ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಸಾಹಿತ್ಯಕ್ಕೆ ನೈಜ ಗೌರವ ದಕ್ಕಿಲ್ಲ

Last Updated 5 ಡಿಸೆಂಬರ್ 2016, 5:12 IST
ಅಕ್ಷರ ಗಾತ್ರ

ಮಂಗಳೂರು: ಪ್ರಾಚೀನ ಕಾಲದಿಂದ ಲೂ ಭಾರತೀಯ ಸಾಹಿತ್ಯ ಕ್ಷೇತ್ರವು ಮಹಿಳೆಯರ ಬರಹಗಳ ನೈಜ ಅರ್ಥ ಮತ್ತು ಧ್ವನಿಗಳನ್ನು ಸರಿಯಾಗಿ ಗ್ರಹಿಸಿ ಕೊಂಡಿಲ್ಲ. ಈ ವೈಫಲ್ಯದ ಪರಿಣಾಮ ವಾಗಿ ಭಾರತೀಯ ಮಹಿಳಾ ಸಾಹಿತ್ಯಕ್ಕೆ ಅರ್ಹ ಪ್ರಮಾಣದ ಗೌರವ ದಕ್ಕಿಲ್ಲ ಎಂದು ವಿಮರ್ಶಕಿ ಡಾ.ಎಂ.ಎಸ್‌. ಆಶಾದೇವಿ ಹೇಳಿದರು.

ಮಣಿಪಾಲ ವಿಶ್ವವಿದ್ಯಾಲಯದ ಡಾ. ಟಿ.ಎಂ.ಎ.ಪೈ ಭಾರತೀಯ ಸಾಹಿತ್ಯ ಪೀಠ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಡಾ.ಕೆ.ಶಿವರಾಮ ಕಾರಂತ ಪೀಠ ಜಂಟಿಯಾಗಿ ನಗರದ ವಿಶ್ವವಿದ್ಯಾಲಯ ಕಾಲೇಜಿನ ಕೆ.ಶಿವರಾಮ ಕಾರಂತ ಸಭಾಂಗಣದಲ್ಲಿ ಭಾನುವಾರ ಆಯೋಜಿ ಸಿದ್ದ ‘ಸೃಜನಶೀಲ ಬರವಣಿಗೆ’ ಕುರಿತ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ಮಾತನಾಡಿದ ಅವರು, ‘ವಚನ ಕಾರರ ಕಾಲದಿಂದಲೂ ಮಹಿಳಾ ಸಾಹಿ ತ್ಯವನ್ನು ಸರಿಯಾಗಿ ಅರ್ಥ ಮಾಡಿ ಕೊಳ್ಳುವ ಪ್ರಯತ್ನವೇ ನಡೆದಿಲ್ಲ. ಯಾವಾಗಲೂ ಪುರುಷರು ಸ್ಥಾಪಿಸಿದ ಚೌಕಟ್ಟಿನೊಳಗೆ ಮಹಿಳಾ ಸಾಹಿತ್ಯವನ್ನು ಬಂಧಿಯಾಗಿಸಿಕೊಂಡು ಬರಲಾಗಿದೆ’ ಎಂದರು.

ಶತಮಾನಗಳ ಕಾಲದಿಂದಲೂ ಮಹಿಳೆಯರು ಕ್ರೌರ್ಯ ಮತ್ತು ನಿರ್ಬಂಧ ಗಳನ್ನು ಎದುರಿಸುತ್ತಲೇ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಹಿಳೆಯರು ಬರಹದಲ್ಲಿ ಹೇಳಿದ ಸಂಗತಿಯನ್ನು ಪುರುಷರು ತಮಗೆ ತೋಚಿದಂತೆ ಮತ್ತು ಬೇಕಾದಂತೆ ಅರ್ಥೈಸುತ್ತಾ ಬಂದರು. ಈವರೆಗಿನ ಎಲ್ಲಾ ಬಗೆಯ ಕಾವ್ಯಮೀಮಾಂಸೆಗಳು ಕಟ್ಟಿಕೊಟ್ಟ ದಾರಿಗಳನ್ನು ಮೀರಿದಂತಹ ಅರ್ಥ ಮತ್ತು ಅಭಿವ್ಯಕ್ತಿ ಮಹಿಳಾ ಸಾಹಿತ್ಯದಲ್ಲಿ ಇದೆ ಎಂಬುದನ್ನು ತೋರಿಸುವ ಪ್ರಯತ್ನ ನಡೆದಿಲ್ಲ. ದ.ರಾ.ಬೇಂದ್ರೆಯವರಂತಹ ಶ್ರೇಷ್ಠ ವಿಮರ್ಶಕರೂ ಈ ಕೆಲಸದಲ್ಲಿ ಎಡವಿದ್ದರು ಎಂದು ಪ್ರತಿಪಾದಿಸಿದರು.

‘ಸಾಹಿತ್ಯ ವಲಯದಲ್ಲಿ ವ್ಯಕ್ತವಾದ ಹೆಣ್ಣಿನ ಅಭಿವ್ಯಕ್ತಿ ಮತ್ತು ಪ್ರತಿರೋಧವನ್ನು ಈ ವ್ಯವಸ್ಥೆ ತನಗೆ ಬೇಕಾದಂತೆ ಗ್ರಹಿಸುತ್ತಿದೆ. ಈ ಚೌಕಟ್ಟನ್ನು ಒಡೆಯುವುದು ನಮ್ಮ ಮುಂದಿರುವ ಸವಾಲು. ಪುರುಷರು ತಮಗೆ ಬೇಕಾದಂತೆ ಮೌಲ್ಯಗಳನ್ನು ಸ್ಥಾಪಿಸುತ್ತಾ ಬಂದಿದ್ದಾರೆ. ಹೆಣ್ಣು ಮತ್ತು ಗಂಡು ಭಿನ್ನ, ಆದರೂ ಸಮಾನರು ಎಂಬುದನ್ನು ಸಮಾಜ ಒಪ್ಪಿಕೊಳ್ಳಬೇಕು. ಆ ಮೂಲಕ ಮಹಿಳಾ ಸಾಹಿತ್ಯಕ್ಕೂ ಪುರುಷರ ಸಾಹಿತ್ಯದಷ್ಟೇ ಪ್ರಾಮುಖ್ಯತೆ ದೊರೆಯಬೇಕು’ ಎಂದರು.

ಸೃಜನಶೀಲತೆ ಎಂಬುದು ಒಂದು ಸಮಾಜದ ಜೀವಂತಿಕೆಯ ಲಕ್ಷಣ. ಅದು ಯಾವತ್ತೂ ಜೀವವಿರೋಧಿ ಆಗಿರಲು ಸಾಧ್ಯವಿಲ್ಲ. ಬದುಕಿನ ಬಗ್ಗೆ ಗೌರವ ಮೂಡಿಸುತ್ತಾ ಹೋಗುವ ಶಕ್ತಿ ಸೃಜನಶೀಲತೆಗೆ ಇದೆ. ಸಮಾಜದಲ್ಲಿ ಕಾವ್ಯಾಸಕ್ತರು ಮತ್ತು ಸೃಜನಶೀಲ ಬರಹಗಾರರ ಸಂಖ್ಯೆ ತೀರಾ ಕಡಿಮೆ. ಅವರು ಅಲ್ಪಸಂಖ್ಯಾತರಾದರೂ, ಇಡೀ ಸಮಾಜ ಅವರ ಧ್ವನಿಗೆ ಕಿವಿಗೊಡುವಂತಹ ಸೌಜನ್ಯವನ್ನು ತೋರುತ್ತದೆ ಎಂದು ಹೇಳಿದರು.

ಒಗ್ಗೂಡಿಸುವ ಹೊಣೆಗಾರಿಕೆ: ಆಶಯ ಭಾಷಣ ಮಾಡಿದ ಮಣಿಪಾಲ ವಿಶ್ವ ವಿದ್ಯಾಲಯದ ಡಾ.ಟಿ.ಎಂ.ಎ.ಪೈ ಭಾರ ತೀಯ ಸಾಹಿತ್ಯ ಪೀಠದ ಅಧ್ಯಕ್ಷೆ ಲೇಖಕಿ ವೈದೇಹಿ, ಸಮಾಜವನ್ನು ಒಡೆಯು ವಂತಹ ಚಟುವಟಿಕೆಗಳು ಹೆಚ್ಚುತ್ತಿರುವ ಕಾಲಘಟ್ಟದಲ್ಲಿ ಮನಸ್ಸುಗಳನ್ನು ತೇವ ಗೊಳಿಸಿ, ಒಗ್ಗೂಡಿಸುವಂತಹ ಪ್ರಯತ್ನ ಮಾಡುವ ಹೊಣೆಗಾರಿಕೆ ಹಿರಿಯರ ಮೇಲಿದೆ ಎಂದರು.

ವಿದ್ಯಾರ್ಥಿಗಳಿಗೆ ಬರೆಯುವ ಹಂಬಲ ಇರುತ್ತದೆ. ಆದರೆ, ಬಹುತೇಕರು ಕೀಳರಿಮೆಯಿಂದ ದೂರ ಉಳಿಯುತ್ತಾರೆ. ಇನ್ನು ಕೆಲವರು ಸಾಹಿತ್ಯ ಮತ್ತು ಸಂಗೀತದಿಂದ ಹಣ ಗಳಿಸಲು ಅಸಾಧ್ಯ ಎಂಬ ಕಾರಣಕ್ಕೆ ಅಸಡ್ಡೆ ಬೆಳೆ ಯುತ್ತದೆ. ಈ ಬಗೆಯ ತೊಡಕುಗಳನ್ನು ನಿವಾರಿಸಲು ಇಂತಹ ಕಾರ್ಯಾಗಾರ ಗಳು ಅನುಕೂಲವಾಗುತ್ತವೆ. ಭಾರ ತೀಯ ಸಾಹಿತ್ಯವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲ ಯಗಳ ಸಾಹಿತ್ಯ ಅಧ್ಯಯನ ಪೀಠಗಳು ಕೆಲಸ ಮಾಡಬೇಕು ಎಂದು ಹೇಳಿದರು.

ವಿವಿ ಕಾಲೇಜಿನ ಪ್ರಾಂಶುಪಾಲ ಡಾ.ಉದಯಕುಮಾರ್‌ ಕಾರ್ಯಾಗಾರ ಉದ್ಘಾಟಿಸಿದರು. ವಿಶ್ವವಿದ್ಯಾಲಯದ ಡಾ.ಕೆ. ಶಿವರಾಮ ಕಾರಂತ ಪೀಠದ ಅಧ್ಯಕ್ಷೆ ಭುವನೇಶ್ವರಿ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT