ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣ ಮಠದಲ್ಲಿ ಎಡೆಸ್ನಾನ: ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಪೇಜಾವರ ಸ್ವಾಮೀಜಿ

Last Updated 5 ಡಿಸೆಂಬರ್ 2016, 12:02 IST
ಅಕ್ಷರ ಗಾತ್ರ

ಉಡುಪಿ: ಚಂಪಾಷಷ್ಠಿಯ ದಿನವಾದ ಮಂಗಳವಾರ ಶ್ರೀಕೃಷ್ಣ ಮಠದಲ್ಲಿ ಮಡೆ ಸ್ನಾನಕ್ಕೆ ಬದಲಾಗಿ ಎಡೆ ಸ್ನಾನಕ್ಕೆ ಅವಕಾಶ ನೀಡುವ ಮೂಲಕ ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.

ಮಠದ ಆವರಣದಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಲಾಯಿತು. ದೇವಸ್ಥಾನದ ಸುತ್ತಲೂ ಇಟ್ಟಿದ್ದ ಬಾಳೆ ಎಲೆಯ ಮೇಲೆ ಪ್ರಸಾದ ಬಡಿಸಿದ ನಂತರ ಭಕ್ತರು ಅದರ ಮೇಲೆ ಉರುಳಿದರು. ಈ ಬಾರಿ ಕೇವಲ ಏಳು ಜನ ಮಾತ್ರ ಎಡೆ ಸ್ನಾನ ಮಾಡಿದರು. ಪೇಜಾವರ ಮಠದ ಆಡಳಿತ ಇರುವ ಮುಚ್ಲಕೋಡು ಸುಬ್ರಹ್ಮಣ್ಯ ದೇವಸ್ಥಾನದಲ್ಲಿಯೂ ಮಧ್ಯಾಹ್ನ ವಿಶೇಷ ಪೂಜೆ ನಡೆಯಿತು. ಬಾಳೆ ಎಲೆಯ ಮೇಲೆ ಬಡಿಸಿದ ನೈವೇದ್ಯದ ಮೇಲೆ ಭಕ್ತರು ಉರುಳುವ ಮೂಲಕ ಹರಕೆ ತೀರಿಸಿದರು. ಭಕ್ತರು ಉರುಳು ಸೇವೆ ಮುಗಿಸಿದ ನಂತರ ಪ್ರಸಾದವನ್ನು ಗೋವುಗಳಿಗೆ ನೀಡಲಾಯಿತು.

‘ದೇವರಿಗೆ ಸಮರ್ಪಿಸಿದ ವೈವೇದ್ಯದ ಮೇಲೆ ಭಕ್ತರು ಉರುಳುವುದು ಎಡೆಸ್ನಾನವಾಗಿದೆ. ಬ್ರಾಹ್ಮಣರು ಊಟ ಮಾಡಿದ ಎಲೆಯ ಮೇಲೆ ಭಕ್ತರು ಉರುಳುವುದಕ್ಕೆ ವಿರೋಧ ಇದೆ. ಆದ್ದರಿಂದ ಯಾವುದೇ ಚರ್ಚೆ ಹಾಗೂ ವಿವಾದಕ್ಕೆ ಆಸ್ಪದ ಮಾಡಿಕೊಡಬಾರದು ಎಂಬ ಕಾರಣಕ್ಕೆ ಎಡೆಸ್ನಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಪ್ರಾಚೀನ ಕಾಲದ ಸಂಪ್ರದಾಯವನ್ನು ಉಳಿಸಿದಂತಾಯಿತು ಹಾಗೂ ವಿವಾದ ಆಸ್ಪದವಾಗಲಿಲ್ಲ’ ಎಂದು ವಿಶ್ವೇಶತೀರ್ಥ ಸ್ವಾಮೀಜಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಅನ್ನವನ್ನು ವ್ಯರ್ಥ ಮಾಡುವ ಎಡೆ ಹಾಗೂ ಮಡೆಸ್ನಾನಗಳೆರಡೂ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಡೆ ಸ್ನಾನದ ನಂತರ ಅನ್ನವನ್ನು ಗೋವುಗಳಿಗೆ ನೀಡುವುದರಿಂದ ಅದು ವ್ಯರ್ಥವಾಗದು. ಈ ಸಂಪ್ರದಾಯವನ್ನು ಮುಂದುವರೆಸುಂತೆ ನಾನು ಉಳಿದ ಮಠಾಧೀಶರಿಗೆ ಹೇಳುವುದಿಲ್ಲ. ನನ್ನ ಧೋರಣೆಯನ್ನು ಯಾರ ಮೇಲೆಯೂ ಹೇರುವ ಪ್ರಯತ್ನವನ್ನು ಈ ವರೆಗೆ ಮಾಡಿಲ್ಲ. ಎಡೆಸ್ನಾನವನ್ನು ಮುಂದುವರೆಸುವುದು ಅಥವಾ ಬಿಡುವುದು ಅವರವರ ತೀರ್ಮಾನಕ್ಕೆ ಬಿಟ್ಟ ವಿಷಯ ಎಂದರು.

ಈ ಹಿಂದೆ ನಾನು ದಲಿತರ ಕೇರಿಗೆ ಭೇಟಿ ನೀಡಿದಾಗ ವಿರೋಧಿಸಿದವರೇ ಈಗ ಅದನ್ನು ಒಪ್ಪಿಕೊಂಡಿದ್ದಾರೆ. ಮಂತ್ರಾಲಯ ಶ್ರೀಗಳು ಸಹ ಶಿವಮೊಗ್ಗದಲ್ಲಿ ದಲಿತರ ಕೇರಿಗೆ ಇತ್ತೀಚೆಗೆ ಭೇಟಿ ನೀಡಿದ್ದಾರೆ. ಕಂಚಿ ಕಾಮಕೋಟಿ ಶ್ರೀಗಳು, ದ್ವಾರಕಾಪೀಠದ ಶ್ರೀಗಳು ಸಹ ಆ ಕೆಲಸ ಮಾಡುತ್ತಿದ್ದಾರೆ ಎಂದರು.

ಯಾರೂ ಭಾವೋದ್ರೇಕಕ್ಕೆ ಒಳಗಾಗಬಾರದು: ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯದಲ್ಲಿ ಏರುಪೇರಾಗಿರುವ ಸುದ್ದಿ ಬಂದಿದೆ. ಜನರು ತಾಳ್ಮೆಯಿಂದ ಇರಬೇಕು, ಯಾರೂ ಸಹ ಭಾವೋದ್ರೇಕಕ್ಕೆ ಒಳಗಾಗಬಾರದು. ಯಾವುದೇ ವ್ಯಕ್ತಿಯಲ್ಲಿ ದೋಷ ಹಾಗೂ ಒಳ್ಳೆಯ ಗುಣಗಳು  ಇರುತ್ತವೆ. ಜಯಲಲಿತಾ ಅವರು ತಮಿಳುನಾಡಿಗೆ ಒಳ್ಳೆಯ ಸೇವೆ ಸಲ್ಲಿಸಿ ಅಲ್ಲಿನ ಜನರ ಪ್ರೀತಿಗೆ ಗಳಿಸಿದ್ದಾರೆ. ಅವರು ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ವೈದ್ಯಕೀಯ ಪ್ರಯತ್ನವೂ ಮುಂದುವರೆಯಲಿ. ದೇವರು ಸಹ ಅವರ ಅಭಿಮಾನಿಗಳ ಹರಕೆಯನ್ನು ಈಡೇರಿಸಲಿ ಎಂದು ಹೇಳಿದರು.

* ಬ್ರಾಹ್ಮಣ ಬ್ರಾಹ್ಮಣೇತರ ಎಂಬ ಜಾತಿ ವಿವಾದಕ್ಕೆ ಅವಕಾಶ ಬೇಡ ಎಂಬ ಕಾರಣಕ್ಕೆ ಮಡೆಯ ಬದಲು ಎಡೆ ಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ವಿಶ್ವೇಶತೀರ್ಥ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT