ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಲತಾಣಗಳೆಡೆಗೆ ಭಯ ಸಲ್ಲ: ವಸುಧೇಂದ್ರ

Last Updated 3 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಶಾಂತರಸ ಪ್ರಧಾನ ವೇದಿಕೆ(ರಾಯಚೂರು): ‘ಸಾಮಾಜಿಕ ಜಾಲತಾಣಗಳು ಪ್ರಜಾಪ್ರಭುತ್ವದ ಪ್ರಬಲ ಅಸ್ತ್ರಗಳು’ ಎಂದು ಕಥೆಗಾರ ವಸುಧೇಂದ್ರ ಬಣ್ಣಿಸಿದರು.

ಶನಿವಾರ ಇಲ್ಲಿ ನಡೆದ 'ಸಮೂಹ ಮಾಧ್ಯಮ ಮತ್ತು ಸಾಮಾಜಿಕ ಹೊಣೆಗಾರಿಕೆ' ಗೋಷ್ಠಿಯಲ್ಲಿ ಸಾಮಾಜಿಕ ಜಾಲತಾಣಗಳ ಕುರಿತು ಮಾತನಾಡಿದ ಅವರು, ಹಣದ ಆಮಿಷವಿಲ್ಲದೆ, ವೈಯಕ್ತಿಕ ಅಭಿಪ್ರಾಯವನ್ನು ಮುಕ್ತವಾಗಿ ಹೇಳುವ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳು ನಿದ್ದೆಗೆ ಜಾರಿದಾಗ ಅವುಗಳನ್ನು ಎಚ್ಚರಿಸುವ ಬಹು ದೊಡ್ಡ ಕೆಲಸವನ್ನೂ ಸಾಮಾಜಿಕ ಜಾಲತಾಣಗಳು ಮಾಡುತ್ತಿವೆ’ ಎಂದು ಅಭಿಪ್ರಾಯಪಟ್ಟರು.

‘ಅವುಗಳ ಕಾರ್ಯಸ್ವರೂಪವನ್ನು ಹಳ್ಳಿಯ ಅರಳಿಕಟ್ಟೆಯ ಹರಟೆಗಳಿಗೆ ಹೋಲಿಸಿದ ವಸುಧೇಂದ್ರ, ‘ಕಟ್ಟೆಯ ಜನರಂತೆಯೇ ಇಲ್ಲಿಯೂ ಜನರು ತಮಗೆ ಅರಿವಿದ್ದೋ, ಇಲ್ಲದೆಯೋ ಬೇಕಾದಂತೆ ಮಾತಾಡುತ್ತಾರೆ. ಹರಟುತ್ತಾರೆ. ಅವುಗಳಿಗೆ ಹೆದರುವುದಾಗಲೀ ವಿಪರೀತ ಅರ್ಥ ಕಲ್ಪಿಸುವುದಾಗಲೀ ಅಗತ್ಯವಿಲ್ಲ. ವೇಗ, ಸ್ವತಂತ್ರ ಅಭಿವ್ಯಕ್ತಿಯ ಗುಣ ಹಾಗೂ ವ್ಯಾಪ್ತಿಯಿಂದಾಗಿ ಮುದ್ರಣ ಹಾಗೂ ದೃಶ್ಯ ಮಾಧ್ಯಮವನ್ನು ಮೀರಿ ಬೆಳೆಯುತ್ತಿರುವ ಜಾಲತಾಣಗಳು ಯಾವುದೇ ಸುದ್ದಿಯ ಸತ್ಯಾಸತ್ಯತೆ ಪರೀಕ್ಷೆಗೆ ಮುಂದಾಗುವುದಿಲ್ಲ. ಆ ಕಾರಣಕ್ಕಾಗಿಯೇ ಸದ್ಯಕ್ಕೆ ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವೂ ಇಲ್ಲ’ ಎಂದರು.

‘ಇವುಗಳಿಂದಾಗಿ ಸಾಮಾಜಿಕ ಜೀವನದಲ್ಲಿ ವಿಚಿತ್ರ ತಲ್ಲಣಗಳು ಸೃಷ್ಟಿಯಾಗಿದ್ದು ನಿಜ’ ಎಂದು ಒಪ್ಪಿಕೊಂಡ ಅವರು, ‘ಈ ಸ್ಥಿತಿ ತಾತ್ಕಾಲಿಕವಾಗಿದ್ದು, ಅದನ್ನು ಮೀರಿ ಬೆಳೆಯುವ ಪ್ರಬುದ್ಧತೆ ಅವುಗಳಿಗೆ ದಕ್ಕುತ್ತದೆ’ ಎನ್ನುವ ಭರವಸೆ ವ್ಯಕ್ತಪಡಿಸಿದರು.

‘ದೃಶ್ಯ ಮಾಧ್ಯಮದ ಮಿತಿಗಳನ್ನು ಒಪ್ಪಿಕೊಳ್ಳುತ್ತಲೇ ಅದರ ಸಾಮಥ್ಯವನ್ನು ಸಾಬೀತುಪಡಿಸಿದ ಸನ್ನಿವೇಶಗಳನ್ನು ಎದುರಿಗಿಟ್ಟ ಉದಯ ವಾಹಿನಿಯ ಸಮೂಹ ಸಂಪಾದಕ ಬಿ.ಸಮೀವುಲ್ಲಾ, ದೃಶ್ಯ ಮಾಧ್ಯಮದ ಹೊಣೆಗಾರಿಕೆಯ ಬಗ್ಗೆ ಚರ್ಚಿಸಿದರು.

‘ಮುದ್ರಣ ಮಾಧ್ಯಮಕ್ಕೆ ದಕ್ಕಿದ ಅನುಭವಗಳು ದೃಶ್ಯಮಾಧ್ಯಮಕ್ಕೆ ದಕ್ಕಿಲ್ಲ. ಪರಂಪರೆ ಪ್ರಜ್ಞೆಯ ಕೊರತೆಯಿಂದ ದಾರಿ ತಪ್ಪುತ್ತಿರುವ ಟೀಕೆ ಎದುರಿಸುತ್ತಿದ್ದು, ಅದಕ್ಕಿನ್ನೂ ಸಾಮಾಜಿಕ ಹೊಣೆಗಾರಿಕೆ ಬರಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಆರ್ಥಿಕ, ರಾಜಕೀಯ ಒತ್ತಡದಿಂದಾಗಿ ಜನಪರ ನಿಲುವುಗಳನ್ನು ತೆಗೆದುಕೊಳ್ಳುವಲ್ಲಿ ಸೋಲುತ್ತಿದೆ. ಟಿಆರ್‌ಪಿ ಪಡೆಯುವ ಭರದಲ್ಲಿ ವೀಕ್ಷಕರನ್ನು ಗ್ರಾಹಕರಂತೆ ಸುದ್ದಿಯನ್ನು ಸರಕಿನಂತೆ ನೋಡಿದಾಗ ಅದು ಕೊಡಕೊಳ್ಳುವ ವ್ಯವಹಾರದಂತೆ ಭಾಸವಾಗುತ್ತಿದ್ದು, ವೃತ್ತಿಪರತೆ ಕಾಣದಾಗುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಮಲ ಸುರಿದುಕೊಂಡು ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ, ರಕ್ಷಿತಾ-ಪ್ರೇಮ್ ಮದುವೆಯ ದೃಶ್ಯಗಳನ್ನು ಬಿತ್ತರಿಸಿದ್ದು ದೃಶ್ಯ ಮಾಧ್ಯಮದ ಹೊಣೆಗಾರಿಕೆಗೆ ಹಿಡಿದ ಕನ್ನಡಿ’ ಎಂದು ವಿಷಾದಿಸಿದರು.

‘ಇವೆಲ್ಲಗಳ ನಡುವೆಯೂ, ಮಾರುವೇಷದ ಕಾರ್ಯಾಚರಣೆ ಮೂಲಕ ಹಲವು ಅಕ್ರಮಗಳನ್ನು ಬಯಲಿಗೆಳೆದ ಸುದ್ದಿ ವಾಹಿನಿಗಳು ಈ ಮಾಧ್ಯಮದ ಮೇಲಿನ ನಂಬಿಕೆಯನ್ನು ಗಟ್ಟಿಗೊಳಿಸುವ ಪ್ರಯತ್ನ ನಡೆಸಿವೆ’ ಎಂದರು.

‘ಮುದ್ರಣ ಮಾಧ್ಯಮ’ ಕುರಿತು ಮಾತನಾಡಿದ ಉದಯವಾಣಿ ಪತ್ರಿಕೆ ಸಂಪಾದಕ ರವಿ ಹೆಗಡೆ, ‘ಬರೀ ಒಳ್ಳೆಯದನ್ನೇ (ಸಕಾರಾತ್ಮಕ  ಸುದ್ದಿಗಳು) ಹೇಳುತ್ತ ಸನ್ಯಾಸಿ ಮಾಡಬೇಕಾದ ಕೆಲಸವನ್ನು ಮಾಧ್ಯಮ ಮಾಡಬೇಕಿಲ್ಲ. ಅದು ಮಾಡಬೇಕಾದುದು ಸಮಾಜಕ್ಕೆ ಕನ್ನಡಿ ಹಿಡಿಯುವ ಕೆಲಸ’ ಎಂದರು.

‘ಎಷ್ಟೋ ಸಲ ನಕಾರಾತ್ಮಕ ಸುದ್ದಿಗಳ ಮೂಲಕವೇ ಸಮಾಜ ಹಾಗೂ ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಧ್ಯಮಗಳಿಂದಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಸ್ಪರ್ಧೆ ಹಾಗೂ ದರ ಸಮರ ಮುದ್ರಣ ಮಾಧ್ಯಮದ ಗುಣಮಟ್ಟವನ್ನು ಉತ್ತಮಗೊಳಿಸಲಿಲ್ಲ. ಅತಿ ಕಡಿಮೆ ಸಮಯದಲ್ಲಿ ಒಂದು ಪತ್ರಿಕೆಯಿಂದ ಇನ್ನೊಂದು ಪತ್ರಿಕೆಗೆ ಪತ್ರಕರ್ತರು ಜಿಗಿಯುತ್ತಿದ್ದಾರೆ. ಅನುಭವವನ್ನು ಪಡೆಯುವ ಮೊದಲೇ ನಿರ್ಧಾರಗಳನ್ನು ಕೈಗೊಳ್ಳುವ ಹಂತಕ್ಕೆ ಬರುತ್ತಿದ್ದಾರೆ. ಭಾಷೆ ಬಳಕೆ, ಸತ್ಯಾಸತ್ಯತೆ ಪರಿಶೀಲನೆ, ದೃಷ್ಟಿಕೋನ ಇವುಗಳಲ್ಲೆಲ್ಲ ಅನುಭವದ ಕೊರತೆ ಎದ್ದು ಕಾಣುತ್ತಿದೆ’ ಎಂದು ವಿಷಾದಿಸಿದರು.

ಆಶಯ ಭಾಷಣ ಮಾಡಿದ ವಿಜಯವಾಣಿ ಸಂಪಾದಕ ಹರಿಪ್ರಕಾಶ್ ಕೋಣೆಮನೆ,‘ ಶಿಕ್ಷಣ ಮತ್ತು ಮಾಧ್ಯಮ ಕ್ಷೇತ್ರಕ್ಕೆ ಸಮಾನವಾದ ಹೊಣೆಗಾರಿಕೆ ಇದೆ’ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ, ‘ಮಾಧ್ಯಮಗಳಿಂದ ಉಪಭೋಗ ಸಂಸ್ಕೃತಿಯನ್ನ ಉದ್ದೀಪಿಸುವ ಕೆಲಸವಾಗುತ್ತಿದೆ. ಕಾಮ, ಅಪರಾಧ, ಮನರಂಜನೆಯ ವೈಭವೀಕರಣದಿಂದಾಗಿ ಅಸ್ವಸ್ಥ ಸಮಾಜಕ್ಕೆ ದಾರಿ ಮಾಡುತ್ತಿವೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮಾಧ್ಯಮದ ನಿಲುವುಗಳನ್ನು ಜಾಹೀರಾತುಗಳು ಪ್ರಭಾವಿಸುವ ಸ್ಥಿತಿ ಇದ್ದು, ಮಾಧ್ಯಮದ ಸಾಮಾಜಿಕ ಹೊಣೆಗಾರಿಕೆಯನ್ನು ಎಚ್ಚರಿಸುವ ನಿಟ್ಟಿನಲ್ಲಿ ಓದುಗರು ಹಾಗೂ ವೀಕ್ಷಕರ ಹೊಣೆಗಾರಿಕೆಯ ಪಾತ್ರವೂ ಮಹತ್ವದ್ದು’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT