿತರ ನಗದುರಹಿತ ಸೇವೆಗಳನ್ನು ಹೆಚ್ಚು ಸುಲಭವಾಗಿ ನಿರ್ವಹಿಸಬಹುದಾಗಿದೆ.

ಜಿಯೊಮ್ಯಾಗ್ಸ್ ಆ್ಯಪ್‌ ನೆರವಿನಿಂದ  ಜನಪ್ರಿಯ ನಿಯತಕಾಲಿಕೆಗಳು ಮತ್ತು  ಹತ್ತು ಭಾಷೆಗಳಲ್ಲಿನ ದಿನ  ದಿನಪತ್ರಿಕೆಗಳನ್ನು ಓದುವುದರ ಜತೆಗೆ ಕೇಳುವ ಆಯ್ಕೆಯೂ ಇರಲಿದೆ. ಜಿಯೊ ಟಿವಿ  ಸೌಲಭ್ಯದ ಮೂಲಕ ವೀಕ್ಷಕರು ಕಾರ್ಯಕ್ರಮಗಳ ನೇರ ಪ್ರಸಾರವನ್ನು  ವೀಕ್ಷಿಸುವ ಜತೆಗೆ ಏಳು ದಿನಗಳ ಕಾರ್ಯಕ್ರಮಗಳನ್ನೂ ಯಾವುದೇ ಸಂದರ್ಭದಲ್ಲಿಯೂ ನೋಡುವ ಅವಕಾಶ  ಒದಗಿಸಿ ಕೊಡಲಿದೆ.

ಹಿಂದಿ, ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಗಳಲ್ಲಿನ ಸಿನಿಮಾ, ಟೆಲಿವಿಷನ್‌ ಕಾರ್ಯಕ್ರಮಗಳು ಮತ್ತು ಸಂಗೀತ ವಿಡಿಯೊಗಳ ಅತಿದೊಡ್ಡ ಸಂಗ್ರಹ ಜಿಯೊ ಸಿನಿಮಾದಲ್ಲಿ ಇದೆ.

ಇಲ್ಲಿನ  ಚಲನಚಿತ್ರ, ಟಿವಿ ಕಾರ್ಯಕ್ರಮಗಳನ್ನು ಜಾಹೀರಾತುಗಳಿಲ್ಲದೆ ವೀಕ್ಷಿಸಬಹುದಾಗಿದೆ.ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ದ್ವಿಮುಖ ಸಂವಾದಕ್ಕೆ ಜಿಯೊ  ಎಜುಕೇಷನ್ ಅವಕಾಶ ನೀಡುತ್ತದೆ. ಮೊಬೈಲ್‌ ಬಳಕೆದಾರರು ತಮ್ಮ ಆರೋಗ್ಯದ ಮೇಲೆ ನಿಗಾ  ಇರಿಸಿಕೊಳ್ಳಲು ಜಿಯೊ ಹೆಲ್ತ್‌ ಹಬ್ ಆ್ಯಪ್ ನೆರವಾಗುತ್ತದೆ. 

‘ಕನೆಕ್ಟೆಡ್ ಕಾರ್’ ಸಾಧನದ ಮೂಲಕ ಒಂದು ಸಾಮಾನ್ಯ ಕಾರನ್ನು ಸ್ಮಾರ್ಟ್ ಕಾರನ್ನಾಗಿ ರೂಪಾಂತರಗೊಳಿಸಲು ಸಾಧ್ಯವಾಗಲಿದೆ. ಈ ಪುಟ್ಟ ಸಾಧನವು ಕಾರಿನ ಸಮಗ್ರ ಮಾಹಿತಿ ಗ್ರಹಿಸಿ ದುರಸ್ತಿ ಕಾರ್ಯ ಸುಗಮಗೊಳಿಸಲಿದೆ.  ಜತೆಗೆ ಕಾರ್‌ನ ಮೇಲೆ ಸಂಪೂರ್ಣ ನಿಯಂತ್ರಣವನ್ನೂ ಹೊಂದಲು ನೆರವಾಗಲಿದೆ.

ಯಾವುದೇ ಟಿವಿಯನ್ನು ಸ್ಮಾರ್ಟ್ ಟಿವಿಯಾಗಿ ಪರಿವರ್ತಿಸಲು ಜಿಯೊ ನೆರವಾಗಲಿದೆ. ವಿಡಿಯೊಗಳನ್ನು ಯಾವುದೇ ಅಡೆ ತಡೆ ಇಲ್ಲದೇ ಸರಾಗವಾಗಿ ವೀಕ್ಷಿಸುವ ವಿಶಿಷ್ಟ ಅನುಭವ ಒದಗಿಸಿ ಕೊಡಲಿದೆ. ಮೊಬೈಲ್ ಫೋನ್‌ನಿಂದಲೇ ವಿಶ್ವದ ಯಾವುದೇ ಭಾಗದಲ್ಲಿದ್ದರೂ  ಮನೆಯಲ್ಲಿನ ಡಿಜಿಟಲ್‌ ಸಾಧನಗಳನ್ನು ನಿಯಂತ್ರಿಸಬಹುದು.

ಮೊಬೈಲ್‌ನಿಂದಲೇ ಮನೆಯ ಬಾಗಿಲು ಹಾಕುವ, ತೆರೆಯುವುದನ್ನೂ ನಿರ್ವಹಿಸಬಹುದು. ರಿಲಯನ್ಸ್‌ ಜಿಯೊ, ತನ್ನ ಗ್ರಾಹಕರಿಗೆ ಈಗಾಗಲೇ ಒದಗಿಸುತ್ತಿರುವ ಮತ್ತು ಮುಂದಿನ ದಿನಗಳಲ್ಲಿ ಒದಗಿಸಲಿರುವ ವಿಶಿಷ್ಟ ಸೌಲಭ್ಯಗಳ ಸಂಪೂರ್ಣ ಪರಿಕಲ್ಪನೆಯ ಚಿತ್ರಣವನ್ನು, ನವಿ ಮುಂಬೈನಲ್ಲಿನ ಜಿಯೊ ಕೇಂದ್ರವು (Jio Experience Center)  ನೀಡುತ್ತದೆ. ಜಿಯೊ ಡಿಜಿಟಲ್‌ ಲೈಫ್ ಒದಗಿಸಲಿರುವ ಸೌಲಭ್ಯಗಳ ಸಮಗ್ರ ವಿವರ ಇಲ್ಲಿ ದೊರೆಯುತ್ತಿದೆ.

ತಿಳಿಯಿರಿ ನಿಮ್ಮ ಗ್ರಾಹಕರ ವಿದ್ಯುನ್ಮಾನ ಯಂತ್ರ (ಇಕೆವೈಸಿ) ಮತ್ತು ಆಧಾರ್ ನೆರವಿನಿಂದ ಅತ್ಯಲ್ಪ ಅವಧಿಯಲ್ಲಿ ಕರಾರುವಾಕ್ಕಾಗಿ ಜಿಯೊ ಸಿಮ್ ವಿತರಣೆ ಪ್ರಕ್ರಿಯೆಯ ಮಾಹಿತಿಯಿಂದ ಹಿಡಿದು ಸ್ಮಾರ್ಟ್‌ ಹೋಮ್‌, ಸ್ಮಾರ್ಟ್‌ ಕಾರ್‌ಗಳವರೆಗೆ ಇಲ್ಲಿ ಮಾಹಿತಿ ಇದೆ. ಭವಿಷ್ಯದ ದಿನಗಳಲ್ಲಿ ದೇಶಿ ಡಿಜಿಟಲ್ ವಲಯಕ್ಕೆ ಸಂಸ್ಥೆಯು ನೀಡಲಿರುವ ಅನನ್ಯ ಕೊಡುಗೆಗಳ ಮಾಹಿತಿಯೂ ಇಲ್ಲಿ ದೊರೆಯಲಿದೆ.

ದೂರ ಸಂಪರ್ಕ ಸೇವಾ ಸಂಸ್ಥೆಯು ಗ್ರಾಹಕರಿಗೆ ಕೊಡಮಾಡಲಿರುವ ವಿಶಿಷ್ಟ ಸೇವೆಗಳ ಸಮಗ್ರ ಪರಿಚಯ ಮಾಡಿಕೊಡುವುದರ ಜತೆಗೆ ಹೊಸ, ಹೊಸ ಡಿಜಿಟಲ್ ಸಾಧನಗಳ ಬಳಕೆಯ ಬಗ್ಗೆಯೂ ಇದು ಒಳನೋಟವನ್ನೂ ನೀಡುತ್ತಿದೆ.

(ಲೇಖಕ, ಸಂಸ್ಥೆಯ ಆಹ್ವಾನದ ಮೇರೆಗೆ ನವಿ ಮುಂಬೈನಲ್ಲಿನ ರಿಲಯನ್ಸ್‌ ಕಾರ್ಪೊರೇಟ್‌ ಪಾರ್ಕ್‌ಗೆ ಭೇಟಿ ನೀಡಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT