ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಡೆಲ್‌ ಕ್ಯಾಸ್ಟ್ರೊ ಚಿತಾಭಸ್ಮ ಮೆರವಣಿಗೆ

9 ದಿನಗಳ ಶೋಕಾಚರಣೆ ಮುಕ್ತಾಯ
Last Updated 4 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಸ್ಯಾಂಟಿಯಾಗೊ : ಮಾಜಿ ಅಧ್ಯಕ್ಷ ಫಿಡೆಲ್‌ ಕ್ಯಾಸ್ಟ್ರೊ ಅವರ ಚಿತಾಭಸ್ಮವನ್ನು ಹವಾನಾದಿಂದ ಸುದೀರ್ಘ ಮೆರವಣಿಗೆ ಮೂಲಕ ಭಾನುವಾರ ಇಲ್ಲಿಗೆ ತರಲಾಯಿತು.
ಚಿತಾಭಸ್ಮವನ್ನು ಸೇನೆಯ ಜೀಪ್‌ನಲ್ಲಿರಿಸಿ ಮೆರವಣಿಗೆ ನಡೆಸಲಾಯಿತು. ಲಕ್ಷಾಂತರ ಜನ ಭಾಗವಹಿಸಿ, ಅಂತಿಮ ದರ್ಶನ ಪಡೆದರು.

ಪೂರ್ವ ಸ್ಯಾಂಟಿಯಾಗೊದಾದ್ಯಂತ ಮೆರವಣಿಗೆ ನಡೆಸಲಾಯಿತು. ಫಿಡೆಲ್ ಅವರು 1959ರಲ್ಲಿ ಕ್ರಾಂತಿಯ ಭಾಷಣ ಮಾಡಿದ್ದ ಪ್ರದೇಶದಲ್ಲಿ ಮೆರವಣಿಗೆಯನ್ನು ಕೆಲ ಕಾಲ ಸ್ಥಗಿತಗೊಳಿಸಿ ಅವರಿಗೆ ಗೌರವ ಸಲ್ಲಿಸಲಾಯಿತು.

ಹವಾನಾದಿಂದ ಆರಂಭವಾಗಿದ್ದ ಮೆರವಣಿಗೆ ಒಟ್ಟು 900 ಕಿ.ಮೀ  ಕ್ರಮಿಸಿದೆ. ಕ್ಯಾಸ್ಟ್ರೊ ಅವರು ಮಾಡಿದ್ದ ಭಾಷಣಗಳನ್ನು ಮೆರವಣಿಗೆ ಸಂದರ್ಭ ಬೃಹತ್ ಪರದೆಗಳಲ್ಲಿ ಪ್ರಸಾರ ಮಾಡಲಾಯಿತು. ಕ್ಯಾಸ್ಟ್ರೊ ಅವರು 1953ರಲ್ಲಿ ಮೊದಲ ಬಾರಿ ಸಶಸ್ತ್ರ ಕ್ರಾಂತಿ ಆರಂಭಿಸಿದ್ದ ಪ್ರದೇಶದಲ್ಲೂ ಮೆರವಣಿಗೆ ಸಾಗಿತು.

9 ದಿನಗಳ ಶೋಕಾಚರಣೆ ಅಂತ್ಯ: ಫಿಡೆಲ್ ಅವರಿಗೆ ಗೌರವ ಸೂಚಿಸುವ 9 ದಿನಗಳ ಶೋಕಾಚರಣೆ ಭಾನುವಾರ ಕೊನೆಗೊಂಡಿದೆ. ಅವರ ಚಿತಾಭಸ್ಮವನ್ನು 19ನೇ ಶತಮಾನದ ಸ್ವಾತಂತ್ರ್ಯ ಹೋರಾಟಗಾರ ಜೋಸ್ ಮಾರ್ಟಿ ಅವರನ್ನು ಸಮಾಧಿ ಮಾಡಿದ್ದ ಪ್ರದೇಶದಲ್ಲೇ ಸೋಮವಾರ ನಡೆಯಲಿರುವ ಖಾಸಗಿ ಸಮಾರಂಭದ ಸಂದರ್ಭ ಸಮಾಧಿ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಫಿಡೆಲ್ ಕ್ಯಾಸ್ಟ್ರೊ (90) ಅವರು ನವೆಂಬರ್ 25ರಂದು ನಿಧನರಾಗಿದ್ದರು.

‘ಸ್ಮಾರಕಗಳಿಗೆ ಫಿಡೆಲ್ ಹೆಸರಿಲ್ಲ’: ಫಿಡೆಲ್ ಅವರ ಸಾಮಾಜಿಕ ಕ್ರಾಂತಿಯ ಮೌಲ್ಯಗಳನ್ನು ಎತ್ತಿಹಿಡಿಯುವುದಾಗಿ ಕ್ಯೂಬಾದ ಅಧ್ಯಕ್ಷ ರೌಲ್ ಕ್ಯಾಸ್ಟ್ರೊ ಹೇಳಿದರು. ಫಿಡೆಲ್ ಅವರಿಗೆ ಅಂತಿಮ ನಮನ ಸಲ್ಲಿಸಲು ಸೇರಿದ್ದ ಹತ್ತಾರು ಸಾವಿರ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ಮಾರಕಗಳಿಗೆ, ಸಂಸ್ಥೆಗಳಿಗೆ, ರಸ್ತೆಗಳಿಗೆ ಫಿಡೆಲ್ ಅವರ ಹೆಸರಿಡುವುದನ್ನು ನಿಷೇಧಿಸುವುದಾಗಿ ತಿಳಿಸಿದರು.

ಸ್ಮಾರಕಗಳಿಗೆ, ಸಂಸ್ಥೆಗಳಿಗೆ ತಮ್ಮ ಹೆಸರಿಡಬಾರದು ಎಂಬುದು ಫಿಡೆಲ್ ಅವರ ಆಶಯವಾಗಿತ್ತು. ತಾವು ಅಧಿಕಾರದಲ್ಲಿದ್ದಗಲೂ ಅವರು ಅದನ್ನು ಪಾಲಿಸಿದ್ದರು. ವ್ಯಕ್ತಿ ಆರಾಧನೆಯನ್ನು ಅವರು ವಿರೋಧಿಸುತ್ತಿದ್ದರು. ‘ಯಾವುದೇ ಅಡೆತಡೆಗಳು, ಬೆದರಿಕೆಗಳನ್ನು ಎದುರಿಸುವುದು ನಮ್ಮಿಂದ ಸಾಧ್ಯ ಎಂಬುದನ್ನು ಫಿಡೆಲ್‌ ಅವರು ತೋರಿಸಿಕೊಟ್ಟರು’ ಎಂದು ರೌಲ್ ಹೇಳಿದರು.

ಇತರ ಕಮ್ಯೂನಿಸ್ಟ್ ನಾಯಕರಿಗಿಂತ ಭಿನ್ನ
ಫಿಡೆಲ್ ಕ್ಯಾಸ್ಟ್ರೊ ಅವರು ಇತರ ಕಮ್ಯೂನಿಸ್ಟ್ ನಾಯಕರಿಗಿಂತ ಭಿನ್ನ. ತಾವು ಮೃತಪಟ್ಟ ಬಳಿಕ ದೇಹವನ್ನು ಸುಡಬೇಕು ಎಂದು ಅಪೇಕ್ಷಿಸಿದ್ದರು. ಅದರಂತೆ, ಅವರ ಪಾರ್ಥಿವ ಶರೀರವನ್ನು ಸುಟ್ಟು ಚಿತಾಭಸ್ಮವನ್ನು ಸಂಗ್ರಹಿಸಿಡಲಾಗಿದೆ. ಇದನ್ನು ಸಮಾಧಿ ಮಾಡಲಾಗುತ್ತದೆ. ಆದರೆ, ಕಮ್ಯೂನಿಸ್ಟ್ ನಾಯಕರಾದ ಹೊ ಚಿ ಮಿನ್, ವ್ಲಾದಿಮಿರ್ ಲೆನಿನ್, ಮಾವೊ ಜೆದಾಂಗ್ ದೇಹವನ್ನು ಸಾರ್ವಜನಿಕರ ದರ್ಶನಕ್ಕಿಡಲಾಗಿತ್ತಲ್ಲದೆ, ಸಂರಕ್ಷಿಸಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT