ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯ ಗೋಷ್ಠಿಗಳು ಅಸಾಮಾನ್ಯ ಕೇಳುಗರು!

ವಿಚಾರ ಮಂಡನೆಗೆ ಕಿವಿಯಾದ ಸಹಸ್ರ ಸಹಸ್ರ ಕನ್ನಡಿಗರು
Last Updated 4 ಡಿಸೆಂಬರ್ 2016, 19:53 IST
ಅಕ್ಷರ ಗಾತ್ರ

ರಾಯಚೂರು: ಹಗಲಿಗೆ ಉರಿಯುವ, ತಿವಿಯುವ ಬಿಸಿಲು ಮತ್ತು ಧಗೆ. ರಾತ್ರಿ ಕೊರೆಯುವ ಥಂಡಿ. ಈ ‘ಹದವಾದ ಹವೆ'ಯಲ್ಲಿ; ಚೆಂದದ ಅಕ್ಷರ ಜಾತ್ರೆಯಲ್ಲಿ ಮೂರು ದಿನಗಳ ನಿಜವಾದ ‘ಹೀರೊ’ ಎನ್ನಬಹುದಾದರೆ ರಾಯಚೂರು ಜಿಲ್ಲೆ, ಅದರಲ್ಲೂ ಉತ್ತರ ಹೈದರಾಬಾದ್‌ ಕರ್ನಾಟಕದ ಭಾಗದ ಸಾಮಾನ್ಯ ಕನ್ನಡಿಗ. ವೈವಿಧ್ಯ ವಿಚಾರಗಳನ್ನು ಆಲಿಸುವಿಕೆಯ ಹಸಿವನ್ನು ಇಂಗಿಸುವಲ್ಲಿ ‘ಸಾರಸ್ವತ' ಲೋಕದ ಘಟಾನುಘಟಿಗಳೇ ಸಫಲರಾಗಲಿಲ್ಲ!

ಸಮ್ಮೇಳನದ ಮೂರು ದಿನಗಳೂ ಸಾಹಿತ್ಯಿಕ ಅಥವಾ ಇತರೆ ಯಾವುದೇ ಗೋಷ್ಠಿಗಳಲ್ಲಿ ಜನ ಅಪಾರ ಸಂಖ್ಯೆಯಲ್ಲಿ ಕಿಕ್ಕಿರಿದು ಸೇರುತ್ತಿದ್ದರು. ಎರಡೂ ಕಿವಿಗಳನ್ನು ತೆರೆದು ಸಮಚಿತ್ತದಿಂದ ಆಲಿಸುತ್ತಿದ್ದರು. ಅಕ್ಷರ ಜಾತ್ರೆಗೆ ಲಕ್ಷಗಟ್ಟಲೆ ಜನ ಪ್ರವಾಹದೋಪಾದಿಯಲ್ಲಿ ಹರಿದು ಬಂದರೂ ಸಾವಿರರಾರು ಜನ ಉಪನ್ಯಾಸಗಳಿಗೆ ಕಿವಿಯಾನಿಸಿದರು.

ಬಹುತೇಕ ಗೋಷ್ಠಿಗಳಲ್ಲಿ ವಿಚಾರಗಳಲ್ಲಿ ಹೊಸ ಹೊಳವುಗಳು ಗೋಚರಿಸಲಿಲ್ಲ. ಹಳೆಯ ವಿಚಾರಗಳೇ ಮತ್ತೆ ಮತ್ತೆ ಪ್ರಸ್ತಾಪಗೊಂಡವು. ಕೇಳುಗರು ಮಾತ್ರ ಬೇಸರಗೊಳ್ಳಲಿಲ್ಲ. ಜಾಗ ಬಿಟ್ಟು ಕದಲದೇ ವಿಚಾರಗಳನ್ನು ಕೇಳಿಸಿಕೊಳ್ಳುತ್ತಿದ್ದರು.

ಆದರೆ, ಇಂದಿನ ಸಾಮಾಜಿಕ ಮತ್ತು ಆರ್ಥಿಕ ‘ಸ್ಥಿತ್ಯಂತರ' ಕಾಲದಲ್ಲಿ; ಭಾರತ ಅದರಲ್ಲೂ ಕರ್ನಾಟಕ ಎದುರಿಸುತ್ತಿರುವ ಸಂಕಟಗಳನ್ನು ಸಮಚಿತ್ತ ಮನಸ್ಸಿನಿಂದ ಎದುರಿಸುವ ಮತ್ತು ಮುನ್ನಡೆಯುವ ಯಾವುದೇ ಹೊಸ ದಿಕ್ಕುಗಳು ಗೋಷ್ಠಿಗಳಲ್ಲಿ ಗೋಚರಿಸಲಿಲ್ಲ. ಹೊಸ ಆಶಾಕಿರಣವೂ ಮೂಡಲಿಲ್ಲ. ನೋಟು ರದ್ದತಿ ಮತ್ತು ಅದರಿಂದ ಉದ್ಭವಿಸಿದ ಪರಿಸ್ಥಿತಿ ಸಮ್ಮೇಳನದಲ್ಲಿ ಭಾಗಿಯಾದವರಿಗೆ ಹೆಚ್ಚು ಬಾಧಿಸದಿದ್ದರೂ, ಅದರ ಸಣ್ಣ ನೋವು ಇದ್ದೇ ಇತ್ತು.

ಸಮಾನಂತರ ವೇದಿಕೆಯಲ್ಲಿ ನಡೆದ ಗೋಷ್ಠಿಗಳು ಹೆಚ್ಚು ‘ತಾಂತ್ರಿಕ' ಎನಿಸಿದರೂ; ಜನರು ಸಾವಧಾನವಾಗಿ ಕುಳಿತು ವಿಚಾರಗಳನ್ನು ಆಲಿಸುತ್ತಿದ್ದರು. ಎಷ್ಟು ಮತ್ತು ಯಾವ ಯಾವ ವಿಚಾರಗಳು ಮನಸ್ಸನ್ನು ಹೊಕ್ಕಿದವು ಎನ್ನುವುದಕ್ಕಿಂತ ಒಟ್ಟಾರೆ ವಿಷಯ ಗ್ರಹಣಕ್ಕೆ ಕುಳಿತಂತಿತ್ತು.

ಇದೇ ಸಂದರ್ಭದಲ್ಲಿ ಯಾವುದೇ ಉಪನ್ಯಾಸಕಾರ ತನ್ನ ಅವಧಿ ಮೀರಿ ಮಾತನಾಡಿದರೆ, ಮಾತಿನ ಓಘದಲ್ಲಿ ಹಳಿ ತಪ್ಪಿ ಸಾಗಿದರೆ ಚಪ್ಪಾಳೆ ಹೊಡೆಯುವ ಮೂಲಕ ಎಚ್ಚರಿಸುವ ಕೆಲಸವನ್ನೂ ಮಾಡುತ್ತಿದ್ದರು. ಉಪನ್ಯಾಸಕ ಅದಕ್ಕೆ ತಲೆಬಾಗಲೇ ಬೇಕಾಗುತ್ತಿತ್ತು. ಪ್ರಧಾನ ವೇದಿಕೆಯ ಸಭಾಂಗಣದಲ್ಲಿ ಸಾವಿರಗಟ್ಟಲೆ ಜನ ಕುಳಿತು ಸಾವಧಾನದಿಂದಲೇ ಕೇಳುತ್ತಿದ್ದರು. ಅಷ್ಟು ದೊಡ್ಡ ಸಭಿಕರನ್ನು ಹಿಡಿದಿಡುವುದು ಉಪನ್ಯಾಸಕಾರನಿಗೆ ದೊಡ್ಡ ಸವಾಲೇ ಆಗಿತ್ತು. ಅವಕಾಶ ಸಿಕ್ಕಾಗಲೆಲ್ಲ ಪ್ರಶ್ನೆಗಳ ಬಾಣವನ್ನು ಬಿಟ್ಟು  ಉಪನ್ಯಾಸಕಾರರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು.

ಸಾಕಷ್ಟು ಗೋಷ್ಠಿಗಳಲ್ಲಿ ಉಪನ್ಯಾಸಕರು; ತಾವು ಹೇಳಬೇಕಾದ ವಿಷಯಗಳನ್ನು ಬಿಟ್ಟು ಬೇರೆ ಬೇರೆ ವಿಷಯಗಳತ್ತ ಎಡತಾಕುತ್ತಿದುದು ಉಂಟು. ಒಂದಷ್ಟು ಉಪನ್ಯಾಸಕರು ಚಪ್ಪಾಳೆ ಗಿಟ್ಟಿಸಲೆಂದು ಅದಕ್ಕೆ ತಕ್ಕಂತೆ ಮಾತುಗಳನ್ನು ಆಡಿ, ಚಪ್ಪಾಳೆ ಗಿಟ್ಟಿಸಿಕೊಂಡಿದ್ದೂ ಉಂಟು. ಮತ್ತೆ ಕೆಲವರು ಎಲ್ಲ ಸಮಸ್ಯೆಗಳಿಗೂ ಸೈದ್ಧಾಂತಿಕ ವಿಶ್ಲೇಷಣೆಯ ಲೇಪನ ಹಚ್ಚಿ ತೃಪ್ತಿಪಟ್ಟುಕೊಳ್ಳುತ್ತಿದ್ದರೂ; ಕೇಳುಗರು ಮಹಾಶಯ ಮಾತ್ರ ಹೆಚ್ಚಿಗೆ ತಲೆ ಕೆಡಿಸಿಕೊಳ್ಳದೇ ತನ್ನಷ್ಟಕ್ಕೆ ಮಾಹಿತಿಯನ್ನು ತನ್ನ ಅರಿವಿನ ಖಜಾನೆಗೆ ತುಂಬಿಕೊಳ್ಳುತ್ತಿದ್ದರು. ರಾಜಕಾರಣ ಮತ್ತು ಸಾಹಿತ್ಯದ ಕುರಿತ ಗೋಷ್ಠಿಯಲ್ಲಿ ರಾಜಕಾರಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿನ ಒಳಸುಳಿವುಗಳ ಬಗ್ಗೆ ರಾಜಕಾರಣಿಗಳೇ ಸಾಹಿತಿಗಳಿಗಿಂತ ಪರಿಣಾಮಕಾರಿಯಾಗಿ ಕೇಳುಗರ ಮನಸ್ಸಿಗೆ ಮುಟ್ಟುವಂತೆ  ಬಿಡಿಸಿಟ್ಟರು.

ಗುಂಡು ಪ್ರಿಯರ ಚಡಪಡಿಕೆ!
ಸಾಹಿತ್ಯ ಸಮ್ಮೇಳನಕ್ಕೆ ಬಂದ ‘ಗುಂಡು ಪ್ರಿಯ’ ಸಾಹಿತಿ, ಕಲಾವಿದರು ಹಾಗೂ ಪ್ರತಿನಿಧಿಗಳಿಗೆ ಮದ್ಯ ಮಾರಾಟ ನಿಷೇಧ ಭಾರಿ ನಿರಾಶೆಯನ್ನು ಉಂಟು ಮಾಡಿತು.ಅನೇಕರು ನಗರದಲ್ಲೆಡೆ ಸುತ್ತಿದರೂ ಅವರ ಆಸೆ ಈಡೇರಲಿಲ್ಲ. ನಗರ ವ್ಯಾಪ್ತಿಯ ಮದ್ಯಂಗಡಿಗಳು, ಬಾರ್‌ಗಳು ಮುಚ್ಚಲ್ಪಟ್ಟಿದ್ದವು. ಹೀಗಾಗಿ ಚಡಪಡಿಸಿದರು.

ಅಂಗಡಿಗಳನ್ನು ಸುತ್ತಿ ಚೌಕಾಸಿ ನಡೆಸಿದರೂ ಪ್ರಯೋಜನವಾಗಲಿಲ್ಲ. ದುಪ್ಪಟ್ಟು ಹಣ ಕೊಡುತ್ತೇವೆ ಎಂದು ಆಮಿಷ ತೋರಿಸಿದರೂ ಪ್ರಯೋಜನವಾಗಲಿಲ್ಲ. ಬೇರೆ ದಾರಿ ಕಾಣದ ‘ಗುಂಡು ಪ್ರಿಯರು’ ನಗರದಿಂದ ದೂರವಿರುವ ಯರಮರಸ್‌ ಕ್ಯಾಂಪ್‌ ಮತ್ತು ಸುತ್ತಲಿನ ಹಳ್ಳಿಗಳಿಗೆ ತೆರಳಿ ‘ಗುಂಡು’ ಹಾಕಿದರು. ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್‌ ಸಮ್ಮೇಳನದ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿದ್ದರು.

ನಿಮ್ಮಲ್ಲಿ ದೊಣ್ಣೆ, ನನ್ನಲ್ಲಿ ಪೆನ್ನಿದೆ: ಚಂಪಾ
ಸಮ್ಮೇಳನದಲ್ಲಿ ಪೊಲೀಸರ ವಿಶೇಷ ಬಿಗಿ ಭದ್ರತೆಯ ಬಿಸಿ ಸಾಹಿತಿ ಭಾನುವಾರ ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) ಹಾಗೂ ಹಂಪಿ ಕನ್ನಡ ವಿವಿ ಕುಲಪತಿ ಪ್ರೊ. ಮಲ್ಲಿಕಾ ಘಂಟಿ ಅವರಿಗೂ ತಟ್ಟಿತು.

ನಿರೀಕ್ಷೆಗೂ ಮೀರಿ ಜನರು ಬಂದಿದ್ದರು.  ಹೀಗಾಗಿ  ಪ್ರಧಾನ ವೇದಿಕೆಯ ಮುಖ್ಯ ದ್ವಾರದ ಬಳಿ ಮಾತ್ರ ಜನರ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದರು. ಉಳಿದ ಕಡೆಗಳಲ್ಲಿ ಪಾಸ್‌ ಇದ್ದವರಿಗೆ ಮಾತ್ರ ಪ್ರವೇಶವಿತ್ತು. ಮಧ್ಯಾಹ್ನ  ಚಂಪಾ ಮುಖ್ಯ ವೇದಿಕೆಯ ಬಲಗಡೆಯ ದ್ವಾರದ ಬಳಿ ಬಂದರು. ಪೊಲೀಸರು ಅವರಿಗೆ ಪ್ರವೇಶ ನಿರಾಕರಿಸಿದರು.

‘ಇವರು ಸಾಹಿತಿ’ ಎಂದು ಜತೆಯಲ್ಲಿದ್ದವರು ಹೇಳಿದರು. ‘ಯಾರನ್ನೂ ಬಿಡಬಾರದು ಎಂಬುದಾಗಿ ಸಾಹೇಬರು ಸೂಚಿಸಿದ್ದಾರೆ’ ಎಂದು ಅಲ್ಲಿದ್ದ ಕಾನ್‌ಸ್ಟೆಬಲ್‌ ಉತ್ತರಿಸಿದರು. ಈ ವೇಳೆ ಸುಮಾರು ಜನರು ಜಮಾಯಿಸಿದರು.

ಹಿರಿಯ ಅಧಿಕಾರಿಯೊಬ್ಬರು ಸ್ಥಳಕ್ಕೆ ಬಂದರು. ‘ಚಂಪಾ ಅವರು ಸಂಜೆ ಸಮಾರೋಪ ಭಾಷಣ ಮಾಡಲಿದ್ದಾರೆ. ಅವರಿಗೂ ಪ್ರವೇಶ ನೀಡುತ್ತಿಲ್ಲವಲ್ಲ’ ಎಂದು ಜತೆಗಿದ್ದವರು ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಅವರನ್ನು ಒಳಕ್ಕೆ ಬಿಡಲಾಯಿತು. ‘ನಿಮ್ಮ ಬಳಿ ದೊಣ್ಣೆ ಇದೆ. ನನ್ನ ಬಳಿ ಪೆನ್ನು ಇದೆ’ ಎಂದು ಚಂಪಾ ಚಟಾಕಿ ಹಾರಿಸಿದರು.

ಇದೇ ರೀತಿಯ ಅನುಭವ ಮಲ್ಲಿಕಾ ಘಂಟಿ ಅವರಿಗೂ ಆಯಿತು. ‘ಸಾಹಿತಿಗಳನ್ನು ಅವಮಾನ ಮಾಡಲಾಗುತ್ತಿದೆ. ಪದೇ ಪದೇ ಇಂತಹ ಘಟನೆ ನಡೆಯುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT