ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಚಿತ್ತ ಸೆಳೆದ ಚಿತ್ತಾಕರ್ಷಕ ಚಿತ್ರಕಲೆ

ಚಿತ್ರಕಲಾ ಮಳಿಗೆಯಲ್ಲಿ 200ಕ್ಕೂ ಹೆಚ್ಚು ಕಲಾವಿದರ ಕಲಾಕೃತಿಗಳ ಪ್ರದರ್ಶನ
Last Updated 5 ಡಿಸೆಂಬರ್ 2016, 9:29 IST
ಅಕ್ಷರ ಗಾತ್ರ

ರಾಯಚೂರು: 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆಯುತ್ತಿರುವ ಚಿತ್ರಕಲಾ ಪ್ರದರ್ಶನವು ಬಹುಮೆಚ್ಚುಗೆಗೆ ಪಾತ್ರವಾಗಿದೆ. ಮಾತ್ರವಲ್ಲದೆ, ಜಿಲ್ಲೆಯ ಚಿತ್ರಕಲಾವಿದ­ರಿಗೆ ಬಹುದೊಡ್ಡ ವೇದಿಕೆಯನ್ನು ಒದಗಿಸಿಕೊಟ್ಟಿದೆ.

ಚಿತ್ರಕಲಾ ಮಳಿಗೆಯಲ್ಲಿ 200ಕ್ಕೂ ಹೆಚ್ಚು ಕಲಾವಿದರ ಕಲಾಕೃತಿಗಳು ಪ್ರದರ್ಶನಗೊಂಡಿದ್ದು, ರಾಯಚೂರು ಜಿಲ್ಲೆಯ ಶೇ 95 ಮತ್ತು ಇತರ ಜಿಲ್ಲೆಗಳ ಶೇ 5ರಷ್ಟು ಚಿತ್ರಕಲಾ ಶಿಕ್ಷಕರು ಕೃತಿಗಳಿಗೆ ಈ ಮಳಿಗೆ ದೊಡ್ಡ ಕ್ಯಾನ್ವಸ್‌ ಆಗಿದೆ.

ಜಲವರ್ಣ, ತೈಲ ವರ್ಣ, ಪೆನ್ಸಿಲ್‌ ಗಳಿಂದ ಮೂಡಿದ ವಿವಿಧ ಕಲಾಕೃತಿ ಗಳನ್ನು ಜನರು ತುಂಬಾ ಆಸಕ್ತಿಯಿಂದ ನೋಡುತ್ತಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು ಸೇರಿದಂತೆ ಅನೇಕ ಸಾಹಿತಿಗಳು ಕಲಾವಿದರ ಕೈಚಳ­ಕದಲ್ಲಿ ಇಲ್ಲಿ ಬಂದಿಯಾಗಿ, ನೋಡ ಗುಗರಿಗೆ ಸಮೀಪ ದರ್ಶನ ನೀಡುತ್ತಿದ್ದಾರೆ. ಕೆಲವು ಚಿತ್ರಕಲಾವಿದರು ವೀಕ್ಷಣೆಗೆ ಬಂದವರ ಸ್ಥಳದಲ್ಲೇ ಚಿತ್ರಬಿಡಿಸಿ­ಕೊಡುತ್ತಿದ್ದು, ಸ್ಕೇಚ್‌ಗೆ ₹200, ಶೇಡಿಂಗ್‌ ಬೇಕಿದ್ದರೆ ₹500 ಶುಲ್ಕ ನಿಗದಿಪಡಿಸಿದ್ದಾರೆ.

ರಾಯಚೂರಿನ ಸುಭಾಷ್‌ ಅವರು ಜಲ ಮತ್ತು ತೈಲ ವರ್ಣದ ಕಲಾಕೃತಿಯ ಪ್ರದರ್ಶನದ ಜೊತೆಗೆ ಮಾರಾಟವನ್ನೂ ಮಾಡುತ್ತಿದ್ದು, ‘ಹಕ್ಕಿ ಗೂಡು’ ಕೃತಿ ಸೇರಿದಂತೆ ಕೆಲವು ಕೃತಿಗಳು ಬಿಕರಿಯಾಗಿವೆ. ಮಾನ್ವಿ ತಾಲ್ಲೂ­ಕಿನ ಗಾಯತ್ರಿ ಶಿಲ್ಪಕಲಾ ಕೇಂದ್ರವು 22 ರೀತಿಯ ವಿವಿಧ ಶಿಲ್ಪಗ­ಳನ್ನು ಪ್ರದರ್ಶನಕ್ಕೆ ಇರಿಸಿದೆ. ಚಿತ್ರಕಲಾ ಶಿಕ್ಷಕ ಅರುಣ್‌ ಕುಮಾರ್‌ ಕಾಗದವನ್ನು ಕತ್ತರಿಸಿ, ಅಂಟಿಸಿ ಮೂಡಿಸಿರುವ ಪ್ರದರ್ಶನ ಕೂಡ ಗಮನ ಸೆಳೆಯುತ್ತದೆ.

ರಾಯಚೂರಿನ ಮ್ಯಾದಾರ ಲಲಿತಕಲಾ ಪ್ರತಿಷ್ಠಾನದ ಮಳಿಗೆಯಲ್ಲಿ ರಾಯಚೂರು ಸೇರಿದಂತೆ ಜಿಲ್ಲೆಯ ವಿವಿಧ ಕೋಟೆ– ಕೊತ್ತಲಗಳು ಅರಳಿವೆ. ಮಹಾನಗರದ ಮೇಲೆ ಮಾರುತಿ ಲ್ಯಾಪ್‌ಟಾಪ್‌ ಅನ್ನು ಸಂಜೀವಿನಿ ಪರ್ವತದಂತೆ ಹೊತ್ತೊಯ್ಯುತ್ತಿರುವುದು ಈ ಮಳಿಗೆಯ ಮುಖ್ಯ ಆಕರ್ಷಣೆ.

ಹಾಗೆಯೇ ಬೆಲ್ಲಂ ಗುಂಡಪ್ಪ ನೂತನ ಲಲಿತಕಲಾ ಮಹಾವಿದ್ಯಾಲಯ, ಶ್ರೀಗುರು­ಕಲಾ ಮಂದಿರ ಇನ್ನಿತರ ಮಳಿಗೆಗಳ ಕಲಾಕೃತಿಗಳು ನೋಡುಗರನ್ನು ಸೆಳೆಯುತ್ತಿದೆ. ‘ಚಿತ್ರಕಲಾ ಪ್ರದರ್ಶನ ಚೆನ್ನಾಗಿದೆ’ ಎಂದು ಪದವಿ ವಿದ್ಯಾರ್ಥಿನಿ ಅನುರಾಧಾ ಹೇಳಿದರು.

ಮಂದಸ್ಮಿತಗೊಳಿಸುವ ವ್ಯಂಗ್ಯಚಿತ್ರಗಳ ಪ್ರದರ್ಶನ
ಸಾಹಿತ್ಯ ಸಮ್ಮೇಳನದಲ್ಲಿ ಗಂಭೀರ ಭಾಷಣಗಳನ್ನು ಕೇಳಿದವರಿಗೆ ಚಿತ್ರಕಲಾ ಮಳಿಗೆಯಲ್ಲಿರುವ ವ್ಯಂಗ್ಯ ಚಿತ್ರಗಳ ಪ್ರದರ್ಶನವು ಆ ಗಂಭೀರತೆ ಭಾರದಿಂದ ಹೊರತರುವ ಪ್ರಯತ್ನ ಮಾಡಿವೆ. ರಾಯಚೂರು ಜಿಲ್ಲೆ ಜೊತೆಗೆ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘ, ಬಾಗಲಕೋಟೆ ಜಿಲ್ಲೆಯ ವ್ಯಂಗ್ಯಚಿತ್ರ­ಕಾರರ ಸಂಘದವರು ಮೊನಚಾದ ವ್ಯಂಗ್ಯಚಿತ್ರಗಳು ಇಲ್ಲಿವೆ.

ಸಮ್ಮೇಳನದ ಸರ್ವಾಧ್ಯಕ ಡಾ.ಬರಗೂರು, ಕಸಾಪ ಅಧ್ಯಕ್ಷ ಮನು ಬಳಿಗಾರ್‌ ಕೂಡ ಕಲಾವಿದರ ಕೈಯಲ್ಲಿ ಸಿಲುಕಿ ವಿಡಂಬನೆಗೆ ಒಳಗಾಗಿದ್ದಾರೆ. ಕಾವ್ಯದಲ್ಲಿ ಒಗ್ಗರಣೆ ಸೊಗಡು ಇದೆ ಎಂಬ ಕೃತಿಯು ಕವಯತ್ರಿಯರನ್ನು ಅಣಕ ಮಾಡುತ್ತಿದೆ.

ವ್ಯಂಗ್ಯಚಿತ್ರಕಾರರಾದ ಏಕನಾಥ ಬೊಂಗಾಳೆ, ಜೇಮ್ಸವಾಜ್, ರಘುಪತಿ ಶೃಂಗೇರಿ, ಕಾಂತೇಶ ಬಡಿಗೇರ, ಅರುಣ ನಂದಗಿರಿ, ಈರಣ್ಣ ಬೆಂಗಾಲಿ, ಗಂಗಾಧರ ಅಡ್ಡೇರಿ, ನಾಮದೇವ ಕಾಗದಗಾರ, ಶ್ರೀಧರ ಕೋಮಾರವಳ್ಳಿ, ವೆಂಕಟೇಶ ಇನಾಮದಾರ, ಶರಣು ಚಟ್ಟಿ, ಜಗದೀಶ ಭಜಂತ್ರಿ, ಎಚ್.ಬಿ. ಮಂಜುನಾಥ, ಭೀಮಣ್ಣ ಹುಣಶಿಕಟ್ಟಿ, ರಾಮಪ್ರಸಾದ್ ಭಟ್, ಎಂ.ವಿ. ಶಿವರಾಮ, ವಿ.ಆರ್.ಸಿ ಶೇಖರ, ಆರ್.ಜಿ.ಕುಲಕರ್ಣಿ ಸೇರಿದಂತೆ ಮುಂತಾ­ದವರ ಚಿತ್ರ ಮನಸೆಳೆದವು.

‘ಸಮಾಜದ ಅಂಕುಡೊಂಕನ್ನು ತಿದ್ದುವ ವ್ಯಂಗ್ಯಚಿತ್ರಗಳು ಚೇತೋಹಾ­ರಿ­ಯಾಗಿವೆ. ವಾಸ್ತವ್ಯಕ್ಕೆ ಕನ್ನಡಿ ಹಿಡಿಯುವ ವ್ಯಂಗ್ಯಚಿತ್ರಗಳ ಪ್ರದರ್ಶನ ಸಮ್ಮೇಳನಕ್ಕೆ ಅವಶ್ಯಕವಾಗಿತ್ತು. ಅದನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ’ ಎಂದು ವಿಜಯಪುರದಿಂದ ಬಂದಿದ್ದ ಸಿದ್ದು ತುಂಬರ ಮತ್ತು ಸೋಮನಾಥ ಇಜೇರಿ ಹೇಳಿದರು.

ಸಾರ್ವಜನಿಕರಿಂದ ಉತ್ತಮ ಸ್ಪಂದನೆ
‘ಚಿತ್ರಕಲಾ ಪ್ರದರ್ಶನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇದು ಜಿಲ್ಲೆಯ ಚಿತ್ರಕಲಾವಿದರ ಉತ್ಸಾಹ ಇಮ್ಮಡಿಗೊಳಿಸಿದೆ’ ಎಂದು ಚಿತ್ರಕಲಾ ಉಪಸಮಿತಿ ಅಧ್ಯಕ್ಷ ಎಚ್‌.ಎಚ್‌. ಮ್ಯಾದಾರ್‌ ಹೇಳಿದರು.

‘ಸಮ್ಮೇಳನದ ನಿಮಿತ್ತ ನಡೆದ ರಾಜ್ಯಮಟ್ಟದ ಚಿತ್ರಕಲಾ ಶಿಬಿರ ದಲ್ಲಿ 21 ಜನ  ಭಾಗವಹಿಸಿದ್ದರು. ಇದಲ್ಲದೆ, 82 ಕಲಾವಿದರು 82 ತಾಸುಗಳ ನಿರಂತ­ರವಾಗಿ ಬಿಡಿಸಿದ ಕಲಾಕೃತಿಗಳು ಇಲ್ಲಿ ಪ್ರದರ್ಶನ ಗೊಂಡಿವೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT