ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಶ್ರೇಷ್ಠ, ರಾಜಕಾರಣ ಕನಿಷ್ಠ ಎಂಬ ಅವಜ್ಞೆ ಬೇಡ

Last Updated 3 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

(ಶಾಂತರಸ ಪ್ರಧಾನ ವೇದಿಕೆ) ರಾಯಚೂರು: ‘ಸಾಹಿತ್ಯ ಶ್ರೇಷ್ಠ, ರಾಜಕಾರಣ ಕನಿಷ್ಠ ಎಂಬ ಅವಜ್ಞೆ ಬೇಡ. ಎರಡೂ ಪರಸ್ಪರ ವಿಮರ್ಶೆಗೆ ಒಳಪಡಬೇಕು' ಎಂದು ಹಿರಿಯ ರಾಜಕಾರಣಿ ಅಡ ಗೂರು ಎಚ್.ವಿಶ್ವನಾಥ ಹೇಳಿದರು.

82 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆ ದಿನ ವಾದ ಶನಿವಾರ ಪಂಡಿತ ತಾರಾನಾಥ ಮಹಾಮಂಪಟದಲ್ಲಿ ನಡೆದ :ಸಂಸ್ಕೃತಿ ಮತ್ತು ರಾಜಕಾರಣ' ಕುರಿತ ಚಿಂತನಾ ಗೋಷ್ಠಿಯಲ್ಲಿ ‘ರಾಜಕೀಯ ಮತ್ತು ಸಾಮಾಜಿಕ ಚಲನೆ’ ವಿಷಯ ಕುರಿತು ಮಾತನಾಡಿದರು.
‘ರಾಜಕೀಯ ಬಿಟ್ಟು ಸಾಹಿತ್ಯ ಇಲ್ಲ, ಸಾಹಿತ್ಯ ಬಿಟ್ಟು ರಾಜಕಾರಣ ಇಲ್ಲ. ಇವೆರಡೂ ಪೂರಕವಾಗಿ ಚಲಿಸಿದಾಗಲೇ ಪ್ರಜಾಪ್ರಭುತ್ವದ ಬಂಡಿ ಸರಾಗವಾಗಿ ಚಲಿಸಲು ಸಾಧ್ಯ. ಎರಡೂ ಪರಸ್ಪರ ಪ್ರೇರಕ ಮತ್ತು ಪೂರಕವಾಗಿರಬೇಕು’ ಎಂದು ಹೇಳಿದರು.

‘ರಾಮಾಯಣ, ಮಹಾಭಾರತದಲ್ಲಿ ರಾಜಕಾರಣ ಇದೆ. ಇವೆರಡೂ ಮಹಾಕಾವ್ಯಗಳ ಆತ್ಮ ರಾಜಕಾರಣವೇ ಆಗಿದೆ ರಾಜಕಾರಣವನ್ನು ಮೈಲಿಗೆಯಿಂದ ನೋಡುವ ಮನಸ್ಸು ಬೇಡ.  ಸಾಹಿತಿಗಳು ರಾಜಕಾರಣದ ಬಗ್ಗೆ ಅವಜ್ಞೆ, ಮೈಲಿಗೆಯಿಂದ ನೋಡುವುದು ಕೊನೆ ಆಗಬೇಕು. ಸಾಹಿತ್ಯ ಸಮ್ಮೇಳನಗಳಲ್ಲಿ ದೀಪ ಹಚ್ಚಿ ಹೋಗುವುದಕ್ಕಷ್ಟೇ ರಾಜಕಾರಣಿ ಸೀಮಿತವಾಗಬಾರದು. ರಾಜಕಾರಣಿ ತನ್ನ ಅನುಭವವನ್ನು ವೇದಿಕೆ ಮೂಲಕ ಹಂಚಿಕೊಳ್ಳಲು ಅವಕಾಶ ಸಿಗಬೇಕು’ ಎಂದು ಅಭಿಪ್ರಾಯಪಟ್ಟರು.

‘ರಾಜಕಾರಣಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪರಂಪರೆ ಬೆಳೆಯಬೇಕು. ಶಂಕರ ಮೊಕಾಶಿ ಪುಣೇಕರ ಅವರು ಬರೆದ ವೇದಕಾಲೀನ ರಾಜಕೀಯ ಕಾದಂಬರಿ ‘ಅವಧೇಶ್ವರಿ’ಗೆ ಜ್ಞಾನಪೀಠ ಸಿಗಬೇಕಿತ್ತು. ಆದರೆ, ಅದು ರಾಜಕೀಯ ಕಾದಂಬರಿ ಎನ್ನುವ ಕಾರಣಕ್ಕೆ ಹೊರಗಿಡಲಾಯಿತು. ಸಾಹಿತ್ಯ ವಲಯಕ್ಕೆ ರಾಜಕಾರಣ ಅಸಹನೀಯ ಎಂಬುದಕ್ಕೆ ಇದು ಸಂಕೇತ ಎಂಬುದನ್ನು ತೋರಿಸುತ್ತದೆ. ಮುಂದಿನ ದಿನಗಳಲ್ಲಿ ಇಂತಹ ಮನೋಭಾವ ಬದಲಾಗಬಹುದು’ ಎಂಬ ಆಶಯ ವ್ಯಕ್ತಪಡಿಸಿದರು.

‘ಸುಸಂಸ್ಕೃತ ಎನಿಸಿಕೊಳ್ಳಲು ಸಾಹಿತಿಗಳು ರಾಜಕಾರಣದಿಂದ ದೂರ ಉಳಿಯಬೇಕಾಗಿಲ್ಲ. ರಾಜಕಾರಣಿಗಳು ಬರೆದ ಪುಸ್ತಕಗಳಿಗೆ ನಿಮ್ಮ ಕಪಾಟಿನಲ್ಲಿ ಜಾಗ ಇರಲಿ ಮತ್ತು ನಾವು ಬರೆಯುವ ಕೃತಿಗಳನ್ನು ವಿಮರ್ಶೆಗೆ ಒಳಪಡಿಸಬೇಕು’ ಎಂದು ವಿಶ್ವನಾಥ ಹೇಳಿದರು.

‘ಧರ್ಮ ಮತ್ತು ರಾಜಕಾರಣ’ ವಿಷಯ ಕುರಿತು ಜೆಡಿಎಸ್ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ಧರ್ಮ ಎನ್ನುವುದಕ್ಕಿಂತ ಪ್ರಸ್ತುತ ಸಂದರ್ಭದಲ್ಲಿ ಜಾತಿ ಮತ್ತು ರಾಜಕೀಯ ಒಂದ ರೊಳಗೊಂದು ಬೆರೆತು ಅನಾರೋಗ್ಯಕರ ಸಾಮಾಜಿಕ ವ್ಯವಸ್ಥೆಗೆ ಕಾರಣವಾಗಿದೆ’ ಎಂದು ಹೇಳಿದರು.

ಕವಿ ಜಿ.ಎಸ್.ಶಿವರುದ್ರಪ್ಪ ಅವರ ‘ದುಃಸ್ವಪ್ನ’ ಕವಿತೆಯ ಸಾಲುಗಳನ್ನು ಉದಾಹರಿಸಿದ ದತ್ತ ಅವರು, ‘ಇಲಿ, ಹೆಗ್ಗಣಗಳು ಸಿಂಹಾಸನದ ಮೇಲೆ ಓಡಾಡುತ್ತಿವೆ, ಕೊಳಕು ಮಂಡಲಗಳು ಏಳು ಹೆಡೆ ಬಿಚ್ಚಿ ಕೊಳಚೆ ನೀರಿನಲಿ ಜಲ ಕ್ರೀಡೆ ಆಡುತ್ತಿವೆ. ಸರಸ್ವತಿ ಮುಂದಿನ ಶ್ವೇತ ಚಾಮರಗಳು ರಾಜಕಾರಣಿಗಳ ಮುಂದಿನ ಪೊರಕೆ ಆಗಿವೆ' ಎಂದು ಅವರು ಸಮಕಾಲೀನ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗೆ ಸಮೀಕರಿಸಿದರು.

‘ಎಲ್ಲ ಧರ್ಮಗಳ  ಮೂಲಭೂತವಾದಿಗಳು ಸಮಾನ ಮನಸ್ಕರು. ಇವರೆಲ್ಲ ಒಂದೇ ರಾಕ್ಷಸನ ಎರಡು- ಮೂರು ಮುಖಗಳು.  ಯಥಾಸ್ಥಿತಿ ವಾದ ಬಯಸುವ ಮತ್ತು ಆ ಮೂಲಕ ಶೋಷಣೆಯ ಅಸ್ತ್ರವಾಗಿಸಿಕೊಳ್ಳುವ ಹುನ್ನಾರಹೊಂದಿದ್ದಾರೆ. ಇದಕ್ಕೆಲ್ಲ ಮದ್ದು ಅಲ್ಲಮನ ತಾತ್ವಿಕತೆ, ಬಸವಣ್ಣನ ಕ್ರಿಯಾ ಶೀಲತೆ ಮತ್ತು ಅಂಬಿಗರ ಚೌಡಯ್ಯನ ಆಕ್ರೋಶ’ ಎಂದು ಹೇಳಿದರು.

‘ಅಕ್ರಮ ಗಣಿಗಾರಿಕೆ ಹಣ, ರಿಯಲ್ ಎಸ್ಟೇಟ್ ಹಣ ಚುನಾವಣೆಗೆ ಹಂಚಲಿಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯ..’ಎಂದು ವಚನದ ಧಾಟಿಯಲ್ಲಿ ಹೇಳಿದ ಅವರು, ‘ಚುನಾವಣೆ ಸಂದರ್ಭದಲ್ಲಿ ಅಂತಹ ಹಣ ಮುಟ್ಟುವುದಿಲ್ಲ ಎಂಬ ಪ್ರತಿಜ್ಞೆ ಮಾಡಬೇಕು’ ಎಂದು ಸಭಿಕರಲ್ಲಿ ಮನವಿ ಮಾಡಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಬಂಜಗೆರೆ ಜಯಪ್ರಕಾಶ ಮಾತನಾಡಿ, ‘ಸಾಹಿತ್ಯದ ಮುಖ್ಯ ಗುಣ ಕಸ ಬರಿಗೆ ಆಗುವುದಲ್ಲ. ಪ್ರಶ್ನೆಗಳನ್ನು ಎತ್ತುವವರು ಕಸ ಬರಿಗೆ ಆಗುವುದೂ ಇಲ್ಲ’ ಎಂದು ದತ್ತ ಅವರ ಹೇಳಿಕೆಗೆ ತಿರುಗೇಟು ನೀಡಿದರು.

‘ವರ್ಣಾಶ್ರಮದ ಜಾತಿ ಜಗುಲಿ ಕಟ್ಟೆಯಂತಿದ್ದ ಸಾಹಿತ್ಯ ಪರಿಷತ್ತು ಈಗ ನಮ್ಮಂತಹವರನ್ನು ಒಳಗೆ ಸೇರಿಸಿಕೊಂಡಿದೆ. ಕನ್ನಡ ಸಾಹಿತ್ಯದ ಕಂಠೀಹಾರದ ಸ್ಥಾನಕ್ಕೆ ಏರಿದ್ದೇವೆ. ಇನ್ನು ನಮ್ಮನ್ನು ಇಳಿಸಲು ಸಾಧ್ಯವಿಲ್ಲ. ವಾಲ್ಮೀಕಿ, ಕಾಳಿದಾಸ ಪರಂಪರೆ ನಮ್ಮ ಕೈ ತಪ್ಪಿ ಹೋಗಿತ್ತು. ಈಗ  ಕೈ ಸೇರಿದೆ' ಎಂದರು.

ಅಧ್ಯಕ್ಷತೆ ವಹಿಸಿದ್ದ ಹಂಪಿ ವಿ.ವಿ ಕುಲಪತಿ ಡಾ. ಮಲ್ಲಿಕಾ ಘಂಟಿ ಮಾತನಾಡಿ ‘ಸಾಹಿತ್ಯ ಸಮ್ಮೇಳನಗಳಿಗೆ ಹಿರಿಯ ಸಾಹಿತಿಗಳು ಬರುವುದು ಕಡಿಮೆ ಆಗಿದೆ. ಹಿಂದೆಲ್ಲ ಬರುತ್ತಿದ್ದರು. ಮುಂದಿನ ಸಾಲಿ ನಲ್ಲಿ ಕುಳಿತು ಮಾತುಗಳನ್ನು ಕೇಳಿಸಿ ಕೊಂಡು ಹೋಗುತ್ತಿದ್ದರು. ಈ ಬಾರಿ ಯಾರೂ ನೋಡಲು ಸಿಕ್ಕಿಲ್ಲ. ಸಾಹಿತ್ಯ ಸಮ್ಮೇಳನದಲ್ಲಿ ಗದ್ದಲ ಇದ್ದರೂ ಕೂಡ ಗದ್ದಲದ ಮಧ್ಯೆ ಕುಳಿತು ಕೇಳುವ ಹೊಣೆ ಗಾರಿಕೆ ಅವರ ಮೇಲಿದೆ’ ಎಂದರು.

‘ಅಧಿಕಾರಿಶಾಹಿಗೆ ಸಾಹಿತಿಗಳ ಬಗ್ಗೆ ಹೇಳಿಕೊಡಬೇಕಾಗಿದೆ.  ನಿನ್ನೆ ಪೊಲೀ ಸರು ಹಿರಿಯ ಸಾಹಿತಿಯೊಬ್ಬರನ್ನು ತಡೆ ದರು.  ಸಾಹಿತಿ ಕುರಿತು ಅರಿವು ಇದ್ದರೆ ಈ ರೀತಿ ಅಗುತ್ತಿರಲಿಲ್ಲ’ ಎಂದರು.

ವಿಧಾನಸೌಧದ ಕಲ್ಲುಗಳ ಮೇಲೆ ಕವಿವಾಣಿ
‘ವಿಧಾನಸೌಧದ ಪ್ರತಿಯೊಂದು ಕಲ್ಲುಗಳ ಮೇಲೂ ಕವಿವಾಣಿಯನ್ನು, ಬಸವಣ್ಣ ವಚನವನ್ನು ಬರೆಸಬೇಕು’ ಎಂದು ಡಾ.ಮಲ್ಲಿಕಾ ಘಂಟಿ ಸಲಹೆ ನೀಡಿದರು.

‘ಹೀಗೆ ಬರೆಸುವುದರಿಂದ ರಾಜಕಾರಣಿಗಳನ್ನು ಸರಿ ದಾರಿಗೆ ತರಲು ಸಾಧ್ಯ. ಅವರಲ್ಲಿರುವ ಕ್ರೌರ್ಯ, ಹಪಾಹಪಿತನ, ದೌರ್ಜನ್ಯ ಮನೋಭಾವ ಕಡಿಮೆ ಮಾಡಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

* ರಾಜಕೀಯದ ಬಗ್ಗೆ, ರಾಜಕೀಯ ತೀರ್ಮಾನಗಳ ಬಗ್ಗೆ ವಿಮರ್ಶೆ ಆಗಬೇಕು.  ಇಂದು ಮತ ಪೆಟ್ಟಿಗೆ ಮಲಿನ ಆಗಿದೆ
–ಎಚ್.ವಿಶ್ವನಾಥ್‌, ಹಿರಿಯ ರಾಜಕಾರಣಿ

* ಧರ್ಮ ಮತ್ತು ರಾಜಕಾರಣ ಎರಡೂ ಒಳ್ಳೆಯ ಆದರ್ಶಗಳು. ಅದರೆ, ಎರಡೂ ಹೇಗಿರಬೇಕಿದ್ದವೋ ಹಾಗಿಲ್ಲದ ಕಾರಣ ಅವ್ಯವಸ್ಥೆಗೆ ಕಾರಣವಾಗಿವೆ
–ವೈ.ಎಸ್.ವಿ ದತ್ತ,  ಶಾಸಕ

* ರಾಜ್ಯ ಸರ್ಕಾರದ ಅನ್ನ ಭಾಗ್ಯವನ್ನು ಮೆಚ್ಚಿಕೊಂಡರೆ ಕಾಂಗ್ರೆಸ್ಸಿನವರು ಎಂದು ಅನುಮಾನಿಸುವ ಸ್ಥಿತಿ ಇದೆ
–ಮಲ್ಲಿಕಾ ಘಂಟಿ,  ಕುಲಪತಿ,ಹಂಪಿ ವಿ.ವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT