ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೈ.ಕ ಭಾಗಕ್ಕೆ ರಾಜ್ಯ ಸರ್ಕಾರ, ಮಾಧ್ಯಮದಿಂದಲೂ ಅನ್ಯಾಯ’

ಪ್ರಾದೇಶಿಕ ಅಸಮಾನತೆ: ಅಭಿವೃದ್ಧಿ ಸವಾಲುಗಳ ಗೋಷ್ಠಿ
Last Updated 3 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಶಾಂತರಸ ಪ್ರಧಾನ ವೇದಿಕೆ (ರಾಯಚೂರು): ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಸರ್ಕಾರವೇ ಅನ್ಯಾಯ ಮಾಡುತ್ತಿದೆ ಎಂಬ ಆಕ್ರೋಶ, ಸೌಲಭ್ಯ ಪಡೆಯಲು ಈ ಭಾಗದ ರಾಜಕಾರಣಿಗಳು ಒಟ್ಟಾಗಿ ಹೋರಾಟ ಮಾಡುತ್ತಿಲ್ಲ ಎಂಬ ಕೊರಗು, ಮಾನಸಿಕ ದಾರಿದ್ರ್ಯದಿಂದ ಹೊರಬಂದು ಹೆಚ್ಚು ದುಡಿದು ಪ್ರಗತಿ ಹೊಂದೋಣ ಎಂಬ ಆಶಯಕ್ಕೆ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆ ದಿನವಾದ ಶನಿವಾರ ಪಂಡಿತ್‌ತಾರಾನಾಥ ಮಹಾಮಂಟಪದಲ್ಲಿ ನಡೆದ ‘ಪ್ರಾದೇಶಿಕ ಅಸಮಾನತೆ: ಅಭಿವೃದ್ಧಿಯ ಸವಾಲುಗಳು’ ಗೋಷ್ಠಿ ಸಾಕ್ಷಿಯಾಯಿತು.

‘ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ 371 (ಜೆ) ತಿದ್ದುಪಡಿಯಿಂದ ವಿಶೇಷ ಸ್ಥಾನಮಾನ ದೊರೆತಿದ್ದು, ಅದರಿಂದಲೇ ಸರ್ವಾಂಗೀಣ ಅಭಿವೃದ್ಧಿ ಆಗುತ್ತದೆ ಎಂಬ ಭ್ರಮೆ ಬೇಡ’ ಎಂಬ ಎಚ್ಚರಿಕೆಯ ಸಂದೇಶವೂ ಮೊಳಗಿತು.

‘ಪ್ರಾದೇಶಿಕ ಅಸಮಾನತೆ: ರಾಜಕೀಯ ಇಚ್ಛಾಶಕ್ತಿ’ ವಿಷಯವಾಗಿ ಮಾತನಾಡಿದ ಆಳಂದ ಶಾಸಕ ಬಿ.ಆರ್. ಪಾಟೀಲ, ‘ಹಳೆ ಮೈಸೂರು ಭಾಗದ ಜನ ಇವತ್ತಿಗೂ ನಮ್ಮನ್ನು ತಮ್ಮವರು ಎಂದು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತಿಲ್ಲ. ರಾಜ್ಯ ಸರ್ಕಾರದ ಸಚಿವಾಲಯದಲ್ಲಿ ಶೇ 90ರಷ್ಟು ಅಧಿಕಾರಿ-ಸಿಬ್ಬಂದಿ ಹಳೆಮೈಸೂರು ಭಾಗದವರಾಗಿದ್ದು, ನಮ್ಮನ್ನು ಅಸಡ್ಡೆಯಿಂದ ಕಾಣುತ್ತಿದ್ದಾರೆ. ಬೆಂಗಳೂರು ಕೇಂದ್ರಿತ ಮಾಧ್ಯಮಗಳೂ ನಮ್ಮ ಭಾಗದ ಬರ-ಜಲದ ಸಮಸ್ಯೆಗಳಿಗೆ ಅಷ್ಟಾಗಿ ಸ್ಪಂದಿಸುವುದಿಲ್ಲ’ ಎಂದು ದೂರಿದರು.

‘ನಮ್ಮಲ್ಲಿ ಇನ್ನೂ ಗುಲಾಮಗಿರಿ ಮನೋಭಾವ ಇದೆ. ಬಡತನವೇ ನಮಗೆ ಶಾಪವಾಗಿದೆ. ಹೈದರಾಬಾದ್ ಕರ್ನಾಟಕದ ರಾಜಕೀಯ ಇಚ್ಛಾಶಕ್ತಿ ದುರ್ಬಲವಾಗಿದೆ. ನಮಗೆ ಬೇಕಿರುವುದು ಹಂಗಿನ ಸೌಲಭ್ಯ ಅಲ್ಲ, ಹಕ್ಕಿನ ಸೌಲಭ್ಯ’ ಎಂದರು.

‘371 (ಜೆ) ಕಾಯ್ದೆ ಜಾರಿಯಾದ ನಂತರ ರಾಜ್ಯ ಸರ್ಕಾರ ಈ ಪ್ರದೇಶದಲ್ಲಿ ಒಂದೇ ಒಂದು ಪ್ರೌಢ ಶಾಲೆ, ಪದವಿ ಪೂರ್ವ ಮತ್ತು ಪದವಿ ಕಾಲೇಜು ಆರಂಭಿಸಿಲ್ಲ. ಸರ್ಕಾರದಲ್ಲಿರುವವರ ಕುತಂತ್ರ ಒಂದೆಡೆಯಾದರೆ, ನಾವೆಲ್ಲ ಜನಪ್ರತಿನಿಧಿಗಳು ಒಟ್ಟಾಗಿ ವಿಧಾನ ಮಂಡಲದಲ್ಲಿ ಹೋರಾಡುತ್ತಿಲ್ಲ. ಹಳೆ­ಮೈಸೂರು ಭಾಗದ ಜನಪ್ರತಿನಿಧಿಗಳಲ್ಲಿ ಇರುವಷ್ಟು ಅಭಿವೃದ್ಧಿಯ ಕಳಕಳಿಯೂ ನಮಗಿಲ್ಲ. ಮಡಿವಂತಿಕೆ ರಾಜ­ಕಾರಣದಿಂದಲೇ  ನಾವು ಹಿಂದೆ ಬಿದ್ದಿದ್ದೇವೆ' ಎಂದು ಹೇಳಿದರು.

‘ಪ್ರಾದೇಶಿಕ ಅಸಮಾನತೆಯ ಸ್ವರೂಪಗಳು' ವಿಷಯ ಮಂಡಿಸಿದ ಹಿರಿಯ ಪತ್ರಕರ್ತ ಎಂ.ಕೆ. ಭಾಸ್ಕರರಾವ್, ‘ಹಿಂದಿನ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 24 ವರ್ಷಗಳಲ್ಲಿ ಬಂದ ಅನುದಾನ ಕೇವಲ ₹962 ಕೋಟಿ. ಹಳೆ ಮೈಸೂರು ಭಾಗದವರು ಅಲ್ಲ, ಇಲ್ಲಿಯ ಶಾಸಕರು– ಸಂಸದರೇ ಅದರ ಸದಸ್ಯರಾಗಿದ್ದರು. ಹೆಚ್ಚು ಅನುದಾನ ಪಡೆಯಲು ಅವರೆಲ್ಲ ಒಟ್ಟಾಗಿ ಸರ್ಕಾರದ ಮೇಲೆ ಒತ್ತಡ ಹೇರಲಿಲ್ಲ. ಈ ಭಾಗದ ಪಕ್ಷ ರಾಜಕಾರಣ ಅಭಿವೃದ್ಧಿ ರಾಜಕೀಯಕ್ಕೆ ಹೊರಳೇ ಇಲ್ಲ. ತಮ್ಮ ನೋವು ಹೇಳಿಕೊಳ್ಳಲು ಸಂಘಟಿತ ಧ್ವನಿಯಾಗದಿರುವುದು ಸಮಸ್ಯೆಗೆ ಕಾರಣ' ಎಂದರು.

‘ಅನುದಾನ ಕಡಿಮೆ ಬಂತು ನಿಜ. ಬಂದ ಅನುದಾನವನ್ನು ಅಗಸಿ ಕಟ್ಟೆ, ಕಮಾನು, ಸಮುದಾಯ ಭವನಗಳ ನಿರ್ಮಾಣಕ್ಕೆ ವಿನಿಯೋಗಿಸ ಲಾಯಿತೇ ವಿನಾ ಕೆರೆ-ಕಟ್ಟೆಯಂತಹ ಅಭಿವೃದ್ಧಿ ಯೋಜನೆಗಳಿಗೆ ಬಳಸಲಿಲ್ಲ. ಇನ್ನು ನಂಜುಂಡಪ್ಪ ವರದಿ ಅನ್ವಯ ವಿಶೇಷ ಅನುದಾನ ಬಿಡುಗಡೆಯಾದರೂ, ಅದರಲ್ಲಿ ಖರ್ಚು ಮಾಡಿದ್ದು ಅರ್ಧದಷ್ಟನ್ನು ಮಾತ್ರ. ವಿಶೇಷ ಅಭಿವೃದ್ಧಿಯ ಅನುದಾನ ಸೂಚಿತ ಕೆಲಸಗಳಿಗೆ ವಿನಿಯೋಗವಾಗುವ ಬದಲು ಕೃಷ್ಣಾ ಭಾಗ್ಯ ಜಲ ನಿಗಮದ ಬಾಂಡ್‌ಗಳಿಗೆ ಹಣ ಮರಳಿಸಲು ಹಾಗೂ ಸಾರಿಗೆ ಸಂಸ್ಥೆಗೆ ಬಸ್ ಖರೀದಿಸಲು ಬಳಸಿದ್ದು ಪ್ರಮಾದ’ ಎಂದು ಅವರು ಹೇಳಿದರು.

‘371 ಜೆ ಕಲಂ ಅಡಿಯಲ್ಲಿ ಇರುವ ಸೌಲಭ್ಯಗಳು ಮತ್ತು ಅನುಷ್ಠಾನದ ಸವಾಲುಗಳು' ಕುರಿತು ಮಾತನಾಡಿದ ಹೋರಾಟಗಾರ ಅಬ್ದುಲ್ ರಜಾಕ್ ಉಸ್ತಾದ್, ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದರು. ‘ರಾಯಚೂರು ಜಿಲ್ಲೆಗೆ ನಿರಂತರ ವಿದ್ಯುತ್ ಪೂರೈಸದಿದ್ದರೆ ಇಲ್ಲಿರುವ ಎರಡೂ ವಿದ್ಯುತ್ ಯೋಜನೆಗಳನ್ನು ಬಂದ್ ಮಾಡಿಸುವ ಪ್ರಸಂಗ ಬರಲಿದೆ’ ಎಂದು ಎಚ್ಚರಿಸಿದರು.

‘371 (ಜೆ) ಕಾನೂನು ರೂಪಿಸಲು ರಚನೆಯಾಗಿದ್ದ ಎಚ್.ಕೆ. ಪಾಟೀಲ ನೇತೃತ್ವದ ಸಚಿವ ಸಂಪುಟ ಉಪಸಮಿತಿಯ 25 ಶಿಫಾರಸು ಅನುಷ್ಠಾನಗೊಳಿಸುವ ವಚನ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರುವರ್ಷವಾದರೂ ಗಮನ ಹರಿಸಿಲ್ಲ. ನಾವು ಅವರ ಮೇಲೆ ವಿಶ್ವಾಸವನ್ನೇ ಕಳೆದುಕೊಂಡಿದ್ದೇವೆ. ರಾಜ್ಯಪಾಲರ ಮೊರೆ ಹೋದರೂ ಪ್ರಯೋಜನವಾಗಿಲ್ಲ’ ಎಂದರು.

ಉದ್ಯೋಗ, ಶಿಕ್ಷಣದಲ್ಲಿ ಈ ಭಾಗದವರಿಗೆ ಮೀಸಲಾಗಿ ದೊರೆಯುತ್ತಿಲ್ಲ. ಹೈ.ಕ. ವಿದ್ಯಾರ್ಥಿಗಳಿಗೆ ಶೇ 8ರಷ್ಟು ಶೈಕ್ಷಣಿಕ ಮೀಸಲಾತಿ ನೀಡಬೇಕು ಎಂಬ ನಿಯಮಕ್ಕೆ ಕೆಎಲ್ಇ, ಜೆಎಸ್ಎಸ್, ಮಣಿಪಾಲ ಶಿಕ್ಷಣ ಸಂಸ್ಥೆಗಳು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿವೆ. ಆ ಸಂಸ್ಥೆಯವರು ಎಂತಹ ದಾರ್ಶನಿಕರು? ನಮ್ಮ ಮಕ್ಕಳಿಗೆ ಮೂರು ವರ್ಷದಿಂದ ಸೌಲಭ್ಯ ನೀಡದ ನಯವಂಚಕ ವಿಶ್ವವಿದ್ಯಾಲಯದವರು, ಈ ಭಾಗದ ಬಸವರಾಜ ರಾಯರಡ್ಡಿ ಉನ್ನತ ಶಿಕ್ಷಣ ಸಚಿವರಾದ ನಂತರ ನಿಲುವು ಬದಲಿಸಿ ಸೌಲಭ್ಯ ನೀಡುತ್ತಿವೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ, ‘ರಾಜಕೀಯ ನೇತೃತ್ವದ ಅಭಾವ ಇದೆ ಎಂಬುದು ನಿಜ. ಆರಂಭದಿಂದಲೂ ನಾವು ರಾಜಕಾರಣಿಗಳು ಒಂದಾಗಬೇಕಿತ್ತು. ರಾಯಚೂರಿಗೆ ಐಐಟಿ ಮಂಜೂರು ಮಾಡಿ ಎಂದು ಈ ಭಾಗದ ಎಲ್ಲ ಪ್ರತಿನಿಧಿಗಳು ಒಟ್ಟಾಗಿ ಕೇಳಿದರೂ ಫಲ ದೊರೆಯಲಿಲ್ಲ. ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಗಿ ಮೂರು ವರ್ಷ ಕಳೆದಿದ್ದರೂ ಅದರ ಸಾಮಾನ್ಯ ಸಭೆ ಈ ವರೆಗೂ ನಡೆದಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.

ನಾವು ದಂಗೆ ಎದ್ದರೆ...
‘ರಾಜ್ಯದ ಇತರೆ ಭಾಗದಲ್ಲಿ ಕೆಲಸ ಮಾಡುತ್ತಿರುವ ಹೈದರಾಬಾದ್ ಕರ್ನಾಟಕದ ಅಧಿಕಾರಿಗಳು, ನೌಕರರು, ಉಪನ್ಯಾಸಕರನ್ನು ಸರ್ಕಾರ ಒತ್ತಾಯಪೂರ್ವಕವಾಗಿ ಈ ಭಾಗಕ್ಕೆ ವರ್ಗಾಯಿಸುತ್ತಿದೆ. ನಮ್ಮಲ್ಲಿರುವ ಇತರೆ ಜಿಲ್ಲೆಗಳ ಶಿಕ್ಷಕರು, ನೌಕರರು ಇಲ್ಲಿಂದ ಹೊರಹೋಗಬೇಕು ಎಂದು ನಾವು ದಂಗೆ ಎದ್ದರೆ ಹೇಗೆ ಎಂಬ ಬಗ್ಗೆಯೂ ಸರ್ಕಾರ ವಿಚಾರ ಮಾಡಬೇಕು’ ಎಂದು ಹೋರಾಟಗಾರ ಅಬ್ದುಲ್ ರಜಾಕ್ ಉಸ್ತಾದ ಹೇಳಿದರು.

* ನಾನು ಪ್ರತ್ಯೇಕ ರಾಜ್ಯದ ವಿರೋಧಿ.  371 ಕಲಂ ಜಾರಿಯ ನಂತರವೂ ತೆಲಂಗಾಣ ಪ್ರತ್ಯೇಕ ರಾಜ್ಯವಾಯಿತು. ಅಂತಹ ಸ್ಥಿತಿ ನಮಗೂ ಬರಬಾರದು.
-ಬಿ.ಆರ್. ಪಾಟೀಲ, ಆಳಂದ ಕೆಜೆಪಿ ಶಾಸಕ

*ನಾವು ಹಿಂದುಳಿದಿದ್ದೇವೆ ಎಂಬ ಮಾನಸಿಕ ದಾರಿದ್ರ್ಯದಿಂದ ಹೊರ ಬರಬೇಕು. ಸೌಲಭ್ಯ ಕೊಡಿ...ಎಂದು ಭಿಕ್ಷೆ ಬೇಡುವುದನ್ನು ಬಿಟ್ಟು ಹಕ್ಕು ಪ್ರತಿಪಾದಿಸಬೇಕು. ಕೈಚಾಚಿ ಕೇಳುವುದರಿಂದಲೇ ವಿಕಾಸ ಆಗುವುದಿಲ್ಲ. ನಮ್ಮ ಬಲದ ಮೇಲೆ ಅಭಿವೃದ್ಧಿ ಹೊಂದುವ ಸಂಕಲ್ಪದೊಂದಿಗೆ ನಿತ್ಯ 2 ಗಂಟೆ ಹೆಚ್ಚು ಕೆಲಸ ಮಾಡಬೇಕು.
-ಬಸವರಾಜ ಪಾಟೀಲ ಸೇಡಂ,  ರಾಜ್ಯಸಭಾ ಸದಸ್ಯ

*ಕಾನೂನುಬದ್ಧ ಸೌಲಭ್ಯ ನೀಡದೇ ರಾಜ್ಯ ಸರ್ಕಾರವೇ ನಮ್ಮಲ್ಲಿ ಪ್ರತ್ಯೇಕತೆಯ ಭಾವನೆ ಮೂಡಿಸುತ್ತಿದೆ. 371 (ಜೆ) ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಪ್ರತ್ಯೇಕ ಸಚಿವಾಲಯ ಆರಂಭಿಸಿ, ಅದಕ್ಕೆ ಒಬ್ಬ ಸಚಿವ, ಪ್ರಧಾನ ಕಾರ್ಯದರ್ಶಿಯನ್ನು ನೇಮಿಸಬೇಕು. ನಮ್ಮಲ್ಲಿ ರುವ ಅನಾಥ ಪ್ರಜ್ಞೆ ನಿವಾರಿಸಬೇಕು.
ಅಬ್ದುಲ್ ರಜಾಕ್ ಉಸ್ತಾದ್,  ಹೋರಾಟಗಾರ

*ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಈಗ ಕಲಬುರ್ಗಿ ಕೇಂದ್ರಿತ ಅಭಿವೃದ್ಧಿಯಾಗುತ್ತಿದೆ. ಎಲ್ಲವೂ ಕಲಬುರ್ಗಿಗೆ ಬೇಕು ಎಂಬುದು ಸರಿಯಲ್ಲ. ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ರಾಯಚೂರಿನಲ್ಲಿ ಸ್ಥಾಪನೆಯಾಗುವಂತೆ ಎಲ್ಲರೂ ಒತ್ತಡ ತರಬೇಕು.
ಎಂ.ಕೆ. ಭಾಸ್ಕರರಾವ್,  ಹಿರಿಯ ಪತ್ರಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT