ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಬಿದ್ದಿತು ಇಳೆಯ ಮಕ್ಕಳ ಸಂಕಟ

ಕವಿ­ಗೋಷ್ಠಿ
Last Updated 4 ಡಿಸೆಂಬರ್ 2016, 19:48 IST
ಅಕ್ಷರ ಗಾತ್ರ

ಶಾಂತರಸ ಪ್ರಧಾನ ವೇದಿಕೆ (ರಾಯ ಚೂರು): ಸಮ್ಮೇಳನದ ಕೊನೆಯ ದಿನವಾದ ಭಾನುವಾರ ಇಲ್ಲಿ ನಡೆದ ಕವಿ­ಗೋಷ್ಠಿಯು ನಾಡು-ನಾಡಿನ ಮಹಿ­ಳೆ­ಯರು ಮತ್ತು ಮಕ್ಕಳ ಸದ್ಯದ ಸ್ಥಿತಿಯ ಮೇಲೆ ಬೆಳಕು ಬೀರುವಲ್ಲಿ ಯಶಸ್ವಿ­ಯಾಯಿತು. ಇತರ ಗೋಷ್ಠಿಗಳಿಗಿಂತಲೂ ತುಸು ಹೆಚ್ಚು ಆಸಕ್ತಿಯಿಂದಲೇ ಭಾಗವಹಿಸಿದ್ದ ಪ್ರೇಕ್ಷಕರು, ಕಾವ್ಯದೆಡೆಗಿನ ತಮ್ಮ ಒಲವನ್ನೂ ಸಾಬೀತುಪಡಿಸಿದರು.

ಅಕ್ಕಾ ಇಳೆ ಮಗಳೇ,
ನೋವು ನೀಗುವ ಎಣ್ಣೆ ಹಚ್ಚಲೇನೇ?
ನಿನಗೊಬ್ಬನೇ ರಾವಣ, ನನಗಿಲ್ಲಿ ನೂರಾರು ಕಣ್ಣುಗಳು
ನೀನೋ ಧರಿಣಿಜೆ
ನಾನು ಬರೀ ನಿನ್ನ ತಂಗಿ
ಲಂಕೆಯಲ್ಲಿ ನೀನು ರಾವಣನ ಬಂಧಿ
ಅಂಕೆ ಇಲ್ಲದ ಮನ ಇಲ್ಲೂ ಇತ್ತೇ ಅಕ್ಕಾ..
ಗಬ್ಬದೊಳಗಿನ ನೋವು ಧರಿಸಿದವರಿಗೇ ಗೊತ್ತು!
ಕವಯತ್ರಿ ಟಿ.ಸಿ. ಪೂರ್ಣಿಮಾ ಅವರ  ‘ಉರಿವ ಇಳೆ’ ಕವನದ ಸಾಲುಗಳಿವು.

ಹದಿನಾಲ್ಕು ವರ್ಷ ವನವಾಸ ಮುಗಿಸಿ ಬಂದ ಸೀತೆಯದೇ ನೋವು ಹೆಚ್ಚೆಂದುಕೊಂಡ ಹೊತ್ತಲ್ಲಿ ಆಕೆಯ ತಂಗಿ (ಲಕ್ಷ್ಮಣನ ಹೆಂಡತಿ) ಊರ್ಮಿಳೆ ಅಕ್ಕನ ನೋವಿಗೆ ಮುಲಾಮು ಹಾಕುತ್ತಲೇ ತನ್ನ ನೋವನ್ನು ಎದುರಿಗಿಡುವ ಪರಿಯನ್ನು ಮನಮುಟ್ಟುವಂತೆ ಕಟ್ಟಿಕೊಟ್ಟ ಕವಯತ್ರಿ, ನಮ್ಮೊಂದಿಗಿನ ಸಾವಿರಾರು ಊರ್ಮಿಳೆ­ಯರ ನೋವಿಗೆ ದನಿ ನೀಡುವ ಪ್ರಯತ್ನ ಮಾಡಿದರು.

‘ನೋವಿದೆಯೇ ಅಕ್ಕಾ?’ ‘ಎಣ್ಣೆ ಹಚ್ಚಲೇ?’ ಎಂದು ಪದೇ ಪದೇ ಕೇಳುತ್ತ ಆರೈಕೆ ಮಾಡುವ ಊರ್ಮಿಳೆಯದು ಚುಚ್ಚುಮಾತಲ್ಲ; ಪಟ್ಟಪಾಡದು. ರಾಮನ ಜೊತೆ ಲಕ್ಷ್ಮಣನೂ ಕಾಡಿಗೆ ಹೋದಾಗ ಏಕಾಂಗಿಯಾದ ನೋವು ಅಲ್ಲಿತ್ತು. ಅತಂತ್ರವಾದ ಅಯೋಧ್ಯೆಯ ಚಿತ್ರಣವಿತ್ತು. ಜವ್ವನೆಯ ಮೇಲೆ ಕಣ್ಣು ಬಿದ್ದ ಸಂಕಟವಿತ್ತು. ‘ನಿನಗಾದರೋ ರಾಮನಿದ್ದ; ನನಗ್ಯಾರಿದ್ದರು? ಎಂದು ಕೇಳುವಾಗ, ‘ನಿನಗೆ ಒಮ್ಮೆಯೇ ಪರೀಕ್ಷೆ. ನನಗೋ ನಿತ್ಯವೂ’ಎಂದು ಹೇಳುವಾಗ ಹೆಣ್ಣು ಮಕ್ಕಳ ನೋವು, ಸಂಕಟವನ್ನು ತಣ್ಣನೆಯ ಆಕ್ರೋಶದಲ್ಲಿ ಕಣ್ಣೆದುರಿಗಿಟ್ಟರು.

ಕೇಳೇ ಇಳೆ ಮಗಳೇ
ಇಳೆ ನಾನೇ
ಧಗಧಗಿಸುವ ಊರ್ಮಿಳೆ
ಎಂದು ಹೇಳುತ್ತ ಭೂಮಿ ಎನಿಸಿದ ಹೆಣ್ಣಿನ ಒಡಲುರಿಯನ್ನು ಹೊರ ಹಾಕುವ ಪ್ರಯತ್ನ ಮಾಡಿದರು.
******
ಕಾಂಕ್ರೀಟ್ ಕಾಡಿನಲ್ಲಿ ನೆಲೆ ಕಳೆದುಕೊಂಡ ಹಕ್ಕಿಗಳು, ಏಕಮುಖಿ ಅಭಿವೃದ್ಧಿಯ ಹೊಡೆತಕ್ಕೆ ತತ್ತರಿಸಿದ ಬದುಕು, ಆಧುನಿಕತೆ ತಂದಿತ್ತ ಭ್ರಮೆಗಳನ್ನು ಕಂಡು ಕಕ್ಕಾಬಿಕ್ಕಿಯಾದ ಪರಿಯನ್ನು ಕಾಣದ ಗಿಳಿರಾಮನ ಮುಂದೆ ತೋಡಿಕೊಂಡ ರಮೇಶ ಅರೋಲಿ–
ನೆರಳಂತ ಕುಂತರೆ ನೇರಳೆ ಬಾಸಿಂಗ
ಬೇರಿಗೆ ಬೆರಗಾದೆನೋ ಗಿಳಿರಾಮ
ಚಿಗುರಿಗೆ ಋಣಿಯಾದೆನೋ ಗಿಳಿರಾಮ ಎಂದು ಹಾಡಿದರು.
******
ಜ್ಯೋತಿರ್ಲಿಂಗವಾದ ಮಾತು, ಸ್ಫಟಿಕದ ಸಲಾಕೆಯಾದ ಮಾತು, ಮುತ್ತಿನ ಹಾರವಾಗಿದ್ದ ಮಾತು ಸದ್ಯಕ್ಕೆ ಮತಾಸ್ತ್ರವಾಗಿ ದೇಶದೆಲ್ಲೆಡೆ ವಿಜೃಂಭಿಸುತ್ತಿರುವ ಪರಿಯನ್ನು ತಮ್ಮ ‘ಮಾತು’ ಕವನದಲ್ಲಿ ವಿಡಂಬಿಸಿದ ಚ.ಹ. ರಘುನಾಥ,

‘ಎದೆ ಕುಣಿಸದೇ
ಮೀಸೆ ತಿರುವದೇ
ಭುಜ ಅದುರಿಸದೇ
ಕುಸ್ತಿಗೆ ನಿಂತಿದ್ದಾನೆ ಪೈಲ್ವಾನ
ಮಾತು ಮತಾಸ್ತ್ರ!
ಬಿದ್ದವರನ್ನು ಆತುಕೊಂಡ
ಮಣ್ಣು ಪಿಸುಗುಡುತ್ತದೆ
ಮಾತೆಂಬುದು ಜ್ಯೋತಿರ್ಲಿಂಗ! ಎನ್ನುತ್ತಾರೆ.

******
ಗೋಧ್ರಾ ಹತ್ಯಾಕಾಂಡದ ಕರಾಳ ನೆನಪುಗಳನ್ನು  ತಮ್ಮ ‘ಡಿಸೆಂಬರ್ 6’ರ ಕವನದ ಮೂಲಕ ಮತ್ತೊಮ್ಮೆ ಎದುರಿಗಿಟ್ಟ ತಾರಿಣಿ ಶುಭದಾಯಿನಿ, ಸಮಾಜದ ಸಾಮರಸ್ಯ ಕದಡಿ, ಧರ್ಮಾಂತೆಯ ವಿಷ ವ್ಯಾಪಿಸಿದ ಆ ಗಳಿಗೆಗಾಗಿ ನಡುಗುವುದೊಂದನ್ನು ಬಿಟ್ಟು ಬೇರೇನು ಮಾಡುವುದು ಎಂದು ಅಸಹಾಯಕತೆಯನ್ನು ವ್ಯಕ್ತಪಡಿಸಿದರು.
******
ಇತ್ತೀಚೆಗೆ ನಮ್ಮನ್ನಗಲಿದ ಕಥೆಗಾರ ಡಾ. ಪ್ರಹ್ಲಾದ ಅಗಸನಕಟ್ಟೆಯವರ ಅಂತ್ಯಕ್ರಿಯೆಗೂ ಮುನ್ನ ತಾವು ಅನುಭವಿಸಿದ ಸಂಕಟ-ಬೇಗುದಿಯನ್ನು ಅವರ ತಮ್ಮ ಡಾ. ಲೋಕೇಶ್ ಅಗಸನಕಟ್ಟೆ ‘ಹಂಸಗಳು ಇಳಿವ ಸಮಯ' ಕವನದ ಮೂಲಕ ಮೂಲಕ ಹೊರಹಾಕಿದರು. ಕೈಗೂಡದ ಸೋದರನ ಕನಸುಗಳನ್ನು ಪೂರೈಸಲು ‘ನಾನು ನೀನೇ ಆಗಲು ಮಾಗುವೆ’ ಎಂದು ಭರವಸೆ ನೀಡಿದರು.

ಲಕ್ಷ್ಮೀಪತಿ ಕೋಲಾರ ಅವರ ‘ಬಿಸಿಲು ಕೋಲು’ ಕವನದ ‘ಅಪಮಾನದ ಬೆಂಕಿ ದಾಟಿ ಯಾವ ಮಾತಂಗಿ ಎಡವಿ ಹಡೆದ ಶೂರನೋ?’ ಸಾಲುಗಳು ಕೇಳುಗರನ್ನು ಹಿಡಿದು ನಿಲ್ಲಿಸಿದವು.

ಮಹಮ್ಮದ್ ಬಾಷಗೂಳ್ಯಂ ತಮ್ಮ ‘ಹಿಡಿಮಣ್ಣು ಕೊಡಿ ಸಾಕು ನಮಗೆ' ಕವನದಲ್ಲಿ ಗಣಿಗಾರಿಕೆ, ಮರಳು ಗಣಿಗಾರಿಕೆಯಿಂದ ಬರಿ ದಾಗುತ್ತಿರುವ ನೆಲ-ಜಲದ ಬಗ್ಗೆ ಆತಂಕ ವ್ಯಕ್ತಪ ಡಿಸಿದರು. ಶ್ರಮಿಕರು ಅಮಾನ್ಯವಾಗಿ, ತಂತ್ರ ಜ್ಞಾನ-ಅಭಿವೃದ್ಧಿಯ ಅಬ್ಬರದಲ್ಲಿ ಆದ ಸಾಮಾಜಿಕ ಶಿಥಿಲತೆಗೆ ನೊಂದುಕೊಂಡು, ‘ಸೂತಕ ಸಡಗರದ ಸಂತೆಯೊಳಗೆ ಸೀಳಿ ಹೋದ ದೇವರ ನಾಲಿಗೆಯ ಹೊಲಿದುಕೊಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜ್ಯೋತಿ ಗುರುಪ್ರಸಾದ್ ನಿಜ ಪ್ರೀತಿಯ ಧ್ಯಾನದ ‘ಸಿನಿಮಾ ಮತ್ತು ವಾಸ್ತವ' ಕವಿತೆ ಓದಿದರು.

ಮಕ್ಕಳ ಸಾಹಿತ್ಯದಲ್ಲಿ ಗುರುತಿಸಿಕೊಂಡಿ ರುವ ಕವಿ ಡಾ.ರಾಜಶೇಖರ ಕಕ್ಕುಂದಾ ಅವರು ‘ಸ್ಕೂಲೇ ಇರ್ಬಾರ್ದು’ ಎಂದು ಕವನದ ಮೂಲಕ, ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿ ರುವ ಮಕ್ಕಳು ತಮ್ಮ ಬಿಡುವಿಲ್ಲದ ದಿನಚರಿಯಿಂದ ಬಿಡುಗಡೆಗೆ ಹಂಬಲಿಸುವ ದನಿಯನ್ನು ಕೇಳಿಸಿದರು.

ಡಾ.ಭಾರತಿ ಕಾಸರಗೋಡು ಅವರು, ಎಷ್ಟೇ ಕ್ರೌರ್ಯ ನಡೆದರೂ ಪ್ರೀತಿ-ಶಾಂತಿಯ ಮಾರ್ಗದಿಂದ ವಿಮುಖವಾಗುವುದಿಲ್ಲ ಎಂಬು ದನ್ನು ತಮ್ಮ ‘ಬೆಳಕಿನ ಹಾಡು’ ಕವನದ ಮೂಲಕ ಹೇಳಿದರು. ದಾವಣಗೆರೆಯ ರುದ್ರೇಶ್ವರ ಸ್ವಾಮಿ ಅವರು, ಅನಂತಮೂರ್ತಿ ಕನಸಲ್ಲಿ ದ್ಯಾವನೂರ' ಕವನ ವಾಚಿಸಿದರು.
******
ಮಂಜುಳಾ ಹುಲ್ಲಹಳ್ಳಿ ಯೋಧರ ಅಂತರಂಗ ಬಿಡಿಸಿಡುವ ಪ್ರಯತ್ನ ಮಾಡಿದರೆ, ಶೈಲಾ ನಾಗರಾಜ ಅಮ್ಮನ ಕುರಿತು ಕವನ ವಾಚಿ ಸಿದರು. ಸಂಗಮೇಶ ಉಪಾಸೆ ‘ಸತ್ತ ತಂದೆ ಗೊಂದು ಪತ್ರ’ದ ಮೂಲಕ ಅಪ್ಪನ ಕಾಯಕ ನಿಷ್ಠೆಗೆ ಹೆಮ್ಮೆ, ಮಕ್ಕಳಿಗಾಗಿ ಏನೂ ಮಾಡದೇ ಹೋದ ಆಕ್ರೋಶ ಹೊರಹಾಕಿದರು. ಸಿದ್ದ ರಾಮ ಹೊನ್ಕಲ್ ಅಚ್ಛೇ ದಿನಗಳ ಹಂಬಲದಲ್ಲಿ ಸಾಮಾನ್ಯರ ಪರದಾಟವನ್ನು ಬಿಡಿಸಿಟ್ಟರು.

‘ಕವನ ವಾಚನವಷ್ಟೇ ಅಲ್ಲ; ಚರ್ಚೆಯೂ ಬೇಕು’
ಸಮ್ಮೇಳನದ ಕವಿಗೋಷ್ಠಿಗಳಲ್ಲಿ ವಾಚಿಸುವ ಕವಿತೆಗಳ ಬಗ್ಗೆ ಚರ್ಚೆ ನಡೆ ಯುವ ಅಗತ್ಯವಿದ್ದು, ಮೈಸೂರಿ­ನಲ್ಲಿ ನಡೆ ಯುವ ಸಮ್ಮೇಳನ­ದಲ್ಲಿಯಾದರೂ ಈ ಪ್ರಯತ್ನ ನಡೆಯ­ಬೇಕು’ ಎಂದು ಹಿರಿಯ ಕವಿ ಚೆನ್ನಣ್ಣ ವಾಲೀಕಾರ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ವಾಚನಗೊಂಡ ಕವನಗಳೆಲ್ಲ ಒಳ್ಳೆ ಯವು ಎಂದು ಹೇಳಿದರೆ ಅದು ಓಲೈಸು ವಿಕೆಯಾಗುತ್ತದೆ. ಇದು ಅತ್ಯಂತ ಕೆಟ್ಟ ಪದ್ಧತಿಯಾಗಿದ್ದು ನಮ್ಮನ್ನು ನಾಶಮಾ ಡುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಇತ್ತೀಚಿನ ಕಾವ್ಯದಲ್ಲಿ ಸ್ವಂತಿಕೆ ಹಾಗೂ ಗಟ್ಟಿತನ ಕಡಿಮೆಯಾಗುತ್ತಿದೆ’ ಎಂದ ಅವರು ‘ಸ್ವಾನುಭವ, ಪರಾನುಭವದ ಮೂಲಕ ನಮಗೆ ನಾವೇ ಗಟ್ಟಿಯಾ ಗಬೇಕು. ನಮ್ಮನ್ನು ನಾವು ತಿಳಿದು ಕೊಳ್ಳಬೇಕು ಹಾಗೂ ತಿವಿದುಕೊಳ್ಳಬೇಕು' ಎಂದು ಸ್ವ ವಿಮರ್ಶೆಯ ಅಗತ್ಯತೆಯನ್ನು ಪ್ರತಿಪಾದಿಸಿದರು.

ರಾಯಚೂರಿನಲ್ಲಿ ಶಾಂತರಸ, ಜಂಬಣ್ಣ ಅಮರಚಿಂತ ಹಾಗೂ ಬಿ.ಟಿ. ಲಲಿತಾ ನಾಯಕ ಅವರ ಒಡನಾಟವನ್ನು ಮೆಲುಕು ಹಾಕಿದರಲ್ಲದೇ ಆ ಸಂದರ್ಭದಲ್ಲಿ ತಾವು ಬರೆದ ‘ಯಾವ ಅಕ್ಷರದಿಂದ ಬರೆದು ತೋರಿಸಲಯ್ಯಾ ನನ್ನ ಜನಗಳಿಗಾದ ಎದೆಯ ಬ್ಯಾನಿ...’ ಕವಿತೆಯನ್ನು ಎಂಬ ಹಾಡು ಹಾಡಿದರು.

ಮನುಷ್ಯ ಭಾಷೆ ಬೇಕು: ಲಲಿತಾ ನಾಯಕ
ಆಶಯ ಭಾಷಣ ಮಾಡಿದ ಡಾ. ಬಿ.ಟಿ. ಲಲಿತಾ ನಾಯಕ ‘ಕಾವ್ಯ ಮನುಷ್ಯ ಭಾಷೆಯಲ್ಲಿ ಮಾತಾಡಬೇಕು. ದೇವರ ಹೆಸರಿನಲ್ಲಿ ನಡೆಯುವ ಮೌಢ್ಯಾಚರಣೆಗಳನ್ನು ಪ್ರಶ್ನಿಸುವ, ಯಾವುದು ಸರಿ ಯಾವುದು ಅಲ್ಲ ಎಂಬುದನ್ನು ಹೇಳುವ ಕೆಲಸ ಮಾಡಬೇಕು. ಆಡಂಬರ ರಹಿತ, ಸರಳವಾಗಿದ್ದು ವೈಚಾರಿಕ ಚಿಂತನೆಗಳನ್ನು ಉದ್ದೀಪಿಸುವ ಕೆಲಸ ಸಾಹಿತ್ಯದಿಂದ ಆಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT