ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘಟಿತ ಲೂಟಿ, ಕಾನೂನಾತ್ಮಕ ಸುಲಿಗೆ: ಸಿಂಗ್‌

Last Updated 24 ನವೆಂಬರ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸತತ ಐದು ದಿನ­ಗಳ ಕೋಲಾಹಲದ ನಂತರ ಗುರುವಾರ ರಾಜ್ಯಸಭೆಯಲ್ಲಿ ಅಲ್ಪ ಕಾಲ ಚರ್ಚೆ ನಡೆದಿದೆ. ನೋಟು ರದ್ದತಿ ವಿರುದ್ಧ ವಿರೋಧ ಪಕ್ಷಗಳ ದಾಳಿಯ ನೇತೃತ್ವದ ವಹಿಸಿದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಈ ಕ್ರಮ ‘ಅತಿ ದೊಡ್ಡ ನಿರ್ವಹಣಾ ವೈಫಲ್ಯ’ ಎಂದು ಹೇಳಿದರು.

ನೋಟು ರದ್ದತಿಯಿಂದಾಗಿ ಜಿಡಿಪಿ ಕನಿಷ್ಠ ಶೇ 2ರಷ್ಟು ಕುಸಿಯಲಿದೆ ಎಂದು ಅಭಿಪ್ರಾಯಪಟ್ಟರು. ಇದು ಕನಿಷ್ಠ ಅಂದಾಜೇ ಹೊರತು ಗರಿಷ್ಠ ಅಂದಾಜು ಅಲ್ಲ ಎಂದು ಸ್ಪಷ್ಟಪಡಿಸಿದರು.

ನೋಟು ರದ್ದತಿ ‘ಸಂಘಟಿತ ಲೂಟಿ ಮತ್ತು ಕಾನೂನಾತ್ಮಕ ಸುಲಿಗೆ’ ಎಂದು ಸಿಂಗ್‌ ಬಣ್ಣಿಸಿದರು.  ಕಪ್ಪುಹಣದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ಹೇಳಿರುವುದರ ಬಗ್ಗೆ ತಮಗೆ ಸಹಮತ ಇದೆ. ಆದರೆ ಈ ಕ್ರಮದಿಂದಾಗಿ ಜನರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಬೆಳಕು ಚೆಲ್ಲುವುದು ತಮ್ಮ ಉದ್ದೇಶ ಎಂದು ಹೇಳಿದರು.

‘ಈ ಕಡೆಯಿಂದ ಲೋಪವಾಗಿದೆ ಅಥವಾ ಆ ಕಡೆಯಿಂದ ಲೋಪವಾಗಿದೆ ಎಂದು ಬೆರಳು ತೋರುವುದು ನನ್ನ ಉದ್ದೇಶವಲ್ಲ. ಆದರೆ ಇಷ್ಟೊಂದು ತಡವಾಗಿಯಾದರೂ ಸಂಕಷ್ಟದಲ್ಲಿರುವ  ಜನರ ತೊಂದರೆ ಪರಿಹಾರಕ್ಕೆ ರಚನಾತ್ಮಕವಾದ ಕ್ರಮಗಳನ್ನು ಪ್ರಧಾನಿ ಕಂಡುಕೊಳ್ಳುತ್ತಾರೆ ಎಂಬುದು ನನ್ನ ಪ್ರಾಮಾಣಿಕವಾದ ಅಭಿಪ್ರಾಯ’ ಎಂದರು.

ನೋಟು ರದ್ದತಿಯ ಫಲಿತಾಂಶಕ್ಕೆ 50 ದಿನ ಕಾಯಿರಿ ಎಂದು ದೇಶದ ಜನರಿಗೆ ಪ್ರಧಾನಿ ಹೇಳಿದ್ದ ಮಾತಿನ ಬಗ್ಗೆಯೂ ಸಿಂಗ್‌ ಅಸಮ್ಮತಿ ವ್ಯಕ್ತಪಡಿಸಿದರು. ಅಂತಿಮ ಫಲಿತಾಂಶ ಏನಾಗಬಹುದು ಎಂಬುದು ಯಾರಿಗೂ ಗೊತ್ತಿಲ್ಲ ಎಂದು ಅವರು ಹೇಳಿದರು.

‘ಹೌದು, 50 ದಿನಗಳು ಅಲ್ಪಾವಧಿಯೇ ಸರಿ. ಆದರೆ ಬಡವರು ಮತ್ತು ತಳಮಟ್ಟದ ಜನರಲ್ಲಿ 50 ದಿನಗಳ ಅವಧಿಯ ಚಿತ್ರಹಿಂಸೆ ದುರಂತ
ಮಯ ಪರಿಣಾಮ ಉಂಟು ಮಾಡುತ್ತದೆ’ ಎಂದು ಸಿಂಗ್‌ ವಿವರಿಸಿದರು. ನೋಟು ರದ್ದತಿಯ ಕಾರಣದಿಂದ 60–65 ಜನರು ಜೀವ ಕಳೆದುಕೊಂಡಿರುವುದನ್ನು ಅವರು ಉಲ್ಲೇಖಿಸಿದರು.

ಕೃಷಿ, ಅಸಂಘಟಿತ ವಲಯ ಮತ್ತು ಸಣ್ಣ ಉದ್ಯಮಗಳಿಗೆ ಅತಿ ಹೆಚ್ಚು ಹಾನಿ ಉಂಟಾಗಿದೆ ಎಂದ ಸಿಂಗ್‌, ಸರ್ಕಾರ ಸೂಚನೆಗಳ ನಂತರ ಸೂಚನೆಗಳನ್ನು ನೀಡುತ್ತಿರುವುದನ್ನು ಟೀಕಿಸಿದರು. ತಮ್ಮದೇ ಹಣವನ್ನು ಬ್ಯಾಂಕಿನಿಂದ ಜನರು ಪಡೆದುಕೊಳ್ಳುವುದಕ್ಕೆ ದಿನ ದಿನವೂ ನಿಯಮಗಳ ಪರಿಷ್ಕರಣೆಯ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಧಾನಿ ಕಾರ್ಯಾಲಯ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕಿನ ಬಗ್ಗೆ ಜನರು ವಿಶ್ವಾಸ ಕಳೆದುಕೊಳ್ಳುವಂತೆ ಇಂತಹ ಕ್ರಮಗಳು ಮಾಡುತ್ತವೆ ಎಂದು ಅವರು ಎಚ್ಚರಿಸಿದರು.

‘ಈ ರೀತಿಯ ಟೀಕೆಗೆ ಆರ್‌ಬಿಐ ಒಳಗಾಗಿರುವುದಕ್ಕೆ ನನಗೆ ಭಾರಿ ಬೇಸರವಿದೆ. ಆದರೆ ಈ ಟೀಕೆ ಸಮರ್ಥನೀಯವೇ ಆಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಅಲ್ಪಾವಧಿಯ ತೊಂದರೆ ಮತ್ತು ಅವಿಶ್ವಾಸ ಸೃಷ್ಟಿಸಿರುವ ಈ ಕ್ರಮ ದೀರ್ಘಾವಧಿಯಲ್ಲಿ ಫಲ ನೀಡಲಿದೆ ಎಂದು ಪ್ರತಿಪಾದಿಸುವವರಿಗೆ ಉತ್ತರವಾಗಿ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಜಾನ್‌ ಮೆನಾರ್ಡ್‌ ಕೀನ್ಸ್‌ ಅವರ ‘ದೀರ್ಘಾವಧಿಯಲ್ಲಿ ನಾವೆಲ್ಲರೂ ಸತ್ತು ಹೋಗಿರುತ್ತೇವೆ’ ಎಂದು ಹೇಳಿಕೆಯನ್ನು ಉಲ್ಲೇಖಿಸಿದರು.

ಜನರು ಬ್ಯಾಂಕುಗಳಲ್ಲಿ ಠೇವಣಿ ಇರಿಸಿದ ಹಣವನ್ನು ಹಿಂದಕ್ಕೆ ಪಡೆಯಲು ಅವಕಾಶ ಕೊಡದ ಒಂದು ದೇಶದ ಹೆಸರು ಹೇಳುವಂತೆ ಪ್ರಧಾನಿಗೆ ಸಿಂಗ್‌ ಅವರು ಸವಾಲೆಸೆದರು. ದೇಶದ ಒಳ್ಳೆಯದಕ್ಕೆ ಎಂಬ ಹೆಸರಿನಲ್ಲಿ ಕೈಗೊಂಡಿರುವ ನಿರ್ಧಾರವನ್ನು ಖಂಡಿಸಲು ಈ ಒಂದೇ ಅಂಶ ಸಾಕು ಎಂದು ಅವರು ಹೇಳಿದರು.

ಎರಡನೇ ತುರ್ತುಪರಿಸ್ಥಿತಿ:  ಚರ್ಚೆಯಲ್ಲಿ ಭಾಗವಹಿಸಿದ ಎಸ್‌ಪಿಯ ನರೇಶ್‌ ಅಗರ್‌ವಾಲ್‌, ನೋಟು ರದ್ದತಿ ಕ್ರಮವನ್ನು ಎರಡನೇ ತುರ್ತುಪರಿಸ್ಥಿತಿ ಎಂದರು. ಈ ಕ್ರಮ ದೇಶದಲ್ಲಿ ಆರ್ಥಿಕ ತುರ್ತುಸ್ಥಿತಿ ಹೇರಿದೆ ಎಂದು ಅಭಿಪ್ರಾಯಪಟ್ಟರು. 

ಇಂತಹ ನಿರ್ಧಾರ ಗಳನ್ನು ನಿರಂಕುಶಾಧಿಕಾರಿಗಳು ಮಾತ್ರ ಕೈಗೊಳ್ಳುತ್ತಾರೆ. ಜಗತ್ತಿನ ಯಾವುದೇ ಚುನಾಯಿತ ಸರ್ಕಾರ ಇಂತಹ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದರು.

ಸಂಸದರು ನಿಜವಾದ ಜನಪ್ರತಿನಿಧಿಗಳು. ಸಂಸತ್ತಿನ ಎರಡೂ ಸದನಗಳ ಒಪ್ಪಿಗೆ ಅಥವಾ ಅನುಮೋದನೆ ಇಲ್ಲದೆ ಇಂತಹ ನಿರ್ಧಾರ  ಹೇಗೆ
ಕೈಗೊಳ್ಳಲಾಗಿದೆ ಎಂದು ಅವರು ಪ್ರಶ್ನಿಸಿದರು.

ಟೀಕೆ ನಂತರ ಸಿಂಗ್ ಕೈಕುಲುಕಿದ ಮೋದಿ: ನೋಟು ರದ್ದತಿ ನಿರ್ಧಾರವನ್ನು ಮನಮೋಹನ್‌ ಸಿಂಗ್‌ ಅವರು ರಾಜ್ಯಸಭೆಯಲ್ಲಿ ತೀವ್ರವಾಗಿ ಟೀಕಿಸಿದರು. ನಂತರದ ಊಟದ ವಿರಾಮದಲ್ಲಿ ಪ್ರಧಾನಿ ಮೋದಿ ಅವರು ಸಿಂಗ್‌ ಕೈಕುಲುಕಿ ಕುಶಲ  ವಿಚಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT