ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅತಿ ಪ್ರಾಮಾಣಿಕತೆ ಒಳ್ಳೆಯದಲ್ಲ’

ಬದುಕು ಬನಿ
Last Updated 4 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ನನ್ನ ಹೆಸರು ವಿನೋದ್‌ ಕುಮಾರ್‌ ಕೆ. ಆರ್‌. ನಾನು ಕೋಲಾರ ಜಿಲ್ಲೆಯ ಮುಳಬಾಗಿಲಿನವನು. ನಮ್ಮದು ಕೃಷಿ ಕುಟುಂಬವಾಗಿತ್ತು. ಹಲವರಂತೆ ನನಗೂ ಬಡತನವೆಂಬುದು ಬೆನ್ನಿಗಂಟಿದ ಶಾಪವಾಗಿತ್ತು. ಬಾಲ್ಯದಲ್ಲೇ ತಂದೆ ತೀರಿಕೊಂಡರು. ತಾಯಿ ನಾಲ್ಕು ಮಕ್ಕಳನ್ನು  ಅತ್ಯಂತ ಕಷ್ಟದಲ್ಲಿ ಬೆಳೆಸಿದರು.  ಬಡತನವೆಂದರೆ ದೊಡ್ಡ ಸವಾಲು. ಅದನ್ನು ಎದುರಿಸಬೇಕಾದರೆ ಛಲ ಬೇಕು. ಅದರಲ್ಲಿ ನಾನು ಗೆದ್ದಿದ್ದೇನೆ. ಈಗ  ನಾನು ಕೆಪಿಟಿಸಿಎಲ್‌ನಲ್ಲಿ ಸಹಾಯಕ ಎಂಜಿನಿಯರ್‌.

ನಾನು ಮತ್ತು ನನ್ನ ಅಕ್ಕ ತಂಗಿಯರು ಬಾಲ್ಯದಲ್ಲಿ ಎಲ್ಲರಂತೆ ಆಟವಾಡಿಕೊಂಡು ಕಾಲ ಕಳೆಯುತ್ತಿರಲ್ಲಿಲ್ಲ. ಪ್ರತಿದಿನ ತೋಟದಲ್ಲಿ ಕೆಲಸ ಮಾಡುತ್ತಿದ್ದೆವು. ಶಾಲೆಗೆ ಹೋಗುವ ಮೊದಲು, ಶಾಲೆ ಬಿಟ್ಟ ನಂತರ ತೋಟಕ್ಕೆ ಹೋಗುತ್ತಿದ್ದೆವು. ಆಗ ನಮ್ಮ ಕೋಲಾರದ ಕಡೆ ಮಳೆ ಬೆಳೆ  ಚೆನ್ನಾಗಿತ್ತು. ನಾವು ರೇಷ್ಮೆ ಸಾಕುತ್ತಿದ್ದೆವು. ಬದುಕಲು ತೋಟದ ಕೆಲಸ ಅನಿವಾರ್ಯವಾಗಿತ್ತು.

ನಾನು ಒಂದನೇ ತರಗತಿಯಿಂದಲೂ ಕನ್ನಡ ಮಾಧ್ಯಮದಲ್ಲೇ ಓದಿದ್ದು. ಚಿಂತಾಮಣಿಯ ಸರಕಾರಿ ಕಾಲೇಜಿನಲ್ಲಿ ಇಲೆಕ್ಟ್ರಿಕಲ್‌ ಡಿಪ್ಲೊಮಾ ಮುಗಿಸಿದ್ದೇನೆ. ನಾನು ಓದುವ ಸಮಯದಲ್ಲಿ ನಮ್ಮ ಕಷ್ಟ ಇನ್ನಷ್ಟು ಹೆಚ್ಚಾಗಿತ್ತು. ಮೊದಲು ನಮಗೆ ಓದಿಗೆ ಸಹಾಯ ಮಾಡುತ್ತಿದ್ದ ದೊಡ್ಡಪ್ಪ ಅದನ್ನು ನಿಲ್ಲಿಸಿದ್ದರು. ಅಲ್ಲದೆ, ಮನೆಯನ್ನು ವಿಭಾಗ ಮಾಡಿ ನಮ್ಮನ್ನು ಬೇರೆ ಮಾಡಿದ್ದರು.

ಇಂದಿಗೂ ನಮಗೆ ಸ್ವಂತ  ಮನೆಯಿಲ್ಲ. ನನಗೆ ಸೋಲು ಎನ್ನುವುದು ನಮಗೇ ಯಾಕೆ ಬರುತ್ತದೆ, ಪ್ರತಿ ಬಾರಿಯೂ ನಾನೇ ಯಾಕೆ ಸೋಲಬೇಕು ಅನಿಸುತ್ತಿತ್ತು. ಆದರೆ ಬದುಕಲ್ಲಿ ಸಾಧಿಸಿ ಗೆದ್ದು ತೋರಿಸಬೇಕು ಎಂಬ ಛಲವೂ ಹುಟ್ಟಿತ್ತು. ಡಿಪ್ಲೊಮಾ ಮುಗಿಸಿ ಎಂಜಿನಿಯರಿಂಗ್‌ಗೆ ಸೇರಿದೆ. ಆದರೆ ಎಂಜಿನಿಯರಿಂಗ್ ಶುಲ್ಕ, ಡೊನೇಷನ್ ನನ್ನ ಪಾಲಿಗೆ ನುಂಗಲಾರದ ತುತ್ತಾಗಿತ್ತು. ಹಾಗಾಗಿ ಎಂಜಿನಿಯರಿಂಗ್ ಓದುವುದನ್ನು ಅರ್ಧಕ್ಕೆ ನಿಲ್ಲಿಸಿದೆ. ಕೆಲಸ ಹುಡುಕತೊಡಗಿದೆ.

ಆಗ ನನಗೆ ಸ್ನೇಹಿತರೊಬ್ಬರು ‘ನಮ್ಮ ಮೆಟ್ರೊ’ದಲ್ಲಿ ಎಂಜಿನಿಯರ್‌ ಹುದ್ದೆಗೆ ಅರ್ಜಿ ಕರೆದಿದ್ದಾರೆ ಎಂದು ಮಾಹಿತಿ ನೀಡಿದರು. ನಾನು ಅರ್ಜಿ ಹಾಕಿದೆ. ಪರೀಕ್ಷೆ ಬರೆದು ಪಾಸ್‌ ಆದೆ. ಬಿಎಂಆರ್‌ಸಿಎಲ್‌ನ ಮೊದಲ ತಂಡದಲ್ಲಿದ್ದ ನಮಗೆ ದೆಹಲಿಯಲ್ಲಿ ತರಬೇತಿ ಇತ್ತು. ಅಲ್ಲಿಂದ ಬಂದ ಮೇಲೆ 3 ಮೂರು ವರ್ಷ ನಾನು ಟ್ರೈನ್‌ ಆಪರೇಟರ್ ಆಗಿ ಕೆಲಸ ಮಾಡಿದ್ದೆ.  ಈ ಮಧ್ಯೆ ನನ್ನ ಕನಸನ್ನೂ ನನಸು ಮಾಡಿಕೊಂಡೆ. ಬಿಎಂಆರ್‌ಸಿಎಲ್‌ ಉದ್ಯೋಗಿಯಾಗಿದ್ದಾಗಲೇ ಬಿಎಂಎಸ್‌ ಸಂಜೆ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮುಗಿಸಿದೆ.

ಕೆಪಿಟಿಸಿಎಲ್‌ನಲ್ಲಿ ಇಂಜಿನಿಯರಿಂಗ್‌ ಹುದ್ದೆಗೆ ಅರ್ಜಿ ಹಾಕಿ ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿ ಕೆಪಿಟಿಸಿಎಲ್‌ಗೆ ಆಯ್ಕೆಯಾದೆ. ಜೀವನದಲ್ಲಿ ಅಂದು ಪಟ್ಟ ಕಷ್ಟಕ್ಕೆಲ್ಲಾ ಇಂದು ತಕ್ಕ ಮಟ್ಟಿಗೆ ಪ್ರತಿಫಲ ಸಿಕ್ಕಿದೆ. ನನ್ನ ಅಕ್ಕನಿಗೆ ಮದುವೆ ಮಾಡಿಸಿದ್ದೇನೆ. ಇಬ್ಬರು ತಂಗಿಯರಿಗೆ ಓದಿಸಿದ್ದೇನೆ. ನನಗೊಂದು ಮನೆ ಕಟ್ಟಿಕೊಳ್ಳಬೇಕು ಎನ್ನುವುದು  ನನ್ನ ದೊಡ್ಡ ಕನಸು. ಅದು ಅಮ್ಮನ ಖುಷಿಗಾಗಿ.

ಜೀವನದಲ್ಲಿ ಕಷ್ಟಪಟ್ಟರೆ ಸುಖ ಸಿಗುವುದು. ಹುಟ್ಟಿದಾಗಿನಿಂದ ಸುಖದಲ್ಲೇ ಬೆಳೆದರೆ ಕಷ್ಟದ ಅರಿವಾಗುವುದಿಲ್ಲ, ಸಾಧಿಸುವ ಛಲವೂ ಹುಟ್ಟುವುದಿಲ್ಲ. ಜೀವನದಲ್ಲಿ ಅತಿ ಪ್ರಾಮಾಣಿಕತೆ ಕೂಡ ಒಳ್ಳೆಯದಲ್ಲ ಎಂಬುದು ನನ್ನ ಅನುಭವದ ಮಾತು. ಪ್ರಾಮಾಣಿಕತೆಯಿಂದ ನಾನು ನೋವು ಅನುಭವಿಸಿದ್ದೇನೆ. ಆ ಕಾರಣಕ್ಕಾಗಿ ಈ ಮಾತು ಹೇಳುತ್ತಿದ್ದಾನೆ. ಒಟ್ಟಾರೆಯಾಗಿ ಜೀವನದಲ್ಲಿ ಎಲ್ಲವೂ ಮಿತಿಯಲ್ಲಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT