ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ನಲ್ಲಿದ್ದ ವಿಡಿಯೊ ತೋರಿಸಿ ಬ್ಲ್ಯಾಕ್‌ಮೇಲ್

ಪ್ರೇಮಿಗಳಿಗೆ ₹ 1 ಲಕ್ಷಕ್ಕೆ ಬೇಡಿಕೆ
Last Updated 4 ಡಿಸೆಂಬರ್ 2016, 20:22 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯಾರ್ಥಿಯಿಂದ ಮೊಬೈಲ್ ದೋಚಿದ್ದ ಯುವಕರು, ₹ 1 ಲಕ್ಷ ಕೊಡದಿದ್ದರೆ ಮೊಬೈಲ್‌ನಲ್ಲಿರುವ ತಮ್ಮ ಅಶ್ಲೀಲ ಫೋಟೊ–ವಿಡಿಯೊಗಳನ್ನು ಫೇಸ್‌ಬುಕ್‌ಗೆ ಹಾಕುವುದಾಗಿ ಬೆದರಿಸಿದ್ದರು. ಹೀಗೆಯೇ 1 ತಿಂಗಳಿನಿಂದ ವಿದ್ಯಾರ್ಥಿ ಹಾಗೂ ಆತನ ಪ್ರೇಯಸಿಗೆ  ಕಿರುಕುಳ ನೀಡುತ್ತಿದ್ದ ಮೂವರ ಗ್ಯಾಂಗ್, ಈಗ ಪೊಲೀಸರ ಬಲೆಗೆ ಬಿದ್ದಿದೆ.

ಎಂಜಿನಿಯರಿಂಗ್ ವಿದ್ಯಾರ್ಥಿ ಅಶ್ವಿನ್‌ ಮೋಸಸ್ (21), ಬಿಬಿಎ ವಿದ್ಯಾರ್ಥಿ ಅಕ್ಷಯ್‌ ಡೆವಿಡ್ (20) ಹಾಗೂ ಬಿ.ಕಾಂ.ವಿದ್ಯಾರ್ಥಿ ಕಿರಣ್ (21) ಎಂಬುವರನ್ನು ಬಂಧಿಸಲಾಗಿದೆ.‘ಮಾದಕ ವಸ್ತುಗಳ ಖರೀದಿಗೆ ಹಣ ಬೇಕಿತ್ತು. ಹೀಗಾಗಿ ಮೊಬೈಲ್ ಕದ್ದಿದ್ದೆವು’ ಎಂದು ಅವರು ಹೇಳಿಕೆ ಕೊಟ್ಟಿರುವುದಾಗಿ ಪರಪ್ಪನ ಅಗ್ರಹಾರ ಪೊಲೀಸರು ಹೇಳಿದ್ದಾರೆ.

ಅ.4ಕ್ಕೆ ಮೊಬೈಲ್ ಕಳವು: ‘ಫಿರ್ಯಾದಿಯು ಹೋಟೆಲ್‌ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಯಾಗಿದ್ದು, ಎಲೆಕ್ಟ್ರಾನಿಕ್‌ ಸಿಟಿ ಹತ್ತಿರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಾರೆ. ಅವರ ಪ್ರೇಯಸಿ ಮುಂಬೈ ಮೂಲದ ರೂಪದರ್ಶಿ’ ಎಂದು ತನಿಖಾಧಿಕಾರಿಗಳು ವಿವರಿಸಿದರು.

‘ಅವರಿಬ್ಬರೂ ಅರೆನಗ್ನ ಸ್ಥಿತಿಯಲ್ಲಿ ಕೆಲ ಫೋಟೊಗಳನ್ನು ಕ್ಲಿಕ್ಕಿಸಿಕೊಂಡಿದ್ದರು. ಅಲ್ಲದೆ, ಪರಸ್ಪರ ಚುಂಬಿಸಿಕೊಳ್ಳುತ್ತಿರುವ ದೃಶ್ಯವನ್ನೂ ಮೊಬೈಲ್‌ನಲ್ಲಿ ವಿಡಿಯೊ  ಮಾಡಿಕೊಂಡಿದ್ದರು.’

‘ಅ.4ರಂದು ಕಾಲೇಜಿಗೆ ನಡೆದು ಹೋಗುತ್ತಿದ್ದ ವಿದ್ಯಾರ್ಥಿಯನ್ನು ಸಿಂಗಸಂದ್ರ ಬಳಿ ಅಡ್ಡ ಹಾಕಿದ್ದ ಆರೋಪಿಗಳು, ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ವಿದ್ಯಾರ್ಥಿ ಅದೇ ದಿನ ಪರಪ್ಪನ ಅಗ್ರಹಾರ ಠಾಣೆಗೆ ದೂರು ಕೊಟ್ಟಿದ್ದರು.’ ‘ಮೊಬೈಲ್‌ನಲ್ಲಿ ಗ್ಯಾಲರಿ ಲಾಕ್‌ ಆಗಿದ್ದರಿಂದ, ಆರೋಪಿಗಳು ಅದರ ಮೆಮೋರಿ ಕಾರ್ಡ್‌ ತೆಗೆದು ತಮ್ಮ ಮೊಬೈಲ್‌ಗೆ ಹಾಕಿಕೊಂಡಿದ್ದರು. ಅದರಲ್ಲಿ ಪ್ರೇಮಿಗಳ ಅಶ್ಲೀಲ ಫೋಟೊ ಹಾಗೂ ವಿಡಿಯೊ ನೋಡಿದ ಅವರು, ಅವುಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಲು ಸಂಚು ರೂಪಿಸಿದ್ದರು’ ಎಂದು ಮಾಹಿತಿ ನೀಡಿದರು.

ಫೇಸ್‌ಬುಕ್‌ನಲ್ಲಿ ಬೆದರಿಕೆ: ‘ಮೊಬೈಲ್ ಸಂದೇಶಗಳನ್ನು  ಪರಿಶೀಲಿಸಿದ ಆರೋಪಿಗಳಿಗೆ, ಈ ಪ್ರೇಮಿಗಳ  ಹೆಸರು ಹಾಗೂ ಅವರ ಕಾಲೇಜುಗಳ ವಿವರಗಳು ಸಿಕ್ಕಿವೆ. ಬಳಿಕ ಆ ಹೆಸರುಗಳನ್ನು ಫೇಸ್‌ಬುಕ್‌ನಲ್ಲಿ ಹುಡುಕಿ, ಅವರ ಖಾತೆಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಅಧಿಕಾರಿಗಳು ಹೇಳಿದರು.

‘ಬಳಿಕ ಇಬ್ಬರಿಗೂ ‘ಫ್ರೆಂಡ್ ರಿಕ್ವೆಸ್ಟ್’ ಕಳುಹಿಸಿದ ಆರೋಪಿಗಳು, ಅವರು ಆ ಕೋರಿಕೆಯನ್ನು ಒಪ್ಪಿಕೊಳ್ಳುತ್ತಿದ್ದಂತೆಯೇ ಮೆಸೆಂಜರ್‌ ಆ್ಯಪ್‌  ಮೂಲಕ ಚಾಟ್ ಮಾಡಲು ಪ್ರಾರಂಭಿಸಿದ್ದಾರೆ. ನಂತರ ಇಬ್ಬರೂ ಅರೆನಗ್ನ ಸ್ಥಿತಿಯಲ್ಲಿರುವ ಫೋಟೊಗಳನ್ನು ಕಳುಹಿಸಿ ₹ 1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ.‘ಆರೋಪಿಗಳ ಕಾಟ ಹೆಚ್ಚಾಗಿದ್ದರಿಂದ ಡಿ.2ರಂದು ಪುನಃ ಠಾಣೆ ಮೆಟ್ಟಿಲೇರಿದ ವಿದ್ಯಾರ್ಥಿ, ‘ಮೊಬೈಲ್ ಕದ್ದಿರುವ ವ್ಯಕ್ತಿಗಳು, ಈಗ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ’ ಎಂದು ಹೇಳಿಕೆ ಕೊಟ್ಟರು. ಆರೋಪಿಗಳ ಪತ್ತೆಗೆ ಕೂಡಲೇ ಎರಡು ವಿಶೇಷ ತಂಡಗಳನ್ನು ರಚಿಸಿದೆವು.’

‘ಬೆದರಿಕೆ ಕರೆ ಬಂದಿದ್ದ ಮೊಬೈಲ್ ಸಂಖ್ಯೆ ಪಡೆದು ತನಿಖೆ ಪ್ರಾರಂಭಿಸಿದಾಗ, ಅದು ಪರಪ್ಪನ ಅಗ್ರಹಾರ ಸಮೀಪದ ಹೊಸಪಾಳ್ಯದಲ್ಲಿ ಸಂಪರ್ಕ ಪಡೆಯುತ್ತಿತ್ತು.  ಅಲ್ಲಿ 2 ದಿನ ಶೋಧ ನಡೆಸಿದರೂ ಆರೋಪಿಗಳು ಪತ್ತೆಯಾಗಿರಲಿಲ್ಲ.’

‘ನಂತರ ವಿದ್ಯಾರ್ಥಿಯಿಂದ ಆ ಸಂಖ್ಯೆಗೆ ಕರೆ ಮಾಡಿಸಿ, ‘₹ 1 ಲಕ್ಷ ಕೊಡಲು ಆಗುವುದಿಲ್ಲ. ₹ 50 ಸಾವಿರ ಕೊಡುತ್ತೇನೆ’ ಎಂದು ಹೇಳಿಸಿದೆವು. ಅದಕ್ಕೆ ಒಪ್ಪಿದ ಅವರು, ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಎಲೆಕ್ಟ್ರಾನಿಕ್‌ಸಿಟಿ ಸಮೀಪದ ಎಇಸಿಎಸ್ ಲೇಔಟ್‌ಗೆ ಬರುವಂತೆ ಸೂಚಿಸಿದ್ದರು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮಫ್ತಿಯಲ್ಲಿ ಹಿಂಬಾಲಿಸಿದೆವು
‘ವಿದ್ಯಾರ್ಥಿಯನ್ನು ಮುಂದೆ ಕಳುಹಿಸಿ, ನಾವು ಮಫ್ತಿಯಲ್ಲಿ ಹಿಂಬಾಲಿಸಿದ್ದೆವು. ಆರೋಪಿಗಳು ಹಣ ಪಡೆದುಕೊಳ್ಳಲು ಫಿರ್ಯಾದಿಯ ಹತ್ತಿರ ಹೋಗುತ್ತಿದ್ದಂತೆಯೇ, ಏಕಾಏಕಿ ದಾಳಿ ನಡೆಸಿ ಮೂವರನ್ನೂ ವಶಕ್ಕೆ ಪಡೆದೆವು’ ಎಂದು ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT