ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಂಡಾಯ’ ಬರಹಗಾರರಿಗೆ ಇಂದಿಗೂ ಇಷ್ಟದ ವಸ್ತು

‘ದಲಿತ, ಬಂಡಾಯ ಸಾಹಿತ್ಯ ಮತ್ತು ಚಳವಳಿಗಳು‘ ಗೋಷ್ಠಿಯಲ್ಲಿ ಸಾಹಿತಿ ಡಾ.ಎಲ್. ಹನುಮಂತಯ್ಯ ಅಭಿಮತ
Last Updated 3 ಡಿಸೆಂಬರ್ 2016, 9:13 IST
ಅಕ್ಷರ ಗಾತ್ರ

ಶಾಂತರಸ ಪ್ರಧಾನ ವೇದಿಕೆ (ರಾಯಚೂರು): ‘ಸಾಮಾಜಿಕ ಅಸಮಾನತೆ ಕೊನೆಗೊಳ್ಳುವವರೆಗೆ ದಲಿತ ಮತ್ತು ಬಂಡಾಯ ಸಾಹಿತ್ಯದ ವಸ್ತು ಲೇಖಕರಲ್ಲಿ ಜೀವಂತವಾಗಿರುತ್ತದೆ. ಹೊಸ ತಲೆಮಾರಿನ ಯುವಕರಿಗೂ ದಲಿತ ಹಾಗೂ ಬಂಡಾಯ ಸಾಹಿತ್ಯದ ವಸ್ತು ಇಷ್ಟ’ ಎಂದು ಸಾಹಿತಿ ಡಾ.ಎಲ್. ಹನುಮಂತಯ್ಯ ಹೇಳಿದರು.
82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ‘ದಲಿತ, ಬಂಡಾಯ ಸಾಹಿತ್ಯ ಮತ್ತು ಚಳವಳಿಗಳು‘ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೊಸ ತಲೆಮಾರಿನವರು ಬರೆಯುತ್ತಿರುವ ರೀತಿ ಭಿನ್ನವಾಗಿದೆ. ಆದರೆ ಅವರು ಜಾತಿ, ವರ್ಗ, ಸಾಮಾಜಿಕ ಪಲ್ಲಟಗಳ ಬಗ್ಗೆಯೇ ಬರೆಯುತ್ತಿದ್ದಾರೆ’ ಎಂದರು.

‘ಪ್ರಜಾವಾಣಿ’ ಗಮನಿಸಿ:
‘ಕನ್ನಡ ಪತ್ರಿಕೆಗಳ, ಅದರಲ್ಲೂ ಮುಖ್ಯವಾಗಿ ‘ಪ್ರಜಾವಾಣಿ’ಯ ಕಥಾಸ್ಪರ್ಧೆಗಳಲ್ಲಿ ಬರೆಯುವ ಯುವ ಬರಹಗಾರರನ್ನು ಗಮನಿಸಬೇಕು. ಅವರ ಬರಹಗಳಲ್ಲಿ ಬಂಡಾಯದ ಭಾಷೆ ಇದೆ’ ಎಂದು ಹೇಳಿದರು.

‘ಇಂದಿನ ಲೇಖಕರಿಗೆ ಪ್ರೇರಣೆ ನೀಡಬಲ್ಲ ಯಾವ ಚಳವಳಿಯೂ ಇಲ್ಲ. ಹಾಗಾಗಿ, ಅಕಾಡೆಮಿಗಳು ಹಾಗೂ ಹಿರಿಯ ಲೇಖಕರು ಕಿರಿಯರಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಬೇಕು’ ಎಂದು ಸಲಹೆ ನೀಡಿದರು.

ಪ್ರಾಧ್ಯಾಪಕ ಡಾ. ಚಿನ್ನಸ್ವಾಮಿ ಸೋಸಲೆ ಮಾತನಾಡಿ ‘ಇಂಗ್ಲಿಷ್ ಶಿಕ್ಷಣ ಪಡೆದಿದ್ದ ಕೆಲವರು ಹಾಗೂ ಕೆಲವು ಮಾರ್ಕ್ಸ್ ವಾದಿಗಳು ರಾಜ್ಯದಲ್ಲಿ ದಲಿತ ಚಳವಳಿಗೆ ದೊಡ್ಡ ಕೊಡುಗೆ ನೀಡಿದರು. ಅಸ್ಪೃಶ್ಯರ ಸಾಹಿತ್ಯಕ್ಕೆ ಬ್ರಾಹ್ಮಣೇತರ ಸಾಹಿತಿಗಳ ಕೊಡುಗೆ ದೊಡ್ಡದು’ ಎಂದು ಅಭಿಪ್ರಾಯಪಟ್ಟರು.

‘ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮೈಸೂರು ಪ್ರವೇಶಿಸಲು ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಸಾಧ್ಯವಾಗಲಿಲ್ಲ. ನಮ್ಮಲ್ಲಿ ಅಲಿಖಿತ ಸಂವಿಧಾನ ಆಡಳಿತ ನಡೆಸುತ್ತಿದೆ. ಲಿಖಿತ ಸಂವಿಧಾನಕ್ಕೆ ಎಲ್ಲರೂ ಬೆಲೆ ಕೊಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ನೀನಾರಾಯಣ ನಾಗವಾರ ಮಾತನಾಡಿ, ‘ಕೆಲವು ಪ್ರಗತಿಪರರು ಮೇಲೆ ಬರಲು ಮಾತ್ರ ಜಾತೀಯತೆಯ ಬಗ್ಗೆ ಮಾತನಾಡುತ್ತಾರೆ. ಆದರೆ, ಆಂತರ್ಯದಲ್ಲಿ ಅವರು ಎಷ್ಟು ಶುದ್ಧರು ಎಂಬುದು ಪ್ರಶ್ನಾರ್ಹವಾಗಿಯೇ ಉಳಿದಿರುತ್ತದೆ’ ಎಂದರು.

‘ದುಡಿಮೆ ಕೊಡಿ, ಪುಕ್ಕಟೆ ಕೊಡುಗೆ ಬೇಡ’
ರಾಯಚೂರು: ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಇಂದಿರಾ ಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ತೇಜಸ್ವಿ ಕಟ್ಟಿಮನಿ, ‘ದಲಿತರು ದುಡಿಯಲು ಸಿದ್ಧರಿದ್ದಾರೆ. ಸರ್ಕಾರಗಳು ಅವರಿಗೆ ದುಡಿಮೆಯ ಮಾರ್ಗ ದೊರಕಿಸಬೇಕು. ಪುಕ್ಕಟ್ಟೆಯಾಗಿ ಅದು-ಇದು ಕೊಡುವುದು ಸರಿಯಲ್ಲ’ ಎಂದರು.

‘ಸತತ ಐದು ವರ್ಷ ಪಡಿತರ ಅಕ್ಕಿಗೆ ಹೊಂದಿಕೊಂಡ ಜನರ ಪರಿಸ್ಥಿತಿ, ಕೊನೆಗೊಂದು ದಿನ ಅಕ್ಕಿ ಸಿಗುವುದು ನಿಂತಾಗ ಏನಾಗಬಹುದು. ಪುಕ್ಕಟ್ಟೆಯಾಗಿ ಏನಾದರೂ ಕೊಡುವುದಿದ್ದರೆ ಶಿಕ್ಷಣ, ಕೌಶಲ ತರಬೇತಿ ಕೊಡಿ’ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

‘ಅನುಕೂಲಸ್ಥ ದಲಿತರು, ದಲಿತರಿಗೆ ಸರ್ಕಾರ ಕೊಡುವ ಸವಲತ್ತುಗಳನ್ನು ಪಡೆಯಬಾರದು. ಅಂಥ ಸವಲತ್ತುಗಳನ್ನು ಬಡ ದಲಿತರ ಮಕ್ಕಳಿಗೆ ಬಿಟ್ಟುಕೊಡಬೇಕು. ನಾನು ಕೂಡ ಈ ಮಾತನ್ನು ಪಾಲಿಸುತ್ತಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT