ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದರಿಗೆ ನೆಲವೇ ಹಾಸಿಗೆ; ಬಯಲೇ ಸ್ನಾನಗೃಹ!

Last Updated 2 ಡಿಸೆಂಬರ್ 2016, 8:12 IST
ಅಕ್ಷರ ಗಾತ್ರ

– ಮಂಜುನಾಥ ಹೆಬ್ಬಾರ್‌/ ವಿಜಯ ಜೋಷಿ
ರಾಯಚೂರು: ಕಾಲೇಜಿನ ತರಗತಿ ಕೊಠಡಿಗಳನ್ನು ತೊಳೆದು ಶುದ್ಧಗೊಳಿಸ­ಲಾ­ಗಿತ್ತು. ಅಲ್ಲಿ ವಾಸ್ತವ್ಯ ಹೂಡಿದ್ದವರಿಗೆ ನೆಲವೇ ಹಾಸಿಗೆ. ಬಯಲೇ ಸ್ನಾನಗೃಹ.
ಸುಮಾರು 135 ಕಲಾವಿದರಿಗೆ ವಸತಿ ವ್ಯವಸ್ಥೆ ಕಲ್ಪಿಸಿರುವ ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಗುರುವಾರ ಸಂಜೆ ಕಂಡುಬಂದ ದೃಶ್ಯವಿದು.

ಕಾಲೇಜಿನಲ್ಲಿ ಮೂರು ಶೌಚಾಲಯ­ಗಳಿದ್ದು, ಎರಡು ಶೌಚಾಲಯಗಳನ್ನು ತರಾತುರಿಯಲ್ಲಿ ದುರಸ್ತಿಗೊಳಿಸಲಾಗಿದೆ. ಒಂದು ಶೌಚಾಲಯ ಸರಿಯಾಗುವ ಲಕ್ಷಣವೇ ಕಾಣುತ್ತಿಲ್ಲ. ಪ್ರತಿನಿಧಿಗಳ ಸ್ನಾನಕ್ಕೆಲ್ಲಿ ಜಾಗ ಎಂದು ಪ್ರಶ್ನಿಸಿದಾಗ, ಕಾಲೇಜಿನ ಪಕ್ಕದ ಬಯಲನ್ನು ತೋರಿಸಿದ ಸ್ವಯಂಸೇವಕರು ‘ಅಲ್ಲಿ ತಾತ್ಕಾಲಿಕ ಸ್ನಾನಗೃಹಗಳು ನಿರ್ಮಾಣ­ವಾಗಲಿವೆ’ ಎಂದು ಉತ್ತರಿಸಿದರು.

ಕಲಾವಿದರಿಗೆ ಮಲಗಲು ಹಾಸಿಗೆ, ಹೊದೆಯಲು ಹೊದಿಕೆ ಬಗ್ಗೆ ಕೇಳಿದಾಗ ‘ಎಲ್ಲ ವ್ಯವಸ್ಥೆಗಳನ್ನು ಒದಗಿಸುವುದಾಗಿ ವಸತಿ ವಿಭಾಗದ ಪದಾಧಿಕಾರಿಗಳು ತಿಳಿಸಿದ್ದಾರೆ, ನಾಳೆಯೊಳಗೆ ಬರಬಹುದು’ ಎಂದು ಸ್ವಯಂಸೇವಕ­ರೊಬ್ಬರು ಮಾಹಿತಿ ನೀಡಿದರು.

ಇಲ್ಲಿ ಪ್ರತಿ ಕೊಠಡಿಯಲ್ಲಿ 20 ಜನರ ವಸತಿಗೆ ವ್ಯವಸ್ಥೆ ಮಾಡಲಾಗಿದೆ. ಅತಿಥಿಗಳಿಗೆ ಸೇವೆ ನೀಡಲು 20 ವಿದ್ಯಾರ್ಥಿ­ಗಳು ಸಜ್ಜಾಗಿದ್ದಾರೆ. ಗುರುವಾರ ಸಂಜೆ ವೇಳೆಗೆ ನಾಲ್ಕೈದು ಕಲಾವಿದರು ಬಂದರು. ಇಲ್ಲಿನ ವ್ಯವಸ್ಥೆ ನೋಡಿ ಅಸಮಾಧಾನದಿಂದಲೇ ಹಿಂದಿರುಗಿದರು. ಹೆಸರು ನೋಂದಣಿ ಮಾಡಿ ಎಂದು ಸ್ವಯಂಸೇವಕರು ವಿನಂತಿಸಿದರು. ‘ಇಲ್ಲಿ ಏನೂ ಸೌಲಭ್ಯ ಇಲ್ಲ. ಈಗ ಸಂಬಂಧಿಕರ ಮನೆಗೆ ಹೋಗುತ್ತೇನೆ. ಮತ್ತೆ ಬಂದಾಗ ನೋಂದಣಿ ಮಾಡು­ತ್ತೇವೆ’ ಎಂದರು.

ವಿದ್ಯಾಭಾರತಿ ಪದವಿಪೂರ್ವ ಕಾಲೇಜಿ­ನಲ್ಲಿ ಸ್ಥಿತಿ ಇದಕ್ಕಿಂತ ಭಿನ್ನವಾ­ಗಿತ್ತು. ಇಲ್ಲಿ 300 ಮಂದಿಯ ವಸತಿಗೆ ವ್ಯವಸ್ಥೆ ಮಾಡಲಾಗಿದೆ. ಹಾಸಿಗೆ, ದಿಂಬು, ಬೆಡ್‌ಶೀಟ್‌ ಸೇರಿದಂತೆ ಸಕಲ ಸೌಲಭ್ಯ ಕಲ್ಪಿಸಲಾಗಿದೆ. ‘ನಮ್ಮದು ಖಾಸಗಿ ಕಾಲೇಜು. ಕೇಳಿದ ಕೂಡಲೇ ಎಲ್ಲ ಸವಲತ್ತು ನೀಡಿ­ದರು. ಪ್ರತಿನಿಧಿಗ­ಳನ್ನು ಚೆನ್ನಾಗಿ ನೋಡಿಕೊಳ್ಳುವ ಹೊಣೆ ನಮ್ಮದು.

ನಮ್ಮೂರನ್ನು ಹಲವು ವರ್ಷ ನೆನಪಿನಲ್ಲಿ ಇಟ್ಟುಕೊ­ಳ್ಳುವ ರೀತಿಯಲ್ಲಿ ಅವರನ್ನು ನೋಡಿಕೊಳ್ಳುತ್ತೇವೆ’ ಎಂದು ಉಪನ್ಯಾಸಕರೊಬ್ಬರು ಆತ್ಮವಿಶ್ವಾಸ­ದಿಂದ ನುಡಿದರು.
ಇಲ್ಲಿಗೆ ಸಿಂಧನೂರಿನ ಕಾಲೇಜಿನಿಂದ 20 ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಬಂದಿದ್ದಾರೆ. ‘ಸ್ವಯಂಸೇವಕರಾಗಿ ನಾವು ಹಲವು ಕಡೆಗೆ ಹೋಗಿದ್ದೇವೆ. ಎಲ್ಲಿಯೂ ಇಂತಹ ವ್ಯವಸ್ಥೆ ಇರಲಿಲ್ಲ. ಇಲ್ಲಿ ಅಚ್ಚುಕಟ್ಟಾಗಿದೆ’ ಎಂದು ಸ್ವಯಂಸೇವಕ ಮೋಹನ್‌ ಪಿಣಿ ಸಂತಸ ವ್ಯಕ್ತಪಡಿಸಿದರು.

‘ಕಲಾವಿದರಿಗೆ ಹಾಗೂ ಪ್ರತಿನಿಧಿಗಳಿಗೆ ನಗರದ ಸುತ್ತಮುತ್ತಲಿನ 20 ಕಡೆಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಗೆ ಬೆರಳೆಣಿಕೆಯ ಪ್ರತಿನಿಧಿಗಳು ಗುರುವಾರ ಬಂದಿದ್ದರು. ಬಹುತೇಕರು ನಗರ ನೋಡಲು, ಸಂಬಂಧಿಕರ ಮನೆಗೆ ತೆರಳಿದ್ದರು, ಶುಕ್ರವಾರ ಬೆಳಿಗ್ಗೆ ಬಹುತೇಕರು ಬಂದಿಳಿಯುವ ಸಾಧ್ಯತೆ ಇದೆ’ ಎಂದು ಸಂಘಟಕರು ಹೇಳಿದರು. 

ಸಾಹಿತ್ಯ ಸಮ್ಮೇಳನದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಬರುವ ಅತಿಗಣ್ಯರಿಗೆ ರಾಯಚೂರಿನ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿರುವ ವಿದೇಶಿ ವಿದ್ಯಾರ್ಥಿಗಳ ವಿದ್ಯಾರ್ಥಿನಿಲಯದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಸಮ್ಮೇಳನದ ಅಧ್ಯಕ್ಷರಾದ ಡಾ. ಬರಗೂರು ರಾಮಚಂದ್ರಪ್ಪ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ, ಕಳೆದ ಬಾರಿಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ ಅವರಿಗೆ ಈ ಕಟ್ಟಡದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಇಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಅವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ.

ಇದಲ್ಲದೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕೂಡ ವಿಶ್ವವಿದ್ಯಾಲಯದ ಆವರಣದಲ್ಲಿ ವಸತಿ ವ್ಯವಸ್ಥೆ ಇದೆ. ಗೋಷ್ಠಿಗಳಲ್ಲಿ ಪಾಲ್ಗೊಳ್ಳುವ ಸಂಪನ್ಮೂಲ ವ್ಯಕ್ತಿಗಳಿಗೆ ನಗರದ ಹೋಟೆಲ್‌ಗಳಲ್ಲಿ ವಸತಿ ಕಲ್ಪಿಸಲಾಗಿದೆ.

ವಿಶ್ವವಿದ್ಯಾಲಯದ ಆವರಣದ­ಲ್ಲಿರುವ ವಿದ್ಯಾರ್ಥಿ ನಿಲಯಗಳಲ್ಲಿ ಪ್ರತಿನಿಧಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದ್ದು, ಗುರುವಾರ ಸಂಜೆಯ ವೇಳೆಗೆ ಪ್ರತಿನಿಧಿಗಳು ಒಬ್ಬೊಬ್ಬರಾಗಿ ಅಲ್ಲಿಗೆ ಬರುವುದು ಆರಂಭವಾಗಿತ್ತು. ಸಮ್ಮೇಳನದ ಆಯೋಜಕರು ವಿದ್ಯಾರ್ಥಿ ನಿಲಯಗಳ ಎದುರು ಸ್ವಯಂ­ಸೇವಕರನ್ನು ನೇಮಿಸಿ, ಬರುವ ಅತಿಥಿಗಳಿಗೆ ನೆರವಾಗಲು ಸೂಚಿಸಿದ್ದರು.

ಬಹುತೇಕ ಪ್ರತಿನಿಧಿಗಳು ಶುಕ್ರವಾರ ಬೆಳಿಗ್ಗೆ ಬರುತ್ತಾರೆ ಎಂದು ಸ್ವಯಂ­ಸೇವಕರೊಬ್ಬರು ತಿಳಿಸಿದರು. ವಸತಿ ನಿಲಯಗಳ ಸಮೀಪದಲ್ಲೇ ಊಟದ ಕೌಂಟರ್‌ಗಳನ್ನು ತೆರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT